Kaatera Piracy: ಕಡ್ಲೆಪುರಿ ರೀತಿ 'ಕಾಟೇರ' ಚಿತ್ರದ ಪೈರಸಿ ಲಿಂಕ್ ಮಾರುತ್ತಿದ್ದವನ ಬಂಧನ
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಉತ್ತರ ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೆಲ್ಲದರ ನಡುವೆ ಚಿತ್ರಕ್ಕೆ ಪೈರಸಿ ಕಾಟವೂ ಶುರುವಾಗಿದೆ. ಇತ್ತೀಚೆಗೆ ನಟ ದರ್ಶನ್ ಕೂಡ ಪೈರಸಿ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದರು.
ಇದೀಗ ರಾಯಚೂರಿನಲ್ಲಿ 'ಕಾಟೇರ' ಚಿತ್ರದ ಪೈರಸಿ ಲಿಂಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೌನೇಶ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗಕ್ಕೆ ಪೈರಸಿ ದೊಡ್ಡ ಕಂಟಕವಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾದ ದಿನವೇ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದೆ. ಇದು ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಕೊಡುತ್ತಿದೆ.

ಕೆಲ ಕಿಡಿಗೇಡಿಗಳು 'ಕಾಟೇರ' ಚಿತ್ರದ ಪೈರಸಿ ಲಿಂಕ್‌ಗಳನ್ನು ಟೆಲಿಗ್ರಾಂನಲ್ಲಿ ಹಂಚುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು ಈಗ ಮೌನೇಶ್ ಎಂಬಾತನ ಬಂಧನವಾಗಿದ್ದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇನ್ನು ಈ ಜಾಲದ ಕಿಂಗ್‌ಪಿನ್ ಎನ್ನಲಾಗುತ್ತಿರುವ ಉಪೇಂದ್ರ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ ಎಂಬಾತ ಕೇವಲ 60 ರೂ.ಗೆ 'ಕಾಟೇರ' ಚಿತ್ರದ ಪೈರಸಿ ಲಿಂಕ್ ಮಾರುತ್ತಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ದೂರು ದಾಖಲಾಗಿದೆ. ನಿರ್ಮಾಪಕ, ನಿರ್ದೇಶಕ ಗುರುದೇಶ್ ಪಾಂಡೆ 'ಕಾಟೇರ' ಚಿತ್ರದ ಕಲ್ಯಾಣ ಕರ್ನಾಟಕ ಭಾಗದ ವಿತರಣೆ ಹಕ್ಕು ಖರೀದಿಸಿದ್ದಾರೆ. ಇದೀಗ ಅವರ ಮ್ಯಾನೇಜರ್ ವಾದಿರಾಜ ಮೂಲಕ ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.

"ರಾಯಚೂರಿನಲ್ಲಿ ಮೌನೇಶ್ ಎಂಬಾತ ನಮ್ಮ 'ಕಾಟೇರ' ಚಿತ್ರವನ್ನು ಪೈರಸಿ ಮಾಡಿ ಮಾರುತ್ತಿದ್ದಾನೆ. ಟೆಲಿಗ್ರಾಂನಿಂದ ಲಿಂಕ್ ಡೌನ್‌ಲೋಡ್ ಮಾಡಿಕೊಂಡು ಲಿಂಕ್ ಕಳುಹಿಸಿದವರಿಗೆ 60, 70 ರೂ. ಹಣ ಅಕೌಂಟ್‌ಗೆ ಹಾಕಿಸಿಕೊಂಡು ಲಿಂಕ್ ಸೇಲ್ ಮಾಡುತ್ತಿದ್ದಾನೆ. ನಮ್ಮ ಮ್ಯಾನೇಜರ್ ಮೂಲಕ ದೂರು ಕೊಟ್ಟಿದ್ದೇವೆ. ಆತನ ಬಂಧನವಾಗಿದೆ. ಪೈರಸಿಯಿಂದ ನಮಗೆ ನಷ್ಟ ಉಂಟಾಗುತ್ತದೆ" ಎಂದು ಗುರುದೇಶ್ ಪಾಂಡೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಡೆದ 'ಕಾಟೇರ' ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಯಾರು ಪೈರಸಿ ಮಾಡಬೇಡಿ ಎಂದು ಮನವಿ ಮಾಡಿದ್ದರು. "ಕಾಟೇರ ಸಿನಿಮಾ ಪೈರಸಿ ಮಾಡ್ತಾ ಇದ್ದಾರೆ. ಕೆಲವ್ರು ಹೆಸರು ಹಾಕಿಕೊಂಡು ಪೈರಸಿ ಮಾಡ್ತಾ ಇದ್ದಾರೆ. ಮೊಬೈಲ್‌ನಲ್ಲಿ ಚಿತ್ರದ ತುಣುಕುಗಳನ್ನು ರೀಲ್ಸ್ ತರ ಹಂಚುತ್ತಿದ್ದಾರೆ. ಮಾಡಿ, ಒಳ್ಳೆಯದು, ಎಲ್ಲಾದರೂ ಈ ರೀತಿ ಪೈರಸಿ ಮಾಡಿ,ಸಿಕ್ಕಾಕ್ಕಿಕೊಂಡ್ರೆ, ಯಾರಿಗಾದರೂ ಗೊತ್ತಾದ್ರೆ, ನಾನೇನೂ ಹೇಳೋದಿಲ್ಲ. ನಿಮ್ಮ ಫೋಟೋ ಜೊತೆ ಯಾರಾದ್ರು 'ಕಾಟೇರ' ಸಿನಿಮಾ ಅಪ್ಲೋಡ್ ಮಾಡಿದ್ದರೆ ಅದ್ಕೆ ನೀವೇ ಜವಾಬ್ದಾರಿ, ಸೋಷಿಯಲ್ ಮೀಡಿಯಾ, ಆನ್‌ಲೈನ್‌ನಲ್ಲಿ ದಯವಿಟ್ಟು ಕಾಟೇರ ಚಿತ್ರ ಪೈರಸಿ ಮಾಡಬೇಡಿ. ಇದರಿಂದ ನೀವೇ ಕಷ್ಟಕ್ಕೆ ಸಿಲುಕುತ್ತೀರಾ" ಎಂದಿದ್ದರು.
"ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೀವಿ. ಬಹಳ ಜನರ ಪರಿಶ್ರಮ ಇದೆ. ಇದನ್ನು ಥಿಯೇಟರ್‌ನಲ್ಲಿ ನೋಡಿದ್ರೆ ಚೆನ್ನಾಗಿರುತ್ತದೆ. ಮೊಬೈಲ್‌ನಲ್ಲಿ ಯಾಕೆ ನೋಡ್ತೀರಿ. ಇದು ಕನ್ನಡ ಸಿನಿಮಾ. ಬೇರೆ ಭಾಷೆ ಸಿನಿಮಾ ಅಲ್ಲ. ನಮ್ಮ ಭಾಷೆಯ, ನಮ್ಮ ನೆಲದ ಸಿನಿಮಾ. ನಮ್ಮ ನೆಲಕ್ಕೆ ಗೌರವ ಕೊಡದಿದ್ದರೆ ಹೇಗೆ? ಪೈರಸಿ, ರೀಲ್ಸ್ ಮಾಡುವವರಿಗೆ ಹೇಳೋದು ಇಷ್ಟೇ. ದಯವಿಟ್ಟು ಪೈರಸಿ ಮಾಡಬೇಡಿ. ಪೈರಸಿ ಮಾಡಿ ಸಿಕ್ಕಾಕಿಕೊಂಡರೆ ಟಾಟಾ ಬಾಯ್ ಬಾಯ್ ಸೀಯು" ಎಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದರು.


Click it and Unblock the Notifications











