ಮೈದಾನದಲ್ಲೇ ಸುದೀಪ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದ ಈ ಮಲಯಾಳಂ ನಟ ಯಾರು?
ಸಿನಿ ರಸಿಕರು ಹಾಗೂ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಟೂರ್ನಿಯಾದ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಯ ಒಂಬತ್ತನೇ ಆವೃತ್ತಿ ಕಳೆದ ಶನಿವಾರ ( ಮಾರ್ಚ್ 25 ) ನಡೆದ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಂಡಿದೆ. ಈ ಫೈನಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳ ನಡುವೆ ಮುಖಾಮುಖಿ ನಡೆದು ಭೋಜ್‌ಪುರಿ ದಬಾಂಗ್ಸ್ ವಿರುದ್ಧ ತೆಲುಗು ವಾರಿಯರ್ಸ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ನಾಲ್ಕನೇ ಬಾರಿಗೆ ತೆಲುಗು ವಾರಿಯರ್ಸ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟ್ರೋಫಿಯನ್ನು ಎತ್ತಿಹಿಡಿದಿದೆ.
ಇನ್ನು ಟೂರ್ನಿಯಲ್ಲಿ ಭೋಜ್‌ಪುರಿ ದಬಾಂಗ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಸೆಮಿಫೈನಲ್ ಹಂತದಲ್ಲಿ ಕಳೆದ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಯ ರನ್ನರ್ ಅಪ್ ಹಾಗೂ ಚಾಂಪಿಯನ್ ತಂಡಗಳು ಎನಿಸಿಕೊಂಡಿದ್ದ ನಮ್ಮ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಮುಂಬೈ ಹೀರೊಸ್ ತಂಡಗಳು ಹೊರಬಿದ್ದವು. ಹೌದು, ತೆಲುಗು ವಾರಿಯರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.

ಇನ್ನು ಈ ಬಾರಿಯ ಟೂರ್ನಿಯಲ್ಲಿ ಹೀಗೆ ಸೆಮಿಫೈನಲ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಗ್ರೂಪ್ ಹಂತದಲ್ಲಿನ ತನ್ನ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಕಾಲಿಟ್ಟ ಮೊದಲ ತಂಡ ಎನಿಸಿಕೊಂಡಿತ್ತು ಹಾಗೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿತ್ತು.
ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ವಿರುದ್ಧ ಕೂಡ ದಿಗ್ವಿಜಯ ಸಾಧಿಸಿತ್ತು. ಈ ಪಂದ್ಯದ ವೇಳೆ ಕೇರಳ ಸ್ಟ್ರೈಕರ್ಸ್ ತಂಡದ ಆಟಗಾರನೊಬ್ಬ ಸುದೀಪ್ ಕಾಲಿಗೆ ಬಿದ್ದಿದ್ದರು. ಹೌದು, ಕೇರಳ ಸ್ಟ್ರೈಕರ್ಸ್ ತಂಡದ ಆಟಗಾರ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಣಿಕುಟ್ಟನ್ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಿದ್ದಂತೆಯೇ ಸುದೀಪ್ ಬಳಿ ಬಂದು ಉಭಯ ಕುಶಲೋಪರಿ ವಿಚಾರಿಸಿ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದರು.
ಈ ಮೂಲಕ ಪರಭಾಷಾ ಕಲಾವಿದರೂ ಸಹ ಕಾಲು ಮುಟ್ಟಿ ನಮಸ್ಕರಿಸುವಂತಹ ಗೌರವವನ್ನು ಕಿಚ್ಚ ಸುದೀಪ್ ಗಳಿಸಿದ್ದಾರೆ ಎಂದು ಅವರ ಅಭಿಮಾನಿಗಳು ವಿಡಿಯೊ ಹಂಚಿಕೊಂಡು ಬರೆದುಕೊಂಡಿದ್ದರು. ಇನ್ನು ಕಿಚ್ಚ ಸುದೀಪ್ ಕಾಲಿಗೆ ಬಿದ್ದಿದ್ದ ಈ ನಟ 1999ರಿಂದಲೂ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ಮಣಿಕುಟ್ಟನ್ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಮಾತ್ರವಲ್ಲದೇ ತಮಿಳು ಸಿನಿಮಾದಲ್ಲಿಯೂ ಸಹ ನಟಿಸಿರುವ ಮಣಿಕುಟ್ಟನ್ ಇಲ್ಲಿಯವರೆಗೂ ಕನ್ನಡದ ಯಾವುದೇ ಚಿತ್ರದಲ್ಲಿಯೂ ಸಹ ನಟಿಸಿಲ್ಲ.
ಹೀಗಿದ್ದರೂ ಮೈದಾನದಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ ಕಾಲಿಗೆ ಮಣಿಕುಟ್ಟನ್ ಮನಸ್ಕರಿಸಿದ್ದಾರೆ ಎಂದರೆ ಕಿಚ್ಚ ಸುದೀಪ್ ಆತನಿಗೆ ಯಾವುದೋ ರೀತಿ ಸಹಾಯ ಮಾಡಿರಬೇಕು ಎಂದು ಊಹಿಸಿದ್ದರು. ಇನ್ನು ಕೇರಳ ಸ್ಟ್ರೈಕರ್ಸ್ ತಂಡ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯ ಗ್ರೂಪ್ ಹಂತದಿಂದಲೇ ಹೊರಬಿದ್ದಿತ್ತು. ಗ್ರೂಪ್ ಹಂತದ ಯಾವುದೇ ಪಂದ್ಯದಲ್ಲಿಯೂ ಸಹ ಗೆಲ್ಲದೇ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿತ್ತು.


Click it and Unblock the Notifications











