ಶಿವರಾಜ್ ಕುಮಾರ್ ಬಗ್ಗೆ ಹಾಡಿ ಹೊಗಳಿದ ಮಾನ್ವಿತಾ ಹರೀಶ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ 'ಜಾಕಿ' ಭಾವನಾ ಜೊತೆಗೆ 'ಕೆಂಡಸಂಪಿಗೆ' ನಾಯಕಿ ಮಾನ್ವಿತಾ ಹರೀಶ್ ತೆರೆಹಂಚಿಕೊಂಡಿರುವ ಸಿನಿಮಾ 'ಟಗರು'. ದುನಿಯಾ ಸೂರಿ ನಿರ್ದೇಶನದ 'ಟಗರು' ಸಿನಿಮಾ ಇದೇ ಶುಕ್ರವಾರ ನಿಮ್ಮ ಮುಂದೆ ಬರಲಿದೆ.
ಮಾನ್ವಿತಾ ಹರೀಶ್ ವೃತ್ತಿಜೀವನದಲ್ಲಿಯೇ ಬಹುಮುಖ್ಯವಾಗಿರುವ ಸಿನಿಮಾ ಈ 'ಟಗರು'. ಮೊಟ್ಟ ಮೊದಲ ಬಾರಿಗೆ ಶಿವಣ್ಣ ಜೊತೆಗೆ ಸ್ಕ್ರೀನ್ ಶೇರ್ ಮಾಡಿರುವ ಮಾನ್ವಿತಾ ಹರೀಶ್, ಅವರ ಜೊತೆಗಿನ ತಮ್ಮ ನಟನೆಯ ಅನುಭವವನ್ನ ಹಂಚಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ಮಾನ್ವಿತಾ ಹರೀಶ್, ಶಿವಣ್ಣ ರವರಿಂದ ಶಿಸ್ತನ್ನು ಕಲಿತಿದ್ದಾರಂತೆ. ''ಶಿವಣ್ಣನಿಂದ ಕಲಿಯುವುದು ತುಂಬಾ ಇದೆ. ಅವರಲ್ಲಿ ಒಂದು ಮಗು ಇದೆ. ನಾನು ಚಿಕ್ಕ ಹುಡುಗಿ, ಚಿಕ್ಕ ನಟಿ ಅಂತ ಭಾವಿಸಲಿಲ್ಲ. ಶಾಟ್ ಗೂ ಮುನ್ನ ನನ್ನ ಜೊತೆ ಡೈಲಾಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಅನಿಸಿದ್ದನ್ನು ನೇರವಾಗಿ ಹೃದಯದಿಂದ ಹೇಳ್ತಾರೆ. ಇದು ಅವರ ದೊಡ್ಡ ಗುಣ'' ಅಂತ ಶಿವರಾಜ್ ಕುಮಾರ್ ಬಗ್ಗೆ ಮಾನ್ವಿತಾ ಹರೀಶ್ ಹಾಡಿ ಹೊಗಳಿದ್ದಾರೆ.

ಬಹು ನಿರೀಕ್ಷೆ ಹುಟ್ಟು ಹಾಕಿರುವ 'ಟಗರು' ಸಿನಿಮಾ ಫೆಬ್ರವರಿ 23 ರಂದು ಬಿಡುಗಡೆ ಆಗಲಿದೆ. ಅಂದ್ಹಾಗೆ, 'ಟಗರು' ಚಿತ್ರದಲ್ಲಿ ಮಾನ್ವಿತಾ ಹರೀಶ್ ಪಾತ್ರ ತುಂಬಾ ಡಿಫರೆಂಟ್ ಆಗಿದ್ಯಂತೆ. ಆದ್ರೆ, ಅದ್ಯಾವ ತರಹ ಅಂತ ಮಾತ್ರ ಮಾನ್ವಿತಾ ಬಿಟ್ಟು ಕೊಟ್ಟಿಲ್ಲ.


Click it and Unblock the Notifications











