»   » ಮನೋಮೂರ್ತಿ ಕಣ್ಣಲ್ಲಿ ಆಸ್ಕರ್‌!

ಮನೋಮೂರ್ತಿ ಕಣ್ಣಲ್ಲಿ ಆಸ್ಕರ್‌!

Posted By: Staff
Subscribe to Filmibeat Kannada

'ಬಾನಲ್ಲಿ ಓಡೋ ಮೇಘ ಗಿರಿಗೋ ನಿಂತಲ್ಲೆ ಯೋಗ...", 'ಕಾರ್‌ ಕಾರ್‌ ಕಾರ್‌ ಕಾರ್‌ ಎಲ್ನೋಡಿ ಕಾರ್‌...." ಈ ಜನಪ್ರಿಯ ಹಾಡುಗಳಿಗೆ ರಾಗ ಹೊಸೆದವರು ಒಬ್ಬ ಕಂಪ್ಯೂಟರ್‌ ತಜ್ಞ. ಇವರ ಸಂಗೀತ ಸಂಯೋಜನೆ ಮನೋಜ್ಞ. 1976ರಲ್ಲಿ ಬೆಂಗಳೂರಿನಿಂದ ಅಮೆರಿಕೆಗೆ ಹಾರಿದ ಈ ಕನ್ನಡಿಗನನ್ನು ಆಕರ್ಷಿಸಿದ್ದು ಪಾಶ್ಚಾತ್ಯ ಸಂಗೀತ. ಈಗಲೂ ಈತ ಸಂಗೀತದ ವಿದ್ಯಾರ್ಥಿ. ಭಾರತೀಯ ಶಾಸ್ತ್ರೀಯ ಸಂಗೀತದ ಗಂಧವೂ ಉಂಟು.

ಹಿಟ್‌ ಗೀತೆಗಳ ಕೊಟ್ಟೂ ಅವಕಾಶಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿರುವ ಈತನ ಕನಸು ಅಂತಿಂಥದ್ದಲ್ಲ. ಅದರ ಬೆನ್ನಟ್ಟಿ, ಸಾಗರದ ಬೊಗಸೆ ನೀರನ್ನಾದರೂ ಮೊಗೆಯುವೆನೆಂಬ ಆತ್ಮವಿಶ್ವಾಸ. ಈತನ ಸಾಧನೆಯನ್ನು ಗುರ್ತಿಸಿ ಮೊನ್ನೆ ತಾನೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಸನ್ಮಾನ ಮಾಡಿ, ಗೌರವಿಸಿದೆ. ಪ್ರತಿಭೆ ಭರ್ತಿ. ಹೆಸರು ಮನೋ ಮೂರ್ತಿ.
ಇ- ಮೇಲ್‌ ಮೂಲಕ ಅವರು ನಮ್ಮೊಡನೆ ಮಾತಾಡಿರುವುದು ಹೀಗೆ...
ನನ್ನ ಪ್ರೀತಿಯ ಹುಡುಗಿ ನಂತರ ನೀವು ತಣ್ಣಗಿದ್ದೀರಲ್ಲಾ?
ಒಳ್ಳೆಯ ನಿರ್ದೇಶಕರ ಒಳ್ಳೆ ಸಿನಿಮಾ ಅವಕಾಶಗಳಿಗೆ ಕಾಯುತ್ತಿದ್ದೇನೆ. ಈವರೆಗೆ ಯಾರೂ ನನ್ನನ್ನು ಕೇಳಿಲ್ಲ. ನಾನು ಸಾಗರದಾಚೆ ಇರುವುದೇ ಸಮಸ್ಯೆ ಅನ್ನಿಸುತ್ತೆ. ಹಾಗೆ ನೋಡಿದರೆ, ಅದು ಸಮಸ್ಯೆಯಾಗಬಾರದು. ನೋಡೋಣ. ಒಂದು ವರ್ಷದಲ್ಲಿ ಒಂದೋ ಎರಡೋ ಸಿನಿಮಾಗಳಿಗೆ ಸಂಗೀತ ಕೊಡುವಷ್ಟು ಅವಕಾಶದ ನಿರೀಕ್ಷೆ ನನ್ನದು.

ನೀವು ಸಂಗೀತ ಕಲಿತಿದ್ದೀರಾ? ಎಲ್ಲಿ, ಹೇಗೆ?
ಹಾಲಿವುಡ್‌ ಸಿನಿಮಾಗಳಿಗೆ ಸಂಗೀತ ಕೊಟ್ಟಿರುವ ಕ್ಯಾಲಿಫೋರ್ನಿಯಾದ ಜೆರ್ರಿ ಗರ್ಬರ್‌ ಎಂಬುವರಿಂದ ಪಾಶ್ಚಾತ್ಯ ಸಂಗೀತ ಕಲಿತಿದ್ದೇನೆ. ಸ್ಥಳೀಯ ವಿಶ್ವವಿದ್ಯಾಲಯ ಮತ್ತು ಶಾಲೆಗಳ ಸ್ವತಂತ್ರ ಕೋರ್ಸುಗಳನ್ನೂ ಮಾಡಿದ್ದೇನೆ, ಮಾಡುತ್ತಿದ್ದೇನೆ. ಭಾರತೀಯ ಶಾಸ್ತ್ರೀಯ ಸಂಗೀತವನ್ನೂ ಕೊಂಚ ಕಲಿತಿದ್ದೇನೆ. ತಬಲ ಬಾರಿಸಲು ಬರುತ್ತದೆ. ಚಿಕ್ಕಂದಿನಿಂದಲೂ ಸಂಗೀತ ಅಂದರೆ ನನಗೆ ಇಷ್ಟ. ಸಂಗೀತ ಸಂಯೋಜಕನಾಗುವುದೇ ನನ್ನ ನಿತ್ಯದ ಕನಸಾಗಿತ್ತು.

ಅಮೆರಿಕಾ ಅಮೆರಿಕಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?
1996ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಅಮೆರಿಕಾ ಪ್ರವಾಸಕ್ಕೆ ಬಂದಿದ್ದರು. ಕೊಟ್ರೇಶಿ ಕನಸು ಸಿನಿಮಾ ತೋರಿಸುವುದು ಅವರ ಉದ್ದೇಶವಾಗಿತ್ತು. ಸಿನಿಮಾ ನೋಡಿದೆ. ತುಂಬಾ ಇಷ್ಟವಾಯ್ತು. ಸಂಗೀತ ಸಂಯೋಜಕನಾಗುವ ಆಸೆ ಇದ್ದಿದ್ದರಿಂದ ಅವರನ್ನು ಭೇಟಿಯಾದೆ. 'ಭಾವಮಾಲಿಕ" ಎಂಬ ಸಿಡಿ ಸೇರಿದಂತೆ ನನ್ನ ಕೆಲವು ಸಂಗೀತದ ಪ್ರೊಜೆಕ್ಟ್‌ಗಳನ್ನು ಅವರಿಗೆ ತೋರಿಸಿದೆ. ನನ್ನ ಕೆಲಸ ಚಂದ್ರು ಅವರಿಗೆ ಇಷ್ಟವಾಯಿತು ಅಂದುಕೊಳ್ಳುತ್ತೇನೆ. ಅದಕ್ಕೇ ಅವಕಾಶ ಸಿಕ್ಕಿರಬಹುದು.

ಸೋನು ನಿಗಮ್‌, ಉದಿತ್‌ ನಾರಾಯಣ್‌, ಕವಿತಾ ಕೃಷ್ಣಮೂರ್ತಿ, ಹರಿಹರನ್‌... ಕನ್ನಡೇತರ ಗಾಯಕರ ಭರಾಟೆ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ. ಇದಕ್ಕೆ ಏನಂತೀರಿ?
ಹೀಗ್ಯಾಕೆ ಅಂತ ನನಗೆ ಗೊತ್ತಿಲ್ಲ. ದೊಡ್ಡ ಹೆಸರಿನ ಗಾಯಕರಿದ್ದರೆ ಕೆಸೆಟ್‌ ಬಿಕರಿ ಜೋರಾಗಬಹುದೆಂಬ ತಪ್ಪು ಧೋರಣೆ ಇರಬಹುದು. ಇಂಥದೇ ಕಾರಣ ಅಂತ ನಿಖರವಾಗಿ ಹೇಳುವುದು ಕಷ್ಟ. ಸ್ಥಳೀಯ ಗಾಯಕ/ಗಾಯಕಿಯರಿಂದ ಹಾಡಿಸುವುದು ನನಗೆ ಇಷ್ಟ. ಉದಾಹರಣೆಗೆ, ನನ್ನ ಪ್ರೀತಿಯ ಹುಡುಗಿಯಲ್ಲಿ ಸ್ಥಳೀಯ ಪ್ರತಿಭೆ ರಾಮ್‌ ಪ್ರಸಾದ್‌ ಅವರಿಂದ ಮೂಡಲ್‌ ಕುಣಿಗಲ್‌ ಕೆರೆ ಹಾಡಿಸಿದ್ದೇನೆ.

ನನ್ನ ಪ್ರೀತಿಯ ಹುಡುಗಿಯ ಒಂದು ಹಾಡಲ್ಲಿ ಸಂಗೀತ ಕಟ್ಟಿ ಕಂಠ ತುಂಬಾ ಚೆನ್ನಾಗಿದೆ. ಇನ್ನೊಂದು ಹಾಡಲ್ಲಿ ಅನುರಾಧ ಪೊಡ್ವಾಲ್‌ ಕನ್ನಡ ಉಚ್ಚಾರಣೆಯಲ್ಲಿ ಒದ್ದಾಟ ಕಾಣುತ್ತದೆ. ಅಮೆರಿಕ ಅಮೆರಿಕದಲ್ಲಿ ರಾಜೇಶ್‌ ಕೃಷ್ಣನ್‌ ಹಾಡಿದ್ದ ಬಾನಲ್ಲಿ ಓಡೋ ಮೇಘ..., ನೂರು ಜನ್ಮಕೂ... ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು. 'ಅಮೆರಿಕ ಅಮೆರಿಕ"ದಲ್ಲಿ ಸ್ಥಳೀಯ ಗಾಯಕರಿಗೆ ಹೆಚ್ಚು ಅವಕಾಶವಿತ್ತು. ಆದರೆ '...ಹುಡುಗಿ"ಯಲ್ಲಿ ಹಾಗಾಗಲಿಲ್ಲ. ಅನುರಾಧ ಮತ್ತು ಹರಿಹರನ್‌ ಕಂಠ ಕೊರೆ ಅನಿಸುತ್ತದೆ. ಏನಂತೀರಿ?
ಹರಿಹರನ್‌ ಚೆನ್ನಾಗೇ ಹಾಡಿದರು. ಸುರೇಶ್‌ ಪೀಟರ್ಸ್‌ ಕೂಡ. ಸಾಹಿತ್ಯ ಕುರಿತಂತೆ ಅನುರಾಧ ಅವರಿಗೆ ಕೊಂಚ ತೊಂದರೆಯಾದದ್ದು ನಿಜ. ಹೆಸರು ಮಾಡಿರುವ ಗಾಯಕರ ಸಿ.ಡಿ.ಯಲ್ಲಿ ಸಂಗೀತ ಕಟ್ಟಿ, ಜಯಶ್ರೀ, ರಾಮ್‌ಪ್ರಸಾದ್‌ ಎಲ್ಲರ ಕೆಲಸವೂ ಚೆನ್ನಾಗೇ ಇದೆ. ಲೋಕಲ್‌ ಸಿಂಗರ್ಸ್‌ಗೇ ಹೆಚ್ಚು ಅವಕಾಶ ಕೊಡುವುದು ನನಗೂ ಇಷ್ಟ. ನನ್ನ ಮುಂದಿನ ಸಿನಿಮಾದಲ್ಲಿ ಹೆಚ್ಚು ಸ್ಥಳೀಯ ಗಾಯಕರ ಕಂಠವನ್ನು ನೀವು ಕೇಳಲಿದ್ದೀರಿ ಅಂತ ಹೇಳಬಲ್ಲೆ.
ಕಮರ್ಷಿಯಲ್‌ ದೃಷ್ಟಿಯಲ್ಲಿ ಖ್ಯಾತನಾಮರ ಕಂಠವೇ ಬೇಕು ಅನ್ನುವುದನ್ನು ಆಡಿಯೋ ಕಂಪನಿಗಳು ಬಿಡಬೇಕು. ಫೈನಲ್‌ ಪ್ರೊಡಕ್ಟ್‌ ಯಾವುದು ಅನ್ನೋದು ಮುಖ್ಯ. ಹೆಸರು ಮಾಡಿದವರ ಕಂಠದಿಂದಲೇ ಕೆಸೆಟ್‌ ಬಿಕರಿಯಾಗುತ್ತದೆ ಅನ್ನುವ ಭಾವನೆ ಇಲ್ಲವಾದಲ್ಲಿ ಮಾತ್ರ ಇದು ಸಾಧ್ಯ.

'ನನ್ನ ಪ್ರೀತಿಯ ಹುಡುಗಿ"ಯಲ್ಲಿ ಹಿಟ್‌ ಆದದ್ದು 'ಕಾರ್‌ ಕಾರ್‌" ಹಾಡು ಮಾತ್ರ. ಆದರೆ 'ಅಮೆರಿಕ ಅಮೆರಿಕ"ದಲ್ಲಿ ಎರಡು ಮೂರು ಹಾಡುಗಳು ಹಿಟ್‌ ಆಗಿದ್ದವು. ಇದು ನಿಮ್ಮ ಸೋಲೋ ಗೆಲುವೋ?
ಇದು ನನ್ನ ಸೋಲೋ ಗೆಲುವೋ ಅನ್ನುವುದನ್ನು ನಿರ್ಧರಿಸಬೇಕಾದವನು ನಾನಲ್ಲ. ಕೇಳುಗರು. ಕೇಳುಗರ ಆಯ್ಕೆ ಯಾವುದು ಅನ್ನುವುದು ಎಲ್ಲರಿಗೂ ಗೊತ್ತಾಗಿದೆ. ಮುಂದೆ ನನ್ನ ಕೆಲಸಗಳಲ್ಲಿ ಇದರಿಂದ ಕಲಿತು, ಮುನ್ನಡೆಯುತ್ತೇನೆ.

ನಿಮ್ಮ ಪ್ರಕಾರ ಇವತ್ತಿನ ಕನ್ನಡ ಸಿನಿಮಾ ಸಂಗೀತದ ಸ್ಥಾನವೇನು?
ಕನ್ನಡ ಸಿನಿಮಾ ಸಂಗೀತ ಕ್ಷೇತ್ರದ ಪರಿಣತ ನಾನಲ್ಲ. ಹೀಗಾಗಿ ಇದರ ಬಗ್ಗೆ ಕಾಮೆಂಟ್‌ ಮಾಡಲು ನಾನು ಅರ್ಹನಲ್ಲ. ಒಂದಂತೂ ಹೇಳಬಲ್ಲೆ. ಈ ಕ್ಷೇತ್ರದಲ್ಲಿ ಪ್ರತಿಭೆಯಿದ್ದರೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವಕಾಶ ಗಿಟ್ಟಿಸಬಹುದು.

ಅಮೆರಿಕೆಯಲ್ಲಿ ನೀವು ಏನು ಮಾಡ್ತಿದ್ದೀರಿ?
ಬ್ಯುಸಿ, ಫನ್‌, ಫನ್‌. 1976ರಲ್ಲಿ ಇಲ್ಲಿಗೆ ಹಾರಿದಾಗಿನಿಂದಲೂ ನೆಟ್‌ವರ್ಕ್‌ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಡುವು ಸಿಕ್ಕಾಗ ಮನೆಮಂದಿಯಾಡನೆ ಮಾತು. ಹದಿನೈದು ವರ್ಷದ ಮಗ ಮತ್ತು ಹದಿನಾಲ್ಕು ವರ್ಷದ ಮಗಳ ಕೆಲಸಗಳಲ್ಲೂ ಸಹಾಯ ಮಾಡುತ್ತೇನೆ. ಸಂಗೀತ ಮಾತ್ರ ನಿರಂತರ. ಅದರ ಬಗ್ಗೆ ಓದುವುದು, ಟ್ಯೂನ್‌ಗಳನ್ನು ಹಾಕಿ ಟೆಸ್ಟ್‌ ಮಾಡುವುದು ಮುಗಿಯುವುದೇ ಇಲ್ಲ. ಯಾವುದೇ ಪ್ರೊಜೆಕ್ಟ್‌ ಇಲ್ಲದಿದ್ದರೂ ಸಂಗೀತಾಭ್ಯಾಸ ನಡೆದೇ ಇರುತ್ತದೆ. ಮಗನೊಡನೆ ಹೋಗಿ ಫುಟ್‌ಬಾಲ್‌ ಪಂದ್ಯಗಳನ್ನು ನೋಡುತ್ತೇನೆ.

ನಿಮ್ಮ ಫೇವರೇಟ್‌ ಕನ್ನಡ ಸಿನಿಮಾ ಸಾಹಿತಿ ಯಾರು, ಮೆಚ್ಚಿನ ಗಾಯಕ/ಗಾಯಕಿ ಯಾರು ಹಾಗೂ ಇಷ್ಟವಾದ ಹಾಡು ಯಾವುದು?
ಗಾಯಕರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಎರಡು ಹಳೆಯ ಹಾಡುಗಳು ನನಗೆ ತುಂಬಾ ಇಷ್ಟ- 'ಬಾರೇ ಬಾರೇ..." ಮತ್ತು 'ದೋಣಿ ಸಾಗಲಿ..."

ನಿಮ್ಮ ಕನಸು?
ಆಸ್ಕರ್‌ ಗೆಲ್ಲುವುದು ! ಯಾಕೆಂದರೆ, ಪ್ರಾಯಶಃ ಈ ಕನಸು ನಿರಂತರ! ಇನ್ನೊಂದು ವಾಸ್ತವದ ಕನಸೆಂದರೆ, ಹಾಲಿವುಡ್‌ಗೆ ಹೋಗುವ ಕನ್ನಡ ಸಿನಿಮಾವೊಂದರಲ್ಲಿ ಕೆಲಸ ಮಾಡುವುದು.

English summary
To get the Oscar is my dream, says music director Mano Murthy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada