»   » ಜನಮಾನಸದಿಂದ ಮರೆಯಾಗುತ್ತಿರುವ ಜನಪದ ಗೀತೆ

ಜನಮಾನಸದಿಂದ ಮರೆಯಾಗುತ್ತಿರುವ ಜನಪದ ಗೀತೆ

Posted By: Staff
Subscribe to Filmibeat Kannada

ನೈಸರ್ಗಿಕ ಸಮೃದ್ಧಿಯಿಂದ ಸಂಪತ್ಭರಿತವಾಗಿರುವ ಉತ್ತರ ಕನ್ನಡ ಜಿಲ್ಲೆಯ ಜಾನಪದ ಹಾಡುಗಳನ್ನು ದೃಶ್ಯ ಮಾಧ್ಯಮಕ್ಕೆ ಸಮರ್ಥವಾಗಿ ಬಳಸಿಕೊಳ್ಳುವ ಹೆಬ್ಬಯಕೆ ಸಂಗೀತ ನಿರ್ದೇಶಕ ಮನೋಹರ್‌ರಿಗೆ ಇದೆಯಂತೆ. ಐಲ್ಲೆಯಲ್ಲಿ ಪ್ರಚಲಿತವಾಗಿರುವ ಹಾಲಕ್ಕಿ ಹಾಡುಗಳು, ಮದುವೆಯ ಹಾಡುಗಳು, ಬೀಸು ಕಲ್ಲಿನ ಪದಗಳು, ಸೋಬಾನೆ ಪದಗಳು ಮನೋಹರ್‌ರ ಮನ ಗೆದ್ದಿವೆಯಂತೆ.

ಹೀಗಾಗೇ ಈ ಎಲ್ಲ ಜಾನಪದ ಪ್ರಕಾರಗಳ ಗೀತೆಗಳನ್ನು ದೃಶ್ಯಮಾಧ್ಯಮದಲ್ಲಿ ಬಿಂಬಿಸುವ ಬಯಕೆ ಮನೋಹರ್‌ರಲ್ಲಿ ಹುಟ್ಟಿದೆ. ಅತಿ ಶೀಘ್ರದಲ್ಲೇ ಜಾನಪದ ಗೀತೆಗಳನ್ನು ಟಿ.ವಿ. ಸೀರಿಯಲ್‌ ಇಲ್ಲವೇ ಚಲನಚಿತ್ರಗಳಲ್ಲಿ ಬಳಸಿಕೊಳ್ಳಲು ಚಿತ್ರತಂಡದೊಂದಿಗೆ ಹೊನ್ನಾವರಕ್ಕೆ ಬರುವುದಾಗಿ ಮನೋಹರ್‌ ಹೇಳಿದ್ದಾರೆ.

ಸದ್ಯಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಫಣಿ ರಾಮಚಂದ್ರ ನಿರ್ದೇಶನದ ದಂಡ ಪಿಂಡಗಳು ಧಾರಾವಾಹಿಯ ಟೈಟಲ್‌ ಸಾಂಗ್‌ನಲ್ಲಿ ದಿನವೂ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ವಿ. ಮನೋಹರ್‌ ಮುಖ ತೋರಿಸುತ್ತಾರೆ. ಈ ಧಾರಾವಾಹಿ 100 ಕಂತುಗಳನ್ನು ಮುಗಿಸಿದ್ದರೂ, ತನ್ನ ಜನಪ್ರಿಯತೆ ಕಳೆದುಕೊಂಡಿಲ್ಲ. ಕೌನ್‌ ಬನೇಗಾ ಕರೋಡ್‌ಪತಿ ಯಂತೆಯೇ ದಿನದಿನಕ್ಕೂ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ.

ನಾರದ ವೇಷಧಾರಿಯಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮನೋಹರ್‌ರೇ ಈ ಗೀತೆಗೂ ಸಂಗೀತ ನಿರ್ದೇಶನ ನೀಡಿದ್ದಾರೆ. ಮನೋಹರ್‌ ಸಧ್ಯಕ್ಕಂತೂ ಕಿರುತೆರೆ ಹಾಗೂ ರಜತಪರದೆಯ ಸಂಗೀತ ನಿರ್ದೇಶನದಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆಯೂ ಕಾರ್ಯಕ್ರಮವೊದರಲ್ಲಿ ಪಾಲ್ಗೊಳ್ಳಲು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ ಮನೋಹರ್‌ ಹೊನ್ನಾವರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಮ್ಮ ಈ ಬಯಕೆಯನ್ನು ವ್ಯಕ್ತಪಡಿಸಿದರು.

ಹೊನ್ನಾವರ - ಶಿರಸಿಯೂ ಸೇರಿದಂತೆ ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕ ಸೌಂದರ್ಯದ ತವರಾಗಿದ್ದು, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಕನ್ನಡ ಚಲನಚಿತ್ರಗಳಲ್ಲಿ ಸುಂದರವಾಗಿ ಬಳಸಿಕೊಳ್ಳಬೇಕು ಎಂಬುದೂ ಮನೋಹರ್‌ರ ಆಶಯ. ಇಂತಹ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡ ಇಂದ್ರಧನುಷ್‌ ತಾಂತ್ರಿಕ ಕಾರಣದಿಂದ ಗಳಿಕೆಯಲ್ಲಿ ಸೋಲು ಕಂಡ ಬಗ್ಗೆಯೂ ಮನೋಹರ್‌ಗೆ ಅಪಾರ ನೋವಿದೆ.

ಒಟ್ಟಿನಲ್ಲಿ ಜನಮಾನಸದಿಂದ ಮರೆಯಾಗುತ್ತಿರುವ ಜನಪದ ಗೀತೆಗಳು ಚಲನಚಿತ್ರಗಳಲ್ಲಿ ಮೂಡಿಬರುವ ಕಾಲ ದೂರ ಇಲ್ಲ ಎಂದಂತಾಯಿತು.(ಕಾರವಾರ ಪ್ರತಿನಿಧಿಯಿಂದ)

English summary
Music director V. Manohar will bring Karwar folk music alive
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada