ಸಾಯಿ ಪಲ್ಲವಿಯ ಕನ್ನಡ ಸಿನಿಮಾ ಏನಾಯಿತು?
ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದ. ಈಗಲೂ ತಮ್ಮ ಅದ್ಭುತ ನಟನೆ, ನೃತ್ಯ, ಸುಂದರ ನಗುವಿನಿಂದ ಮೋಡಿ ಮಾಡುತ್ತಲೇ ಸಾಗುತ್ತಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಬೇಡಿಕೆಯ ನಟಿಯಲ್ಲೊಬ್ಬರು.
ಮಲಯಾಳಂ ಸಿನಿಮಾ ಮೂಲಕ ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಆದರೆ ಕನ್ನಡದಲ್ಲಿ ಈವರೆಗೆ ನಟಿಸಿಲ್ಲ.
ಆದರೆ ಸಾಯಿ ಪಲ್ಲವಿಯನ್ನು ಕನ್ನಡಕ್ಕೆ ಕರೆತರುವ ಪ್ರಯತ್ನವನ್ನು ಕಳೆದ ವರ್ಷವೇ ಆರಂಭಿಸಲಾಗಿದೆ. 'ನಾತಿಚರಾಮಿ', 'ಹರಿವು', 'ಆಕ್ಟ್ 1978' ಸಿನಿಮಾಗಳನ್ನು ನಿರ್ದೇಶಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶಿಸಲಿರುವ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿ ಆಗಿ ನಟಿಸುವ ದಟ್ಟ ಸಾಧ್ಯತೆ ಇದೆ. ಈ ಸಿನಿಮಾ ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ.
ಎಲ್ಲ ಸರಿ ಇದ್ದಿದ್ದರೆ ಸಾಯಿ ಪಲ್ಲವಿಯ ಮೊದಲ ಕನ್ನಡ ಸಿನಿಮಾದ ಚಿತ್ರೀಕರಣ ಈ ವೇಳೆಗಾಗಲೆ ಪ್ರಾರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ.

ಕತೆಯ ಕಾರಣದಿಂದಾಗಿ ತಡ: ಮಂಸೋರೆ
ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ನಿರ್ದೇಶಕ ಮಂಸೋರೆ, ''ಸಾಯಿ ಪಲ್ಲವಿಗಾಗಿಯೇ ಎಂದು ನಿಶ್ಚಯಿಸಿರುವ ಸಿನಿಮಾದ ಕತೆ ಪೂರ್ತಿಯಾಗದಿರುವುದೇ ಸಿನಿಮಾ ತಡವಾಗುತ್ತಿರುವುದಕ್ಕೆ ಕಾರಣ. ಸಿನಿಮಾದ ಚಿತ್ರಕತೆ ತೃಪ್ತಿತರುತ್ತಿಲ್ಲ. ಹಾಗಾಗಿ ಪುನಃ ಚಿತ್ರಕತೆ ಬರೆಯಲಾಗುತ್ತಿದೆ. ಒಂದೊಮ್ಮೆ ಚಿತ್ರಕತೆ ಅಂತಿಮವಾದರೆ ಅದನ್ನು ಸಾಯಿ ಪಲ್ಲವಿ ಅವರಿಗೆ ನೀಡಿ ಅವರ ಒಪ್ಪಿಗೆ ಪಡೆಯುವುದು ಬಾಕಿ ಉಳಿಯುತ್ತದೆ'' ಎಂದಿದ್ದಾರೆ.

ಯುವ ರಾಜಕಾರಣಿ ಪಾತ್ರ
''ಇದು ಒಂದು ಯುವ ರಾಜಕಾರಣಿಯ ಕತೆ. ಈ ಪಾತ್ರಕ್ಕೆ ಸಾಯಿ ಪಲ್ಲವಿ ಅದ್ಭುತವಾಗಿ ಜೀವ ತುಂಬುತ್ತಾರೆ ಎಂಬ ವಿಶ್ವಾಸವಿದೆ. ಹಾಗಾಗಿ ಅವರನ್ನೇ ಗಮನದಲ್ಲಿಟ್ಟುಕೊಂಡು ಚಿತ್ರಕತೆ ಮಾಡುತ್ತಿದ್ದೇವೆ. ಸಿನಿಮಾದ ನಿರ್ಮಾಪಕರು ಸಹ ಚಿತ್ರಕತೆಯ ಬಗ್ಗೆ, ಸಾಯಿ ಪಲ್ಲವಿಯನ್ನು ಒಳಗೂಡಿಸಿಕೊಂಡು ಸಿನಿಮಾ ಮಾಡುವ ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ ಚಿತ್ರಕತೆ ಕಾರ್ಯ ನಿಧಾನವಾದ ಕಾರಣ ಸಿನಿಮಾ ತಡವಾಗುತ್ತಿದೆ'' ಎಂದಿದ್ದಾರೆ.

ಸಖತ್ ಬ್ಯುಸಿ ಸಾಯಿ ಪಲ್ಲವಿ
ಸಾಯಿ ಪಲ್ಲವಿ ನಟನೆಯ ತೆಲುಗು ಸಿನಿಮಾ 'ಶ್ಯಾಮ ಸಿಂಘ ರಾಯ್' ಕಳೆದ ತಿಂಗಳು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಒಟಿಟಿಯಲ್ಲಿಯೂ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಇದರ ಬಳಿಕ ತೆಲುಗಿನ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆಗೆ ರಾಣಾ ದಗ್ಗುಬಾಟಿ, ಪ್ರಿಯಾಮಣಿ ಇನ್ನೂ ಕೆಲವರು ನಟಿಸಿದ್ದಾರೆ. ನಟ ಚಿರಂಜೀವಿ ಅವರೊಟ್ಟಿಗೆ 'ಭೋಲಾ ಶಂಕರ್' ಸಿನಿಮಾದಲ್ಲಿ ನಟಿಸುವ ಆಫರ್ ಅನ್ನು ಸಾಯಿ ಪಲ್ಲವಿಗೆ ನೀಡಲಾಗಿತ್ತು. ಆದರೆ ರೀಮೇಕ್ ಸಿನಿಮಾದಲ್ಲಿ ನಟಿಸಲಾರೆ ಎಂದು ಆಫರ್ ಅನ್ನು ತಿರಸ್ಕರಿಸಿದರು ಸಾಯಿ ಪಲ್ಲವಿ.

'ಅಬ್ಬಕ್ಕ' ಸಿನಿಮಾ ಏನಾಯಿತು?
ಇನ್ನು ಮಂಸೋರೆ ಹೊಸದಾಗಿ '19.20.21' ಹೆಸರಿನ ಸಿನಿಮಾ ಘೋಷಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣವನ್ನು ಏಪ್ರಿಲ್‌ನಲ್ಲಿ ಪ್ರಾರಂಭ ಮಾಡುವ ಯೋಜನೆಯಲ್ಲಿದ್ದಾರೆ. ಈ ಹಿಂದೆ ಅವರು 'ಅಬ್ಬಕ್ಕ' ಸಿನಿಮಾವನ್ನು ಸಹ ಘೋಷಣೆ ಮಾಡಿದ್ದರು. ಆದರೆ ಆ ಸಿನಿಮಾವನ್ನು ಸದ್ಯಕ್ಕೆ ಕೈಗೆತ್ತಿಕೊಂಡಿಲ್ಲ. ಕೊರೊನಾ ಕಾಲದಲ್ಲಿ ಸಿನಿಮಾ ರಂಗದಲ್ಲಿ ಉಂಟಾಗಿರುವ ಅನಿಶ್ಚಿತತೆ, ಸಿನಿಮಾಗಳು ಬಿಡುಗಡೆ ಮಾಡಲಾಗದೆ ಅನುಭವಿಸುತ್ತಿರುವ ನಷ್ಟ ಇತರೆ ಕಾರಣಗಳಿಂದಾಗಿ 'ಅಬ್ಬಕ್ಕ' ಸಿನಿಮಾ ತಡವಾಗುತ್ತಿದೆ. 'ಅಬ್ಬಕ್ಕ' ಸಿನಿಮಾಕ್ಕೆ ಕನಿಷ್ಟ 50-60 ಕೋಟಿ ಬಜೆಟ್ ಬೇಕು. ಸಿನಿಮಾಕ್ಕೆ ಹಣ ಹಾಕಲು ಸಿದ್ಧರಿದ್ದ ನಿರ್ಮಾಪಕರು ಅವರ ಬೇರೆ ಸಿನಿಮಾವನ್ನು ಬಿಡುಗಡೆ ಮಾಡಲಾಗದೆ ಕಷ್ಟದಲ್ಲಿದ್ದಾರೆ. ಹಾಗಾಗಿ ಅವರಿಗೆ ಈ ಸಿನಿಮಾಕ್ಕೆ ಬಂಡವಾಳ ಹೂಡಲು ಇನ್ನಷ್ಟು ಸಮಯ ಬೇಕು. ಈ ನಡುವೆ ನಾವು ಖಾಲಿ ಇರುವ ಬದಲು ಸಿನಿಮಾ ಮಾಡೋಣವೆಂದು '19.20.21' ಸಿನಿಮಾ ಮಾಡುತ್ತಿದ್ದೇವೆ'' ಎಂದರು ಮಂಸೋರೆ.


Click it and Unblock the Notifications











