ಧ್ರುವ 'ಮಾರ್ಟಿನ್' ಅಡ್ವಾನ್ಸ್ ಬುಕ್ಕಿಂಗ್ ಶುರು; ಹೇಗಿದೆ ಗೊತ್ತಾ ರೆಸ್ಪಾನ್ಸ್?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ದಸರಾ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬರ್ತಿದೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರವದನ್ನು ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಕೆಜಿ ರಸ್ತೆಯ ನರ್ತಕಿ ಸೇರಿದಂತೆ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ 'ಮಾರ್ಟಿನ್' ಸಿನಿಮಾ ಬಿಡುಗಡೆ ಆಗುತ್ತಿದೆ. ಇಂಟರ್‌ನ್ಯಾಷನಲ್ ಮಟ್ಟದಲ್ಲಿ ಏಕಕಾಲಕ್ಕೆ 21 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಧ್ರುವ ಸರ್ಜಾ ಆಕ್ಷನ್ ಧಮಾಕ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಳೆ(ಅಕ್ಟೋಬರ್ 10) ಮಧ್ಯರಾತ್ರಿಯಿಂದಲೇ ಕೆಲವಡೆ 'ಮಾರ್ಟಿನ್' ಆರ್ಭಟ ಶುರುವಾಗಲಿದೆ. ಧ್ರುವ ಅಭಿಮಾನಿಗಳಿಗಾಗಿ ಬೆಂಗಳೂರು, ದಾವಣಗೆರೆ, ಉತ್ತರ ಕರ್ನಾಟಕದ ಕೆಲವೆಡೆ ಮಧ್ಯರಾತ್ರಿ 11 ಗಂಟೆಗೆ ಸಿನಿಮಾ ಪ್ರದರ್ಶಿಸಲಾಗುತ್ತಿದೆ.

ಎಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಚಿತ್ರಕ್ಕೆ ಉದಯ್ ಕೆ ಮೆಹ್ತಾ ಹಣ ಹೂಡಿದ್ದಾರೆ. ಅಂದಾಜು 75 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕನ್ನಡ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ 'ಮಾರ್ಟಿನ್' ಎನ್ನಲಾಗ್ತಿದೆ. ರವಿಬಸ್ರೂರು ಹಿನ್ನೆಲೆ ಸಂಗೀತ ಚಿತ್ರಕ್ಕೆ ಆನೆ ಬಲ ತುಂಬಿದೆ. ಚಿತ್ರತಂಡ ಮಾತ್ರ ಸಿನಿಮಾ ಮೇಲೆ ಬಹಳ ಭರವಸೆಯಿಂದ ಇದೆ.
ಧ್ರುವ ಸರ್ಜಾ ಹೀರೊ ಆಗಿ ನಟಿಸಿರುವ 5ನೇ ಸಿನಿಮಾ 'ಮಾರ್ಟಿನ್'. ಇದಕ್ಕೂ ಮುನ್ನ 4 ಚಿತ್ರಗಳು ತಡವಾಗಿಯೇ ಬಂದು ಬಾಕ್ಸಾಫೀಸ್ ಶೇಕ್ ಮಾಡಿದ್ದವು. 240 ದಿನಗಳ ಚಿತ್ರೀಕರಣದ ಬಳಿಕ 'ಮಾರ್ಟಿನ್' ಸಿನಿಮಾ ರಿಲೀಸ್ ಕೂಡ ತಡವಾಗಿತ್ತು. ಗುಣಮಟ್ಟದ ವಿಚಾರದಲ್ಲಿ ರಾಜಿಯಾಗದೇ ಚಿತ್ರವನ್ನು ಕಟ್ಟಿಕೊಡಲಾಗಿದೆ. ಇನ್ನು ದಸರಾ ಸಂಭ್ರಮದಲ್ಲಿ ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದಲ್ಲಿ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಭಾರೀ ಪೈಪೋಟಿ ಕೊಡುತ್ತಿದೆ.

ಒಂದು ದಿನ ಮೊದಲೇ ಜ್ಞಾನವೇಲ್ ನಿರ್ದೇಶನದ 'ವೆಟ್ಟೆಯಾನ್' ಸಿನಿಮಾ ತೆರೆಗೆ ಬರ್ತಿದೆ. ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 3 ದಿನಗಳ ಹಿಂದೆಯೇ 'ವೆಟ್ಟೆಯಾನ್' ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿತ್ತು. ಟಿಕೆಟ್ ದರ ಹೆಚ್ಚಾಗಿದ್ದರೂ ಜನ ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. 'ವೆಟ್ಟೆಯಾನ್' ಬುಕ್ಕಿಂಗ್‌ಗೆ ಹೋಲಿಸಿದರೆ 'ಮಾರ್ಟಿನ್' ಚಿತ್ರಕ್ಕೆ ಪ್ರತಿಕ್ರಿಯೆ ನೀರಸವಾಗಿದೆ. ಇನ್ನೆರಡು ದಿನಗಳಲ್ಲಿ ಹೆಚ್ಚಿವ ನಿರೀಕ್ಷೆಯಿದೆ.
'ಮಾರ್ಟಿನ್' ಸಿನಿಮಾ ರಾಜ್ಯಾದ್ಯಂತ ಭಾರೀ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ವೀಕೆಂಡ್‌ನಲ್ಲಿ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸುವ ಸಾಧ್ಯತೆ ಹೆಚ್ಚಾಗಿದೆ. ಹೊರ ರಾಜ್ಯಗಳಲ್ಲಿ ಕೂಡ 'ಮಾರ್ಟಿನ್' ಸಿನಿಮಾ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.
'ಮಾರ್ಟಿನ್' ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಸತ್ಯಾ ಹೆಗಡೆ ಛಾಯಾಗ್ರಹಣ, ಮಣಿಶರ್ಮಾ ಸಂಗೀತ ಚಿತ್ರಕ್ಕಿದೆ. ಮೊನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಇನ್ನು ಈಗಾಗಲೇ ಸಿನಿಮಾ ಸೆನ್ಸಾರ್ ಮುಗಿಸಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರದ ರನ್‌ಟೈಮ್ 2 ಗಂಟೆ 27 ನಿಮಿಷ ಎನ್ನುವುದು ರಿವೀಲ್ ಆಗಿದೆ.
ಚಿತ್ರದಲ್ಲಿ ಪಾಕಿಸ್ತಾನದ ಗಡಿ ದಾಟಿದ ಭಾರತೀಯನೊಬ್ಬನ ಕಥೆಯನ್ನು ಹೇಳಲಾಗಿದೆ. ಈಗಾಗಲೇ ಟೀಸರ್‌ಗಳಲ್ಲಿ ಅದರ ಝಲಕ್ ನೋಡಿದ್ದೇವೆ. ಚಿತ್ರದಲ್ಲಿ ತೂಕ ಹೆಚ್ಚಿಸಿಕೊಂಡು ಸಿಕ್ಕಾಪಟ್ಟೆ ಖಡಕ್ ಲುಕ್‌ನಲ್ಲಿ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ವಿದೇಶದ ಬಾಡಿ ಬಿಲ್ಡರ್‌ಗಳ ಜೊತೆ ಗುದ್ದಾಡಿದ್ದಾರೆ. ರವಿವರ್ಮ ಚಿತ್ರಕ್ಕೆ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದಾರೆ. 'ಮಾರ್ಟಿನ್' ಸಿನಿಮಾ ಈ ವರ್ಷ ದೊಡ್ಡದಾಗಿ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ.


Click it and Unblock the Notifications











