Martin vs Jigra: ಆಲಿಯಾ ಭಟ್ 'ಜಿಗ್ರಾ' ಹಿಂದಿಕ್ಕಿದ 'ಮಾರ್ಟಿನ್'; 2 ದಿನಕ್ಕೆ ಗಳಿಸಿದ್ದೆಷ್ಟು?
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಧ್ರುವ ಸರ್ಜಾ ಆಕ್ಷನ್ ಧಮಾಕ ನೋಡಿ ಮಾಸ್ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮುಖ್ಯವಾಗಿ ಚಿತ್ರದ ವಿಷ್ಯುವಲ್ಸ್, ಧ್ರುವ ಪರ್ಫಾರ್ಮನ್ಸ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. 2 ದಿನಕ್ಕೆ ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ.
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರಕ್ಕೆ ತಮಿಳಿನ 'ವೆಟ್ಟೆಯಾನ್' ಹಾಗೂ ಹಿಂದಿಯ 'ಜಿಗ್ರಾ' ಚಿತ್ರಗಳು ಪೈಪೋಟಿ ಕೊಡುತ್ತಿವೆ. ಕರ್ನಾಟಕಲ್ಲಿ ಮಾತ್ರ ಮಾರ್ಟಿನ್ ಆರ್ಭಟ ಜೋರಾಗಿದೆ. ಮೊದಲ ದಿನದ ಮಾರ್ನಿಂಗ್ ಶೋಗಳು ಕೆಲವೆಡೆ ಕ್ಯಾನ್ಸಲ್ ಆಗಿ ಪ್ರೇಕ್ಷಕರು ನಿರಾಸೆಗೊಂಡಿದ್ದರು. ಬಳಿಕ ಬುಕ್‌ಮೈ ಶೋನಲ್ಲಿ ಭರ್ಜರಿ ಬುಕ್ಕಿಂಗ್ ಆರಂಭವಾಯಿತು. ಇನ್ನು ಬಿ, ಸಿ ಸೆಂಟರ್‌ಗಳಲ್ಲಿ 'ಮಾರ್ಟಿನ್' ಗಳಿಕೆ ಚೆನ್ನಾಗಿದೆ.

ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 'ಮಾರ್ಟಿನ್' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಮುಖ್ಯವಾಗಿ ಮಂಡ್ಯ, ಮೈಸೂರು, ಶಿವಮೊಗ್ಗ, ಧಾರಾವಾಡದಲ್ಲಿ ಚಿತ್ರದ ಕಲೆಕ್ಷನ್ ಜೋರಾಗಿದೆ. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. 'ಮಾರ್ಟಿನ್' ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ.
ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಗುರುವಾರವೇ ತೆರೆಗೆ ಬಂದಿತ್ತು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಶುಕ್ರವಾರ 'ಮಾರ್ಟಿನ್' ಜೊತೆಗೆ 'ಜಿಗ್ರಾ' ಸಿನಿಮಾ ತೆರೆಗಪ್ಪಳಿಸಿತ್ತು. ಮೊದಲ ಎರಡು ದಿನಗಳ ಕಲೆಕ್ಷನ್ ವಿಚಾರದಲ್ಲಿ ಆಲಿಯಾ ಭಟ್ ಚಿತ್ರವನ್ನು ಕನ್ನಡದ 'ಮಾರ್ಟಿನ್' ಸಿನಿಮಾ ಹಿಂದಿಕ್ಕಿದೆ.

ಈಗಾಗಲೇ 'ಮಾರ್ಟಿನ್' ಸಿನಿಮಾ 2 ದಿನ ಪೂರೈಸಿ 3ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು Sacnilk ವೆಬ್‌ಸೈಟ್ ವರದಿ ಪ್ರಕಾರ 'ಮಾರ್ಟಿನ್' ಸಿನಿಮಾ ಮೊದಲ ದಿನ 6.70 ಕೋಟಿ ರೂ. ಗಳಿಕೆ ಕಂಡಿತ್ತು. ಇನ್ನು ಎರಡನೇ ದಿನದ ಕಲೆಕ್ಷನ್ ಅಂದಾಜು 5.50 ಕೋಟಿ ರೂ. ದಾಟಿದೆ. ಒಟ್ಟಾರೆ ಮೊದಲ 2 ದಿನಕ್ಕೆ 12.2 ಕೋಟಿ ರೂ. ಕೊಳ್ಳೆ ಹೊಡೆದಿದೆ.
ಆಲಿಯಾ ಭಟ್ ಅಭಿನಯದ 'ಜಿಗ್ರಾ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ 2 ದಿನಕ್ಕೆ 11.1 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ Sacnilk ವೆಬ್‌ಸೈಟ್ ಹೇಳಿದೆ. 'ಮಾರ್ಟಿನ್' ಸಿನಿಮಾ 2 ದಿನಕ್ಕೆ ಇನ್ನು ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಸರಿಯಾದ ಮಾಹಿತಿಯನ್ನು ಚಿತ್ರತಂಡವೇ ನೀಡಬೇಕಿದೆ.
ಆಕ್ಷನ್ ಥ್ರಿಲ್ಲರ್ 'ಜಿಗ್ರಾ' ಚಿತ್ರಕ್ಕೆ ವಸನ್ ಬಾಲ ಆಕ್ಷನ್ ಕಟ್ ಹೇಳಿದ್ದಾರೆ. ವೇದಾಂಗ್ ರೈನಾ, ಮನೋಜ್ ಪಾವಾ, ರಾಹುಲ್ ರವಿಂದ್ರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ. ಮದುವೆಯಾಗಿ ಮಗುವಿನ ತಾಯಿಯಾದ ಬಳಿಕ ಆಲಿಯಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಜಿಗ್ರಾ' ಚಿತ್ರದಲ್ಲಿ ಪವರ್‌ಫುಲ್ ಪಾತ್ರವೇ ಸಿಕ್ಕಿದೆ.
'ವೆಟ್ಟೆಯಾನ್' ಸಿನಿಮಾ ಮೊದಲ 3 ದಿನಕ್ಕೆ 81 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ದಸರಾ ಸಂಭ್ರಮದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಹಾಗಾಗಿ ಸಿನಿಮಾಗಳ ಗಳಿಕೆ ಚೆನ್ನಾಗಿದೆ. 'ಮಾರ್ಟಿನ್' ಚಿತ್ರವನ್ನು ಅಂದಾಜು 75 ಕೋಟಿ ರೂ. ಬಜೆಟ್‌ನಲ್ಲಿ ತೆರೆಗೆ ತರಲಾಗಿದೆ.
ದ್ವಿಪಾತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತೆರೆಮೇಲೆ ಅಬ್ಬರಿಸಿದ್ದಾರೆ. ಅವರ ಆಕ್ಷನ್ ಬಗ್ಗೆ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲೇ ಒಳ್ಳೆ ಬ್ಯುಸಿನೆಸ್ ಆಗಿದ್ದಾಗಿ ಚಿತ್ರತಂಡ ಹೇಳಿತ್ತು. ಮುಂದಿನ ದಿನಗಳಲ್ಲಿ ಸಿನಿಮಾ ಗಳಿಕೆ ಹೇಗಿರುತ್ತೆ ಕಾದು ನೋಡಬೇಕು.
ವಿಶೇಷ ಸೂಚನೆ: ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಬೇರೆ ಮೂಲಗಳಿಂದ ಮಾಹಿತಿ ಕಲೆ ಹಾಕಿ ಅಂಕಿ ಅಂಶಗಳನ್ನು ನೀಡಲಾಗಿದ್ದು, ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಬೇಕಿದೆ.


Click it and Unblock the Notifications











