»   » ಸದಭಿರುಚಿಯತ್ತ ತುಡಿಯುವ ಮನ...

ಸದಭಿರುಚಿಯತ್ತ ತುಡಿಯುವ ಮನ...

Posted By: Staff
Subscribe to Filmibeat Kannada

ಹಾಗಂತ ಕರೆದರೆ ಅವರಿಗೆ ಬೇಸರವಂತೂ ಆಗುವುದಿಲ್ಲ. ಬಂದದ್ದೆಲ್ಲವನ್ನೂ ನಿರ್ಭಾವುಕವಾಗಿ, ನಿರ್ಲಿಪ್ತವಾಗಿ ಸ್ವೀಕರಿಸುವುದನ್ನು ಮನೋಮೂರ್ತಿ ಕಲಿತುಕೊಂಡಿದ್ದಾರೆ. ಅಮೆರಿಕೆಯಲ್ಲಿದ್ದು ಥೇಟ್‌ ಅಮೆರಿಕನ್ನರೇ ಆಗಿಬಿಟ್ಟಿದ್ದಾರೆ. ನೀವು ಗಹಗಹಿಸಿ ನಕ್ಕರೆ, ಮನೋಮೂರ್ತಿ ಮಂದಹಾಸ ಬೀರುತ್ತಾರೆ. ಓತಪ್ರೋತ ಪ್ರಶ್ನಿಸಿದರೆ ಓಂ ಎನ್ನುತ್ತಾರೆ. ಸುಮ್ಮನಾದರೆ ಮೌನದ ಪಾತಾಳಲೋಕಕ್ಕೆ ಇಳಿದುಬಿಡುತ್ತಾರೆ.

ಮನೋಮೂರ್ತಿ ಇರುವುದೇ ಹಾಗೆ. ಅದು ಸಂಗೀತದ ಗುಂಗಲ್ಲ. ಅವರ ಸ್ವಭಾವ ಅಷ್ಟೇ.

ಮೂರ್ತಿ ಭಾರತೀಯ ಸಂಜಾತ, ಬೆಂಗಳೂರಿನಲ್ಲಿ ಬೆಳೆದಾತ. ಮೊದಲ ಚಿತ್ರದ ಗೀತೆಗಳು ಕಿವಿಮಾತಾದವು. ಅಮೆರಿಕಾ ಅಮೆರಿಕಾ ಚಿತ್ರದ ಜನಪ್ರಿಯ ಗೀತೆ 'ನೂರೂ ಜನ್ಮಕೂ ನೂರಾರೂ ಜನ್ಮಕೂ" ಎಲ್ಲರ ಮನಗೆದ್ದಿತು. ಆದರೆ, ಮೂರ್ತಿ ಮತ್ತಷ್ಟು ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಅಮೆರಿಕಾದಲ್ಲಿರುವ ತಮ್ಮ ಮ್ಯೂಸಿಕ್‌ ಬ್ಯಾಂಕ್‌ನಲ್ಲಿ ನೂರಕ್ಕೂ ಹೆಚ್ಚು ರಾಗಗಳಿದ್ದರೂ ಅದನ್ನು ಅವರು ಸರಾಗವಾಗಿ ಇನ್ನೊಬ್ಬರ ಕೈಗೆ ಒಪ್ಪಿಸಲಿಲ್ಲ.

ಕಾರಣ ಇಷ್ಟೇ... ಎಂದೆಂದೂ ಮರೆಯದ ಗೀತೆಗಳನ್ನು ಕೊಡಬೇಕು. ಹಾಡು ಹಸಿರಾಗಿ ಉಳಿಯಬೇಕು, ಕಾಲದ ಜೊತೆ ಬೆಳೆಯಬೇಕು. ಇಂಥ ಆಸೆ ಯಾರಿಗಿರೋದಿಲ್ಲ ಹೇಳಿ.. ಹಂಸಲೇಖ ಕೂಡ ಇಂಥದ್ದೇ ಆಸೆಯಿಟ್ಟುಕೊಂಡು ಬಂದವರು. ಸದ್ಯಕ್ಕೆ ಸುಸ್ತಾಗಿ ಕೂತಿದ್ದಾರೆ. ಕನಿಷ್ಠ ಸ್ಟುಡಿಯೋ ಆದರೂ ಶಾಶ್ವತವಾಗಿರಲಿ ಎಂದು ಹಾರೈಸುತ್ತಿದ್ದಾರೆ!

ಮನೋಮೂರ್ತಿ 1976ರಿಂದ ಅಮೆರಿಕೆಯಲ್ಲಿದ್ದಾರೆ. ವರ್ಷಕ್ಕೆ ಮೂರು ಸಾರಿ ಬೆಂಗಳೂರಿಗೆ ಬಂದುಹೋಗುತ್ತಾರೆ. ಪಾಶ್ಚಾತ್ಯ ಸಂಗೀತದಲ್ಲಿ ಪದವಿ ಪಡೆದಿರುವ ಮನೋಮೂರ್ತಿ ಅವರಿಗೆ ಭಾರತೀಯ ಸಂಗೀತದಲ್ಲಿ ಅಂಥ ಪರಿಣತಿಯೇನಿಲ್ಲ. ಅದನ್ನವರು ಶಾಸ್ತ್ರೋಕ್ತವಾಗಿ ಕಲಿಯಲೂ ಇಲ್ಲ. ಆದರೆ ಎನ್‌..ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಮೂರು ಕ್ಯಾಸೆಟ್‌ಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಪ್ರೇಮಗಾನ, ಭಾವ ಮಾಲಿಕ ಹಾಗೂ ಅಮೆರಿಕಾ ಭಾರತ ಹೆಸರಲ್ಲಿ ಅವು ಬಿಡುಗಡೆಯಾಗಿವೆ. ಇವುಗಳ ಪೈಕಿ ಮೊದಲ ಎರಡು ಕ್ಯಾಸೆಟ್‌ಗಳು ಸದ್ಯಕ್ಕೆ ಭೂಗತ. ಅಮೆರಿಕಾ ಭಾರತ ಮಾತ್ರ ಲಹರಿ ಸಂಸ್ಥೆಯ ಗೋಡೌನಲ್ಲಿ ಬೆಚ್ಚಗಿವೆ.

ಕನ್ನಡ ಚಿತ್ರಗಳಿಗೆ ಸಂಗೀತ ನೀಡುವುದಕ್ಕೆ ಮನೋಮೂರ್ತಿ ರೆಡಿ. 'ನಾನು ನನ್ನ ಖರ್ಚಲ್ಲೇ ಬಂದು ಹೋಗಿ ಸಂಗೀತ ನೀಡಬಲ್ಲೆ. ಆದರೆ ನನಗೆ ನನ್ನನ್ನು ಅರ್ಥಮಾಡಿಕೊಳ್ಳುವವರು ಬೇಕು, ನಾಗತಿಹಳ್ಳಿಯವರಂತೆ" ಎನ್ನೋದು ಮೂರ್ತಿ ಅವರ ಮನೋಗತ.

ಆದರೆ ಮೂರ್ತಿ ಅವರದು ಕಲಾಧರ್ಮ. ಕಮರ್ಷಿಯಲ್‌ ಚಿತ್ರಗಳಿಗೆ ಸಂಗೀತ ನೀಡೋಲ್ಲ ಅಂತಾರೆ ಅವರು. ಅದೇ ಕಾರಣಕ್ಕೆ ನಂದಕುಮಾರ್‌ ಅವರ ಕ್ಲಿಂಟನ್‌ ಚಿತ್ರವನ್ನು ಮೂರ್ತಿ ನಿರಾಕರಿಸಿದರಂತೆ. ಕ್ಯಾಲಿಫೋರ್ನಿಯಾದ ಸಂಸ್ಥೆಯಾಂದರಲ್ಲಿ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಆಗಿರುವ ಮನೋಮೂರ್ತಿಯವರ ಪತ್ನಿಯೂ ದುಡಿಯುತ್ತಾರೆ. ಮಗ ನವೀನ್‌ ಪಿಯಾನೋ ಕಲಿಯುತ್ತಿದ್ದಾನೆ. ಮಗಳು ನವೀನ ಎಂಟನೆ ತರಗತಿ ಓದುತ್ತಿದ್ದಾಳೆ. ಒಳ್ಳೆಯ ಅಭಿರುಚಿಯ ಕೌಟುಂಭಿಕ ಚಿತ್ರಗಳಿಗೆ ಮಾತ್ರ ಸಂಗೀತ ನೀಡುತ್ತೇನೆ ಅಂತ ಮನೋಮೂರ್ತಿ ನೂರಾ ಹದಿನೆಂಟನೆ ಸಾರಿ ಘೋಷಿಸಿದರು. ಹಾಗಿದ್ದರೆ - ಜಗ್ಗೇಶ್‌, ದೇವರಾಜ್‌, ಶಶಿಕುಮಾರ್‌ ಮುಂತಾದವರಿಗೆ ಮನೋಮೂರ್ತಿ ಮಾಯಾಮೃಗವೇ ಸೈ.

English summary
music savvy NRI kannadigas
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada