ಕನ್ನಡ ಚಿತ್ರರಂಗದ ಕತ್ತು ಹಿಸುಕುತ್ತಿದೆ ಮಲಯಾಳಂ ಚಿತ್ರರಂಗ ; ಮಮ್ಮುಟ್ಟಿ ಚಿತ್ರಕ್ಕೆ ಏನ್ ಬೇಡಿಕೆ ಅಂತೀರಾ..?
ಒಂದು ಕಡೆ ಈ ಫೆಬ್ರವರಿ 22ರಿಂದ ಮಲಯಾಳಂನ ಚಿತ್ರಗಳನ್ನ, ಮಲಯಾಳಂನ ಚಿತ್ರಮಂದಿರದ ಮಾಲೀಕರೇ ಪ್ರದರ್ಶನ ಮಾಡುವುದಿಲ್ಲ ಎಂದು ಕೇರಳದಲ್ಲಿ ಪಟ್ಟು ಹಿಡಿದು ಕುಂತಿದ್ದಾರೆ. ಇನ್ನೊಂದು ಕಡೆ ಮಲಯಾಳಂ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರಿನಲ್ಲಿ ರತ್ನಗಂಬಳಿ ಹಾಕಿ ಸ್ವಾಗತಿಸುವ ಕಾರ್ಯಕ್ರಮ ಭರದಿಂದ ನಡೆಯುತ್ತಿದೆ. ಇದು ಒಂದು ದುರಂತ ಆದರೆ, ಮಲಯಾಳಂ ಸಿನಿಮಾ ನೋಡಲು ಕನ್ನಡಿಗರು ಮುಗಿ ಬಿದ್ದಿರುವುದು ಇನ್ನೊಂದು ದೊಡ್ಡ ದುರಂತ
ಹೌದು, ನಿಮಗೆ ಗೊತ್ತು.. ಕನ್ನಡಿಗರು ವಿಶಾಲ ಹೃದಯದವರು. ಕಾಲ ಕಾಲಕ್ಕೆ ಈ ಮಾತನ್ನ ಸಾಬೀತು ಮಾಡಿದ ಹೆಗ್ಗಳಿಕೆ ಕೂಡ ಕನ್ನಡಿಗರದ್ದೇ. ಕನ್ನಡ ಚಿತ್ರಗಳನ್ನ ಕಡೆಗಣಿಸಿ ಹಿಂದಿ, ತೆಲುಗು, ತಮಿಳು, ಚಿತ್ರಗಳನ್ನ ಮೊದಲ ದಿನದಂದೆ ಕಣ್ತುಂಬಿಕೊಳ್ಳುವ 'ಹವ್ಯಾಸ'ವನ್ನ ಬೆಳೆಸಿಕೊಂಡಿರುವ ನಮ್ಮಲ್ಲಿನ ಅನೇಕರು, ಇದೀಗ ಮಲಯಾಳಂ ಚಿತ್ರರಂಗದತ್ತ ಕಣ್ಣರಳಿಸಿ ನೋಡುತ್ತಿದ್ದಾರೆ. ಮಲಯಾಳಂ ಸಿನಿಮಾಗಳನ್ನ ನೋಡಲು ಸರತಿ ಸಾಲಿನಲ್ಲಿಯೂ ನಿಂತಿದ್ದಾರೆ.

ಇದಕ್ಕೆ ಅತ್ಯುತ್ತಮ ಸಾಕ್ಷಿ ಎನ್ನುವಂತೆ ಮಲಯಾಳಂ ಚಿತ್ರರಂಗಕ್ಕೆ ಬೆಂಗಳೂರಿನಲ್ಲಿ ಅತ್ಯುತ್ತಮವಾದ ಮಾರುಕಟ್ಟೆ ಸೃಷ್ಟಿಯಾಗಿದೆ. ಕೇವಲ ಬೆಂಗಳೂರು ಒಂದರಲ್ಲಿಯೇ ಮಲಯಾಳಂ ನ ಜನಪ್ರಿಯ ನಟ ಮಮ್ಮುಟ್ಟಿ ಅಭಿನಯದ 'ಬ್ರಹ್ಮಯುಗಂ' ಸಿನಿಮಾ 100ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗ್ತಿದೆ. 100ರಲ್ಲಿ 50ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ದಿನದ ನಾಲ್ಕು ಆಟದ ಪ್ರದರ್ಶನಗಳು ತುಂಬಿ ತುಳುಕುತ್ತಿವೆ. ಹೌಸ್ ಫುಲ್ ಪ್ರದರ್ಶನವನ್ನೂ ಸಿನಿಮಾ ಕಾಣ್ತಿದೆ. ಫಲಿತಾಂಶ, ಒಂದು ಲೆಕ್ಕಾಚಾರದ ಪ್ರಕಾರ ಮೊದಲ ದಿನವೇ ಈ ಚಿತ್ರ 42 ಲಕ್ಷಕ್ಕೂ ಅಧಿಕ ಹಣವನ್ನಕರ್ನಾಟಕದಲ್ಲಿ ಗಳಿಸಿದೆ. ಇದೆಲ್ಲದಕ್ಕೂ ಹೊಣೆ ಯಾರು..? ಉತ್ತರ ಮಾತ್ರ ನಿಗೂಢ
ಅಂದ್ಹಾಗೇ 'ಬ್ರಹ್ಮಯುಗಂ' ಸಿನಿಮಾವನ್ನ 'ಕನ್ನಡ'ಕ್ಕೂ 'ಡಬ್' ಮಾಡಲಾಗಿದೆ. ಹಾಗಂಥ 'ಕನ್ನಡ'ದಲ್ಲಿ ನೋಡಬೇಕೆಂಬ ಉತ್ಸಾಹದಲ್ಲಿ ಈ ಚಿತ್ರ ನೋಡಲು ಹೋಗಬೇಡಿ. ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಹೆಸರಿಗೆ ಅಷ್ಟೇ ಈ ಚಿತ್ರವನ್ನ ಕನ್ನಡಕ್ಕೆ 'ಡಬ್' ಮಾಡಲಾಗಿದೆ ಅಷ್ಟೇ. ಪ್ರದರ್ಶನದ ಸಂಖ್ಯೆ ಮಾತ್ರ 'ಶೂನ್ಯ'
ಕೇವಲ 'ಬ್ರಹ್ಮಯುಗಂ' ಮಾತ್ರವಲ್ಲ 'ತುಂಡು' ಎಂಬ ಇನ್ನೊಂದು ಚಿತ್ರಕ್ಕೂ ಕರ್ನಾಟಕದಲ್ಲಿ ಬೇಡಿಕೆ ಇದೆ. 'ಅನ್ವೆಶಿಪಿನ್ ಕಂಡೆತುಮ್' ಚಿತ್ರ ಕೂಡ ಬೆಂಗಳೂರಿನಲ್ಲಿ ಯಶಸ್ವೀ ಪ್ರದರ್ಶನವನ್ನ ಕಾಣ್ತಿದೆ. 'ಪ್ರೇಮಲು' ಎಂಬ ಮಲಯಾಳಂನ ಸಿನಿಮಾ ಕೇವಲ ಬೆಂಗಳೂರು ಒಂದರಲ್ಲಿಯೇ 25ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣ್ತಿದೆ. ನಿಮಗೆ ನಮ್ಮ ಮಾತಿನ ಮೇಲೆ ನಂಬಿಕೆ ಬಾರದೇ ಇದ್ದರೆ, 'ಬುಕ್ ಮೈ ಶೋ'ನ್ನೊಮ್ಮೆ ನೀವು ಇಣುಕಿ ನೋಡಬಹುದು

ತಮಿಳು, ತೆಲುಗು, ಹಿಂದಿ ಆಯಿತು ಈಗ ಮಲಯಾಳಂ ಸರದಿ
ಮಲಯಾಳಂ ಚಿತ್ರಗಳಿಗೆ ಸಿಕ್ಕ ಹಾಗೂ ಸಿಕ್ತಿರುವ ಈ ರೆಡ್ ಕಾರ್ಪೆಟ್ ಸ್ವಾಗತದಿಂದ ಈ ವಾರ ಬಿಡುಗಡೆಯಾದ ಅನೇಕ ಕನ್ನಡ ಚಿತ್ರಗಳು ನರಳುತ್ತಿವೆ. ಅದರಲ್ಲಿಯೂ ವಿಮರ್ಷಕರಿಂದ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾದ 'ಶಾಖಾಹಾರಿ' ಎಂಬ ಅಪ್ಪಟ ಕನ್ನಡದ ಅಚ್ಚು ಕಟ್ಟಾದ ಸಿನಿಮಾ, ಮಲಯಾಳಂ ಚಿತ್ರಗಳಿಗೆ ಸಿಕ್ತಿರುವ ಪ್ರಾಮುಖ್ಯತೆಯಿಂದ ನರಳುತ್ತಿದೆ.
ಅಂದ್ಹಾಗೇ ಇಂಥ ಸಂದರ್ಭ ಎದುರಾಗಿರುವುದು ಇದೇ ಮೊದಲಲ್ಲ. ಕಾಲಾನುಕಾಲದಿಂದ ತಮಿಳು, ತೆಲುಗು ಮತ್ತು ಹಿಂದಿಯ ದೊಡ್ಡ ಸಿನಿಮಾಗಳು ಕನ್ನಡದ ಚಿತ್ರಗಳನ್ನು ತುಳಿದುತುಳಿದೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿವೆ. ಈಗ ಮಲಯಾಳಂ ಸಿನಿಮಾ ಅಬ್ಬರ ಆರಂಭವಾಗುತ್ತಿದೆ. ಬೆಂಗಳೂರಿನ ಅನೇಕ ಕಡೆ ಮಲಯಾಳಂ ಸಿನಿಮಾಗಳೂ ಯಥೇಚ್ಚವಾಗಿ ಪ್ರದರ್ಶನಗೊಳ್ಳುತ್ತಿವೆ. ಕೂಡ ಕನ್ನಡ ಚಿತ್ರರಂಗದ ಮೇಲೆ, ಕನ್ನಡ ಚಿತ್ರಗಳ ಮೇಲೆ ಹಿಡಿತವನ್ನ ಸಾಧಿಸುತ್ತಿವೆ .

ಕನ್ನಡ ಚಿತ್ರರಂಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತುತ್ತಾರಾ, ಪರಭಾಷೆ ಸಿನಿಮಾಗಳ ಹಾವಳಿ ವಿಚಾರದಲ್ಲಿ ಮೌನಕ್ಕೆ ಶರಣಾದ ಚಿತ್ರರಂಗದ ದಿಗ್ಗ ದಿಗ್ಗಜರು ಮಾತನಾಡ್ತಾರಾ ನೋಡಬೇಕು. ಒಂದುವೇಳೆ ಈ ಸಮಸ್ಯೆಗೆ ಪರಿಹಾರ ಸಿಗದೇಹೋದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೇಲೆ ಚಿತ್ರ ಕರ್ಮಿಗಳು ಇರೋಬರೋ ನಂಬಿಕೆಯನ್ನೂ ಕಳೆದುಕೊಂಡುಬಿಡುತ್ತಾರೆ. ಹಾಗಾಗದಿರಲಿ


Click it and Unblock the Notifications











