»   » ಮಂಜುನಾಥ ಡಾಟ್‌ ಕಾಮ್‌

ಮಂಜುನಾಥ ಡಾಟ್‌ ಕಾಮ್‌

Posted By: Staff
Subscribe to Filmibeat Kannada

ರಾಘವೇಂದ್ರ ಸ್ವಾಮಿ, ತಿರುಪತಿ ತಿಮ್ಮಪ್ಪ, ಶಬರಿಮಲೆ ಅಯ್ಯಪ್ಪ -ಇವರೆಲ್ಲರೂ ಬೆಳ್ಳಿತೆರೆಯ ಮೇಲೆ ಆಗಾಗ ತಮ್ಮ ದರ್ಶನ ಭಾಗ್ಯವನ್ನು ದಯಪಾಲಿಸುತ್ತಲೇ ಇರ್ತಾರೆ. ಜಗತ್ತಲ್ಲಿ ಕಷ್ಟಕೋಟಲೆಗಳು, ದುಷ್ಟಹಾವಳಿಗಳು ಜಾಸ್ತಿಯಾದಾಗ ದೇವರು ಅವತಾರವೆತ್ತಿ ಬರುವ ಪ್ರಸಂಗಗಳು ಪೌರಾಣಿಕ ಕಥೆಗಳಲ್ಲಿವೆ. ಸಿನೆಮಾದಲ್ಲೂ ಅಷ್ಟೆ. ಆಕ್ಷನ್‌, ಸೆಂಟಿಮೆಂಟ್‌, ಕಾಮೆಡಿ ಇವೆಲ್ಲಾ ಚಿತ್ರಗಳು ಜನರಿಗೆ ಬೋರ್‌ ಆದಾಗ ದೇವರ ಚಿತ್ರಗಳು ಪ್ರತ್ಯಕ್ಷವಾಗುತ್ತಿವೆ. ಇದೀಗ ಬರುತ್ತಿದ್ದಾನೆ ' ಮಂಜುನಾಥ ".

ಇಲ್ಲಿ ತನಕ ಧರ್ಮಸ್ಥಳದ ಮಂಜುನಾಥ ನಮ್ಮ ನಿರ್ಮಾಪಕರ ಕಣ್ಣಿಗೆ ಯಾಕೆ ಬಿದ್ದಿಲ್ಲ ಅನ್ನುವುದೇ ಅಚ್ಚರಿಯ ಸಂಗತಿ. ಶ್ರಾವಣ ಬಂತು, ಭೂತಯ್ಯನ ಮಗ ಅಯ್ಯ, ಚಿತ್ರಗಳಲ್ಲಿ ಧರ್ಮಸ್ಥಳ ಮಹಿಮೆಯ ಝಲಕ್‌ಗಳಷ್ಟೇ ಬಂದಿವೆ. ಕೆಲವು ಚಿತ್ರಗಳಲ್ಲಿ ಉಜಿರೆಯ ಆನೆ ಕೃಷ್ಣ ಪಾರ್ಟು ಮಾಡಿದ್ದಾನೆ.

ಈಗ ಮಂಜುನಾಥನನ್ನು ತೆರೆಗರ್ಪಿಸುವ ಸಿದ್ಧತೆಯಲ್ಲಿರುವವರು ಜಯಶ್ರೀ ದೇವಿ. ಅವರ ಮಾನಸ ಪುತ್ರ ಭಾರವಿಯರದ್ದೇ ಕಥೆ. ತೆಲುಗಿನಲ್ಲಿ ಕಳೆದ ವರ್ಷ ಹಿಟ್‌ ಆದ ' ಅನ್ನಮಯ್ಯ" ಎಂಬ ಅರೆ ಪೌರಾಣಿಕ-ಸಾಮಾಜಿಕ ಚಿತ್ರಕ್ಕೂ ಇದರದ್ದೇ ಕಥೆ. ತೆಲುಗಿನಲ್ಲಿ ಗ್ಲಾಮರ್‌ ನಿರ್ದೇಶಕ ಎಂದೇ ಹೆಸರಾದ ಕೆ.ರಾಘವೇಂದ್ರ ರಾವ್‌ ಅವರ ಮೊದಲ ಕನ್ನಡ ಚಿತ್ರವಿದು. ಭಕ್ತಿ ಪ್ರಧಾನ ಚಿತ್ರಕ್ಕೆ ಇವರು ಹೇಗೆ ಹೊಂದಿಕೊಳ್ಳುತ್ತಾರೆಂದು ಕೇಳುವಂತಿಲ್ಲ. 'ಮಂಜುನಾಥ"ನ ಕಥೆಯಲ್ಲಿ ಗ್ಲಾಮರ್‌, ಹೊಡೆದಾಟ, ಕುಡಿತ, ಕುಣಿತ ಎಲ್ಲದಕ್ಕೂ ಅವಕಾಶ ಇದೆ. ಇದು ತೆಲುಗು ಸ್ಟೈಲ್‌. ರಫ್‌ ಆ್ಯಂಡ್‌ ಟಫ್‌ ಹೀರೋ ಮಧ್ಯಂತರದ ತನಕ ಹೊಡೆದಾಡುತ್ತಾ ಕಾಲ ಕಳೆಯುತ್ತಾನೆ. ಅನಂತರ ಮಂಜುನಾಥನ ಭಕ್ತನಾಗಿ ರೂಪಾಂತರ ಹೊಂದುತ್ತಾನೆ.

ನಾಯಕ-ನಾಯಕಿಯಾಗಿ ಅರ್ಜುನ್‌ ಸರ್ಜಾ ಮತ್ತು ಸೌಂದರ್ಯ ಅವರನ್ನು ಆಯ್ಕೆ ಮಾಡಿರುವುದೇ ದೇವಿ ಜಾಣತನಕ್ಕೆ ಸಾಕ್ಷಿ. ಯಾಕೆಂದರೆ ಈ ಇಬ್ಬರು ಕನ್ನಡಿಗರಿಗೆ ತೆಲುಗು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಮಾರುಕಟ್ಟೆ ಇದೆ.

ಚಿತ್ರೀಕರಣ ಜೂನ್‌ನಲ್ಲಿ ಶುರುವಾಗಲಿದ್ದರೂ, ಮುಹೂರ್ತ ಮಾತ್ರ ಕಳೆದ ಭಾನುವಾರ ಆರ್‌ .ಟಿ. ನಗರದ ಗಣೇಶ ಸನ್ನಿಧಿಯಲ್ಲಿ ನೆರವೇರಿತು. ನಿರ್ಮಾಪಕ ,ನಿರ್ದೇಶಕ ಮತ್ತು ತಂತ್ರಜ್ಞರ ಹೊರತಾಗಿ ಬೇರಾರಿಗೂ ಆಮಂತ್ರಣವಿರಲಿಲ್ಲ. ಮುಹೂರ್ತದ ಸುದ್ದಿ ಕೂಡ ಯಾರಿಗೂ ಗೊತ್ತಾಗಬಾರದೆಂದು ದೇವಿ ಎಚ್ಚರ ವಹಿಸಿದ್ದರು.

' ಮಂಜುನಾಥ " ಚಿತ್ರದಲ್ಲಿ ಕನ್ನಡದಿಂದ ಪರಭಾಷೆಗೆ ವಲಸೆ ಹೋದ ಖ್ಯಾತ ನಾಮರೆಲ್ಲರೂ ಅತಿಥಿಗಳಾಗಿ ನಟಿಸಲಿದ್ದಾರೆ ಅನ್ನುವ ಸುದ್ದಿಯೂ ಇದೆ. ಈಶ್ವರನ ಪಾತ್ರಕ್ಕೆ ರಜನಿಕಾಂತ್‌ ಅವರನ್ನು ಒಪ್ಪಿಸುವ ಪ್ರಯತ್ನವೂ ನಡೆದಿದೆ.

' ಕೋ ಣ ಈದೈತೆ " ಅನ್ನುವ ರಾಜಕೀಯ ವಿಡಂಬನಾತ್ಮಕ ಚಿತ್ರದಿಂದ ಜಯಶ್ರೀದೇವಿ ಅವರ ಸಿನಿಮಾ ಯಾತ್ರೆ. ಅನಂತರ ಸಾಮಾಜಿಕ, ಆ್ಯಕ್ಷನ್‌, ಕಾಮೆಡಿ- ಹೀಗೆ ಹಲವಾರು ತಿರುವುಗಳನ್ನು ಪಡೆದುಕೊಂಡು ಕೊನೆಗೆ ದೈವ ಸನ್ನಿಧಿಗೆ ಬಂದು ನಿಂತಿದೆ. ದೇವಿಗೆ ದೇವರು ಒಲಿದಾನೆ ?

English summary
Telugu superstar Chiranjeevi has a lead roll too
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada