ಮಂಸೋರೆಯ '19.20.21' ನಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿಲ್ಲ: ಕಾರಣ?
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಮಂಸೋರೆ ಕೆಲವು ದಿನಗಳ ಹಿಂದಷ್ಟೆ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಸಿನಿಮಾದ ಹೆಸರು '19.20.21'.
ಸಾಮಾನ್ಯ ವ್ಯಕ್ತಿಯನ್ನು ಸರ್ಕಾರ, ಪೊಲೀಸ್ ವ್ಯವಸ್ಥೆ, ಕೋರ್ಟ್‌ಗಳು, ರಾಜಕೀಯ, ಸಮಾಜ ಇತರೆಗಳು ಹೇಗೆ ನಿಯಂತ್ರಿಸುತ್ತವೆ ಅಥವಾ ಬಂಧನದಲ್ಲಿಡುತ್ತವೆ ಎಂಬುದನ್ನು ತೋರುವ ಪೋಸ್ಟರ್ ಒಂದನ್ನು ಮಂಸೋರೆ ಬಿಡುಗಡೆ ಮಾಡಿದ್ದಾರೆ.
ನಿಜ ಕತೆಯನ್ನು ಆಧರಿಸಿದ ಸಿನಿಮಾ '19.20.21' ಆಗಿರಲಿದೆ ಎಂದು ಮಂಸೋರೆ ಹೇಳಿದ್ದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಸಿನಿಮಾದ ಪ್ರಧಾನ ಪಾತ್ರದಲ್ಲಿ 'ಒಂದು ಮೊಟ್ಟೆಯ ಕತೆ', 'ಗರುಡ ಗಮನ ವೃಷಭ ವಾಹನ' ಸಿನಿಮಾ ಖ್ಯಾತಿಯ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಸೋರೆ, ರಾಜ್ ಬಿ ಶೆಟ್ಟಿ ಅನಿವಾರ್ಯ ಕಾರಣಗಳಿಂದ ನಮ್ಮ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.

'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಮಾತನಾಡಿರುವ ಮಂಸೋರೆ, ''ರಾಜ್ ಬಿ ಶೆಟ್ಟಿ ನ ಮ್ಮ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಲೆಂಬುದು ನಮ್ಮ ಇಚ್ಛೆಯಾಗಿತ್ತು. ಅವರನ್ನು ಸಂಪರ್ಕ ಸಹ ಮಾಡಿದೆವು ಆದರೆ ಅವರು ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಾರಣ ಅವರು ನಮ್ಮ ಸಿನಿಮಾದಲ್ಲಿ ನಟಿಸುತ್ತಿಲ್ಲ'' ಎಂದರು.
''ಹೊಸ ಸಿನಿಮಾದ ಚಿತ್ರೀಕರಣವನ್ನು ಏಪ್ರಿಲ್ ತಿಂಗಳಲ್ಲಿ ಪ್ರಾರಂಭ ಮಾಡುವ ಉದ್ದೇಶದಲ್ಲಿವೇ. ಅದೇ ಸಮಯಕ್ಕೆ ರಾಜ್ ಬಿ ಶೆಟ್ಟಿ ಮತ್ತು ಬಳಗದವರು ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಹಾಗಾಗಿ ಅವರಿಗೆ ನಮ್ಮ ಸಿನಿಮಾದಲ್ಲಿ ನಟಿಸಲಾಗುತ್ತಿಲ್ಲ. ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ ಬದಲಿಗೆ ಅವರ ಗೆಳೆಯರ ಸಿನಿಮಾದಲ್ಲಿ ಅವರು ತೊಡಗಿಸಿಕೊಳ್ಳುತ್ತಿದ್ದಾರೆ'' ಎಂದರು ಮಂಸೋರೆ.
''ಈಗ ನಮ್ಮ ಸಿನಿಮಾದ ಪ್ರಧಾನ ಪಾತ್ರಕ್ಕಾಗಿ ನಟರನ್ನು ಹುಡುಕುವ ಕಾರ್ಯ ಚಾಲ್ತಿಯಲ್ಲಿದೆ. ರಂಗಭೂಮಿ ಹಿನ್ನೆಲೆಯುಳ್ಳ ನಟರಿಗಾಗಿ ಹುಡುಕುತ್ತಿದ್ದೇವೆ. ಹೊಸಬರೆಂದಲ್ಲ ಆದರೆ ಪಾತ್ರವನ್ನು ಚೆನ್ನಾಗಿ ಪ್ರೆಸೆಂಟ್ ಮಾಡಬಲ್ಲ ನಟರಿಗಾಗಿ ಹುಡುಕಾಟ ನಡೆದಿದೆ'' ಎಂದರು ಮಂಸೋರೆ.
ತಮ್ಮ ಈ ಹಿಂದಿನ ಹಿಟ್ ಸಿನಿಮಾ 'ಆಕ್ಟ್ 1978' ಸಿನಿಮಾದಲ್ಲಿದ್ದ ಬಹುತೇಕ ತಾಂತ್ರಿಕ ವರ್ಗ ಈ ಸಿನಿಮಾದಲ್ಲಿಯೂ ಮುಂದುವರೆಯಲಿದೆ ಎಂದ ಮಂಸೋರೆ, ಕ್ಯಾಮೆರಾಮನ್ ಆಗಿ ಸತ್ಯ ಹೆಗಡೆಯವರೇ ಇರಲಿದ್ದಾರೆ. ಸಂಗೀತವನ್ನು ರಾಹುಲ್ ಶಿವಕುಮಾರ್ ಅವರೇ ನೀಡಲಿದ್ದಾರೆ. 'ಆಕ್ಟ್ 1978' ನಟಿಸಿದ್ದ ಕೆಲವು ನಟರೂ ಸಹ ಹೊಸ ಸಿನಿಮಾದಲ್ಲಿ ಇರಲಿದ್ದಾರೆ ಎಂದಿದ್ದಾರೆ ಮಂಸೋರೆ.
''ಈಗಿನ್ನೂ ಕೊರೊನಾ ಹಾವಳಿ ಇರುವ ಕಾರಣ ಇದೆಲ್ಲವೂ ತುಸು ಕಡಿಮೆ ಆದ ಮೇಲೆ ಚಿತ್ರೀಕರಣ ಪ್ರಾರಂಭ ಮಾಡುವ ಉದ್ದೇಶವಿದೆ. ಏಪ್ರಿಲ್ ವೇಳೆಗೆ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ದಾಂಡೆಲಿ ಸೇರಿದಂತೆ ಕರ್ನಾಟಕದ ಇನ್ನಿತರ ಭಾಗಗಳಲ್ಲಿ ಚಿತ್ರಿಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ'' ಎಂದು ಮಂಸೋರೆ ಮಾಹಿತಿ ನೀಡಿದರು.


Click it and Unblock the Notifications











