ಐದನೇ ವರ್ಷದ ಸಂಭ್ರಮದಲ್ಲಿ ಕಿಚ್ಚನ 'ಮಾಣಿಕ್ಯ'
ಮಾಣಿಕ್ಯ... 2014 ರಲ್ಲಿ ಬಿಡುಗಡೆ ಆದ ಸಿನಿಮಾ. ಕ್ರೇಜಿ ಸ್ಟಾರ್ ರವಿಚಂದ್ರನ್, ವರಲಕ್ಷ್ಮಿ ಶರತ್ ಕುಮಾರ್, ರನ್ಯ ರಾವ್ ಅಭಿನಯದ ಕಿಚ್ಚ ಸುದೀಪ್ ನಟಿಸಿ, ನಿರ್ದೇಶನದ 'ಮಾಣಿಕ್ಯ' ಸಿನಿಮಾ ಅಂದು ಸೂಪರ್ ಡ್ಯೂಪರ್ ಹಿಟ್ ಆಗಿತ್ತು.
ತೆಲುಗಿನ 'ಮಿರ್ಚಿ' ಚಿತ್ರದ ರೀಮೇಕ್ ಆಗಿರುವ 'ಮಾಣಿಕ್ಯ' ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿತ್ತು. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ 'ಮಾಣಿಕ್ಯ' ಬಗ್ಗೆ ಇಂದು ನಾವು ನೆನಪು ಮಾಡಿಕೊಳ್ಳಲು ಒಂದು ಕಾರಣ ಇದೆ. ಇಂದಿಗೆ (ಮೇ 1) ಸರಿಯಾಗಿ ಐದು ವರ್ಷಗಳ ಹಿಂದೆ 'ಮಾಣಿಕ್ಯ' ಚಿತ್ರ ತೆರೆಕಂಡಿತ್ತು.
ಕಳೆದ ವರ್ಷ (2018 ಮೇ 1 ರಂದು) ಇದೇ ದಿನ ಕಿಚ್ಚ ಸುದೀಪ್ ಈ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಮಾಣಿಕ್ಯ ಸಿನಿಮಾ ನಾಲ್ಕು ವರ್ಷ ಪೂರೈಸಿದ್ದ ಸಂದರ್ಭದಲ್ಲಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದರು.

ಕಳೆದ ವರ್ಷ ಸುದೀಪ್ ಹಂಚಿಕೊಂಡಿದ್ದ ಮಾತು ಹೀಗಿದೆ
''ನಮ್ಮನ್ನೆಲ್ಲ ಒಟ್ಟಿಗೆ ಸೇರಿಸಿದ ಕೆಲ ಕ್ಷಣಗಳು, ವ್ಯಕ್ತಿಗಳು ಹಾಗೂ ಸನ್ನಿವೇಶಗಳನ್ನು ಮತ್ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ. ತಾಂತ್ರಿಕ ಬ್ರಹ್ಮ ರವಿಚಂದ್ರನ್ ಅವರಿಗೆ 'ಅಕ್ಷನ್' ಎಂದು ಹೇಳಿದ ಆ ದಿನವನ್ನು ನಾನು ಮರೆಯಲಾರೆ. ಮಾನವೀಯತೆ ಹಾಗೂ ಸಂಬಂಧಗಳ ಮೌಲ್ಯಗಳನ್ನು ಸಾರುವ 'ಮಾಣಿಕ್ಯ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇತ್ತು. ಮಿತವಾದ ಬಜೆಟ್ ನಲ್ಲಿ ಅದ್ಭುತವಾದ ಸೆಟ್ ಹಾಕಿ ಚಿತ್ರೀಕರಣ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಆ ಸವಾಲನ್ನ ನಾನು ಸ್ವೀಕರಿಸಿ, ಜಯಿಸಿದೆ''
''ಸಿನಿಮಾದ ಪ್ರೀ-ಪ್ರೊಡಕ್ಷನ್, ಮೇಕಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸವೇ ಒಂದು ಅತ್ಯದ್ಭುತ ಅನುಭವ ನೀಡಿತು. ಚಿತ್ರದ ಮೊದಲ ಪ್ರತಿ ನಾನು ನೋಡಲಾಗದಿದ್ದರೂ, ಬಿಡುಗಡೆಯಾದ ಮೊದಲ ದಿನ ಅಭಿಮಾನಿಗಳ ಜೊತೆ 'ಮಾಣಿಕ್ಯ' ನೋಡಿದ್ದು ಖುಷಿ ತಂತು. ಸಿನಿಮಾ ನೋಡಿದ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಕಂಡು ಸಾರ್ಥಕ ಭಾವ ಮೂಡಿತು. 'ಮಾಣಿಕ್ಯ ಸಿನಿಮಾ ನನಗೆ ಒಳ್ಳೆಯ ನೆನಪುಗಳನ್ನು ನೀಡಿವೆ. ಆ ನೆನಪುಗಳೇ ಪ್ರತಿ ದಿನ ನನ್ನನ್ನ ಎಚ್ಚರಗೊಳಸಿ, ಮತ್ತಷ್ಟು ಒಳ್ಳೆ ಸಿನಿಮಾಗಳನ್ನು ಮಾಡಲು ಸ್ಫೂರ್ತಿ ನೀಡುತ್ತವೆ'' ಎಂದು ಖುಷಿ ಹಂಚಿಕೊಂಡಿದ್ದರು.


Click it and Unblock the Notifications











