ಕಿಚ್ಚ ಸುದೀಪ್ ಸಿನಿಮಾ ನಾಯಕಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ಆಕೆಯನ್ನು ಏರ್ಪೋಟ್ ಕಸ್ಟಮ್ಸ್ ಡಿಆರ್‌ಐ ತಂಡದ ಅಧಿಕಾರಿಗಳಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ(ಮಾರ್ಚ್ 4) ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂದಿಳಿದಾಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದಿರುವ ಆರೋಪ ಆಕೆಯ ಮೇಲಿದೆ. ದುಬೈನಿಂದ ಆಕೆ ಬೆಂಗಳೂರಿಗೆ ಬಂದಿಳಿದಿದ್ದರು.

ಕನ್ನಡದ 'ಮಾಣಿಕ್ಯ', 'ಪಟಾಕಿ' ಹಾಗೂ ತಮಿಳಿನ 'ವಾಘಾ' ಸಿನಿಮಾಗಳಲ್ಲಿ ರನ್ಯಾ ರಾವ್ ನಟಿಸಿದ್ದರು. ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಸಂಬಂಧಿಯಾಗಿರುವ ನಟಿ ರನ್ಯಾ ರಾವ್ ಎನ್ನಲಾಗ್ತಿದೆ. ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ತಂಡ ಕಳೆದ ರಾತ್ರಿ ಏರ್ಪೋಟ್ ಹೋಗಿತ್ತು. ಬಳಿಕ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ದುಬೈನಿಂದ ದೆಹಲಿ ಮಾರ್ಗವಾಗಿ ಆಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ವರದಿಯಾಗಿದೆ.
14.8 ಕೆಜಿ ಚಿನ್ನವನ್ನು ರನ್ಯಾ ರಾವ್ ಸಾಗಾಟ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಸುದೀಪ್ ನಿರ್ದೇಶಿಸಿ, ನಟಿಸಿದ್ದ 'ಮಾಣಿಕ್ಯ' ಚಿತ್ರದ ಮೂಲಕ ರನ್ಯಾ ಚಿತ್ರರಂಗಕ್ಕೆ ಬಂದಿದ್ದರು. ರನ್ಯಾ 1993ರಲ್ಲಿ ಚಿಕ್ಕಮಗಳೂರಿನಲ್ಲಿ ಹುಟ್ಟಿದ್ದರು. ಅಲ್ಲೇ ಶಾಲಾ ಶಿಕ್ಷಣ ಮುಗಿಸಿ ಬಳಿಕ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜು ಸೇರಿದ್ದರು.
ನಟನೆಯತ್ತ ಆಸಕ್ತಿ ಮೂಡಿ ಕಾಲೇಜು ಬಿಟ್ಟು ಮುಂಬೈನ ನಮಿತ್ ಕಿಶೋರ್ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತಿದ್ದರು. ಜೊತೆಗೆ ಮಾಡೆಲಿಂಗ್ ಸಹ ಆರಂಭಿಸಿದ್ದರು. ರನ್ಯಾಗೆ ಇಬ್ಬರು ಸಹೋದರರು ಒಬ್ಬ ಸಹೋದರ ಇದ್ದಾರೆ. ಶ್ರೀಮಂತ ಮನೆತನದ ರನ್ಯಾ ರಾವ್ ಹೈಫೈ ಲೈಫ್ ಲೀಡ್ ಮಾಡುತ್ತಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ಟೀವ್ ಆಗಿರದ ಚೆಲುವೆ ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದರು. ಚಿತ್ರರಂಗಕ್ಕೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ತೆಲುಗಿನ 'ಮಿರ್ಚಿ' ರೀಮೆಕ್ 'ಮಾಣಿಕ್ಯ' ಚಿತ್ರದಲ್ಲಿ ನಾಯಕಿ ಮಾನಸಾ ಆಗಿ ಅವಕಾಶ ಪಡೆದಿದ್ದರು. ತೆಲುಗಿನಲ್ಲಿ ರಿಚಾ ಗಂಗೋಪಧ್ಯಾಯ ಈ ಪಾತ್ರವನ್ನು ಮಾಡಿದ್ದರು.
ರಾನ್ಯ ಆಗಾಗ್ಗೆ ದುಬೈ ಪ್ರವಾಸ ಮಾಡುತ್ತಿದ್ದರು. ಇದು ಸಹಜವಾಗಿಯೇ DRI ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ತಾನು DG ಮಗಳು ಎಂದು ಹೇಳುತ್ತಿದ್ದರು ಹಾಗಾಗಿ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪರಿಶೀಲನೆ ಮಾಡುತ್ತಿರಲಿಲ್ಲ. ಈ ಹಿಂದೆ ಕೂಡ ಆಕೆ ಇದೇ ರೀತಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಡಿಜಿ ರಾಮಚಂದ್ರ ರಾವ್ ಅವರ 2ನೇ ಪತ್ನಿಯ ಮಗಳು ಈಕೆ.


Click it and Unblock the Notifications











