»   » ಚಾಮುಂಡಿಗೆ ನಡೆಯಿತು ಸೀಮಂತ

ಚಾಮುಂಡಿಗೆ ನಡೆಯಿತು ಸೀಮಂತ

Posted By:
Subscribe to Filmibeat Kannada

(ಇಂಡಿಯಾ ಇನ್ಫೋ ಸ್ಕೂಪ್‌)

ಕೋಟಿ ನಿರ್ಮಾಪಕ ಎಂದೆ ಹೆಸರಾದ ರಾಮು ಅರ್ಥಾತ್‌ ಲಾಕಪ್‌ಡೆತ್‌ ರಾಮು ಈಗ ಪ್ರೌಢತೆಯ ಖುಷಿಯಲ್ಲಿ ಬೀಗುತ್ತಿದ್ದಾರೆ. ನಿನ್ನೆವರೆಗೂ ಹಾಲಿವುಡ್‌ ಕರಾಳ ನೆನಪುಗಳಲ್ಲಿ ಕಂಗಾಲಾಗಿದ್ದ ರಾಮು ಅದೆಲ್ಲ ಮರೆತಿದ್ದಾರೆ. ಉಪೇಂದ್ರ ತಂಡಕ್ಕೆ ಬಿಟ್ಟಿ ಫಾರಿನ್‌ ಟೂರ್‌ ಹೊಡೆಸಿ ಲಕ್ಷಾಂತರ ಕಾಸು ಕಳೆದುಕೊಂಡ ದುರಾದೃಷ್ಟ ಯೋಗ, ನೇಪಾಳಿ ಚೆಲುವೆ ಮೋನಿಷಾ ಕೊೖರಾಲ ಕೈ ಕೊಟ್ಟ ವಿಷಾದ ಯೋಗ ಎಲ್ಲವನ್ನೂ ರಾಮು ಮರೆತ ಹುಮ್ಮಸ್ಸಿನಲ್ಲಿದ್ದಾರೆ. ಆವರಿಗೆ ಈ ಪಾಟಿ ಖುಷಿ ತಂದುಕೊಟ್ಟ ಎಲ್ಲಾ ಗೌರವ ಧರ್ಮಪತ್ನಿ ಮಾಲಾಶ್ರೀ ಅವರಿಗೆ.

ನೀವು ಮುತ್ತಿನಂಥ ಹೆಂಡತಿ ಸಿನಿಮಾ ನೋಡಿರಬೇಕು. ಅದರಲ್ಲಿ ಸೀಮಂತದ ದೃಶ್ಯವೊಂದಿದೆ. ಅಷ್ಟಲಕ್ಷ್ಮಿಯರು ಒಟ್ಟಾಗಿ ನಾಯಕಿಯ ಸೀಮಂತ ನಡೆಸುತ್ತಾರೆ, ಹಾಡುತ್ತಾರೆ. ಮೊನ್ನೆ , ಡಾಲರ್ಸ್‌ ಕಾಲೊನಿಯ ಬಂಗಲೆಯಲ್ಲಿ ದ್ದುದು ಅದೇ ಸಂಭ್ರಮ. ಸಿನಿಮಾದಲ್ಲಿ ಸೀಮಂತ ಮಾಡಿಸಿಕೊಂಡ ನಾಯಕಿ ಮೊನ್ನೆಯ ಸಂಭ್ರಮದಲ್ಲೂ ಕೇಂದ್ರವಾಗಿದ್ದುದು ಕೇವಲ ಕಾಕತಾಳೀಯ. ರಾಮು, ಸಿನಿಮಾ, ಸೀಮಂತ ... ಈ ಹೊತ್ತಿಗೆ ನಿಮಗೆ ಸಸ್ಪೆನ್ಸ್‌ ಬಗೆಹರಿದಿರಬೇಕು. ಹೌದು, ಮಾಲಾಶ್ರೀ ಗರ್ಭಿಣಿ.

ಗುಂಡಿನ ಹುಡುಗಿ ಮಾಲಾಶ್ರೀಗೀಗ ಎಂಟು ತಿಂಗಳು. ಹೆರಿಗೆಗೆ ಇನ್ನೊಂದೇ ತಿಂಗಳು ಬಾಕಿ. ಈವರೆಗೂ ಮಾಲಾಶ್ರೀ ತಾಯಿಯಾಗುತ್ತಿರುವುದನ್ನು ಮನೆಯವರು ಮುಚ್ಚಿಟ್ಟು ಕೊಂಡು ಬಂದಿದ್ದಾರೆ. ಈಗ ಕೂಡ ಅಷ್ಟೇ. ಈ ಸಂತೋಷದ ಗುಟ್ಟು ಗೊತ್ತಾಗುತ್ತಿರುವುದು ನಿಮಗೇ ಮೊದಲು. ಸೀಮಂತ ಕೂಡ ಮನೆ ಮಟ್ಟಿಗಷ್ಟೇ ಸೀಮಿತವಾಯಿತು. ಕೆಲವೇ ಆಪ್ತೇಷ್ಟರ ಹೊರತೂ ಮತ್ತ್ಯಾರಿಗೂ ಅಲ್ಲಿ ಆಮಂತ್ರಣವಿರಲಿಲ್ಲ .

ನಮಗೆ ತಿಳಿದು ಬಂದಿರುವ ಪಕ್ಕಾ ವರ್ತಮಾನದಂತೆ, ಫೆಬ್ರವರಿ 12 ರ ಆಸುಪಾಸು ಮಾಲಾಶ್ರೀ ಅಮ್ಮನಾಗುತ್ತಾರೆ. ಅವರಾಗ ಚೆನ್ನೈನಲ್ಲಿರುತ್ತಾರೆ. ಅಂದರೆ ಅವರ ಹೆರಿಗೆ ನಡೆಯುವುದು ಚೆನ್ನೈನ ಆಸ್ಪತ್ರೆಯಲ್ಲಿ . ಈ ಕುರಿತು ಎಲ್ಲಾ ಸಿದ್ಧತೆಗಳು ಪೂರ್ಣವಾಗಿವೆ.

ಒಂಭತ್ತನೆ ತಿಂಗಳು ಹತ್ತಿರವಾಗುತ್ತಿದ್ದಂತೆ ಹರಳುಗಟ್ಟುತ್ತಿರುವ ಯಕ್ಷಪ್ರಶ್ನೆ ಮಾಲಾಶ್ರೀ ಹಡೆಯುವುದು ಗಂಡೋ, ಹೆಣ್ಣೋ ಅನ್ನುವುದು. ಗಂಡಾದರೆ ಸಿಂಹದ ಮರಿ, ಹೆಣ್ಣಾದರೆ ಚಾಮುಂಡಿ. ಯಾವುದಾದರೂ ಆದೀತು. ಎಷ್ಟೆಂದರೂ ಅವರಿಗಿದು ಮೊದಲನೇ ಹೆರಿಗೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada