twitter
    For Quick Alerts
    ALLOW NOTIFICATIONS  
    For Daily Alerts

    ನಮ್ಮೂರಲ್ಲೇ ಇರೋ ಮನ್ನಾಡೇ ಯಾರ ಕಣ್ಣಿಗೂ ಬೀಳದೇ ಇರೋದೇ?!

    By Super
    |

    ಸುಮಾರು 6 ತಿಂಗಳ ಹಿಂದಿನ ಮಾತು. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಡಾ.ಸಂದೀಪ್‌ ಹೆಗ್ಡೆ ಎಂಬ ದಂತ ವೈದ್ಯರ ಕ್ಲಿನಿಕ್‌ನಲ್ಲಿ ನಡೆದದ್ದು. ಸರಿಯಾಗಿ ಡ್ರೆಸ್‌ ಮಾಡಿರದ ಮೀಸೆ ಹೊತ್ತ, ತಲೆಗೊಂದು ಉಣ್ಣೆ ಟೊಪ್ಪಿ ತೊಟ್ಟ , ಕಪ್ಪು ಫ್ರೇಮಿನ ಕನ್ನಡಕಧಾರಿ ಹಿರಿಯರೊಬ್ಬರು ಬಂದರು. 'ನಾನ್ಯಾರು ಅಂತ ತಮಗೆ ಗೊತ್ತಾಗಲಿಲ್ಲವೇ" ಪ್ರಶ್ನಿಸಿದರು. ಡಾ.ಸಂದೀಪ್‌, 'ಇಲ್ವಲ್ಲಾ" ಪ್ರಾಮಾಣಿಕ ಉತ್ತರ ಕೊಟ್ಟರು. ಅದಕ್ಕೆ ಆ ಹಿರಿಯರು ಹೇಳಿದ್ದು-'ನಾನು, ಮನ್ನಾಡೇ"!

    ವಕ್ತ್‌ ಚಿತ್ರದ 'ಎ ಮೇರೆ ರೆkೂಹರ್‌ ಜಬೀಂ ತುಝೆ ಮಾಲೂಮ್‌ ನಹೀ, ತೂ ಅಭೀ ತಕ್‌ ಹೈ ಹಸೀ ಔರ್‌ ಮೇ ಜವಾ" ಹಾಡನ್ನು ಪ್ರಾಯಶಃ ಸಿನಿಮಾ ಅಭಿಮಾನಿಗಳು ಮರೆಯಲಾರರು. ಅಂಥಾ ಹಾಡನ್ನು ಹಾಡಿರುವ ಮನ್ನಾಡೇ ಈಗ ಬೆಂಗಳೂರಲ್ಲೇ ಠಿಕಾಣಿ ಹೂಡಿರುವುದೂ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕಳೆದ ಒಂದು ವರ್ಷದಿಂದ ಮನ್ನಾಡೇ ಬೆಂಗಳೂರು ನಿವಾಸಿ. ಬಿಟಿಎಂ ಲೇ ಔಟ್‌ನ ತಮ್ಮ ಚಿಕ್ಕ ಮಗಳ ಮನೆಯಲ್ಲಿದ್ದ ಅವರು ಇದೀಗ ಹೆಣ್ಣೂರು ರಸ್ತೆ ಬಳಿ ನಿವೇಶನವೊಂದನ್ನು ಖರೀದಿಸಿ, ಮನೆ ಕಟ್ಟಿಸುವ ಯೋಜನೆಯಲ್ಲಿ ಮುಳುಗಿದ್ದಾರೆ. ಅಂದಹಾಗೆ, ಇವರನ್ನು ಮೊದಲು ಗುರುತೇ ಹಿಡಿಯದ ಡಾ.ಸಂದೀಪ್‌ ಈಗ ಮನ್ನಾಡೇ ಅವರ ಆಪ್ತ ಗೆಳೆಯ.

    ಎಂಬತ್ತನಾಲ್ಕರ ಹರೆಯದ ಮನ್ನಾಡೇ ಹಾಗೂ ಅವರಿಗಿಂತ ಸುಮಾರು 10 ವರ್ಷ ಕಡಿಮೆ ವಯಸ್ಸಿನ ಪತ್ನಿ ಸುಲೋಚನ 28 ವರ್ಷ ಮುಂಬಯಿಯಲ್ಲಿ ಒಟ್ಟಾಗಿ ಜೀವನ ನಡೆಸಿದವರು. ಬೆಂಗಳೂರಿನ ಪರಿಸರ ಮೆಚ್ಚಿಕೊಂಡು ಇಲ್ಲಿಗೆ ಹಾರಿ ಬಂದರು; ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿರಲು. ಆದರೀಗ ಪತ್ರಿಕೆಗಳನ್ನು ತಿರುವಿ ಹಾಕುತ್ತಾ ಆತಂಕದಿಂದ ಹೇಳುತ್ತಾರೆ- 'ಈ ಕೊಲೆ ಸುಲಿಗೆ ಸುದ್ದಿಗಳನ್ನು ಓದಿದರೇ ಭಯವಾಗ್ತದೆ. ಹಿಂದೆ ಮುಂಬಯಿಯಲ್ಲಿ ಇದೇ ರೀತಿಯ ಸುದ್ದಿಗಳು ನಮ್ಮನ್ನು ಕಂಗೆಡಸಿದ್ದವು. ಆಗ ಬೆಂಗಳೂರು ಚೆನ್ನ ಅಂದುಕೊಂಡೆವು. ಆದರೀಗ ಬೆಂಗಳೂರಲ್ಲೂ ಸೆಕ್ಯುರಿಟಿ ಇಲ್ಲ" !

    ಝರ ದೇಖ್‌ ಕೆ ಚಲೋ ...

    1944. ಮಶಾಲ್‌ ಚಿತ್ರದ ಮೂಲಕ ಹಾಡಲು ಶುರುವಿಟ್ಟ ಮನ್ನಾಡೇ ಆ ಮೇಲೆ ಮನೆಮಾತಾದರು. ಶ್ರೀ 420ಯ 'ಪ್ಯಾರ್‌ ಹುಆ ಇಕ್‌ರಾರ್‌ ಹುಆ ಹೈ ಪ್ಯಾರ್‌ ಸೆ ಫಿರ್‌ ಕ್ಯೂಂ ಡರ್‌ತಾ ಹೈ ದಿಲ್‌..." ಮೊನ್ನೆ ಮೊನ್ನೆ ಕಾಂಡೊಮ್‌ ಜಾಹೀರಾತು ಗೀತೆಯೂ ಆಯಿತು! ಹೇ ಭಾಯ್‌ ಝರ ದೇಖ್‌ ಕೆ ಚಲೋ, ಲಾಗಾ ಚುನರೀ ಮೇ ದಾಗ್‌, ಯೇ ಮೇರೇ ಪ್ಯಾರೇ ವತನ್‌, ಚುನರೀ ಸಂಭಲ್‌ ಗೋರಿ....ಹೀಗೆ ಮನ್ನಾಡೇ ಕಂಠದ ಮರೆಯಲಾಗದ ಗೀೕತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

    ಬೆಂಗಳೂರಿಗೆ ಬಂದರೂ ಹೆಣ್ಣು ಮಗಳ ಮನೆಯಲ್ಲೇ ಠಿಕಾಣಿ ಹೂಡಲಿಲ್ಲ. ಬಾಡಿಗೆ ಮನೆಗೆ ಹೋದರು. ಇದೀಗ ಮನೆ ಕಟ್ಟುವ ಕನಸು. ಅದೂ ಇಳಿ ವಯಸ್ಸಿನಲ್ಲಿ. ಬೆಂಗಳೂರಿಗೂ ಮನ್ನಾಡೇಗೂ ಅವಿನಾಭಾವ ಸಂಬಂಧವಿದೆ. ಕಣ್ಣಾನೂರಿನ ಹುಡುಗಿ ಸುಲೋಚನಾ ಅವರನ್ನು ಯುವಕ ಮನ್ನಾಡೇ ಮದುವೆಯಾದದ್ದೂ ಇದೇ ಬೆಂಗಳೂರಲ್ಲಿ. ಆದರೆ ಗೆಳೆಯರ ಬಳಗ ಇರುವುದು ಮುಂಬಯಿಯಲ್ಲಿ. ಈಗಲೂ ತಿಂಗಳಿಗೆ ಎರಡು ಬಾರಿಯಾದರೂ ಮುಂಬಯಿ ಪ್ರಯಾಣ ಗ್ಯಾರಂಟಿ. ಸಿನಿಮಾಗೆ ಹಾಡುವುದನ್ನು ಬಿಟ್ಟಿರುವ ಮನ್ನಾಡೇ ಕಛೇರಿ ಕೊಡಲು ದೇಶ ಸುತ್ತುವುದೂ ಉಂಟು.

    ತಮ್ಮ ಎರಡು ದಶಕಗಳ ಹಿನ್ನೆಲೆ ಗಾಯಕ ಜೀವನದಲ್ಲಿ 2500ಕ್ಕೂ ಹೆಚ್ಚು ಗೀತೆಗಳ ಹಾಡಿರುವ ಮನ್ನಾಡೆಗೆ ಹೆಂಡತಿ ಸುಲೋಚನಾರೇ ಇವತ್ತಿಗೂ ಸ್ಫೂರ್ತಿ. 'ಶಾಪಿಂಗ್‌, ಔಟಿಂಗ್‌ ಅಂತ ಹೋದರೂ ನಮ್ಮನ್ನು ಗುರುತಿಸೋರು ಕಡಿಮೆ. ಹಾಗಂತ ಇವತ್ತಿನ ಚಲನಚಿತ್ರಗಳಿಗೆ ಖಂಡಿತ ನಾನು ಹಾಡುವುದಿಲ್ಲ. ಆಗಿನ ಹಾಡುಗಳು ಲಿರಿಕಲ್‌ ಆಗಿರುತ್ತಿದ್ದವು. ಇವತ್ತಿನ ಚಿತ್ರ-Its not my cup of tea" ಎನ್ನುವ ಮನ್ನಾಡೇ ಸಶಬ್ದವಾಗಿ ಸಾರ್ಥಕದ ನಗೆ ನಗುತ್ತಾರಷ್ಟೆ. ಅಂದಹಾಗೆ, ಇದುವರೆಗೆ ಬೆಂಗಳೂರಿನಲ್ಲಿ ಮನ್ನಾಡೇ ಕಛೇರಿಯೇ ನಡೆದಿಲ್ಲ !

    English summary
    Manna Dey is very much in Bangalore!
    Monday, September 23, 2013, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X