ತಿಂಗಳಿಗೊಂದು ಪ್ಯಾನ್ ಇಂಡಿಯಾ ಪಿಕ್ಚರ್.. 6 ತಿಂಗಳು 10 ಸಿನಿಮಾ.. ಮಸ್ತ್ ಎಂಟರ್‌ಟೈನ್‌ಮೆಂಟ್
ಕಳೆದ 5 ತಿಂಗಳಲ್ಲಿ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿಲ್ಲ. ಇದೇ ಕಾರಣಕ್ಕೆ ಚಿತ್ರಮಂದಿರಗಳ ಬಾಗಿಲು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ. ಐಪಿಎಲ್, ಲೋಕಸಭೆ ಚುನಾವಣೆ ಒಟ್ಟೊಟ್ಟಿಗೆ ಬಂದು ಸ್ಟಾರ್‌ಗಳು ತೆರೆಮೇಲೆ ಅಬ್ಬರಿಸೋಕೆ ಹೆದರುವಂತಾಯಿತು.
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಶುರುವಾಗಿದೆ. ದರ್ಶನ್ ಬಿಟ್ಟು ಸ್ಟಾರ್ ನಟರೆಲ್ಲಾ ಐದೈದು ಭಾಷೆಗಳಲ್ಲಿ ಒಟ್ಟೊಟ್ಟಿಗೆ ಪ್ರೇಕ್ಷಕರನ್ನು ರಂಜಿಸುವ ಹಠಕ್ಕೆ ಬಿದ್ದಿದ್ದಾರೆ. ಕಳೆದ ವರ್ಷ ಬರಬೇಕಿದ್ದ ಸಿನಿಮಾಗಳು ಕೂಡ ಇನ್ನು ತಡವಾಗುತ್ತಿದೆ. ಸದ್ಯ ಐಪಿಎಲ್ ಮುಗಿದಿದೆ, ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ.

ಜೂನ್ ಎರಡನೇ ವಾರದಿಂದ ಕನ್ನಡ ಚಿತ್ರರಂಗದ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಜೂನ್ 15ಕ್ಕೆ ಧನಂಜಯ್ ನಟನೆಯ 'ಕೋಟಿ' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಸಿನಿಮಾ ಟೀಸರ್, ಸಾಂಗ್ಸ್‌ನಿಂದ ನಿರೀಕ್ಷೆ ಮೂಡಿಸಿದೆ. ಜುಲೈನಲ್ಲಿ ಕೂಡ ಒಂದಷ್ಟು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುವ ಸಾಧ್ಯತೆಯಿದೆ. ಆದರೆ ಅಸಲಿ ಆಟ ಆಗಸ್ಟ್‌ನಿಂದ ಶುರುವಾಗಲಿದೆ.
ಜುಲೈನಲ್ಲಿ 'ಯುಐ'?
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಜುಲೈನಲ್ಲೇ ತೆರೆಗೆ ಬರಬಹುದು ಎಂದು ಕೆಲವರು ನಿರೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ಉಪೇಂದ್ರ ಚಿತ್ರದ ರೆಕಾರ್ಡಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದರು. ಈಗಾಗಲೇ ಚಿತ್ರದ ಸಾಂಗ್ಸ್, ಟೀಸರ್ ಹಿಟ್ ಆಗಿದೆ. ಜುಲೈ ತಪ್ಪಿದರೆ ಸೆಪ್ಟೆಂಬರ್‌ನಲ್ಲಿ ಉಪ್ಪಿ 'ಕಲ್ಕಿ' ಅವತಾರ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಆಗಸ್ಟ್‌ನಲ್ಲಿ ರಣಗಲ್
ಶಿವರಾಜ್‌ಕುಮಾರ್ ಹಾಗೂ ನರ್ತನ್ ಜೋಡಿಯ 'ಬೈರತಿ ರಣಗಲ್' ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಅಧಿಕೃತವಾಗಿ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. 'ಮಫ್ತಿ' ಚಿತ್ರದ ಪ್ರೀಕ್ವೆಲ್ ಇದಾಗಿದ್ದು ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. 'ಪುಪ್ಪ-2' ಕೂಡ ಆಗಸ್ಟ್ 15ಕ್ಕೆ ತೆರೆಗೆ ಬರುತ್ತಿದ್ದು ರಣಗಲ್ ಸವಾಲು ಹಾಕುತ್ತಿದ್ದಾನೆ.
ಸೆಪ್ಟೆಂಬರ್‌ನಲ್ಲಿ ಮ್ಯಾಕ್ಸ್
ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಸುದೀಪ್ 'ಮ್ಯಾಕ್ಸ್' ಆಗಿ ಪ್ರೇಕ್ಷಕರನ್ನು ರಂಜಿಸುವ ಸಾಧ್ಯತೆಯಿದೆ. 'ಯುಐ' ಜುಲೈನಲ್ಲೇ ಬಂದರೆ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಮ್ಯಾಕ್ಸ್' ಬರಬಹುದು. ಇವೆರಡರಲ್ಲಿ ಒಂದು ಸಿನಿಮಾ ಅಂತೂ ಸೆಪ್ಟೆಂಬರ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುವುದು ಪಕ್ಕಾ ಎನ್ನಬಹುದು.

ಅಕ್ಟೋಬರ್‌ನಲ್ಲಿ 'ಮಾರ್ಟಿನ್'
ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. ಧ್ರುವ ಸರ್ಜಾ ನಟನೆಯ ಈ ಆಕ್ಷನ್ ಎಂಟರ್‌ಟೈನರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ದಸರಾ ಸಂಭ್ರಮದಲ್ಲಿ ತೆಲುಗಿನ 'ದೇವರ' ಸಿನಿಮಾ ಅಕ್ಟೋಬರ್ 10ಕ್ಕೆ ರಿಲೀಸ್ ಆಗುತ್ತಿದೆ. ಜ್ಯೂ. ಎನ್‌ಟಿಆರ್ ನಟನೆಯ ಆ ಸಿನಿಮಾ ಕೂಡ 5 ಭಾಷೆಗಳಲ್ಲಿ ಬರ್ತಿದೆ. ಮರುದಿನವೇ 'ಮಾರ್ಟಿನ್' ದರ್ಬಾರ್ ನಡೆಯಲಿದೆ.
ನವೆಂಬರ್‌ನಲ್ಲಿ ಭೀಮ, ಬಘೀರ
ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಕಳೆದ ವರ್ಷ ಬರಬೇಕಿದ್ದ ಸಿನಿಮಾ ಬಹಳ ತಡವಾಗುತ್ತಿದೆ. ಇನ್ನು ಶ್ರೀ ಮುರಳಿ ನಟನೆಯ 'ಬಘೀರ' ಸಿನಿಮಾ ಕೂಡ ಹೈಪ್ ಕ್ರಿಯೇಟ್ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು ಈ ಎರಡು ಸಿನಿಮಾಗಳು ನವೆಂಬರ್‌ನಲ್ಲಿ ತೆರೆಗೆ ಬಂದರೂ ಅಚ್ಚರಿಪಡಬೇಕಿಲ್ಲ.
ಡಿಸೆಂಬರ್ ತ್ರಿಬಲ್ ಧಮಾಕ
ದರ್ಶನ್ ನಟನೆಯ 'ಡೆವಿಲ್' ಚಿತ್ರವನ್ನು ಕ್ರಿಸ್‌ಮಸ್ ವಿಶೇಷವಾಗಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಜೋಡಿಯ 'ಕೆಡಿ' ಚಿತ್ರವನ್ನು ಸಹ ಡಿಸೆಂಬರ್‌ನಲ್ಲೇ ತೆರೆಗೆ ತೆರಲು ತಂಡ ಮುಂದಾಗಿದೆ. ಇನ್ನು ಧನಂಜಯ್- ಶಿವಣ್ಣ ನಟನೆಯ 'ಉತ್ತರಕಾಂಡ' ಸಿನಿಮಾ ಕೂಡ ವರ್ಷದ ಕೊನೆಗೆ ತೆರೆಗೆ ಬರುವ ಲೆಕ್ಕಾಚಾರದಲ್ಲಿದೆ. ಒಟ್ಟಾರೆ ಇನ್ನು 6 ತಿಂಗಳು ಕನ್ನಡ ಸಿನಿರಸಿಕರಿಗೆ ಹಬ್ಬವೇ ಸರಿ.


Click it and Unblock the Notifications











