ಸುದೀಪ್ ಭೇಟಿ ಮಾಡಿದ ಮಲಯಾಳಂನ ಹೊಸ ಇಂಡಸ್ಟ್ರಿ ಹಿಟ್ ನಿರ್ದೇಶಕ; 'ಕಿಚ್ಚ 46' ಡೈರೆಕ್ಟರ್ ಇವರೇನಾ?
ಕನ್ನಡ ಸಿನಿಮಾ ರಸಿಕರನ್ನು ಸದ್ಯ ಕಾಡುತ್ತಿರುವ ಎರಡು ದೊಡ್ಡ ಪ್ರಶ್ನೆಗಳೆಂದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್ ಮುಂದೆ ಯಾವ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬುದು. ಈ ಎರಡು ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಒಂದೆಡೆ ಕಾಯುತ್ತಿದ್ದರೆ, ಈ ಇಬ್ಬರೂ ನಟರೂ ತಮ್ಮ ಮುಂದಿನ ಚಿತ್ರಗಳ ಸ್ಕ್ರಿಪ್ಟ್‌ಗಳನ್ನು ಸರಿಯಾಗಿ ಆರಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ.
ಯಶ್ 19 ಅಪ್‌ಡೇಟ್ ಬಗ್ಗೆ ಯಾವುದೇ ಮಾಹಿತಿ ಹೊರಬರದೇ ಇದ್ದು, ಸುದೀಪ್ ನಟಿಸಲಿರುವ 46ನೇ ಚಿತ್ರಕ್ಕೆ ತಮಿಳಿನ ಕಲೈಪ್ಪುಲಿ ತನು ಎಂಬ ನಿರ್ಮಾಪಕ ಬಂಡವಾಳ ಹೂಡಲು ಮುಂದಾಗಿದ್ದಾರೆ. ಇಷ್ಟು ಅಪ್‌ಡೇಟ್ ಮಾತ್ರ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಹೊರಬಿದ್ದಿದ್ದು, ಯಾವ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಮಾತ್ರ ಬಹಿರಂಗವಾಗದೇ ಗೌಪ್ಯವಾಗಿಯೇ ಉಳಿದುಕೊಂಡಿದೆ.

ಹಲವಾರು ನಿರ್ದೇಶಕರ ಹೆಸರುಗಳು ಕೇಳಿಬರುತ್ತಿದ್ದು, ಇದೀಗ ಈ ಸಾಲಿಗೆ ಈ ವರ್ಷ ಬಿಡುಗಡೆಗೊಂಡು ಮಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿರುವ 2018 ಚಿತ್ರದ ನಿರ್ದೇಶಕರ ಹೆಸರೂ ಸಹ ಸೇರಿಕೊಂಡಿದೆ. ಹೌದು, ಮಾಲಿವುಡ್‌ನ ನಿರ್ದೇಶಕ ಜೂಡ್ ಆಂಥನಿ ಜೋಸೆಫ್ ಕಿಚ್ಚ 46 ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಇದಕ್ಕೆ ಕಾರಣ ನಿನ್ನೆ ( ಜೂನ್ 26 ) ಜೂಡ್ ಆಂಥನಿ ಜೋಸೆಫ್ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿರುವುದು. ಹೌದು, ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ಜತೆಗಿನ ಸೆಲ್ಫಿಯನ್ನು ಜೂಡ್ ಆಂಥನಿ ಜೋಸೆಫ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಹೀಗೆ ನಿರ್ದೇಶಕರ ಈ ಪೋಸ್ಟ್ ಸದ್ಯ ಈ ರೀತಿಯ ಅನುಮಾನವನ್ನು ಹುಟ್ಟುಹಾಕಿದ್ದು, ಈ ಸುದ್ದಿ ನಿಜವಾದರೂ ಆಶ್ಚರ್ಯವಿಲ್ಲ ಎಂದೇ ಹೇಳಬಹುದಾಗಿದೆ. ಇನ್ನು ಈ ಹಿಂದೆ ಕಿಚ್ಚ ಸುದೀಪ್ 2018 ಚಿತ್ರವನ್ನು ವೀಕ್ಷಿಸಿದ ಬಳಿಕ ಆ ಚಿತ್ರದ ಬಗ್ಗೆ ಹೊಗಳಿ ಪೋಸ್ಟ್ ಹಂಚಿಕೊಂಡಿದ್ದರು.
"ಕೇರಳದಲ್ಲಿ 2018ರ ಪ್ರವಾಹದ ಸಂದರ್ಭದಲ್ಲಿ ಮಾನವೀಯತೆ ಗೆದ್ದಿದೆ. ಈ ಅದ್ಭುತ ನೈಜ ಕಥೆಯು ಕೇರಳ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿದೆ. ಬೆಳ್ಳಿ ಪರದೆಯ ಮೇಲೆ ಅದ್ಭುತವಾಗಿ ತೋರಿಸಲಾಗಿದೆ. #2018EveryoneIsAHero ಕನ್ನಡ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಿದೆ. ಚಿತ್ರತಂಡಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡು ಸುದೀಪ್ ಟ್ವೀಟ್ ಮಾಡಿದ್ದರು.
ಹೀಗೆ ತಮ್ಮ ಚಿತ್ರವನ್ನು ಹೊಗಳಿದ್ದ ಕಿಚ್ಚ ಸುದೀಪ್ ಅವರನ್ನು ಜೂಡ್ ಆಂಥನಿ ಜೋಸೆಫ್ ಸ್ನೇಹದಿಂದ ಭೇಟಿ ಮಾಡಿದ್ದಾರಾ ಅಥವಾ ಇಬ್ಬರ ಕಾಂಬಿನೇಶನ್‌ನಲ್ಲಿ ಸಿನಿಮಾವೇನಾದರೂ ಬರಲಿದೆಯಾ ಎಂಬ ಅನುಮಾನಗಳು ಉಂಟಾಗಿವೆ.
ಇನ್ನು 20 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಕೆ ಮಾಡಿದ್ದು, 2016ರಲ್ಲಿ ಮೋಹನ್ ಲಾಲ್ ನಟನೆಯ ಪುಲಿ ಮುರುಗನ್ ಮಾಡಿದ್ದ ಕಲೆಕ್ಷನ್ ಅನ್ನು ಹಿಂದಿಕ್ಕಿ ಮಾಲಿವುಡ್‌ನ ನೂತನ ಇಂಡಸ್ಟ್ರಿ ಹಿಟ್ ಆಗಿದೆ.
ಈ ಚಿತ್ರ 16 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, 4 ಕೋಟಿಯನ್ನು ಪ್ರಚಾರ ಕಾರ್ಯಕ್ಕಾಗಿ ಖರ್ಚು ಮಾಡಲಾಗಿದೆ. ಒಟ್ಟಾರೆಯಾಗಿ ಚಿತ್ರದ ಬಜೆಟ್ 20 ಕೋಟಿ ರೂಪಾಯಿಗಳಾಗಿದ್ದು, ಸದ್ಯ ಚಿತ್ರ 200 ಕೋಟಿ ಗಳಿಸುವ ಮೂಲಕ ಬಜೆಟ್‌ಗಿಂತ ಹತ್ತು ಪಟ್ಟು ಹೆಚ್ಚು ಗಳಿಕೆಯನ್ನು ಮಾಡಿ ದಾಖಲೆ ಬರೆದಿದೆ.
1930ರಿಂದ ಸಿನಿಮಾಗಳು ತೆರೆ ಕಾಣುತ್ತಿರುವ ಮಲಯಾಳಂ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ 200 ಕೋಟಿ ಕ್ಲಬ್ ಅನ್ನು ಸಿನಿಮಾವೊಂದು ಸೇರಿದೆ. ಈ ಮೂಲಕ 2018 ಮಲಯಾಳಂ ಚಿತ್ರರಂಗ ಎಂದೂ ಮರೆಯಲಾರದಂತಹ ಮಹೋನ್ನತ ಸಿನಿಮಾವಾಗಿ ಸಾಧನೆ ಮಾಡಿದೆ.


Click it and Unblock the Notifications











