»   » ಕೆಮೆರಾ ವಿದ್ಯೆ ಕಲಿಯಲು ನ್ಯೂಯಾರ್ಕ್‌ ಹಾದಿ ತುಳಿದ ಮೊನಿಷಾ

ಕೆಮೆರಾ ವಿದ್ಯೆ ಕಲಿಯಲು ನ್ಯೂಯಾರ್ಕ್‌ ಹಾದಿ ತುಳಿದ ಮೊನಿಷಾ

Posted By: Staff
Subscribe to Filmibeat Kannada

ಲವ್ವು ಲವ್ವು ಲವ್ವಾ.. ಡವ್ವು.. ಡವ್ವು... ಡವ್ವಾ?!
ಬಾಲಿವುಡ್‌ ಓಣಿಗಳಲ್ಲಿ ಮೊನಿಷಾ ಕೊಯಿರಾಲ ಸುಳಿದಾಡಿದರೆಂದರೆ, ಕಾಶೀನಾಥ್‌ ಸಿನಿಮಾದ ಈ ಹಾಡು ಕೇಳುತ್ತಿದೆ. ಈಗ ಮೊನಿಷಾ ವಿಮಾನ ಹತ್ತುವುದು ಜಾಸ್ತಿಯಾಗಿದೆಯಂತೆ. ತಿಂಡಿ ಮುಂಬಯಿಯಲ್ಲಾದರೆ, ಡಿನ್ನರ್ರು ಲಂಡನ್ನಿನಲ್ಲಿ. ನಡುನಡುವೆ ನ್ಯೂಯಾರ್ಕ್‌ನಲ್ಲಿ ಕೆಮೆರಾ ಹಿಡಿದು ನಿಂತಿರುತ್ತಾರೆ! ಕೆಮೆರಾ ಕಲಿಯುವ ಕೋರ್ಸನ್ನು ಮಾಡುವ ಹಟ ತೊಟ್ಟ ಮೊನಿಷಾ ಮೆಚ್ಚಿರುವುದು ಲಂಡನ್ನಿನ ಹುಡುಗನನ್ನು.

ಹುಡುಗನ ಹೆಸರು ಸೆಸಿಲ್‌. ಪೆಟ್‌ ನೇಮ್‌ ಆ್ಯಂಥೋನಿ. ಮೊನಿಷಾ ಪ್ರಕಾರ ಈತನದು ಜೀವನ್ಮುಖ. ಇವನೇ ಪ್ರಾಣಸಖ. ಮುಚ್ಚುಮರೆ ಮಾಡದೆ ಮೊನಿಷಾ ಸಂದರ್ಶನಗಳಲ್ಲೆಲ್ಲಾ ಹೇಳುತ್ತಿರುವುದೇನು ಗೊತ್ತೆ ?....

ಮದುವೆ ಅಂದರೆ ನನಗೆ ಭಯ. ರಾಮಗೋಪಾಲ್‌ ವರ್ಮಾ ಒಳ್ಳೆ ಗೆಳೆಯ. ಸೆಸಿಲ್‌ ಇನಿಯ. ಮದುವೆಯ ಭಯ ದೂಡಿ, ಬರುವನೇ ಸೆಸಿಲ್‌ ಓಡೋಡಿ ನನ್ನ ಸನಿಯ..? ನನಗೆ ದುಡ್ಡಿದೆ. ಮನೆಗಳಿವೆ. ಬ್ಯಾಂಕ್‌ ಬ್ಯಾಲೇನ್ಸ್‌ ಇದೆ. ಸೌಂದರ್ಯ ಇದೆ. ಸಿನಿಮಾಗೆ ಬರುವ ಮುಂಚೆಯೂ ಇವೆಲ್ಲಾ ಇದ್ದವು. ಹನ್ನೊಂದು ವರುಷ ಇಲ್ಲಿ ಹಾಕಿದೆ ತರಾವರಿ ವೇಷ. ಇನ್ನು ಪಾತ್ರಗಳ ಆಯ್ಕೆಯಲ್ಲಿ ಆಗದು ಕಿಂಚಿತ್ತೂ ದೋಷ.

ಎಸ್ಕೇಪ್‌ ಫ್ರಂ ತಾಲಿಬಾನ್‌ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ವಾಷಿಂಗ್ಟನ್‌ ಸಂಪಾದಕ ಬರೆದಿರುವ ವರ್ಲ್ಡ್‌ ಟ್ರೇಡ್‌ ಸೆಂಟರ್‌ ದಾಳಿಯ ಬಗೆಗಿನ ಸಿನಿಮಾ ಯೋಜನೆ ಬಗ್ಗೆ ಮಾತುಕತೆ ನಡೆಸಿದ್ದೇನೆ. ಇವನ್ನು ಬಿಟ್ಟು ಐದು ಕಮರ್ಷಿಯಲ್‌ ಸಿನಿಮಾಗಳು ನನ್ನ ಕೈಲಿವೆ. ಗ್ರೇಟ್‌ ಅನ್ನುವಂಥಾ ಪಾತ್ರಗಳನ್ನು ಮಾಡಿ ಮಾಡಿ ಸಾಕಾಗಿಹೋಗಿದೆ. ಇನ್ನೇನಿದ್ದರೂ ಭಿನ್ನ ಪಾತ್ರಗಳಿಗೆ ಹಾಗೂ ಸೆಸಿಲ್‌ಗೆ ಮಾತ್ರ ನನ್ನ ಮನ!

ರಾಜಕುವರಿ ಮೊನಿಷಾ ಸಿನಿಮಾದಲ್ಲೂ ನಿಜ ರೂಪದಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಚರಿತ್ರೆ ಸಿನಿಮಾಗಳ ನಿರ್ದೇಶಕ ಅಕ್ಬರ್‌ ಖಾನ್‌ ಕಲ್ಪಿಸಿದ್ದಾರೆ. ಹೊಸ ಚಿತ್ರದ ಹೆಸರು 'ತಾಜ್‌ ಮಹಲ್‌". ಕಬೀರ್‌ ಬೇಡಿ ಈ ಚಿತ್ರದ ರಾಜ. ಇಂಥಾ ವಸ್ತುವನ್ನೇ ಹೊಂದಿದ್ದ ಮುಗಲ್‌- ಎ- ಆಝಮ್‌ ಭಾರತೀಯ ಚಿತ್ರರಂಗದ ಮೈಲುಗಲ್ಲಾಗಿರುವುದು ಇದಕ್ಕೆ ಸ್ಫೂರ್ತಿಯಂತೆ. ಈ ಪಾತ್ರದ ಮೂಲಕ ಜನಮನದಲ್ಲಿ ನಾನು ನಿರಂತರ ನೆಲೆ ನಿಲ್ಲುವೆನೆಂಬ ವಿಶ್ವಾಸ ಮೊನಿಷಾರದ್ದು.

ಮೊನಿಷಾ ವಯಸ್ಸು ಮಾತ್ರ ಇವತ್ತೂ ಗುಟ್ಟು. ಮಾಧುರಿ ಓರಗೆಯವರು ಅನ್ನುವುದು ಸಾಕಲ್ಲವೇ ವಯಸ್ಸನ್ನು ಅಂದಾಜು ಮಾಡಲು. ಮೂವತ್ತು ದಾಟಿತಲ್ಲ. ಅದಕ್ಕೇ ಸಿಕ್ಕಸಿಕ್ಕವರೆಲ್ಲಾ ಮದುವೆ ಯಾವಾಗ? ಅಂತಲೇ ಮೊನಿಷಾರನ್ನು ಮಾತಿಗೆ ಎಳೆಯುವುದು. ಕಿಂಚಿತ್ತೂ ಕಿರಿಕಿರಿಯಾಗದ ಮೊನಿಷಾ ತುಂಟ ನಗೆ ನಗುತ್ತಾ ಹೇಳುತ್ತಾರೆ- 'ನಾನು ಸುಂದರಿ ಅನ್ನೋದು ನನಗೆ ಗೊತ್ತು. ಸಿನಿಮಾ ಪಾಲಿಗೆ ನಾನು ಇನ್ನೂ ಹಲವಾರು ಸಲ್ಲುವ ವಿಶ್ವಾಸವೂ ಉಂಟು. ನಾನಿನ್ನೂ ಚಿಕ್ಕವಳು. ಮನೆ ಕಟ್ಟಿ ನೋಡಿದ್ದಾಗಿದೆ. ಮದುವೆ ಆಗಿ ನೋಡುವುದೊಂದೇ ಬಾಕಿ. ಐ ಲೈಕ್‌ ಸೆಸಿಲಿ...ಸೆಸಿಲಿ" !

ವಾರ್ತಾ ಸಂಚಯ

English summary
ಕೆಮೆರಾ ವಿದ್ಯೆ ಕಲಿಯಲು ನ್ಯೂಯಾರ್ಕ್‌ ಹಾದಿ ತುಳಿದ ಮೊನಿಷಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada