»   » ಮೌಲ್ಯಗಳ ಪುನರ್‌ ಪ್ರತಿಷ್ಠಾಪನೆಗೆ ಇನ್ಫೋಸಿಸ್‌ ಪ್ರತಿಷ್ಠಾನದೊಡತಿಯ ಕರೆ,

ಮೌಲ್ಯಗಳ ಪುನರ್‌ ಪ್ರತಿಷ್ಠಾಪನೆಗೆ ಇನ್ಫೋಸಿಸ್‌ ಪ್ರತಿಷ್ಠಾನದೊಡತಿಯ ಕರೆ,

Posted By: Staff
Subscribe to Filmibeat Kannada

ಮಂದಾಕಿನಿಯ ಗಂಡನ ಪಾತ್ರ ನನ್ನ ಮೇಲೆ ಎಂಥ ಪ್ರಭಾವ ಬೀರಿದೆಯೆಂದರೆ, ಆತನನ್ನು ಹಿಡಿದೆಳೆದು ಜೈಲಿಗೆ ಹಾಕಿಸಿಬಿಡೋಣ ಅನಿಸುತ್ತೆ. ಲಾಯರ್‌ ಪಾತ್ರದಲ್ಲಿ ಟಿ.ಎನ್‌.ಸೀತಾರಾಂ ಸಿಂಪ್ಲಿ ಸೂಪರ್ಬ್‌. ಮಾಯಾಮೃಗ ಮತ್ತು ಮನ್ವಂತರಗಳಂಥಾ ಮರೆಯಲಾಗದ ಧಾರಾವಾಹಿಗಳನ್ನು ಕೊಟ್ಟ ಸೀತಾರಾಂಗೆ ಧನ್ಯವಾದಗಳು- ನ್ಯಾಯಮೂರ್ತಿ ಎ.ಜೆ.ಸದಾಶಿವ.

ಜನವರಿ 13, 2002ರ ಭಾನುವಾರ ಸಂಜೆ. ಜೆ.ಪಿ.ನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಸಭಾಂಗಣ ಜನಭರಿತ. ಮನ್ವಂತರ ಧಾರಾವಾಹಿ ಕುರಿತ ಸಂವಾದ ಕಾರ್ಯಕ್ರಮ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಕವಿ ಸಿದ್ದಲಿಂಗಯ್ಯ, ನ್ಯಾಯಮೂರ್ತಿ ಎ.ಜೆ.ಸದಾಶಿವ, ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಸಂವಾದದಲ್ಲಿ ಕೂತಿದ್ದ ಮೊದಲ ಸಾಲಿನ ಪ್ರೇಕ್ಷಕರು.

ಗರ್ವ ಧಾರಾವಾಹಿಯ ಬಳಗ ಇತ್ತೀಚೆಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಈಗ ಮನ್ವಂತರದ ಸರದಿ. ಈ ಸಂವಾದ ಕಾರ್ಯಕ್ರಮವನ್ನು ಸೀತಾರಾಂ ಕೊಂಚ ಭಿನ್ನವಾಗಿ ಮಾಡಿದರು. ಪ್ರೇಕ್ಷಕರಿಂದ ಪತ್ರಗಳನ್ನು ಕರೆದರು. ಮನ್ವಂತರ ಧಾರಾವಾಹಿಯಲ್ಲಿ ಬರುವ ಯಾವುದಾದರೂ ಸನ್ನಿವೇಶ ನಿಮ್ಮ ಜೀವನದಲ್ಲೂ ನಡೆದಿದ್ದರೆ ಅದನ್ನು ಬರೆಯಿರಿ. ನಿಮಗೆ ಸ್ಫೂರ್ತಿಯಾದ ಯಾವುದಾದರೂ ಸನ್ನಿವೇಶ ಇದ್ದರೆ ಅದನ್ನೂ ಬರೆಯಿರಿ ಅಂತ ಸೀತಾರಾಂ ಬುಲಾವು ಕೊಟ್ಟರು. ಸಂವಾದ ಕಾರ್ಯಕ್ರಮ ರೂಪುಗೊಂಡಿದ್ದು ಆ ಪತ್ರಗಳ ಆಧರಿಸಿಯೇ.

ಧಾರಾವಾಹಿಯ ಟ್ರ್ಯಾಕ್‌ ಬಿಟ್ಟು ಮಾತಾಡಿದವರು ಕವಿ ಸಿದ್ದಲಿಂಗಯ್ಯ ಮತ್ತು ಸುಧಾಮೂರ್ತಿ. ಸಾಮಾಜಿಕ ಜೀವನದಲ್ಲಿ ಸಭ್ಯತೆಗೆ ಕೊಡಲಿ ಪೆಟ್ಟು ಕೊಡಬೇಡಿ ಅಂತ ಸಿದ್ದಲಿಂಗಯ್ಯ ಮೊರೆಯಿಟ್ಟರು. ಸೀತಾರಾಂ ಅಂಥವರು ಧಾರಾವಾಹಿ ಮೂಲಕ ಇಂಥಾ ಕಳಕಳಿಯನ್ನು ತೋರಿ, ಜನರನ್ನು ದಾರಿ ತಪ್ಪದಂತೆ ನೋಡಿಕೊಳ್ಳಬಹುದು ಅಂದರು.

ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಹಾಗಾಗದಂತೆ ತಡೆಗಟ್ಟಲು ಮಹಿಳೆಯರು ಮನಸ್ಸು ಮಾಡಬೇಕು. ಸಂಸ್ಕೃತಿಯನ್ನು ಬಚಾವು ಮಾಡಬೇಕು ಅಂತ ಕೇಳಿಕೊಂಡವರು ಸುಧಾಮೂರ್ತಿ. ಮನ್ವಂತರ ಧಾರಾವಾಹಿಯ ರಾಜಕೀಯ ಪಾತ್ರಗಳು ತಮಗೆ ತುಂಬಾ ಹಿಡಿಸಿವೆ ಎಂದೂ ಅವರು ಹೇಳಿದರು.

ಮಾನಸಿಕವಾಗಿ ಕುಗ್ಗಿಹೋಗಿದ್ದ ಸಂದರ್ಭದಲ್ಲಿ ನನಗೆ ಒಂದು ಪಾತ್ರ ಕೊಟ್ಟ ಸೀತಾರಾಂಗೆ ಧನ್ಯವಾದಗಳು. ಮೂಲತಃ ನಾನು ನಟನಲ್ಲ. ಆದರೆ ರಾಜಕೀಯದ ಹಲವಾರು ನಾಟಕಗಳನ್ನು ಹತ್ತಿರದಿಂದ ನೋಡಿದ್ದೇನೆ; ಹಾರ ಹಾಕಿಸಿಕೊಂಡು ಪರ್ಸ್‌ ಒಯ್ಯುವವರಿಂದ ಹಿಡಿದು ಕೈಕುಲುಕಿ ಚೈನು ರಿಂಗುಗಳನ್ನು ಪಡೆದವರವರೆಗೆ. ನನಗನಿಸುತ್ತದೆ, ಅದೇ ನಿಜವಾದ ನಟನೆ ಎಂದು ರಮೇಶ್‌ ಕುಮಾರ್‌ ಹೇಳಿದಾಗ ಸಭೆಯಲ್ಲಿ ಗೊಳ್ಳೆಂಬ ನಗೆಯ ಜೊತೆಗೆ ಜೈ ರಮೇಶ್‌ ಅನ್ನುವ ದನಿಯೂ ಕೇಳಿಬಂತು.

ಹಲವಾರು ಕನ್ನಡ ಚಾನೆಲ್‌ಗಳಿವೆ. ಎಷ್ಟೆಲ್ಲಾ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಹೀಗಿದ್ದೂ ನಮ್ಮ ಧಾರಾವಾಹಿಯನ್ನು ಜನ ಮೆಚ್ಚಿದ್ದಾರೆ. ಅದೇ ನಮಗೆ ಸಿಕ್ಕಿರುವ ಬಹುಮಾನ ಎಂದು ಟಿ.ಎನ್‌.ಸೀತಾರಾಂ ಆಡಿದ ಮಾತಿಗೆ ಭಾರೀ ಕರತಾಡನ.

ಧಾರಾವಾಹಿಯ ಪಾತ್ರಧಾರಿಗಳಾದ ಮೇಘ ನಾಡಿಗರ್‌, ದೀಪಶ್ರೀ, ಸುಂದರ್‌, ಹೇಮಾ ಬೆಳ್ಳೂರ್‌, ಶೋಭಾ ರಾಘವೇಂದ್ರ ಹಾಗೂ ಸೇತುರಾಂ ಸಂವಾದದಲ್ಲಿ ಹಾಜರಿದ್ದರು. ಸಂಗೀತ ನಿರ್ದೇಶಕ ಸಿ.ಅಶ್ವಥ್‌ ಧಾರಾವಾಹಿಯ ಶೀರ್ಷಿಕೆ ಗೀತೆ 'ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ...." ಹಾಡಿದಾಗ ಒನ್ಸ್‌ ಮೋರ್‌ ಎಂಬ ಒತ್ತಾಯ ಪ್ರೇಕ್ಷಕರಿಂದ. ಸೀತಾರಾಂ ಧಾರಾವಾಹಿಯ ಅಭಿಮಾನಿಗಳು ಸುಂದರ ಸಂಜೆಯ ನೆನಪಿನೊಂದಿಗೆ ಸಂಕ್ರಾಂತಿ ಆಚರಿಸಲು ಹೊರಟರು.

English summary
Manvanthara for a change : T.N.Seetharam and companys chat with audience
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada