ಕಾಲೆಳೆದವರು ನನ್ನ ಬೆನ್ನ ಹಿಂದೆ.. ನಾನು ನಿಮ್ಮ ಮುಂದೆ ; ಚಿಕ್ಕಣ್ಣಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ಯೋಗ್ಯತೆ ಮತ್ತು ಯೋಗವಿದ್ದರೆ ಅವಕಾಶಗಳು ಹಿತ್ತಲಿನಿಂದಾದರೂ ಬರುತ್ತವೆ ಅನ್ನುವುದಕ್ಕೆ ಚಿಕ್ಕಣ್ಣ ಅತ್ಯುತ್ತಮ ಸಾಕ್ಷಿ. ಕಿರಾತಕ ಚಿತ್ರದ ಮೂಲಕ ಅಚಾನಕ್ ಆಗಿ, ಕನ್ನಡ ಚಿತ್ರರಂಗಕ್ಕೆ ಬಂದ ಚಿಕ್ಕಣ್ಣ ಆ ನಂತರ ರಾಜಾಹುಲಿ ಚಿತ್ರದ ಮೂಲಕ ಜನ ಮನ ಗೆದ್ದರು.
ಅಲ್ಲಿಂದಾಚೆ ಹಿಂದೆ ತಿರುಗಿ ನೋಡದ ಚಿಕ್ಕಣ್ಣ, ಕನ್ನಡದ ಅಷ್ಟೂ ಜನ ಹೀರೋಗಳ ಜೊತೆ ಎರಡೆರಡು ರೌಂಡು ನಟಿಸಿದ್ದಾರೆ. 200ಕ್ಕೂ ಹೆಚ್ಚಿನ ಸಿನಿಮಾಗಳ ಮೂಲಕ ಹಾಸ್ಯದ ರಸದೌತಣವನ್ನೂ ಬಡಿಸಿದ್ದಾರೆ. ಆದರೆ ಇಂಥಹ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಲು ಮುಂದಾದಾಗ, ಅನೇಕರು ಕಾಲೆಳೆದರು. ನಕ್ಕರು. ಇದೆಲ್ಲ ಆಗೋ ಹೋಗೋ ಮಾತಾ ಎಂದು ವ್ಯಂಗ್ಯವನ್ನೂ ಮಾಡಿದರು.

ಇಷ್ಟೇ ಅಲ್ಲ ಶರಣ್, ಕೋಮಲ್ ಥರದ ನಟರು ಹಾಸ್ಯಪಾತ್ರಗಳು ಸಾಕು ಎನಿಸಿದಾಗ ಹೀರೋಗಳಾಗುವ ಸರ್ಕಸ್ಸು ಮಾಡಿದರು ಮತ್ತು ತಮಗೊಪ್ಪುವ ಸಬ್ಜೆಕ್ಟುಗಳನ್ನು ಆಯ್ಕೆ ಮಾಡಿಕೊಂಡಾಗೆಲ್ಲಾ ಗೆದ್ದರು ಕೂಡಾ. ಆದರೆ ಚಿಕ್ಕಣ್ಣ ತೀರಾ ಹೀರೋ ಆಗುವ ಎಲಿಮೆಂಟಲ್ಲ ಎಂದು ಕೂಡ ಗಾಂಧಿನಗರದ ಮಂದಿ ಮಾತನಾಡಿಕೊಂಡಿದ್ದರು. ಖುದ್ದು ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಬಿಡುಗಡೆ ಸಮಯದಲ್ಲಿ ತಮಗಾದ ಅವಮಾನ ಕಥೆಯನ್ನ ಹೇಳಿಕೊಂಡಿದ್ದರು. ಮನದ ನೋವನ್ನ ಹೊರ ಹಾಕಿದ್ದರು.
ಆದರೆ ಈಗ ಕಾಲ ಮೊದಲಿನಂತೆ ಇಲ್ಲ. ಕಾಲ ಚಕ್ರ ಮನಸ್ಥಿತಿ ಹಾಗೂ ಪರಿಸ್ಥಿತಿ ಎರಡನ್ನೂ ಬದಲಾಯಿಸಿದೆ. ಉಪಾಧ್ಯಕ್ಷ ಚಿತ್ರದ ಗೆಲುವು ಕಾಲ್ ಎಳೆದು ಅಂದು ನಕ್ಕವರಿಗೆ ಉತ್ತರವನ್ನೂ ಕೊಟ್ಟಿದೆ. ಹೀಗಾಗಿಯೇ ನಿರಾಳರಾಗಿರುವ ಚಿಕ್ಕಣ್ಣ ಅವತ್ತು ಕೇಕೆ ಹಾಕಿದವರಿಗೆ ಇವತ್ತು ಮಾತಿನಲ್ಲಿಯೇ ತಿವಿದಿದ್ದಾರೆ. ಕಾಲೆಳೆದವರೆ ಈಗ ಕಾಲ್ ಶೀಟ್ ಕೇಳುತ್ತಿದ್ದಾರೆ ಎಂದಿದ್ದಾರೆ.

ಹೌದು, ಅಸಲಿಗೆ ಉಪಾಧ್ಯಕ್ಷ ಚಿತ್ರಕ್ಕೆ ಸಿಕ್ಕ ಜನ ಬೆಂಬಲದಿಂದ ಪುಳಕಿತಗೊಂಡಿದ್ದ ಚಿತ್ರತಂಡ ಇತ್ತೀಚೆಗೆ, ಸಕ್ಸಸ್ ಮೀಟ್ ಆಯೋಜಿಸಿತ್ತು. ಚಿಕ್ಕಣ್ಣ ಸೇರಿ ಸಂಪೂರ್ಣ ಚಿತ್ರತಂಡ ಯಶಸ್ಸನ್ನ ಸಂಭ್ರಮಿಸಲು ಒಂದು ಕಡೆ ಸೇರಿತ್ತು. ಇದೇ ಸಮಯದಲ್ಲಿ ಮಾತನಾಡಿದ ಚಿಕ್ಕಣ್ಣ ನಾನು ನಾಯಕನಾಗುತ್ತಿದ್ದೇನೆ ಎಂದಾಗ ಕಾಲೆಳೆದವರೆ ಜಾಸ್ತಿ. ಆದರೆ ಈಗ ಅವರೇ ನನ್ನ ಕಾಲ್ ಶೀಟ್ ಕೇಳುತ್ತಿದ್ದಾರೆ. ಕರ್ನಾಟಕದ ಜನ ನಮ್ಮ ಸಿನಿಮಾವನ್ನು ಗೆಲ್ಲಿಸಿದ್ದಾರೆ.ಅವರಿಗೆ ಇಲ್ಲಿಂದಲೇ ಶರಣು. ಇನ್ನು ನನ್ನ ನಂಬಿ ದುಡ್ಡು ಹಾಕಿರುವ ನಿರ್ಮಾಪಕರಿಗೆ, ಒಳ್ಳೆಯ ಚಿತ್ರಕೊಟ್ಟ ನಿರ್ದೇಶಕರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದ ಚಿಕ್ಕಣ್ಣ, ಇದೇ ವೇಳೆ ಶಿವರಾಜಕುಮಾರ್, ದರ್ಶನ್, ಸುದೀಪ್, ಯಶ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಸೂರ್ಯ ಸೇರಿದಂತೆ ಸಾಕಷ್ಟು ನಾಯಕರು ಉಪಾಧ್ಯಕ್ಷ ಚಿತ್ರಕ್ಕೆ ನೀಡಿದ್ದ ಸಹಕಾರವನ್ನ ನೆನೆಯಲು ಮರೆಯಲಿಲ್ಲ.

ಇನ್ನೂ ಉಪಾಧ್ಯಕ್ಷ ಚಿತ್ರದ ಗೆಲುವು ಚಿತ್ರದ ಕಥಾನಾಯಕಿ ಮಲೈಕಾಗೂ ತುಂಬಾನೇ ವಿಶೇಷ. ಈ ಕಾರಣಕ್ಕೆ ವೇದಿಕೆಯಲ್ಲಿ ಮಾತನಾಡಿದ ಮಲೈಕಾ ಚಿತ್ರ ಆರಂಭವಾದಾಗ ನಾನು ಕೆಲವು ಮಾತುಗಳನ್ನು ಕೇಳಿದ್ದೆ. ಈ ಗೆಲುವು ಅದನೆಲ್ಲಾ ಮರೆಸಿದೆ. ಆಡಿದವರಿಗೆ ತಕ್ಕ ಉತ್ತರ ಸಿಕ್ಕಿದೆ. ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.
ಮಿಕ್ಕಂತೆ ಚಿತ್ರಕ್ಕೆ ಬಂಡವಾಳ ಹೂಡಿರುವ ಉಮಾಪತಿ ಶ್ರೀನಿವಾಸ್ ಅವರ ಪತ್ನಿ ಸ್ಮಿತಾ ಹಾಗೂ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.ಒಟ್ಟಿನಲ್ಲಿ ಮೊನ್ನೆಯವರೆಗೆ ಕಾಮಿಡಿ ಸ್ಟಾರ್ ಆಗಿದ್ದ ಚಿಕ್ಕಣ್ಣ ಈಗ ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿಯೂ ಗೆದ್ದಿದ್ದಾರೆ. ಈ ಯಶಸ್ಸನ್ನ ಚಿಕ್ಕಣ್ಣ ಮುಂದೆ ಹೇಗೆ ಕಾಪಾಡಿಕೊಂಡು ಹೋಗ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ. ನಾಯಕನಾದ ಚಿಕ್ಕಣ್ಣ ಕಾಮಿಡಿಯನ್ ಆಗಿ ಬೇರೆ ಚಿತ್ರದಲ್ಲಿ ನಟಿಸುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಕೂಡ ಅನೇಕರ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ.


Click it and Unblock the Notifications











