ರಾಜ್ ಬಿ ಶೆಟ್ಟಿ ಪವರ್ ಹೌಸ್ ಎಂದ 'ಕರಾವಳಿ' ಸುಂದರಿ; ಯಾರಿದು ಸುಷ್ಮಿತಾ ಭಟ್? ಹಿನ್ನೆಲೆಯೇನು?
ಸ್ಯಾಂಡಲ್‌ವುಡ್‌ನಲ್ಲಿ ಹಾಟ್ ಟಾಪಿಕ್ ಅಂದರೆ ಅದು 'ಕರಾವಳಿ' ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ರಾಜ್ ಬಿ.ಶೆಟ್ಟಿ ಕಾಂಬಿನೇಷನ್‌ನಿಂದ ಈ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ. ಈ ಕ್ರೇಜ್ ಮಧ್ಯೆ 'ಕರಾವಳಿ' ಸಿನಿಮಾದಲ್ಲಿ ನಟಿಸಿರುವ ಹೊಸ ಪ್ರತಿಭೆಯೊಂದು ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಆ ಚೆಲುವೆ ಬೇರೆ ಯಾರೂ ಅಲ್ಲ, ಕನ್ನಡದ ಭರವಸೆಯ ನಟಿ ಸುಷ್ಮಿತಾ ಭಟ್.
'ಕರಾವಳಿ' ತಂಡ ಸುಷ್ಮಿತಾ ಭಟ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದೆ. ಇತ್ತೀಚೆಗಷ್ಟೇ ನಟ ರಾಜ್ ಬಿ. ಶೆಟ್ಟಿಯ 'ಮಹಾವೀರ' ಲುಕ್ ಅನ್ನು ತಂಡ ರಿಲೀಸ್ ಮಾಡಿತ್ತು. ರಾಜ್ ಬಿ. ಶೆಟ್ಟಿ 'ಮಹಾವೀರ' ಪಾತ್ರವು ಕರಾವಳಿಯ ಜಾನಪದ ಹಿನ್ನೆಲೆ ಅಥವಾ ನಂಬಿಕೆಗಳನ್ನು ಆಧರಿಸಿದೆಯೇ ಎಂಬ ಪ್ರಶ್ನೆ ಕೂಡ ಮೂಡಿತ್ತು.

ಈಗ ರಾಜ್ ಬಿ. ಶೆಟ್ಟಿಗೆ ಜೋಡಿಯಾಗಿ ಸುಷ್ಮಿತಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ 'ಕರಾವಳಿ' ಸುಷ್ಮಿತಾ ಭಟ್‌ಗೆ ಇದು ಮೂರನೇ ಸಿನಿಮಾ. ಆದರೆ, ರಾಜ್ ಬಿ. ಶೆಟ್ಟಿ ಯಂತಹ ಸ್ಟಾರ್ ನಟನ ಜೊತೆ ಕೆಲಸ ಮಾಡಿದ್ದು ವೃತ್ತಿ ಬದುಕಿನ ಅತೀ ದೊಡ್ಡ ತಿರುವು. ಈಗಾಗಲೇ ಬಿಡುಗಡೆಯಾಗಿರುವ ಸುಷ್ಮಿತಾ ಪಾತ್ರದ ವಿಶೇಷ ಪೋಸ್ಟರ್ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ಯಾರಿದು ಸುಷ್ಮಿತಾ ಭಟ್?
ಸುಷ್ಮಿತಾ ಭಟ್ ಮೂಲತಃ ಮಂಗಳೂರಿನವರು. ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಶೂಟ್‌ಗಳಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಈಗ ಬೆಳ್ಳಿತೆರೆ ಮೇಲೆ ಮಿಂಚಲು ಮಿಂಚುವುದಕ್ಕೆ ಸಜ್ಜಾಗಿದ್ದಾರೆ. 'ಕರಾವಳಿ' ಸಿನಿಮಾದಲ್ಲಿ ಸುಷ್ಮಿತಾ ಪಕ್ಕಾ ಮಂಗಳೂರಿನ ಹುಡುಗಿಯ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿರೋದು ವಿಶೇಷ.
'ಕರಾವಳಿ' ತಂಡ ಸುಷ್ಮಿತಾ ಅವರನ್ನು ಪಾತ್ರಕ್ಕಾಗಿ ಸಂಪರ್ಕಿಸಿದಾಗ ಅವರು ತಕ್ಷಣ ಒಪ್ಪಿಕೊಂಡಿದ್ದಾರೆ. ಸುಷ್ಮಿತಾ ಈ ಪಾತ್ರ ಒಪ್ಪಲು ರಾಜ್ ಬಿ. ಶೆಟ್ಟಿ ಅವರೇ ಮುಖ್ಯ ಕಾರಣ ಎನ್ನುತ್ತಾರೆ. "ರಾಜ್ ಬಿ. ಅವರಿಂದ ತುಂಬಾ ಕಲಿಯಬಹುದು ಎಂಬ ಉದ್ದೇಶದಿಂದಲೇ ಈ ಸಿನಿಮಾಕ್ಕೆ ಬಂದೆ. ಕಡಿಮೆ ದಿನ ಚಿತ್ರೀಕರಣ ಮಾಡಿದರೂ, ಸಾಕಷ್ಟು ಕಲಿತಿದ್ದೇನೆ" ಎಂದು ಸುಷ್ಮಿತಾ ಹೇಳಿದ್ದಾರೆ. ರಾಜ್ ಬಿ. ಶೆಟ್ಟಿ ಒಂದು 'ಪವರ್ ಹೌಸ್' ಎಂದು ಬಣ್ಣಿಸಿದ್ದಾರೆ. ಅವರಿಗೆ ಸಖತ್ ಎನರ್ಜಿ ಇದೆ. ಸೆಟ್ನಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ. ಅವರೊಂದಿಗೆ ಕೆಲಸ ಮಾಡಿದ್ದು ತುಂಬಾ ಸಂತೋಷ ನೀಡಿದೆ ಎಂದಿದ್ದಾರೆ ಸುಷ್ಮಿತಾ. ಈ ಹಿಂದೆ ರಿಲೀಸ್ ಆದ 'ಭೂಮಿ' ಪೋಸ್ಟರ್‌ನಂತೆ ಸುಷ್ಮಿತಾ ಪಾತ್ರವೂ ಕಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗಿದೆ. ಕರಾವಳಿ ಬದುಕಿನಲ್ಲಿ ಹೆಣ್ಣುಮಕ್ಕಳು ವಹಿಸುವ ಮಹತ್ವವನ್ನು ಈ ಪಾತ್ರ ತೋರಿಸಬಹುದು.

ಕರಾವಳಿಯ ನೈಜ ಬದುಕು ತೆರೆಗೆ
'ಕರಾವಳಿ' ಚಿತ್ರಕ್ಕೆ ನಿರ್ದೇಶಕ ಗುರುದತ್ ಗಾಣಿಗ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಗುರುದತ್ ಅವರೇ 'ಗಾಣಿಗ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಕಥಾ ಹಂದರ ಅತಿ ವಿಭಿನ್ನವಾಗಿದೆ. ಇದು ಮನುಷ್ಯ ಮತ್ತು ಪ್ರಾಣಿಯ ನಡುವೆ ನಡೆಯುವ ಸಂಘರ್ಷದ ಕಥೆಯನ್ನು ಹೊಂದಿದೆ. ಕಥೆ ಸಂಪೂರ್ಣವಾಗಿ ಹಳ್ಳಿಯ ಬ್ಯಾಕ್ ಡ್ರಾಪ್ನಲ್ಲಿ ನಡೆಯಲಿದ್ದು, ಕರಾವಳಿಯ ನೈಜ ಬದುಕನ್ನು ತೋರಿಸಲಿದೆ.
ಈ ಪವರ್ಫುಲ್ ಸಿನಿಮಾದಲ್ಲಿ ಸುಷ್ಮಿತಾ ಮತ್ತು ರಾಜ್ ಬಿ. ಶೆಟ್ಟಿ ಜೊತೆಗೆ ಪ್ರಜ್ವಲ್ ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಮತ್ತು ಸಂಪದಾ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ. ಚಿತ್ರಕ್ಕೆ ಸಚಿನ್ ಬಸ್ರೂರು ಅವರ ಸಂಗೀತ ಸಂಯೋಜನೆ ಮತ್ತು ಅಭಿಮನ್ಯೂ ಸದಾನಂದನ್ ಅವರ ಕ್ಯಾಮರಾ ಕೈಚಳಕವಿದೆ. ಒಟ್ಟಿನಲ್ಲಿ 'ಕರಾವಳಿ' ಸಿನಿಮಾ ಕನ್ನಡಕ್ಕೆ ಮತ್ತೊಂದು ಭಿನ್ನ ಸಿನಿಮಾ ನೀಡುವ ಭರವಸೆ ಮೂಡಿಸಿದೆ.


Click it and Unblock the Notifications











