ದಸರಾ ದಂಗಲ್: 'ಮಾರ್ಟಿನ್' ರಿಲೀಸ್ ಡೇಟ್ ಬದಲಾಗುತ್ತಾ? ನಿರ್ದೇಶಕರು ಏನಂತಾರೆ?
ಈ ವರ್ಷ ದಸರಾ ಸಂಭ್ರಮದಲ್ಲಿ ಒಂದಲ್ಲ ಎರಡಲ್ಲ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರ್ತಿವೆ. ಈ ಲಿಸ್ಟ್‌ನಲ್ಲಿ ಕನ್ನಡದ 'ಮಾರ್ಟಿನ್' ಸಿನಿಮಾ ಕೂಡ ಇದೆ. ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ದಸರಾ ವೀಕೆಂಡ್ ಮಿಸ್ ಮಾಡಿಕೊಳ್ಳಲು ಲೈಕಾ ಸಂಸ್ಥೆ ಸಿದ್ಧವಿಲ್ಲ.
ಸೂರ್ಯ ನಟನೆಯ 'ಕಂಗುವ' ಸಿನಿಮಾ ಅಕ್ಟೋಬರ್ 10ಕ್ಕೆ ಪ್ರಪಂಚದ 38 ಭಾಷೆಗಳಲ್ಲಿ ತೆರೆಗೆ ಬರಲಿದೆ. ಅದೇ ದಿನ ರಜನಿಕಾಂತ್ 'ವೆಟ್ಟೆಯಾನ್' ಬರೋದು ಇದೀಗ ಪಕ್ಕಾ ಆಗಿದೆ. ಆದರೆ ಮರುದಿನ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಕೂಡ ಬರಲಿದೆ. ಹಾಗಾಗಿ ಸಹಜವಾಗಿಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ.

'ವೆಟ್ಟೆಯಾನ್' ರಿಲೀಸ್ ಡೇಟ್ ಬದಲಿಸುವುದು ಅನುಮಾನ. ಯಾಕಂದರೆ ಎಲ್ಲಾ ಸಾಧಕ ಭಾದಕಗಳನ್ನು ಯೋಚಿಸಿ ಇದೀಗ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದೆ. ಇನ್ನುಳಿದಂತೆ ಸೂರ್ಯ ನಟನೆಯ 'ಕಂಗುವ' ಅಥವಾ ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾಗಳಲ್ಲಿ ಯಾವುದಾದರೂ ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಈ ರೀತಿ ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗಪ್ಪಳಿಸಿವುದು ಬಾಕ್ಸಾಫೀಸ್ ಗಳಿಕೆ ಮೇಲೆ ಪರಿಣಾಮ ಬೀರುತ್ತದೆ.
ದಸರಾಗೆ 'ವೆಟ್ಟೆಯಾನ್' ಬರಲ್ಲ. ನಾವು ಕೂಡ ರಜನಿಕಾಂತ್ ಅಭಿಮಾನಿ. ಎಲ್ಲಾ ಗೊತ್ತಿದ್ದೂ ಕ್ಲ್ಯಾಶ್‌ಗೆ ಮುಂದಾಗುವುದಿಲ್ಲ. 'ವೆಟ್ಟೆಯಾನ್' ತಡವಾಗಬಹುದು ಎಂದು ಹಿಂದೆ ಕಂಗುವ ನಿರ್ಮಾಪಕರು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಈಗ ಎರಡೂ ಸಿನಿಮಾಗಳು ಒಟ್ಟಿಗೆ ಬರುವುದು ಖಚಿತವಾಗಿದೆ. ಹಿಂದೆ ನಿರ್ಮಾಪಕರು ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ.
ಕನ್ನಡದ 'ಮಾರ್ಟಿನ್' ಕೂಡ ದೊಡ್ಡ ಸಿನಿಮಾ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಲಿದೆ. ವಿದೇಶಿ ಭಾಷೆಗಳು ಸೇರಿ ಒಟ್ಟು 13 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಹಾಲಿವುಡ್ ರೇಂಜ್ ಮೇಕಿಂಗ್‌ನಿಂದ ಸಿನಿಮಾ ಹುಬ್ಬೇರಿಸಿದೆ. ಇತ್ತೀಚಿಗೆ ಬಂದ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ದಸರಾ ದಂಗಲ್‌ನಿಂದ 'ಮಾರ್ಟಿನ್' ಹೊರ ಬರ್ತಾನಾ? ಇಲ್ಲ ಸವಾಲು ಹಾಕಿ ನಿಲ್ತಾನಾ? ಎನ್ನುವ ಚರ್ಚೆ ಶುರುವಾಗಿದೆ.
ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಚಿತ್ರಕ್ಕೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಿದ್ದಾರೆ. ಇದಕ್ಕು ಮುನ್ನ 'ಜೈಭೀಮ್' ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಇನ್ನು ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಲೈಕಾ ಸಂಸ್ಥೆ ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿದೆ.
ಮತ್ತೊಂದು ಕಡೆ ಸೂರ್ಯ ಅಭಿನಯದ 'ಕಂಗುವ' ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಇದೊಂದು ಪೀರಿಯಡ್ ಕಾಸ್ಟ್ಯೂಮ್ ಡ್ರಾಮಾ ಆಗಿದ್ದು ಶಿವ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್ ರಿಲೀಸ್ ಆಗಿ ಸಿನಿಮಾ ಮೇಲಿನ ಕುತೂಹಲ ದುಪ್ಪಟ್ಟಾಗಿಸಿದೆ.
3 ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲಾ ರಾಜ್ಯಗಳಲ್ಲಿ ಚಿತ್ರಗಳಿಗೆ ತಕ್ಕಮಟ್ಟಿಗೆ ಥಿಯೇಟರ್‌ಗಳು ಸಿಗುತ್ತವಾ? ಎನ್ನುವ ಪ್ರಶ್ನೆ ಕೂಡ ಕಾಡುತ್ತದೆ. ಇದೇ ವಿಚಾರವಾಗಿ 'ಮಾರ್ಟಿನ್' ನಿರ್ದೇಶಕ ಎ.ಪಿ ಅರ್ಜುನ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಸಿನಿಮಾ ರಿಲೀಸ್ ಡೇಟ್ ಬದಲಾಗಲ್ಲ. ಅಕ್ಟೋಬರ್ 11ಕ್ಕೆ ಸಿನಿಮಾ ಬಂದೇ ಬರುತ್ತದೆ ಎಂದಿದ್ದಾರೆ.

ಎಲ್ಲಾ ವಿಚಾರಗಳನ್ನು ಪರಿಗಣಿಸಿಯೇ ನಾವು ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದ್ದೇವೆ. ಪ್ರಮೋಷನ್ ಆರಂಭಿಸಿದ್ದೇವೆ. 3 ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ಸಮಸ್ಯೆ ಇಲ್ಲ. ಥಿಯೇಟರ್‌ಗಳು ಸಿಗುತ್ತವೆ. ನಮ್ಮ ಸಿನಿಮಾ ಮೇಲೆ ನಮಗೆ ನಂಬಿಕೆ ಇದೆ ಎಂದಿದ್ದಾರೆ. ಸದ್ಯ ಡಿಐ ಕೆಲಸಗಳು ನಡೆಯುತ್ತಿದೆ. ಶೀಘ್ರದಲ್ಲೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಈ ಹಿಂದೆ ತೆಲುಗಿನ 'ದೇವರ' ಚಿತ್ರವನ್ನು ಅಕ್ಟೋಬರ್ 10ಕ್ಕೆ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿತ್ತು. ಬಳಿಕ ಸೆಪ್ಟೆಂಬರ್ 27ಕ್ಕೆ ಡೇಟ್ ಪ್ರೀಪೋನ್ ಆಗಿತ್ತು. ಇನ್ನು ಬಾಲಿವುಡ್‌ನಲ್ಲಿ ಆಲಿಯಾ ಭಟ್ ನಟನೆಯ 'ಜಿಗ್ರಾ' ಸಿನಿಮಾ ಕೂಡ ಅಕ್ಟೋಬರ್ 11ಕ್ಕೆ ತೆರೆಗೆ ಬರಲಿದೆ. ಹಬ್ಬದ ಸಂಭ್ರಮದಲ್ಲಿ ಸಿನಿಮಾಗಳು ಚೆನ್ನಾಗಿದ್ದರೆ ಎಲ್ಲವನ್ನೂ ಪ್ರೇಕ್ಷಕರು ನೋಡುತ್ತಾರೆ ಎನ್ನುವ ಲೆಕ್ಕಾಚಾರವೂ ಕೆಲವರಲ್ಲಿದೆ.


Click it and Unblock the Notifications











