For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ದೇವರುಗಳಿಗೆ ದೊಡ್ಮನೆ ಕುಟುಂಬದ 'ನೈವೇದ್ಯ'

  |

  ಅಭಿಮಾನಿಗಳನ್ನು ದೇವರೆಂದು ಕರೆದ ದೊಡ್ಮನೆ ಕುಟುಂಬ ತಮ್ಮ ದೇವರುಗಳಿಗೆ ಇಂದು ನೈವೇದ್ಯ ಸೇವೆ ಮಾಡುತ್ತಿದ್ದಾರೆ. ಆದರೆ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥವಾಗಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡುವ ಸಂದರ್ಭ ಬಂದಿರುವುದು ಸ್ವತಃ ದೊಡ್ಮನೆ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನೋವಿನ ಸಂಗತಿ.

  ಪುನೀತ್ ಸ್ಮರಣಾರ್ಥ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೃಹತ್ ಅನ್ನಸಂತರ್ಪಣೆಯನ್ನು ದೊಡ್ಮನೆ ಕುಟುಂಬ ಆಯೋಜಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪುನೀತ್ ಅಭಿಮಾನಿಗಳು ಶಿಸ್ತಿನಿಂದ ಊಟ ಸವಿದು ಪುನೀತ್‌ ಅನ್ನು ನೆನದು ತೆರಳುತ್ತಿದ್ದಾರೆ.

  ಬೆಳಿಗ್ಗೆ 11 ಗಂಟೆಯಿಂದಲೇ ಅನ್ನ ಸಂತರ್ಪಣೆ ಆರಂಭವಾಗಿದೆ. ನಟ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಅವರುಗಳು ಅರಮನೆ ಮೈದಾನಕ್ಕೆ ಬಂದು ಪುನೀತ್ ಭಾವಚಿತ್ರಕ್ಕೆ ನಮಿಸಿ ಸ್ವತಃ ಅಭಿಮಾನಿಗಳಿಗೆ ಊಟ ಬಡಿಸಿದರು. ಪುನೀತ್‌ರ ಜಯಘೋಷಗಳ ನಡುವೆ ಕಣ್ಣೀರಿಡುತ್ತಲೇ ಅಶ್ವಿನಿ ಅವರು ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದರು.

  ಕೆಲವು ಅಭಿಮಾನಿಗಳಿಗೆ ಊಟ ಬಡಿಸಿದ ಬಳಿಕ ಶಿವಣ್ಣ, ಪಂಕ್ತಿ ಸಾಲುಗಳ ಬಳಿ ತೆರಳಿ ಊಟ ಮಾಡುತ್ತಿದ್ದವರಿಗೆ ಕೈ ಮುಗಿದು ಸಾವಧಾನದಿಂದ ಊಟ ಮಾಡಿರೆಂದು ಮನವಿ ಮಾಡಿದರು. ಶಿವಣ್ಣ ಬರುತ್ತಲೆ ಊಟಕ್ಕೆ ಕೂತವರು ಎದ್ದು ಕೈಮುಗಿದು ಗೌರವ ಪ್ರದರ್ಶಿಸಿದರು.

  ಶಿವಣ್ಣ, ಅಶ್ವಿನಿ ಮಾತ್ರವೇ ಅಲ್ಲದೆ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಇತರ ಕುಟುಂಬಸ್ಥರು ಸಹ ಭೋಜನದ ಪಂಕ್ತಿ ಬಳಿಯಲ್ಲಿಯೇ ನಿಂತು ಎಲ್ಲರನ್ನೂ ಕುಟುಂಬದವರಂತೆ ವಿಚಾರಿಸುತ್ತಿದ್ದುದು, ದೊಡ್ಮನೆಗೆ ತಮ್ಮ ಅಭಿಮಾನಿಗಳ ಮೇಲಿನ ಕಾಳಜಿಗೆ ಸಾಕ್ಷಿಯಾಗಿತ್ತು. ರಾಘಣ್ಣನವರಂತೂ ಅನಾರೋಗ್ಯದ ನಡುವೆಯೂ ಪಂಕ್ತಿ ಸಾಲುಗಳ ನಡುವೆ ಓಡಾಡುತ್ತಾ ಯಾರಿಗೆ ಏನು ಬೇಕೆಂದು ಕೇಳುತ್ತಾ, ಸಾವಧಾನಿಸಿ ಊಟ ಮಾಡಿರೆಂದು ಮನವಿ ಮಾಡಿದರು.

  ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು, ದೊಡ್ಮನೆ ಅಭಿಮಾನಿಗಳು ಅರಮನೆ ಮೈದಾನಕ್ಕೆ ಧಾವಿಸಿ ಬರುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಯುವಕ-ಯವತಿಯರು, ಕಾರ್ಮಿಕರು, ವೃದ್ಧರು, ಅಂಗವಿಕಲರು ಹೀಗೆ ಹಲವಾರು ಮಂದಿ ತಮ್ಮ ಕುಟುಂಬದ ಕಾರ್ಯಕ್ರಮಕ್ಕೆ ಬರುವಂತೆ ಶಿಸ್ತಿನಿಂದ, ಸಾಲು-ಸಾಲಾಗಿ ಬಂದು ಭೋಜನ ಮಾಡುತ್ತಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಿಂದ ಅಪ್ಪು ಅಭಿಮಾನಿಗಳು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಪೊಲೀಸರು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದು ಸೂಕ್ತ ಭದ್ರತೆ ಒದಗಿಸಿದ್ದಾರೆ.

  ಅಪ್ಪು ಸ್ವತಃ ಭೋಜನ ಪ್ರಿಯರಾಗಿದ್ದವರು. ತಮ್ಮ ಅಭಿಮಾನಿಗಳಿಗೆಲ್ಲ ಕುಟುಂಬದ ವತಿಯಿಂದ ಊಟ ಹಾಕಿಸಬೇಕು ಎಂಬ ಆಸೆ ಅವರಿಗಿತ್ತು. ಆದರೆ ಪುನೀತ್ ನಿಧನಹೊಂದಿ ಆ ಆಸೆ ನೆರವೇರುತ್ತಿರುವುದು ವಿಧಿಯಾಟವಷ್ಟೆ.

  ಪುನೀತ್ ಸ್ಮರಣಾರ್ಥ ಅನ್ನಸಂತರ್ಪಣೆ ಜೊತೆಗೆ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ. ನಟ ಶಿವಣ್ಣ ತಮ್ಮ 59ನೇ ವಯಸ್ಸಿನಲ್ಲಿಯೂ ರಕ್ತದಾನ ಮಾಡಿ ಅಭಿಮಾನಿಗಳಿಗೆ ಮಾದರಿಯಾದರು.

  English summary
  Mass dinner to Puneeth Rajkumar fans in palace ground by Dr Rajkumar family. Puneeth Rajkumar's wife Ashwini and Shiva Rajkumar servese food to fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X