ಪುಂಡ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಿಎಂಗೆ 'ಟಗರು' ಪುಟ್ಟಿ ಮಾನ್ವಿತಾ ಮನವಿ
'ಟಗರು' ಸಿನಿಮಾ ಮೂಲಕ ಗಮನ ಸೆಳೆದಿರುವ ನಟಿ ಮಾನ್ವಿತಾ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿಯೊಂದನ್ನು ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಮಾನ್ವಿತಾ, ''ದಾವಣೆಗೆರೆ ಜಿಲ್ಲೆಯ ಶಾಲೆಯ ಈ ವಿದ್ಯಾರ್ಥಿಗಳ ಕ್ರೂರ ವರ್ತನೆಯನ್ನು ನಿಯಂತ್ರಿಸಲು ಸೂಕ್ತ ಕ್ರಮವನ್ನು ಕೈಗೊಳ್ಳಿ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಮಾನ್ವಿತಾ ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಮಾನ್ವಿತಾ ಹಂಚಿಕೊಂಡಿರುವ ವಿಡಿಯೋದಲ್ಲಿ, ಕೆಲವು ವಿದ್ಯಾರ್ಥಿಗಳು, ತರಗತಿಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕ ಒಬ್ಬರನ್ನು ದೈಹಿಕವಾಗಿ ಛೇಡಿಸುತ್ತಿದ್ದಾರೆ. ಶಿಕ್ಷಕನ ಮೇಲೆ ಡಸ್ಟ್‌ಬಿನ್ ಹಾಕುವುದು, ಶಿಕ್ಷಕನ ತಲೆಗೆ ಹೊಡೆಯುವುದು, ಶಿಕ್ಷನನ್ನು ಬೆದರಿಸುವುದು ಮಾಡುತ್ತಿದ್ದಾರೆ. ಈ ದೃಶ್ಯವನ್ನು ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಇಷ್ಟೆಲ್ಲ ಮಾಡುತ್ತಿದ್ದರೂ ಆ ಶಿಕ್ಷಕ ಏನೂ ಆಗಿಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಪಾಠ ಮಾಡುವುದರಲ್ಲಿ ನಿರತರಾಗಿದ್ದಾರೆ.

ಮಾನ್ವಿತಾ ಹಂಚಿಕೊಂಡಿರುವ ಈ ವಿಡಿಯೋ ದಾವಣೆಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರಿನ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ಹಿಂದಿ ಶಿಕ್ಷಕ ಪ್ರಕಾಶ್ ಬೋಗಾರ್ ತಮ್ಮದೇ ವಿದ್ಯಾರ್ಥಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ. ಶಿಕ್ಷಕ ಪ್ರಕಾಶ್ ಬೋಗಾರ್ ಸೌಮ್ಯ ಸ್ವಭಾವದವರು ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಈಗ ಮಾನ್ವಿತಾ ಹಂಚಿಕೊಂಡಿರುವ ವಿಡಿಯೋವನ್ನು ಮೂರು ದಿನದ ಹಿಂದೆ ಅದೇ ಶಾಲೆಯ ವಿದ್ಯಾರ್ಥಿ ರೆಕಾರ್ಡ್ ಮಾಡಿಕೊಂಡಿದ್ದ. ಆ ವಿಡಿಯೋ ಈಗ ವೈರಲ್ ಆಗಿದೆ. ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಚೆನ್ನಗಿರಿ ತಾಲ್ಲೂಕಿನ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಲ್ಲೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ಶಿಕ್ಷಕರು, ಪ್ರಾಂಶುಪಾಲರು, ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ. ಶಿಕ್ಷಕ ಪ್ರಕಾಶ್ ಅವರಿಗೆ ಅವಮಾನ ಮಾಡಿರುವ ವಿದ್ಯಾರ್ಥಿಗಳು ಯಾರು? ಎಲ್ಲಿಯವರು? ಹೆಸರೇನು? ಎಂಬ ಕುರಿತು ವಿಚಾರಿಸಿದ್ದಾರೆ. ಗ್ರಾಮಸ್ಥರ ಜೊತೆ ಈ ವಿದ್ಯಾರ್ಥಿಗಳು ಬೇರೆ ಯಾವುದಾದರೂ ಈ ರೀತಿಯ
ಕುಚೇಷ್ಟೆ ಮಾಡಿದ್ದಾರಾ ಎಂಬ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡೋಣ ಎಂದು ಹೇಳಿದ್ದಾರೆ. ಈ ವೇಳೆ ಈ ಘಟನೆಯಿಂದ ನಲ್ಲೂರು ಹಾಗೂ ಕಾಲೇಜಿಗೆ ಕೆಟ್ಟ ಹೆಸರು ಬಂದಂತಾಗಿದೆ.
ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಬೇಕು. ಮುಂಬರುವ ದಿನಗಳಲ್ಲಿ ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನು ದಾವಣಗೆರೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರಿಗೆ ಕುಚೇಷ್ಟೆ ಮಾಡಿ
ಅವಮಾನ ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಿಕ್ಷಕರ ಕಡೆಯಿಂದ ತಪ್ಪಿದ್ದರೂ ಸಹ ಕ್ರಮ ಆಗುತ್ತೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು? ಎಂಬ ಬಗ್ಗೆ ವರದಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.


Click it and Unblock the Notifications











