ವರ್ಷಗಳ ಹಿಂದೆ ಶಿವಣ್ಣನ ಹುಟ್ಟುಹಬ್ಬದಂದು ಘೋಷಣೆಯಾದ ಈ ಚಿತ್ರಗಳು ಇನ್ನೂ ಸಹ ಸೆಟ್ಟೇರಿಲ್ಲ!
ನಿನ್ನೆ ( ಜುಲೈ 12 ) ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಿವರಾಜ್‌ಕುಮಾರ್ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಶಿವಣ್ಣನ ಮನೆ ಮುಂದೆ ಹಾರ, ಕೇಕು ಹಿಡಿದು ಜಮಾಯಿಸಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು.
ಹೀಗೆ ಒಂದೆಡೆ ಅಭಿಮಾನಿಗಳು ಶಿವರಾಜ್‌ಕುಮಾರ್ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದರೆ, ಮತ್ತೊಂದೆಡೆ ಶಿವರಾಜ್‌ಕುಮಾರ್ ನಟಿಸುತ್ತಿರುವ ಮುಂದಿನ ಚಿತ್ರಗಳ ತಂಡಗಳು ತಮ್ಮ ನಟನ ಹುಟ್ಟುಹಬ್ಬದ ದಿನದಂದು ವಿಶೇಷ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಸಂತಸ ಹಾಗೂ ಸರ್‌ಪ್ರೈಸ್‌ಗೆ ಒಳಗಾಗುವಂತೆ ಮಾಡಿದ್ದಾರೆ.

ಈ ದಿನದಂದು ಶಿವರಾಜ್‌ಕುಮಾರ್ ನಟಿಸಲಿರುವ ಹಲವಾರು ಚಿತ್ರಗಳ ಅಪ್‌ಡೇಟ್ ಹೊರಬಿದ್ದಿದ್ದು, ಅದರಲ್ಲಿ ಬಹುಮುಖ್ಯವಾಗಿ ಹೆಚ್ಚು ಸದ್ದು ಮಾಡುತ್ತಿರುವುದು ಘೋಸ್ಟ್ ಚಿತ್ರ. ಹೌದು, ಈ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದ್ದು, ಇಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಬಿಗ್ ಡ್ಯಾಡಿ ಟೀಸರ್ ಸಹ ಬಿಡುಗಡೆಗೊಂಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.
ಈ ಘೋಸ್ಟ್ ಲುಕ್‌ಗೆ ಫಿದಾ ಆದ ಸಿನಿ ರಸಿಕರು ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೊ ನಟಿಸಲಿರುವ ಮುಂದಿನ ಚಿತ್ರದ ಪೋಸ್ಟರ್‌ಗಳು ಮತ್ತಷ್ಟು ಕಿಕ್ ಕೊಟ್ಟಿವೆ. ಅದರಲ್ಲಿಯೂ 1989ರಲ್ಲಿ ಬಿಡುಗಡೆಗೊಂಡಿದ್ದ ಸೂಪರ್ ಹಿಟ್ ಚಲನಚಿತ್ರ ಇನ್ಸ್ಪೆಕ್ಟರ್ ವಿಕ್ರಮ್‌ನ ಸೀಕ್ವೆಲ್ ಅನ್ನು ಈಗ ನಿರ್ಮಿಸಲು ತಂಡವೊಂದು ಮುಂದಾಗಿದ್ದು, ಇನ್ಸ್ಪೆಕ್ಟರ್ ವಿಕ್ರಮ್ ರಿಟರ್ನ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ಈ ಚಿತ್ರವನ್ನು ಘೋಷಿಸಿದೆ.
ಇದರ ಜತೆಗೆ 2017ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಆಗಿದ್ದ ಟಗರು ಚಿತ್ರದ ಸೀಕ್ವೆಲ್ ಸಹ ಘೋಷಣೆಗೊಂಡಿದೆ. ಹೌದು, ಲಹರಿ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಗರು ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟರ್ ಮೇಲೆ 'ಅಟೆನ್ಷನ್ ಹೀ ಈಸ್ ಕಮಿಂಗ್ ಬ್ಯಾಕ್' ಎಂದು ಬರೆದುಕೊಂಡಿದೆ.
ಈ ಮೂಲಕ ಟಗರು ಎರಡನೇ ಭಾಗ ಬಿಡುಗಡೆಯಾಗಲಿದೆಯಾ ಎಂಬ ಕುತೂಹಲ ಹಾಗೂ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೇ ಲಹರಿ ಫಿಲ್ಮ್ಸ್ ಈ ಅಪ್‌ಡೇಟ್ ಏನಿರಬಹುದು ಊಹಿಸುತ್ತಿರಿ ಎಂದು ಸಿನಿ ರಸಿಕರು ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಇವುಗಳ ಜತೆಗೆ ಧೀರ ಚಿತ್ರ ಸಹ ಘೋಷಣೆಗೊಂಡಿದ್ದು, ನಿರ್ದೇಶಕರಾದ ಕಾರ್ತಿಕ್, ಬಾಹುಬಲಿ, ರಾಮ್ ಧುಲಿಪುಲಿ, ಕೊಟ್ರೇಶ್ ಹಾಗೂ ರವಿಕುಮಾರ್ ಜತೆ ಸಹ ಶಿವರಾಜ್‌ಕುಮಾರ್ ನಟಿಸಲಿರುವ ಚಿತ್ರಗಳ ಪೋಸ್ಟರ್ ಬಿಡುಗಡೆಗೊಂಡಿವೆ. ಈ ಯಾವ ಚಿತ್ರಗಳಿಗೂ ಸಹ ಶೀರ್ಷಿಕೆ ಇನ್ನೂ ಇಡಲಾಗಿಲ್ಲ. ಅತ್ತ ಈ ಹಿಂದೆಯೇ ಘೋಷಣೆಗೊಂಡಿದ್ದ ಶಿವಣ್ಣ ನಟಿಸಲಿರುವ ಚಿತ್ರಗಳಾದ ಕರಟಕ ದಮನಕ, ಭೈರತಿ ರಣಗಲ್ ಹಾಗೂ 45 ಚಿತ್ರಗಳೂ ಸಹ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ.
ಹೀಗೆ ಶಿವರಾಜ್‌ಕುಮಾರ್ ನಟಿಸಲಿರುವ ಮುಂದಿನ ಚಿತ್ರಗಳ ಪೋಸ್ಟರ್‌ಗಳು ಹುಟ್ಟುಹಬ್ಬದ ದಿನದಂದು ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಈ ಹಿಂದೆ ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಘೋಷಣೆಗೊಂಡಿದ್ದ ಹಲವಾರು ಯೋಜನೆಗಳು ಈ ವರ್ಷ ಯಾವುದೇ ಪೋಸ್ಟರ್ ಬಿಡುಗಡೆ ಮಾಡದೆಯೇ ಸೈಲೆಂಟ್ ಆಗಿವೆ. ಈ ಮೂಲಕ ಈ ಹಿಂದೆ ಘೋಷಿಸಲ್ಪಟ್ಟಿದ್ದ ಆ ಚಿತ್ರಗಳು ಅರ್ಧಕ್ಕೆ ನಿಂತು ಹೋಗಿವೆ ಎಂಬ ಅನುಮಾನ ಮೂಡಿಸಿವೆ.
ಹೌದು, ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಚಿನ್ ಬಿ ರವಿ ನಿರ್ದೇಶನದ 'ದ ಸಾಗಾ ಆಫ್ ಅಶ್ವತ್ಥಾಮ' ಚಿತ್ರದಲ್ಲಿ ಶಿವಣ್ಣ ನಟಿಸಬೇಕಿತ್ತು. ಶಿವಣ್ಣನನ್ನು ಭೇಟಿ ಆಗಿ ಕಥೆ ಹೇಳಿ ಒಪ್ಪಿಸಿದ್ದ ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದರು. ಕಳೆದೆರಡು ವರ್ಷ ಈ ಚಿತ್ರತಂಡ ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭವನ್ನೂ ಸಹ ಕೋರಿತ್ತು. ಆದರೆ ಈ ವರ್ಷ ಈ ತಂಡ ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿಲ್ಲ. ಈ ಮೂಲಕ ಈ ಚಿತ್ರ ನಿಂತು ಹೋಗಿದೆ ಎಂಬ ಅನುಮಾನ ಮೂಡಿದೆ.
ರಾಮ್ ಧುಲಿಪುಲಿ ನಿರ್ದೇಶನದ ಹಾಗೂ ಶಿವಣ್ಣ ನಟನೆಯ ಚಿತ್ರಕ್ಕೆ ನೀ ಸಿಗೋವರೆಗೂ ಎಂಬ ಶೀರ್ಷಿಕೆ ಇಡಲಾಗಿತ್ತು. ಆದರೆ ಈ ಬಾರಿ ಈ ಶೀರ್ಷಿಕೆಯನ್ನು ಈ ಕಾಂಬಿನೇಶನ್‌ನ ಚಿತ್ರದ ಹುಟ್ಟುಹಬ್ಬದ ಪೋಸ್ಟರ್‌ನಲ್ಲಿ ಎಲ್ಲಿಯೂ ಸಹ ಬಳಸಲಾಗಿಲ್ಲ. ಈ ಮೂಲಕ ರಾಮ್ ಧುಲಿಪುಲಿ ಹಾಗೂ ಶಿವಣ್ಣ ಕಾಂಬೋ ಚಿತ್ರಕ್ಕೆ ಹೊಸ ಶೀರ್ಷಿಕೆ ಇಡಬಹುದು ಅಥವಾ ಕಥೆಯೇ ಬದಲಾಗಿರಬಹುದು ಎಂಬ ಅನುಮಾನ ಮೂಡಿದೆ.
ಇನ್ನು 2014ರ ವೇಳೆಯಲ್ಲಿ ಶಿವರಾಜ್‌ಕುಮಾರ್ ಹಾಗೂ ಸಿಂಪಲ್ ಸುನಿ ಕಾಂಬಿನೇಶನ್‌ನಲ್ಲಿ ಮನಮೋಹಕ ಸಿನಿಮಾ ಬರಲಿದೆ ಎಂದು ಘೋಷಣೆಗೊಂಡಿತ್ತು. ಆದರೆ ಇಷ್ಟು ವರ್ಷಗಳು ಕಳೆದರೂ ಸಹ ಈ ಚಿತ್ರ ಸೆಟ್ಟೇರಿಯೇ ಇಲ್ಲ. ಹೀಗಾಗಿ ಈ ಚಿತ್ರ ಸಹ ನಿಂತುಹೋಗಿರಬಹುದು ಎಂಬ ಅನುಮಾನ ಮೂಡಿದೆ.


Click it and Unblock the Notifications











