For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರಿಗೆ ಅಭಿಮಾನಿ ಮಂಡ್ಯ ರಮೇಶ್ ಬಹಿರಂಗ ಪತ್ರ

  |

  ಕರ್ನಾಟಕದ ಕೋಟ್ಯಾನುಕೋಟಿ ಜನರಂತೆ ನಟ ಮಂಡ್ಯ ರಮೇಶ್‌ಗೆ ಸಹ ಡಾ.ರಾಜ್‌ಕುಮಾರ್ ಎಂದರೆ ಆರಾಧ್ಯ ದೈವ. ರಾಜ್‌ಕುಮಾರ್ ಸಿನಿಮಾಗಳನ್ನು ನೊಡಿಕೊಂಡೇ ಬಾಲ್ಯ, ಯವ್ವನ ಕಳದವರು ಮಂಡ್ಯ ರಮೇಶ್.

  ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಮಂಡ್ಯ ರಮೇಶ್ ಸಿನಿಮಾದಲ್ಲಿ ನಟನೆ ಆರಂಭಿಸಿದ್ದು ರಾಜ್‌ಕುಮಾರ್ ಕುಟುಂಬದವರು ನಿರ್ಮಾಣ ಮಾಡಿ ಶಿವರಾಜ್‌ ಕುಮಾರ್ ನಟಿಸಿದ್ದ 'ಜನುಮದ ಜೋಡಿ' ಸಿಸನಿಮಾದ ಮೂಲಕ.

  ತನ್ನ ಆರಾಧ್ಯ ದೈವ ಡಾ.ರಾಜ್‌ಕುಮಾರ್ ಅವರನ್ನು ನೆನಪುಮಾಡಿಕೊಂಡು ಮಂಡ್ಯ ರಮೇಶ್ ಅವರು ಬಹಿರಂಗ ಪತ್ರವೊಂದನ್ನು ಬರೆದಿದ್ದು. ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪತ್ರ ಯಥಾವತ್ತು ಇಲ್ಲಿದೆ.

  ಅಣ್ಣಾ,

  ನಿನ್ನನ್ನು ಮೊದಲು ನೋಡಿದ್ದು ಬೆಳ್ಳೂರಿನ ಟೆಂಟಿನಲ್ಲಿ! ಒಣ ಗರಿಗಳ ಟೂರಿಂಗ್ ಟಾಕೀಸ್ ನ ಮಧ್ಯೆ ಮಾಸಿದ ದೊಡ್ಡ ಪರದೆ ಮುಂದೆ ಮರಳಲ್ಲಿ ಕೂತು ದಟ್ಟ ಬೀಡಿ ಹೊಗೆಗಳ ನಡುವೆ ಭೋರ್ಗರೆದು ಬರುತ್ತಿದ್ದ ಬೆಳಕಿನ ನಡುವೆ ನೀನು ಪರದೆಗೆ ಅವತರಿಸುತ್ತಿದ್ದಾಗ ಕಿಕ್ಕಿರಿದ ಜನ ಚೀರಾಡುತ್ತಿದ್ದುದನ್ನು ನೋಡಿ ಬಾಲಕ ನಾನು ಬೆಚ್ಚಿ ಬಿದ್ದಿದ್ದೆ! 'ರಾಜದುರ್ಗದ ರಹಸ್ಯ'ವೋ 'ಬಾಲನಾಗಮ್ಮ'ನೋ 'ಸತಿಶಕ್ತಿ'ಯೋ 'ಅಣ್ಣ ತಮ್ಮ'ನೋ ಯಾವುದೇ ಚಿತ್ರದಲ್ಲಿ ನೀನು ಬಂದೆ ಎಂದರೆ ನಿನ್ನನ್ನೇ ಎವೆಯಿಕ್ಕದೆ ನೋಡುತ್ತೇನೆ. ನಿನ್ನ ಕಣ್ಣು, ನೀಳ ಮೂಗು, ಫಳ ಫಳಿಸುವ ಬಣ್ಣ, ನೀನಾಡುತ್ತಿದ್ದ ಕನ್ನಡ.. ತೀರಾ ಆಪ್ತವಾಗುತ್ತಿತ್ತು. ರಜಕ್ಕೆ ಚಿಕ್ಕಮ್ಮನ ಮನೆಗೆ ದಿಡಗಕ್ಕೆ ಹೋದಾಗ ಅಲ್ಲಿನ ಧನಲಕ್ಷ್ಮಿ ಟೆಂಟಿನಲ್ಲಿ 'ವೀರಕೇಸರಿ' ನೋಡಿದ ಮೇಲೆ ಅದು ನಾನೇ ಅಂದುಕೊಂಡುಬಿಟ್ಟಿದ್ದೆ! ಅಲ್ಲಿಂದಾಚೆಗೆ ನಿನ್ನ ಯಾವುದೇ ಚಿತ್ರದ ಯಾವುದೇ ಪಾತ್ರ ನೋಡಿದರೂ ಅದು ನಾನೇ ಅಂತ ಎಷ್ಟೋ ವರ್ಷಗಳವರೆಗೆ ನಂಬಿಕೊಂಡು ಬಿಟ್ಟಿದ್ದೆ.

  ಬಾಲ್ಯದ ಗೆಳೆಯರನ್ನು ಕಟ್ಟಿಕೊಂಡು ಸೈಕಲ್ ಫೋಕ್ಸ್ ಕಡ್ಡಿಗಳಿಂದ ಬಿಲ್ಲುಬಾಣ ತಯಾರಿಸಿ ಯುದ್ಧ ಮಾಡುತ್ತಿದ್ದದ್ದು, ಕತ್ತಿ ಮಾಡಿಕೊಂಡು ಕಾದಾಡುತ್ತಿದ್ದದು ಎಲ್ಲಾ ನಿನ್ನ ಪಿಚ್ಚರ್ ಮಹಿಮೆಯೇ! 'ಬೇಡರ ಕಣ್ಣಪ್ಪ'ನನ್ನು ನೋಡಿ ಗೆಳೆಯ ನಾಗೇಶನ ಮನೆಯಲ್ಲಿ ಈಶ್ವರ ಲಿಂಗವನ್ನು ಬಳಪದ ಕಲ್ಲಿನಲ್ಲಿ ಕೆತ್ತಿ ಶಿವರಾತ್ರಿ ಮಾಡಿ ಪೂಜಿಸಿದೆವು. 'ಮಯೂರ' ಅರಮನೆಯಲ್ಲಿ ಕಾವಲು ಸೈನಿಕರ ಕಣ್ಣು ತಪ್ಪಿಸಿ ಕುಣಿಕೆ ಹಗ್ಗದ ಸಹಾಯದಿಂದ ನೇತಾಡುತ್ತಾ ಜಿಗಿದು ಪಾರಾಗುವುದನ್ನು ನೋಡಿ ಸ್ಫೂರ್ತಿತನಾಗಿ ನಾಗಮಂಗಲದ ನಮ್ಮ ಮಾದರಿ ಶಾಲೆಯ ಬಿಲ್ಡಿಂಗ್ ಮೇಲ್ಭಾಗದಿಂದ ಮೋಹನನ ಮನೆಯ ಬಿಲ್ಡಿಂಗ್ ಗೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿ ನೇತಾಡುತ್ತ ಚಲಿಸಿ ಮನೆಯವರ ಕೈಲಿ ಒದೆಸಿಕೊಂಡಿದ್ದೆ! ಮಯೂರವರ್ಮನ ಪ್ರತಿಜ್ಞೆ ದೃಶ್ಯವನ್ನು ನೋಡಿ ನಾನೇ ಕದಂಬರ ದೊರೆ ಎಂದು ಭಾವಿಸಿದ್ದೆ. 'ಬಬ್ರುವಾಹನ' ಅರ್ಜುನನ ಮುಂದೆ ಮಾಡುವ 'ಜಾರಿಣಿಯ ಮಗ'... ಪ್ರತಿಜ್ಞೆ, ಮಂಡ್ಯದ ಹೈಸ್ಕೂಲು ಕಾಲೇಜುಗಳಲ್ಲಿ ಎಡೆಬಿಡದೆ ಮಾಡಿ ಅಸಂಖ್ಯ ಬಹುಮಾನ ಗಿಟ್ಟಿಸುತ್ತಿದ್ದೆ.

  ನಿನಗೆ ಡಾಕ್ಟರೇಟ್ ಸಿಕ್ಕಾಗ ಮಂಡ್ಯದ ರಸ್ತೆಗಳಲ್ಲಿ, ಇಕ್ಕೆಲಗಳಲ್ಲಿ ಜನ ನಿಂತು ಮೆರವಣಿಗೆಯಲ್ಲಿ ನಿನ್ನತ್ತ ನೋಡಿ ಕೈಬೀಸುತ್ತಿದ್ದಾಗ ನೀನು ನನ್ನನ್ನೇ ನೋಡಿ ನಕ್ಕು ಕೈ ಬೀಸಿದ್ದೆ ಅಂತ ಇನ್ನೂ ನಂಬಿಕೊಂಡಿದ್ದೇನೆ. ಜೋರಾಗಿ ಕೈ ಬೀಸಲು ಹೋಗಿ ಆಯ ತಪ್ಪಿ ಮೋರಿಗೆ ಬಿದ್ದು ಮೈ ತರಚಿಸಿಕೊಂಡಿದ್ದೆ. ಆದರೆ ನಿನ್ನ ತುಂಬು ನಗೆಯನ್ನು ನೋಡಿದ ನೆನಪಿದೆ! ಕೈನೋವು ನೆನಪಿಲ್ಲ!

  'ನಂದಾ' ಟಾಕೀಸ್ ನಲ್ಲಿ 'ರಾಜಾ ನನ್ನ ರಾಜಾ' ದ ಟಿಕೆಟ್ ಮೊದಲ ದಿನ ಮೊದಲ ಪ್ರದರ್ಶನವೇ ಬೇಕೆಂದು ಬೆಳಿಗ್ಗೆ ಆರಕ್ಕೆ ಹೋಗಿ ನಿಂತಿದ್ದಾಗ ಜನಜಂಗುಳಿ ನನ್ನ ಮೇಲೆ ಬಿದ್ದು ಅಪ್ಪಚ್ಚಿ ಮಾಡಿ, ಕಬ್ಬಿನ ಸಿಪ್ಪೆಯಂತೆ ಹೊಸಕಿ, ಟಿಕೇಟ್ ಸಾಲಿನ ಕಂಬಿಯಿಂದ ಹೊರಗೆಸೆದಿದ್ದರು. ಅಳುತ್ತ ನಿಂತ ನನಗೆ ಅವನ್ಯಾವನೋ ಗೇಟ್ ಕೀಪರ್ ತಲೆ ಮೇಲೆ ತಟ್ಟಿ ಕಾಸು ಇಸ್ಕೊಂಡು ಒಳಗೆ ಬಿಟ್ಟಿದ್ದ!

  'ಸನಾದಿ ಅಪ್ಪಣ್ಣ' 'ಶಂಕರ್ ಗುರು' ನೋಡಿ ಅದೆಷ್ಟು ಸಾರಿ ಅತ್ತೆನೋ, 'ಭಾಗ್ಯದ ಲಕ್ಷ್ಮಿ ಬಾರಮ್ಮ' ನೋಡಿ ಅದೆಷ್ಟು ಸಾರಿ ನಕ್ಕೆನೋ ನೆನಪಿಲ್ಲ..!

  ನಿನಗೆ ಸ್ಟಾರ್‌ ಕಟ್ಟಿದ್ದು 'ರವಿಚಂದ್ರ' ಪಿಕ್ಚರ್ ಗೆ. 'ಗಿರಿಕನ್ಯೆ'ಯಲ್ಲಿ ನೀನು ಪರದೆ ಕಾಲಿಡುವ ಮುನ್ನ ನಿನ್ನ ಬುತ್ತಿ ಗಂಟನ್ನು ನೋಡಿ 'ಏನೆಂದು ನಾ ಹೇಳಲಿ' ಅಂತ ನಾನೇ ಜೋರಾಗಿ ಕಿರುಚಿ ಬಿಟ್ಟಿದ್ದೆ!

  ನಿನ್ನ ಅಷ್ಟೂ ಚಿತ್ರಗಳ ಪೋಸ್ಟ್ ಕಾರ್ಡ್ ಸೈಜಿನ ಕಲರ್ ಫೋಟೋ (ಹತ್ತು ಪೈಸೆ ಇತ್ತು ಆಗ) ಗಳನ್ನು ತಂದು ಲೇಖಕ್ ಪುಸ್ತಕವೊಂದಕ್ಕೆ ಬಿರುದು ಬಾವಲಿಗಳನ್ನು ಬರೆದು ಭಗವದ್ಗೀತೆಯಂತೆ ಕಾಪಿಟ್ಟುಕೊಂಡಿದ್ದೆ.

  'ಹಾವಿನ ಹೆಡೆ', 'ಹುಲಿಯ ಹಾಲಿನ ಮೇವು' ತೋಪಾದಾಗ ನನ್ನ ಮನೆಯ ಆಸ್ತಿಯೇ ಹೋಯಿತೆಂದು ಪರಿತಪಿಸಿದೆ.

  'ಭಾಗ್ಯವಂತರು', 'ಹಾಲುಜೇನು'ಗಳಲ್ಲಿ ನಿನ್ನ ಕಣ್ಣು ತುಂಬಿದಾಗ ನಾನು ಭೋರಿಟ್ಟು ಅಳುತ್ತಿದ್ದೆ. ನನಗೆ 'ಕೃಷ್ಣದೇವರಾಯ', 'ಇಮ್ಮಡಿ ಪುಲಕೇಶಿ', 'ರಾಘವೇಂದ್ರಸ್ವಾಮಿ'ಗಳು ಎಲ್ಲವೂ ನೀನೇ ಆಗಿಬಿಟ್ಟೆ .

  'ಕಬೀರ'ನನ್ನು ನೋಡಿ ಕೋಮು ಸೌಹಾರ್ದ ಕಲಿತೆ.

  'ನಾಂದಿ' ನೋಡಿ ಮೂಕರನ್ನು ಗೌರವಿಸಿದೆ. 'ಅನುರಾಗ ಅರಳಿತು' ನೋಡಿ ಕಾರ್ಮಿಕರಿಗೆ ತಲೆಬಾಗುವುದನ್ನು ಕಲಿತೆ.

  ಸಂದರ್ಶನಗಳಲ್ಲಿ ನೀನು ನೇರ ಹೃದಯದಿಂದಲೇ ಮಾತನಾಡುವುದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ. ನಿನ್ನ ಭಾಷಣಗಳಲ್ಲಿ ಕನ್ನಡ ಪರಂಪರೆ, ಅಭಿಮಾನ ಕಲಿತರೆ, ನಿನ್ನುಡುಗೆ, ವರ್ತನೆಗಳಲ್ಲಿ ಸರಳತೆ ಸಾಧಿಸಲು ಅದೆಷ್ಟು ವರ್ಷ ಬೇಕಾಗಬಹುದೆಂದು ಧ್ಯಾನಿಸುತ್ತಲೇ ಇದ್ದೇನೆ.

  ಗುರು ಬಿ. ವಿ. ಕಾರಂತರು ಪುಟ್ಟ ಭೇಟಿಗಾಗಿ ರಂಗಾಯಣಕ್ಕೆ ಧುತ್ತೆಂದು ನಿನ್ನ ಕರೆಸಿದಾಗ ದೇವರೇ ಭಕ್ತನ ಬಳಿ ಬಂದ ಬಂದುಬಿಟ್ಟ ಅಂತ ಭಾವಿಸಿ ನಿನ್ನ ಕಾಲಿಗೆ ಬಿದ್ದು ಬಿಟ್ಟೆ!

  ಗೆಳೆಯ ಪ್ರಕಾಶ್ ರಾಜಮೇಹುನ ಕಾರಣಕ್ಕಾಗಿ ಮೊದಲ ಚಿತ್ರ 'ಜನುಮದ ಜೋಡಿ'ಯಲ್ಲಿ ಅಭಿನಯಿಸಲು ಮುಹೂರ್ತದ ದಿನ ಬಲಮುರಿಯಲ್ಲಿ ಬಂದಾಗ ನನ್ನ ಕಣ್ಣುಗಳು ನಿನ್ನನ್ನೇ ಅರಸುತ್ತಿದ್ದವು. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀನೊಬ್ಬನೇ ಅರಳಿಕಟ್ಟೆಯಲ್ಲಿ ಕಣ್ಮುಚ್ಚಿ ಕೈಮುಗಿದು ನಿಂತಿದ್ದೆ.. ನಾನು ಸುತ್ತಮುತ್ತ ಯಾರಿಲ್ಲದನ್ನು ನೋಡಿ ನಿನ್ನ ಕಾಲಿಗೆ ಬಿದ್ದೆ. ನೀನು ಗಾಬರಿಯಾಗಿ "ಏನು ಕಂದ" ಅಂತ ಮೇಲೆತ್ತಿದೆ. ಅದೊಂದು ಅವಿಸ್ಮರಣಿಯ ಕ್ಷಣ! ನಿನ್ನ ಮೃದು ಹಸ್ತ ನನ್ನ ಕೈಲಿತ್ತು. ನಿನ್ನ ಕಣ್ಣಾಲಿಗಳಲ್ಲಿ ಜಿನುಗುತ್ತಿದ್ದ ಹಸಿಪಸೆ ನನ್ನನ್ನು ಮತ್ತಷ್ಟು ಆರ್ದ್ರನಾಗಿಸಿತು. ಒಂದೆರಡು ಮಾತು ಹರಸಿದೆ ನೀನು. ಶಾಟ್ ಗೆ ಕರೆಬಂತು!

  ... 'ಗಡಿಬಿಡಿ ಕೃಷ್ಣ' ಮುಹೂರ್ತದಲ್ಲಿ ನೀನು ನನ್ನ ಬಾಯಿಗೆ ಸಿಹಿ ಹಾಕಿ ಬಾಚಿ ತಬ್ಬಿಕೊಂಡು "ಕಲ್ಯಾಣ್ಕುಮಾರ್' ಮಗನಾಗಿ 'ಮನೆತನ'ದಲ್ಲಿ ತುಂಬಾ ಚೆನ್ನಾಗಿ ಮಾಡ್ತಿಯ ಕಂದಾ.." ಅಂದಾಗ ಆಗಸಕ್ಕೆ ಜಿಗಿದಿದ್ದೆ. ನಿನ್ನ ತಬ್ಬಿಕೊಂಡ ಆ ಆಹ್ಲಾದ ಹೋಗಬಾರದೆಂದು ಮೂರುದಿನ ಸ್ನಾನವನ್ನೇ ಮಾಡಲಿಲ್ಲ ನಾನು!

  ...ಮುಂದೆ ದಿನಗಟ್ಟಲೆ ಮಂಗಳೂರಿನಲ್ಲಿ 'ಟುವ್ವಿ ಟುವ್ವಿ' ಚಿತ್ರದಲ್ಲಿ ರಾಘಣ್ಣನೊಂದಿಗೆ ಅಭಿನಯಿಸುವಾಗ ಸೆಟ್ ನಲ್ಲಿ ನಿರಾಳವಾಗಿ ಮಾತನಾಡಲು ಸಿಕ್ಕೆ.. ನನ್ನ ಆಸೆ ತೀರಿಸಿಕೊಂಡೆ ನಾನು.

  'ಭಕ್ತ ಅಂಬರೀಷ' ಕೊನೆಯ ಚಿತ್ರದ ಸಿದ್ಧತೆಯಲ್ಲಿ ನನಗೊಂದು ಪುಟ್ಟ ದೇವತೆ ಪಾತ್ರ ನಿನ್ನೊಂದಿಗೆ ಇದೆ ಅಂತ ಕೇಳಿ ರೋಮಾಂಚನಗೊಂಡಿದ್ದೆ.

  ಬಟ್ಟೆ ಅಳತೆಗಾಗಿ ಪ್ರಕಾಶ್ ಫೋನ್ ಮಾಡಿದ್ದ.

  ಮಾರನೆಗೆ ನೀನು ಅಪಹರಣವಾದೆ. ನಾನು ದಿಕ್ಕು ತೋಚದಂತಾಗಿದ್ದೆ. ಚಳುವಳಿಗಳ, ಬಂದ್ ಗಳ ಹೋರಾಟಗಳಲ್ಲಿ ಭಾಗವಹಿಸಿದೆ. ಹುಚ್ಚನಂತೆ ಓಡಾಡಿದೆ .

  ನೀನು ಮರಳಿ ಬಂದಾಗ ಸಂಭ್ರಮಿಸಿದೆ.

  ನಾನು ನಾಟಕ ಅಕಾಡೆಮಿಯ ಸದಸ್ಯನಾಗಿ ಆಯ್ಕೆಯಾದ ನಂತರ ಮೊದಲ ಮೀಟಿಂಗ್ ಆದ ಮೇಲೆ ಆಶೀರ್ವಾದ ಪಡೆಯಲು ನಾವೆಲ್ಲ ಸದಾಶಿವನಗರದ ನಿಮ್ಮ ಮನೆಗೆ ಬಂದೆವು.

  ನಿನ್ನ ಸಮೀಪ ಕುಳಿತು ಮಾತನಾಡಿದೆ. ಪಕ್ಕದವರ ಸಂಜ್ಞೆಗಳನ್ನು ಗಮನಿಸದೆ ನೀನು ಒಮ್ಮೆ ಮುಗ್ಧ ಮಗುವಿನಂತೆ, ಮತ್ತೊಮ್ಮೆ ಕಣ್ಣು ಮುಚ್ಚಿ ಧ್ಯಾನದಲ್ಲಿದ್ದಂತೆ, ಮಗದೊಮ್ಮೆ ಭಾವೋತ್ಕರ್ಷದಲ್ಲಿ ಮನತುಂಬಿ ಮಾತನಾಡಿದೆ. ಅವತ್ತು 'ಕಿತ್ತೂರು ಚನ್ನಮ್ಮ'ನ, 'ಸಂಗೊಳ್ಳಿ ರಾಯಣ್ಣ'ನ, ಥ್ಯಾಕರೆಯ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಹೇಳುತ್ತಿದ್ದೆ.

  ಕಣ್ಣರಳಿಸಿ ನೋಡುತ್ತಲೇ ಇದ್ದೆ ನಾನು!

  ನಿನ್ನ ಜೊತೆ ಎಷ್ಟು ಹೊತ್ತಿದ್ದರೂ ಇನ್ನೂ ಇರುತ್ತಲೇ ಇರಬೇಕು ಅನ್ನಿಸುತ್ತಿತ್ತು. ಮುಗಿಯಬಾರದು ಈ ಘಳಿಗೆ ಅಂದುಕೊಳ್ಳುತ್ತಿದ್ದೆ!

  ನನ್ನ 'ನಟನ' ಜಾಗ ರಿಜಿಸ್ಟರ್ ಆಗುತ್ತಿತ್ತು. ಸಹಿ ಮಾಡುತ್ತಿದೆ. ಯಾರೋ "ನೀನು ಇನ್ನಿಲ್ಲ" ಅಂದರು. ನಾನು ಮೌನವಾದೆ ಇಡೀ ದಿನ.

  ನಿನ್ನ ಕೊನೆಗೆ ಬರಲಿಲ್ಲ ನಾನು!

  ನೀನು ಹೋಗೇ ಇಲ್ಲ, ನನ್ನೊಳಗೆ ಬಂದು ಬಿಟ್ಟಿದ್ದೀ...

  ಕಠೋರ ಜಗತ್ತಿನೆದುರು ನಿನ್ನ ಮೃದು ನಗು, ಮಾತು ನನ್ನಂತಹ ಲಕ್ಷಾಂತರ ಪಾಮರ ಹೃದಯಗಳ ಒಳಗೆ ಚಲಿಸುತ್ತಲೇ ಇರುತ್ತದೆ.

  ನಮ್ಮ ಕೆಲಸಗಳ ಹಿಂದೆ ನೀನಿದ್ದಿ ಅಂತಲೇ ಭಾವಿಸಿದ್ದೇನೆ.ನಿನ್ನ ಹತ್ತಿರ ಕಲಿಯಬೇಕಾದ್ದು ಇನ್ನೂ ತುಂಬಾ ಇತ್ತು. ಆಗಲಿಲ್ಲದ್ದಕ್ಕೆ ವ್ಯಥೆ ಇದೆ. ನಿನ್ನ ಅಭಿನಯ ತುಣುಕು ಗಳ ವೀಡಿಯೊ, ನಿನ್ನ ಮಾತುಗಳ ವಿಡಿಯೋ ನಿನ್ನ ದನಿ.. ಎಲ್ಲೇ ಕೇಳಿದರೂ, ನೋಡಿದರೂ ವಿನಾಕಾರಣ ಕಣ್ಣಲ್ಲಿ ನೀರಾಡುತ್ತದೆ. ಆ ಹನಿಯಲ್ಲಿನ ಅಭಿಮಾನ ಮಾತಿಗೆ ಮೀರಿದ್ದು...

  ಮತ್ತೆ ಮತ್ತೆ ಅನಿಸುತ್ತಲೇ ಇರುತ್ತದೆ...

  "ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕಾದ ಮ್ಯಾಲೆ...!"

  Dr Rajkumar & Sachin Tendulkar ಹೆಸರಲ್ಲಿವೆ ಇದುವರೆಗೆ ಯಾರೂ ಮಾಡಿರದ ದಾಖಲೆ | Filmibeat Kannada

  - ಮಂಡ್ಯ ರಮೇಶ್

  English summary
  Actor Mandya Ramesh open letter about Dr Rajkumar. He explains how Dr Rajkumar and his movies played important role in his life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X