'ಸು ಫ್ರಂ ಸೋ' ಅದ್ಭುತ ಗೆಲುವಿನಲ್ಲಿ ಈ ಮಂಗಳೂರು ಹುಡುಗಿ ಪಾಲೂ ಇದೆ!
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಂ ಸೋ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ದಿನದಿಂದ ದಿನಕ್ಕೆ ಸಿನಿಮಾ ಆರ್ಭಟ ಹೆಚ್ಚುತ್ತಲೇ ಇದೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾ ಆರಂಭದಲ್ಲಿ ಅಬ್ಬರಿಸಿ ಬಳಿಕ ಸೈಲೆಂಟ್ ಆಗುತ್ತವೆ. ಆದರೆ ಕೆಲ ಸಿನಿಮಾಗಳು ಹೀಗೆ ಆರಂಭದಲ್ಲಿ ಸದ್ದು ಮಾಡದಿದ್ದರೂ ಬಳಿಕ ಬಾಕ್ಸಾಫೀಸ್ ಶೇಕ್ ಮಾಡುತ್ತವೆ.
ಬಹುತೇಕ ಹೊಸ ಪ್ರತಿಭೆಗಳು, ಕರಾವಳಿ ಪ್ರತಿಭೆಗಳು ಸೇರಿ ಮಾಡಿರುವ ಸಿನಿಮಾ ಇದು. ಇದೀಗ ನಿಧಾನವಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಈಗಾಗಲೇ ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ದೇಶ ವಿದೇಶಗಳಲ್ಲಿ ಸಿನಿಮಾ ತೆರೆಕಂಡಿದೆ. ನಿಧಾನವಾಗಿ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ಕೇರಳದಲ್ಲಿ ಸಿನಿಮಾ ಸದ್ದು ಮಾಡ್ತಿದೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ತೆಲುಗು ರೈಟ್ಸ್ ಕೊಂಡುಕೊಂಡಿದ್ದಾರೆ. ಅಷ್ಟರಮಟ್ಟಿಗೆ 'ಸು ಫ್ರಂ ಸೋ' ಸಿನಿಮಾ ದರ್ಬಾರ್ ಜೋರಾಗಿದೆ. ಜೆ. ಪಿ ತುಮ್ಮಿನಾಡ್ ನಟನೆ ನಿರ್ದೇಶನ, ರವಿಯಣ್ಣ ಆಗಿ ಶಾನೀಲ್ ಗೌತಮ್, ಸ್ವಾಮಿಯಾಗಿ ರಾಜ್ ಬಿ. ಶೆಟ್ಟಿ ಚಿತ್ರದ ಹೈಲೆಟ್. ಸುಖಾ ಸುಮ್ಮನೆ ಕಾಮಿಡಿ ತುರುಕದೇ ಸಿಚ್ಯುವೇಶನಲ್ ಕಾಮಿಡಿಯಿಂದ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಚಿತ್ರದ ಗೆಲುವಿನಲ್ಲಿ ಈ ಅನಾಮಧೇಯ ಹುಡುಗಿಯ ಪಾಲೂ ಇದೆ ಎನ್ನುವುದನ್ನು ಮರೆಯಬಾರದು.
ಜುಲೈ 25ರಂದು 'ಸು ಫ್ರಂ ಸೋ' ಸಿನಿಮಾ ಬಿಡುಗಡೆಗೂ ಮುನ್ನ ಮಂಗಳೂರಿನಲ್ಲಿ ಪ್ರೀಮಿಯರ್ ಶೋಗಳು ನಡೆದಿತ್ತು. ಪೇಯ್ಡ್ ಪ್ರೀಮಿಯರ್ ಶೋಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿದವರು ಸಖತ್ ಎಂಜಾಯ್ ಮಾಡಿದ್ದರು. ಚಿತ್ರಮಂದಿರದಿಂದ ಹೊರಗೆ ಬಂದು ತಮ್ಮ ಸಂತಸ, ಸಂಭ್ರಮ ಹಂಚಿಕೊಂಡಿದ್ದರು. ಅದರಲ್ಲೂ ಈ ಹುಡುಗಿ ಸಿನಿಮಾ ನೋಡಿ ಬಹಳ ಎಕ್ಸೈಟ್ ಆಗಿ ಮಾತನಾಡಿದ್ದಳು. ಎಲ್ಲರೂ ನೋಡಲೇಬೇಕು, ಅಮೇಜಿಂಗ್ ಸಿನಿಮಾ, ವರ್ಲ್ಡ್ ಬೆಸ್ಟ್ ಮೂವಿ ಅಂದ್ರೆ ಇದೇ ಅನ್ನಬಹುದು ಅಷ್ಟು ಚೆನ್ನಾಗಿದೆ ಎಂದು ಬಹಳ ಸಂಭ್ರಮದಿಂದ ಹೇಳಿದ್ದಳು. ಆಕೆಯ ಮಾತು ಕೇಳಿ ಕೆಲವರು ಸಿನಿಮಾ ನೋಡಲು ಮನಸ್ಸು ಮಾಡಿದ್ದರು.
ಹೀಗೆ ನಿಧಾನವಾಗಿ ಮೌತ್ ಟಾಕ್ ಹೆಚ್ಚಾಯಿತು. ಸಿನಿಮಾ ಬಗ್ಗೆ ಬಹುತೇಕ ಎಲ್ಲರೂ ಅದ್ಭುತ ಪ್ರತಿಕ್ರಿಯೆ ಕೊಡುತ್ತಾ ಬಂದರು. ನಿಧಾನವಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ತಳವೂರಿತು. ಪ್ರೇಕ್ಷಕರನ್ನು ರಂಜಿಸಲು ಆರಂಭಿಸಿತು. ಶೋಗಳು, ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಗಿತು. ನೋಡ ನೋಡುತ್ತಲೇ ಬುಕ್‌ಮೈ ಶೋನಲ್ಲಿ ಅದ್ಭುತ ರೆಸ್ಪಾನ್ಸ್ ಸಿಗಲು ಆರಂಭವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಟ್ರೆಂಡ್ ಆಯಿತು. ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳು ಕೇಳಿಬರಲು ಆರಂಭವಾಯಿತು. ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆಯಿತು. ಇದೀಗ ಗೆಲುವಿನ ಆರ್ಭಟ ಮುಂದುವರೆಯುತ್ತಲೇ ಇದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಮೊದಲಿಗೆ ತೆರೆಗೆ ಬಂದಿತ್ತು. ಇದೀಗ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಜೋರಾಗಿ ಸದ್ದು ಮಾಡ್ತಿದೆ. ಕೆಲವರು ಇನ್ನು ಟಿಕೆಟ್ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಎಲ್ಲಾ ಕಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬುಕ್‌ಮೈ ಶೋನಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಪರಭಾಷಾ ಸಿನಿಮಾಗಳು ಹೆಚ್ಚು ಪ್ರದರ್ಶನ ಕಾಣುವ ಚಿತ್ರಮಂದಿರಗಳಲ್ಲಿ ಕೂಡ 'ಸು ಫ್ರಂ ಸೋ' ಕಾರುಬಾರು ಜೋರಾಗಿದೆ. ಇಂತಾದೊಂದು ಗೆಲುವಿಗಾಗಿ ಕನ್ನಡ ಚಿತ್ರರಂಗ ಬಹಳ ದಿನಗಳಿಂದ ಕಾಯುತ್ತಿತ್ತು.
ಪ್ರೇಕ್ಷಕರು ಕನ್ನಡ ಸಿನಿಮಾ ನೋಡೊಕೆ ಬರಲ್ಲ ಎನ್ನುವ ಅಪವಾದವನ್ನು ಈ ಸಿನಿಮಾ ಸುಳ್ಳಾಗಿಸಿದೆ. ಪ್ರೇಕ್ಷಕರ ಮೇಲೆ ಆರೋಪ ಮಾಡುವುದು ಬಿಟ್ಟು ಒಳ್ಳೆ ಸಿನಿಮಾ ಎಂದು ಸಾರಿ ಹೇಳುತ್ತಿದೆ. ಒಳ್ಳೆ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ಕೈ ಬಿಡಲ್ಲ ಎನ್ನುವುದು ಸಾಬೀತಾಗಿದೆ. ಸ್ಟಾರ್ ನಟರು ಇಲ್ಲದ, ಭಾರೀ ಪ್ರಚಾರ ಮಾಡದ ಚಿತ್ರವೊಂದಕ್ಕೆ ಇಂತಹ ಪ್ರತಿಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸಿದೆ.
'ಸಯ್ಯಾರ', 'ಎಕ್ಕ', 'ಮಹಾವತಾರ್ ನರಸಿಂಹ', 'ಜ್ಯೂನಿಯರ್', 'ಹರಿಹರ ವೀರಮಲ್ಲು', 'ಕಿಂಗ್‌ಡಮ್' ಹೀಗೆ ಯಾವುದೇ ಸಿನಿಮಾ 'ಸು ಫ್ರಂ ಸೋ' ಅಬ್ಬರವನ್ನು ಕಿಂಚಿತ್ತು ತಡೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಿನಿಮಾ ಕರ್ನಾಟಕದಲ್ಲಿ 30 ಕೋಟಿ, ಉಳಿದ ಭಾಗಗಳಲ್ಲಿ 4 ಕೋಟಿ ಸೇರಿ 34 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ ಸಿನಿಮಾ ಗಳಿಕೆ 50 ಕೋಟಿ ರೂ. ಗಡಿ ದಾಟಲಿದೆ.


Click it and Unblock the Notifications











