»   » ಯಾವುದದು ಮೊನಿಷಾ ಕೊಯಿರಾಲ ಕಲಿಯುತ್ತಿರುವ ಹೊಸ ವಿದ್ಯೆ?

ಯಾವುದದು ಮೊನಿಷಾ ಕೊಯಿರಾಲ ಕಲಿಯುತ್ತಿರುವ ಹೊಸ ವಿದ್ಯೆ?

Posted By: Staff
Subscribe to Filmibeat Kannada

ಒಂದರ ನಂತರ ಒಂದು ಸಿನಿಮಾ ಬಕ್ಕಾ ಬೋರಲು ಬಿದ್ದರೆ ಮಾಡುವುದೇನು? ಒಂದೋ ವಾಲೆಂಟರಿ ರಿಟೈರ್‌ ಆಗುವುದು. ಇನ್ನೊಂದು ವಿದ್ಯಾರ್ಥಿಯಾಗುವುದು. ಅಂಥಾ ಫ್ಲಾಪ್‌ ಅಲ್ಲದಿದ್ದರೂ ಈ ಎರಡನ್ನೂ ಈಗಾಗಲೇ ಮಾಡಿರುವವರು ಸ್ಪರ್ಶ ರೇಖಾ. ಆದರೆ ಎರಡನೆಯದನ್ನು ಮಾತ್ರ ಆರಿಸಿಕೊಂಡಿರುವುದು ಬಾಲಿವುಡ್‌ ಬೆಡಗಿ ನೇಪಾಳಿ ಚೆಲುವೆ ಮನಿಷಾ ಕೊಯಿರಾಲ.

ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಸದಾ ವಿದ್ಯಾರ್ಥಿ. ಯಾಕೆಂದರೆ ಯಾರೊಬ್ಬರ ಹತ್ತಿರವಾದರೂ ಅವರು ಏನಾದರೊಂದು ಕಲಿಯುತ್ತಲೇ ಇರುತ್ತಾರೆ. ಪಾಶ್ಚಾತ್ಯ ಸಂಗೀತಗಾರರ ಜೊತೆ ಕೆಲಸ ಮಾಡುವಾಗಲೂ ಅವರು ಕರ್ನಾಟಕ ಸಂಗೀತಾಭ್ಯಾಸ ಬಿಟ್ಟಿರಲಿಲ್ಲ. ಅಂದಹಾಗೆ, ಇತ್ತೀಚೆಗೆ ಮೊನಿಷಾ ರೀತಿ ರೆಹಮಾನ್‌ ಕೂಡ ಭಾರತದ ಮಟ್ಟಿಗೆ ಫ್ಲಾಪ್‌! ಆದರೇನಂತೆ ಕಲಿಯುವುದು ಸಾಕಷ್ಟಿದೆ ಅನ್ನುವ ರೆಹಮಾನ್‌ ತತ್ವವೇ ಮೊನಿಷಾಗೂ ದಾರಿದೀಪವಾದಂತಿದೆ.

ಲಜ್ಜಾ ಸಿನಿಮಾ ಸುಮಾರಾಗಿ ಓಡಿತು. ಅದರಲ್ಲಿ ಅಭಿನಯಿಸಿದವರ ಪೈಕಿ ಮಾಧುರಿ ದೀಕ್ಷಿತ್‌ಗೆ ಮಾತ್ರ ಕೊಂಚ ಹೆಸರು ಬಂತು. ನಂತರ ತೆರೆಕಂಡ 'ಮೋಕ್ಷ"ಕ್ಕೆ ಥಿಯೇಟರಿನಿಂದ ಬಲು ಬೇಗ ಮೋಕ್ಷ ಸಿಕ್ಕಿತು ! ಮೊನಿಷಾ ಮಾತ್ರ ಇವ್ಯಾವುದರಿಂದಲೂ ಕಂಗಾಲಾಗಿಲ್ಲ. ಕನ್ನಡದ ಕೋಟಿ ನಿರ್ಮಾಪಕ ರಾಮು ಹಾಲಿವುಡ್‌ ಚಿತ್ರದ ನಾಯಕಿ ಆಫರ್‌ ಕೊಟ್ಟಾಗ ಇದ್ದ ಹಮ್ಮೇ ಈಗಲೂ ಇದೆ. 'ನಾನು ಸೋತಿಲ್ಲ. ನನಗೆ ವಯಸ್ಸೂ ಆಗಿಲ್ಲ" ಅಂತ ತಾರಕ ಸ್ವರದಲ್ಲೇ ಕಿಚಾಯಿಸಿದವರಿಗೆ ಉತ್ತರ ಕೊಡುತ್ತಾರೆ ಮೊನಿಷಾ.

ಅಂದಹಾಗೆ, ಮೊನಿಷಾ ವಿದ್ಯಾರ್ಥಿನಿಯಾಗಿರುವುದು ಕೆಮರಾ ವಿದ್ಯೆ ಕಲಿಯಲು. ಸೇರಿರುವುದು ನ್ಯೂಯಾರ್ಕ್‌ನ ತರಪೇತಿ ಕೇಂದ್ರಕ್ಕೆ. ನಾಯಕಿ ಪಟ್ಟ ಹೋದರೆ, ಕೆಮೆರಾ ಹಿಡಿಯುವ ಉಮೇದಿಯೇ ಅಂತ ಛೇಡಿಸುವವರಿಗೆ, 'ನೋಡ್ತಾ ಇರಿ ನಾನು ಏನಾಗ್ತೀನಿ" ಅಂತ ಹುಬ್ಬೇರಿಸಿ ಜವಾಬು ಕೊಡುತ್ತಾರೆ ಮೊನಿಷಾ !

ಈ ಸುದ್ದಿ ಕೇಳಿ, ಪರ್ವದಲ್ಲಿ ಆ್ಯಕ್ಟ್‌ ಮಾಡಲು ತಿಣುಕಿದ್ದ ವಿಷ್ಣು ನಟನಾ ತರಪೇತಿಗೆ ಸೇರುವ ಅಥವಾ ಕುಣಿಯಲು ಒದ್ದಾಡಿದ್ದ ಪ್ರೇಮಾ ಭರತ ನಾಟ್ಯ ಕಲಿಯುವ ನಿರ್ಧಾರ ಮಾಡುವರೇ? ಪಾಪ, ಅದಕ್ಕೆ ಅವರಿಗೆ ಪುರುಸೊತ್ತೆಲ್ಲಿದೆ? ಇಬ್ಬರೂ ಸೂಪರ್‌ ಹಿಟ್ಸ್‌ ಅಲ್ಲವೇ?

English summary
Manisha wants to wield the camera

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada