ತಂಪೆರಯಲು ಬಂತು 'ಮಾನ್ಸೂನ್ ರಾಗ' ರಿಲೀಸ್ ಟ್ರೈಲರ್!
ಡಾಲಿ ಧನಂಜಯ್, ರಚಿತಾ ರಾಮ್, ಯಶಾ ಶಿವಕುಮಾರ್ ನಟಿಸಿರುವ 'ಮಾನ್ಸೂನ್ ರಾಗ' ಸಿನಿಮಾದ ರಿಲೀಸ್ ಟ್ರೈಲರ್ ಇಂದು (ಸೆಪ್ಟೆಂಬರ್ 14) ಬಿಡುಗಡೆ ಆಗಿದೆ.
ಹೆಸರಿಗೆ ತಕ್ಕಂತೆ ಮನಸಿಗೆ ಹಿತಾನುಭವ ನೀಡುವ ದೃಶ್ಯಗಳಿಂದ ತುಂಬಿದ ಸರಳ ಟ್ರೈಲರ್ ಅನ್ನು ಚಿತ್ರತಂಡ ಹೊರತಂದಿದೆ. ಸಿನಿಮಾದ ಬಗ್ಗೆ ಹೆಚ್ಚೇನೂ ಸುಳಿವುಗಳನ್ನು ಬಿಟ್ಟುಕೊಡದೆ, ಕೇವಲ ಕೆಲವು ಗ್ಲಿಂಪ್ಸ್‌ಗಳನ್ನಷ್ಟೆ ನೀಡಿದೆ.
ಕೇವಲ 57 ಸೆಕೆಂಡಿನ ಈ ರಿಲೀಸ್ ಟ್ರೈಲರ್‌ನಲ್ಲಿ ಕೆಲ ಒಳ್ಳೆಯ ಸಂಭಾಷಣೆಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ''ಹತ್ತು ಜನರ ಕೈಕೆಳಗೆ ಜವಾನನಾಗಿ ಕೆಲಸ ಮಾಡುವನನ್ನೂ ಯಜಮಾನ ಎಂದು ಕರೆವ ಏಕೈಕ ಜೀವ ಹೆಂಡತಿ'' ಎಂದು ಅಚ್ಯುತ್ ಕುಮಾರ್ ಹೇಳುವ ಡೈಲಾಗ್ ಟ್ರೈಲರ್‌ನ ಹೈಲೈಟ್‌ಗಳಲ್ಲಿ ಒಂದು.

ಡಾಲಿ ಧನಂಜಯ್ ಒರಟ ಆದರೆ ಅಪ್ಪಟ ಪ್ರೇಮಿಯಾಗಿ ಮತ್ತೊಮ್ಮೆ ಮಿಂಚಲು ರೆಡಿಯಾಗಿದ್ದಾರೆ. ರಚಿತಾ ರಾಮ್ ಮುದ್ದಾದ ವೇಶ್ಯೆಯ ಪಾತ್ರದಲ್ಲಿ ಮಿನುಗಲು ಸಜ್ಜಾಗಿದ್ದಾರೆ. ಟ್ರೈಲರ್‌ನಲ್ಲಿ ಅವರ ದೃಶ್ಯಗಳೂ ಗಮನ ಸೆಳೆಯುತ್ತಿವೆ. ಆದರೆ ಈಗ ಬಿಡುಗಡೆ ಆಗಿರುವ ರಿಲೀಸ್ ಟ್ರೈಲರ್‌ಗಿಂತಲೂ ಈ ಹಿಂದೆ ಬಿಡುಗಡೆ ಆಗಿದ್ದ ಅಧಿಕೃತ ಟ್ರೈಲರ್ ಹೆಚ್ಚು ಚೆನ್ನಾಗಿತ್ತು ಎನಿಸದೆ ಇರದು.
'ಮಾನ್ಸೂನ್ ರಾಗ' ಪ್ರೀತಿ ಹುಡುಕುವವರ ಕತೆ, ಪ್ರೀತಿಗೆ ವಯಸ್ಸು, ಉದ್ಯೋಗ, ಸಾಮಾಜಿಕ ಸ್ಥರದ ಬೇಧವಿಲ್ಲ ಎಂದು ನಂಬಿದವರ ಕತೆ ಎಂಬುದು ಟ್ರೈಲರ್ ನೋಡಿದರೆ ತಿಳಿಯುತ್ತಿದೆ. ಸಿನಿಮಾದಲ್ಲಿ ಭಾವುಕ ದೃಶ್ಯಗಳು, ರೊಮ್ಯಾಂಟಿಕ್ ಸನ್ನಿವೇಶಗಳ ಜೊತೆಗೆ ಹಾಸ್ಯ ಆಕ್ಷನ್ ಸಹ ಇರಲಿದೆ ಎಂಬುದನ್ನು ಈ ಮುಂಚೆ ಬಿಡುಗಡೆ ಆಗಿರುವ ಟ್ರೈಲರ್ ಸಾರಿ ಹೇಳಿದೆ.
'ಮಾನ್ಸೂರ್ ರಾಗ' ಸಿನಿಮಾವನ್ನು ಎಸ್ ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಎ.ಆರ್.ವಿಖ್ಯಾತ್. ಸಿನಿಮಾದಲ್ಲಿ ಡಾಲಿ ಧನಂಜಯ್, ರಚಿತಾ ರಾಮ್, ಯಶಾ ಶಿವಕುಮಾರ್, ಅಚ್ಯುತ್ ಕುಮಾರ್, ಸುಹಾಸಿನಿ ಸೇರಿದಂತೆ ಇನ್ನೂ ಕೆಲವು ಉತ್ತಮ ನಟರಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಅನುಪ್ ಸಿಳಿನ್ ನೀಡಿದ್ದಾರೆ. ಸಿನಿಮಾ ಇದೇ ಶುಕ್ರವಾರ (ಸೆಪ್ಟೆಂಬರ್ 16)ರಂದು ಬಿಡುಗಡೆ ಆಗಲಿದೆ.


Click it and Unblock the Notifications











