ಕಮಿಷನ್ ಡೈರೆಕ್ಟರ್ ಎಂದಿದ್ದಕ್ಕೆ ಎ.ಪಿ.ಅರ್ಜುನ್ ಕೆಂಡಾಮಂಡಲ, ಹೇಳಿದ್ದೇನು ಮಾರ್ಟಿನ್ ಸೂತ್ರಧಾರ...?
ಸರಿಯಾಗಿ ಹದಿನೈದು ವರ್ಷದ ಹಿಂದೆ... ಅಂದರೆ 2009ರಲ್ಲಿ ಅಂಬಾರಿ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ನೆತ್ತಿಗೆ ಮುತ್ತಿಕ್ಕುವಂತಾ ಮುದ್ದಾದ ಹಾಡುಗಳು, ಕಣ್ಣಿಗೆ ತಂಪೆರೆಯುವಂಥಾ ದೃಶ್ಯವೈಭವ, ಆ ವರೆಗೆ ಯಾರೂ ಮುಟ್ಟಿರದ ಕಥಾವಸ್ತು... ಹೀಗೆ ಹತ್ತು ಹಲವು ಕಾರಣಗಳಿಗಾಗಿ 'ಅಂಬಾರಿ' ಪ್ರೇಕ್ಷಕರನ್ನು ಸೆಳೆದಿತ್ತು.
ಮೊದಲ ಸಿನಿಮಾಗೇ ಅಷ್ಟು ಚೆಂದದ ಪ್ರಾಡಕ್ಟನ್ನು ಸೃಷ್ಟಿಸಿದ್ದ ನಿರ್ದೇಶಕ ಎ.ಪಿ. ಅರ್ಜುನ್ ನಂತರ ಅದ್ಧೂರಿ, ರಾಟೆ, ಐರಾವತ, ಕಿಸ್ ಸಿನಿಮಾಗಳನ್ನು ನಿರ್ದೇಶಿಸಿದರು. ಸದ್ಯ ಅರ್ಜುನ್ ನಿರ್ದೇಶನ ಆರನೇ ಸಿನಿಮಾ ''ಮಾರ್ಟಿನ್'' ತೆರೆಗೆ ಬರಲು ತಯಾರಾಗಿ ನಿಂತಿದೆ. ಇದೇ ಅಕ್ಟೋಬರ್ ಹನ್ನೊಂದನೇ ತಾರೀಖು ಜಗತ್ತಿನಾದ್ಯಂತ ''ಮಾರ್ಟಿನ್'' ರಿಲೀಸಾಗುತ್ತಿದೆ. ಆದರೆ ಇದೇ ಸಮಯದಲ್ಲಿ ವಿವಾದವೊಂದು ಎ.ಪಿ.ಅರ್ಜುನ್ ಅವರನ್ನು ಸುತ್ತುವರೆದಿದೆ. ಹತ್ತಾರು ಪ್ರಶ್ನೆಗಳನ್ನೂ ಹುಟ್ಟುಹಾಕುವುದರ ಜೊತೆ ಗಾಂಧಿನಗರಕ್ಕೆ ಗಾಂಧಿನಗರವೇ ಎ.ಪಿ.ಅರ್ಜುನ್ ಅವರನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆಯೂ ಈ ವಿವಾದ ಮಾಡಿದೆ.

ಹೌದು, ಅಸಲಿಗೆ ಕೆ.ಜಿ.ಎಫ್ ನಂತರ, ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನೂ ಜಗದಗಲಕ್ಕೆ ಹಾರಿಸುತ್ತೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ವಾತಾವರಣ ಅದಕ್ಕೆ ಪೂರಕವಾಗಿತ್ತು ಕೂಡ. ವರ್ಷದ ಹಿಂದೆ ಬಿಡುಗಡೆ ಮಾಡಲಾಗಿದ್ದ ಟೀಸರ್ ಎಲ್ಲರ ಗಮನ ಸೆಳೆದಿತ್ತು. ಉತ್ತರ ಭಾರತದಲ್ಲಿ ಧ್ರುವ ಸರ್ಜಾಗೆ ಇಂಡಿಯನ್ ಹಲ್ಕ್ ಎಂಬ ಬಿರುದು ಕೂಡ ಸಿಕ್ಕಿತ್ತು. ಆದರೆ ಈಗ ನೋಡಿದರೆ ಮಾರ್ಟಿನ್ ಚಿತ್ರತಂಡದ ಒಳಗೇ ನಡೆದ ಅವ್ಯವಹಾರ ನಡೆದಿದೆ. ಅವ್ಯವಹಾರದಲ್ಲಿ ಖುದ್ದು ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್ ಅವರ ಹೆಸರು ಕೂಡ ಕೇಳಿ ಬಂದಿದೆ.
ಹೌದು, ನಿಮಗೆ ಗೊತ್ತಿರಲಿ.. ಅಸಲಿಗೆ ಈ ಅಗಸ್ಟ್ ಗೆ ಮಾರ್ಟಿನ್ ಸಿನಿಮಾ ಶುರುವಾಗಿ ಮೂರು ವರ್ಷವಾಗಲಿದೆ. ಆದರೆ.. ಮೂರು ವರ್ಷವಾದರೂ ಸಿನಿಮಾ ನಾನಾ ಕಾರಣಕ್ಕೆ ತಡವಾಗ್ತಾನೇ ಬಂದಿದೆ. ಆ ಕಾರಣಗಳಲ್ಲಿ ಚಿತ್ರದ ವಿಎಫ್‌ಎಕ್ಸ್ ಕೆಲಸ ಕೂಡ ಒಂದು. ಇದೇ ಕೆಲಸ ಸಲೀಸಾಗಿ ಸುಸೂತ್ರವಾಗಿ ನಡೆಯಲಿ, ಬೇಗ ಈ ಕೆಲಸ ಮುಗಿಯಲಿ ಎಂದು ನಿರ್ಮಾಪಕ ಉದಯ್ ಮೆಹ್ತಾ ನಿರ್ದೇಶಕರ ಸೂಚನೆ ಮೇರೆಗೆ ಈ ಚಿತ್ರದ ವಿಎಫ್ಎಕ್ಸ್ನ ಜವಾಬ್ಧಾರಿಗಳನ್ನೆಲ್ಲ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಅನ್ನೋ ಸಂಸ್ಥೆಗೆ ವಹಿಸಿದ್ದರು.

ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ನ ಸತ್ಯ ರೆಡ್ಡಿ ಮತ್ತು ಸುನಿಲ್ ಕೇಳಿದಾಗೆಲ್ಲ ನಿರ್ಮಾಪಕ ಉದಯ್ ಮೆಹ್ತಾ ದುಡ್ಡು ಕೊಡ್ತಾನೇ ಬಂದರು. ಎರಡೂವರೆ ಕೋಟಿ ಹಣವನ್ನು ಈ ಸತ್ಯ ರೆಡ್ಡಿ ಮತ್ತು ಸುನಿಲ್ ಎಂಬ ಕಿರಾತಕರ ಮೇಲೆ ಸುರಿದರು. ಆದರೆ.. ಹಣ ನೀಡಿದ್ದಷ್ಟೇ ಬಂತು ಆದರೆ ಕೆಲಸ ಮಾತ್ರ ಆಗಲಿಲ್ಲ. ಹೀಗಾಗಿಯೇ ನಡೆದ ಹಣದ ವ್ಯವಹಾರದ ದಾಖಲೆ ಸಮೇತ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಮೆಟ್ಟಿಲೇರಿದ ನಿರ್ಮಾಪಕ ಉದಯ್ ಮೆಹ್ತಾ, ವಂಚಕರಾದ ಸತ್ಯ ರೆಡ್ಡಿ ಮತ್ತು ಸುನಿಲ್ ವಿರುದ್ದ ದೂರು ಸಲ್ಲಿಸಿದ್ದಾರೆ. ಉದಯ್ ಮೆಹ್ತಾ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ಸತ್ಯ ರೆಡ್ಡಿಯನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದರು
ಸತ್ಯ ರೆಡ್ಡಿ ಪರಪ್ಪನ ಅಗ್ರಹಾರದ ಪಾಲಾದ ನಂತರ ಈ ಅವ್ಯವಹಾರದಲ್ಲಿ ಎ.ಪಿ.ಅರ್ಜುನ್ ಹೆಸರು ಕೂಡ ಕೇಳಿ ಬಂತು. ಬರೀ ಸಿಜಿ ವಿಎಫ್ ಎಕ್ಸ್ ಒಂದರಲ್ಲೇ ಎಪ್ಪತ್ತಮೂರು ಲಕ್ಷ ಅವ್ಯವಹಾರ ನಡೆದಿದೆ ಎನ್ನುವ ಸುದ್ದಿ ಕೂಡ ಬ್ಲ್ಯಾಸ್ಟ್ ಆಯ್ತು. ಒಂದು ಕೋಟಿ ಎಂಭತ್ತು ಲಕ್ಷ ರುಪಾಯಿ ಸಂಭಾವನೆ ಸಂದಾಯ ಮಾಡಲಾಗಿದೆಯಂತೆ. ಸಿನಿಮಾದ ಗಳಿಕೆಯಿಂದ ಬಂದ ಹಣದಲ್ಲೂ ಹದಿನೆಂಟು ಪರ್ಸೆಂಟ್ ಬರೆದುಕೊಟ್ಟರು ಎ.ಪಿ.ಅರ್ಜುನ್ ಅವರ ಹಣದ ದಾಹ ಇಡೀ ಚಿತ್ರವನ್ನೇ ಬಲಿ ಪಡೆಯಿತು ಎಂಬ ಮಾತು ಕೂಡ ಕೇಳಿ ಬಂತು. ಇನ್ನೇನು 420 ಕೇಸ್‌ನಲ್ಲಿ ಎ.ಪಿ.ಅರ್ಜುನ್ ಅವರನ್ನೂ ಪೊಲೀಸರು ಬಂಧಿಸುತ್ತಾರೆ ಎನ್ನುವ ಸುದ್ದಿಯೂ ಕೂಡ ವಿಪರೀತ ಸೇಲ್ ಆಯಿತು. ಇದೀಗ ಈ ಎಲ್ಲ ಮಾತುಗಳಿಗೆ ಆರೋಪಗಳಿಗೆ ಖುದ್ದು ಎ.ಪಿ.ಅರ್ಜುನ್ ಉತ್ತರವನ್ನೂ ಕೊಟ್ಟಿದ್ದಾರೆ.

ಹೌದು, ತಮ್ಮ ಮೇಲೀನ ಆರೋಪಗಳಿಂದ ವಿಚಲಿತಗೊಂಡಿರುವ ಎ.ಪಿ.ಅರ್ಜುನ್, ತಮ್ಮ ಲಾಯರ್ ಶಂಕ್ರಪ್ಪ ಸಮೇತ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಲ್ಲಿ ಸಿಕ್ಕಿ ಹಾಕಿಕೊಂಡ ಸತ್ಯಾ ರೆಡ್ಡಿ ನನ್ನ ಮೇಲೆ ಆರೋಪ ಮಾಡಿದ್ದಾನೆ. ಅದಕ್ಕೆ ಪೊಲೀಸರು ನಮ್ಮನ್ನೆಲ್ಲ ವಿಚಾರಣೆಗೆ ಕರೆದಿದ್ದರು ಎಂದಿದ್ದಾರೆ. ನನ್ನ ಮೇಲೆ ಯಾಕೆ ಆರೋಪ ಮಾಡಿದ್ದಾನೆ ಅಂತ ಗೊತ್ತಿಲ್ಲ. ಆದರೆ, ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದು ಗೊತ್ತಾಗಿದೆ. ನನಗೆ ಅಷ್ಟೊಂದು ದುಡ್ಡು ಕೊಟ್ಟಿದ್ದರೆ, ಏನಾದರೂ ಒಂದು ಪ್ರೂಫ್ ಇರಬೇಕಲ್ವಾ? ಎಂಬ ಮರು ಪ್ರಶ್ನೆಯನ್ನೂ ಹಾಕಿದ್ದಾರೆ.
ಇನ್ನೂ ನನಗೂ ಮಾಧ್ಯಮದ ಮೂಲಕ ವಿಷಯ ಗೊತ್ತಾಯ್ತು. 50 ಲಕ್ಷ ರೂ., 75 ಲಕ್ಷ ರೂ. ಕಮಿಷನ್ ತಗೊಂಡಿದ್ದೀನಿ ಅಂತ ಆರೋಪಿಸಿ ನನ್ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಈ ಪ್ರಕರಣದಲ್ಲಿ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಇಬ್ಬರೂ ಆರೋಪಿಗಳು. ಆ ಎಫ್‌ಐಆರ್‌ನಲ್ಲೂ ನನ್ನ ಹೆಸರು ಇರಲಿಲ್ಲ.. ನನ್ನ ಮೇಲಿನ ಆರೋಪ ಸುಳ್ಳು ಅಂತ ಒತ್ತಿ ಹೇಳಿದರಲ್ಲದೇ ಅತ್ಯರೆಡ್ಡಿ ರವಿಶಂಕರ್‌ಗೂ 10 ಲಕ್ಷ ರೂ. ಮೋಸ ಮಾಡಿದ್ದಾರೆ, ಕಾಟೇರ ಸಿನಿಮಾಗೂ ಮೋಸ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿರುವ ಎ,ಪಿ.ಅರ್ಜುನ್ ದೊಡ್ಡ ಸಿನಿಮಾ ಅಂದ್ಮೇಲೆ ಜಗಳ, ಮನಸ್ತಾಪ ಇದ್ದೇ ಇರುತ್ತದೆ. ನನ್ನ ಮೇಲೆ ಮಾತ್ರ ಸತ್ಯಾ ರೆಡ್ಡಿ ಆರೋಪ ಮಾಡಿಲ್ಲ. ನಮ್ಮ ಕ್ಯಾಮರಾಮ್ಯಾನ್, ಎಡಿಟರ್ ಹಾಗೂ ಸಹಾಯಕ ನಿರ್ದೇಶಕನ ಮೇಲೂ ಆರೋಪ ಮಾಡಿದ್ದಾನೆ. ಪೊಲೀಸರ ಮುಂದೆ ನಾನು ಏನೇನು ಹೇಳಬೇಕಿತ್ತೋ, ಎಲ್ಲಾ ಹೇಳಿದ್ದೇನೆ. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದು ಕೂಡ ಹೇಳಿದ್ದಾರೆ.

ಇನ್ನೂ ಎ.ಪಿ ಅರ್ಜುನ್ ಜೊತೆ ಬಂದಿದ್ದ ಲಾಯರ್ ಶಂಕ್ರಪ್ಪ ಕೂಡ ನಿರ್ದೇಶಕರು ದುಡ್ಡು ಪಡೆದಿಲ್ಲ. ಪೊಲೀಸರು ಎಪಿ ಅರ್ಜುನ್ ಅವರ ಬ್ಯಾಂಕ್ ಡೀಟೇಲ್ಸ್ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಸಾಕ್ಷಿ ಇಲ್ಲದ ಕಾರಣ ಸುಳ್ಳು ಆರೋಪ ಎಂಬುದು ಗೊತ್ತಾಗಿದೆ ಎಂದು ಹೇಳಿದ್ದಾರೆ. ಸಂಭಾವನೆ ವಿಷಯದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ಇದೆ. ಅದನ್ನ ಆದಷ್ಟು ಬೇಗ ಬಗೆಹರಿಸಿಕೊಳ್ಳುವ ಸಲುವಾಗಿ ಮೇಲ್ ಮುಖಾಂತರ ನೋಟೀಸ್ ಕಳುಹಿಸಲಾಗಿದೆ. ಅದನ್ನ ಬಗೆಹರಿಸಿಕೊಳ್ಳುತ್ತೇವೆ'' ಎಂದು ಸುದ್ದಿಗೋಷ್ಠಿಯಲ್ಲಿ ಲಾಯರ್ ಶಂಕ್ರಪ್ಪ ಹೇಳಿದ್ದಾರೆ.
ಸದ್ಯಕ್ಕೆ ಈಗ ನಡೆಯುತ್ತಿರುವ ವಿದ್ಯಾಮಾನಗಳನ್ನೆಲ್ಲಾ ನೋಡಿದರೆ ನಿರ್ಮಾಪಕ ಉದಯ್ ಮೆಹ್ತಾ ಮತ್ತು ನಿರ್ದೇಶಕ ಎ.ಪಿ.ಅರ್ಜುನ್ ನಡುವೆ ಆದ ಹಳೇ ಒಡಂಬಡಿಕೆಗಳೆಲ್ಲಾ ಮುರಿದುಬೀಳುವ ಸಾಧ್ಯತೆ ಇದೆ. ಬರೀ ಸಿಜಿ ವಿಎಫ್ ಎಕ್ಸ್ ಒಂದರಲ್ಲೇ ಎಪ್ಪತ್ತಮೂರು ಲಕ್ಷ ಅವ್ಯವಹಾರ ನಡೆದಿದೆ ಅಂದರೆ, ನೂರು ಕೋಟಿ ಬಜೆಟ್ಟಿನ ಮಾರ್ಟಿನ್ ಹೆಸರಲ್ಲಿ ಇನ್ನೂ ಎಲ್ಲೆಲ್ಲಿ, ಯಾರೆಲ್ಲಾ ಬಗೆದು ಮುಕ್ಕಿದ್ದಾರೋ ಏನೋ ಎಂಬ ಪ್ರಶ್ನೆ ಕೂಡ ಗಾಂಧಿನಗರದಲ್ಲಿ ಅನೇಕರಿಗೆ ಕಾಡುತ್ತಿದೆ. ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಬೇಕಿದ್ದ ''ಮಾರ್ಟಿನ್'' ನಿಂದ ಸದ್ಯಕ್ಕೆ ಕನ್ನಡ ಚಿತ್ರರಂಗದ ಮರ್ಯಾದೆ ದೇಶವ್ಯಾಪಿ ಮೂರು ಕಾಸಿಗೆ ಹರಾಜು ಆಗ್ತಿರುವುದು ದುರಂತ.


Click it and Unblock the Notifications











