'ಕಾಂತಾರ- 1' ಪ್ರೀ ರಿಲೀಸ್ ಬ್ಯುಸಿನೆಸ್; ಹೊಂಬಾಳೆ ಸೇಫ್.. ವಿತರಕರನ್ನು ದೇವ್ರೇ ಕಾಪಾಡಬೇಕು!
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ-1' ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಆದರೆ ಇನ್ನು ಪ್ರಮೋಷನ್ ಶುರುವಾಗಿದೆ. ಚಿತ್ರವನ್ನು ಏಕಕಾಲಕ್ಕೆ 30 ದೇಶಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ದೊಡ್ಡಮಟ್ಟದಲ್ಲಿ ಮಾರ್ಕೆಟಿಂಗ್, ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ಶುರುವಾಗಿದೆ. ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿದೆ.
ಸಿನಿಮಾ ಬಿಡುಗಡೆಗೆ 20 ದಿನಗಳು ಮಾತ್ರ ಬಾಕಿಯಿದೆ. ಆದರೆ ಪ್ರಚಾರ ಮಾತ್ರ ಶುರುವಾಗಿಲ್ಲ. ತಿಂಗಳಿಗೂ ಮುನ್ನ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೈಲರ್ ಬಿಡುಗಡೆ ಮಾಡುತ್ತಾರೆ. ಆದರೆ 'ಕಾಂತಾರ- 1' ಟ್ರೈಲರ್ ಸೆಪ್ಟೆಂಬರ್ 20ಕ್ಕೆ ಹೊರ ಬರುತ್ತದೆ ಎನ್ನಲಾಗ್ತಿದೆ. ಅದಕ್ಕೂ ಮುನ್ನ ಲಿರಿಕಲ್ ವೀಡಿಯೋ ಸಾಂಗ್ಸ್ ರಿಲೀಸ್ ಆಗುವ ಸಾಧ್ಯತೆಯಿದೆ. 3 ವರ್ಷಗಳ ಹಿಂದೆ ದಸರಾ ಸಂಭ್ರಮದಲ್ಲೇ 'ಕಾಂತಾರ' ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು.

ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿದ್ದ ಸಿನಿಮಾ ಬಳಿಕ ಬೇಡಿಕೆಗೆ ತಕ್ಕಂತೆ ಬೇರೆ ಭಾಷೆಗಳಿಗೆ ಡಬ್ ಆಗಿ ಗೆದ್ದಿತ್ತು. ಕರಾವಳಿ ಭಾಗದ ದೈವ, ಭೂತಾರಾಧನೆ ವಿಚಾರಗಳನ್ನು ಚಿತ್ರದಲ್ಲಿ ಕಟ್ಟಿಕೊಟ್ಟು ರಿಷಬ್ ಗೆದ್ದಿದ್ದರು. ಡಿವೈನ್ ಬ್ಲಾಕ್‌ಬಸ್ಟರ್ ಎಂದೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪ್ರಚಾರ ಮಾಡಿತ್ತು. ಈ ಬಾರಿ ಅದಕ್ಕಿಂತಲೂ ಆಳಕ್ಕೆ ಇಳಿದು ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ.
ಮೊದಲ ಸಿನಿಮಾ ಗೆದ್ದು ಪ್ರೀಕ್ವೆಲ್ ಅಥವಾ ಸೀಕ್ವೆಲ್ ಬರುತ್ತದೆ ಎಂದಾಗ ನಿರೀಕ್ಷೆ ಸಹಜವಾಗಿಯೇ ಹೆಚ್ಚಿರುತ್ತದೆ. ಅದಕ್ಕೆ ತಕ್ಕಂತೆ ಸಿನಿಮಾ ಬಂದರೆ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತದೆ. ಅದೇ ನಿರೀಕ್ಷೆಯ ಭಾರಕ್ಕೆ ಕೆಲವೊಮ್ಮೆ ಸಿನಿಮಾಗಳು ಕುಸಿಯುವ ಸಾಧ್ಯತೆಯೂ ಇರುತ್ತದೆ. ಭಾರೀ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ. ಓಟಿಟಿ ರೈಟ್ಸ್ ಸೇಲ್ ಮಾಡಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೇಫ್ ಆಗಿದೆ. ಆದರೆ ಈಗ ಸಿನಿಮಾ ವಿತರಣೆ ಹಕ್ಕುಗಳನ್ನು ಪಡೆದವರು ಆತಂಕದಲ್ಲಿದ್ದಾರೆ. ಸಿನಿಮಾ ಗೆದ್ದರೆ ಸಮಸ್ಯೆ ಇಲ್ಲ, ಆದ್ರೆ...
ಇತ್ತೀಚಿನ ವರ್ಷಗಳಲ್ಲಿ ಕ್ರೇಜ್ ನೋಡಿ ಭಾರೀ ಮೊತ್ತಕ್ಕೆ ವಿತರಕರು ರೈಟ್ಸ್ ಕೊಂಡುಕೊಂಡು ಬಳಿಕ ಸಿನಿಮಾ ಸೋತು ನಷ್ಟ ಎದುರಿಸಿರುವ ಸಾಕಷ್ಟು ಉದಾಹರಣೆಗಳಿವೆ. 'ಕಾಂತಾರ- 1' ಚಿತ್ರದ ಆಂಧ್ರ, ತೆಲಂಗಾಣ ರೈಟ್ಸ್ 110 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗ್ತಿದೆ. ಒಂದು ಡಬ್ ಸಿನಿಮಾ ತೆಲುಗು ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಬಿಕರಿಯಾಗಿರುವುದು ಇದೇ ಮೊದಲು.
ಆಂಧ್ರ, ತೆಲಂಗಾಣದಲ್ಲಿ 'ಕಾಂತಾರ- 1' ಕ್ರೇಜ್ ಹೇಗಿದೆ ಅಂದ್ರೆ ರೈಟ್ಸ್ ಕೊಳ್ಳಲು ಹಲವರು ಮುಗಿಬಿದ್ದಿದ್ದಾರೆ. ಅಂತಿಮವಾಗಿ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಬೇರೆ ಬೇರೆ ಏರಿಯಾ ರೈಟ್ಸ್ ಮಾರಾಟವಾಗಿದೆ. ಇದು ಒಂದರ್ಥದಲ್ಲಿ ಒಳ್ಳೆಯ ನಿರ್ಧಾರ ಎನ್ನುವವರು ಇದ್ದಾರೆ. ಪೂರ್ವ ಮತ್ತು ಪಶ್ಚಿಮ ಗೋದಾವರಿ ಏರಿಯಾಗಳಲ್ಲಿ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಸಂಸ್ಥೆ ಚಿತ್ರ ವಿತರಣೆ ಮಾಡಲಿದೆ. ಉತ್ತರ ಆಂಧ್ರ ಪ್ರದೇಶದಲ್ಲಿ ವಿಘ್ನೇಶ್ವರ ನಿರ್ಮಾಣ ಸಂಸ್ಥೆ, ಗುಂಟೂರಿನಲ್ಲಿ ವಾರಾಹಿ ಪ್ರೊಡಕ್ಷನ್ಸ್ ಸಂಸ್ಥೆ, ಕೃಷ್ಣ ಜಿಲ್ಲೆಯಲ್ಲಿ ಕೆಎಸ್ಎನ್ ಸಂಸ್ಥೆ, ಸೀಡೆಡ್ ಪ್ರದೇಶದಲ್ಲಿ ಶಿಲ್ಪಕಲಾ ಎಂಟರ್ಟೈನ್ಮೆಂಟ್ ಹಾಗೂ ಕೃಷ್ಣ ಜಿಲ್ಲೆಯಲ್ಲಿ ಕೆಎಸ್ಎನ್ ಸಂಸ್ಥೆಗಳು ಸಿನಿಮಾ ಬಿಡುಗಡೆ ಮಾಡಲಿವೆ.
ಇನ್ನು ಉತ್ತರ ಭಾರತ ಹಾಗೂ ನೇಪಾಳದಲ್ಲಿ ಎಎ ಫಿಲ್ಮ್ಸ್, ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್ ಸಿನಿಮಾ ವಿತರಣೆ ಮಾಡುವುದು ಖಚಿತವಾಗಿದೆ. ಇನ್ನು ಓವರ್‌ಸೀಸ್‌ನಲ್ಲಿ Phars Film Co LLC ಸಂಸ್ಥೆ ಚಿತ್ರ ಬಿಡುಗಡೆ ಮಾಡಲಿದೆ. ಇನ್ನುಳಿದಂತೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಸಂಸ್ಥೆಗಳು ರೈಟ್ಸ್ ಕೊಂಡಿಕೊಂಡಿವೆ.
'KGF- 2' ಬಿಟ್ಟರೆ ಆ ಮಟ್ಟಿಗೆ ಪ್ರೀ ರಿಲಿಸ್ ಬ್ಯುಸಿನೆಸ್ ಮಾಡಿರುವ ಸಿನಿಮಾ 'ಕಾಂತಾರ- 1' ಎಂದೇ ಹೇಳಬಹುದು. ಬೇಡಿಕೆಗೆ ತಕ್ಕಂತೆ ಭಾರೀ ಮೊತ್ತಕ್ಕೆ ಎಲ್ಲಾ ಏರಿಯಾಗಳ ರೈಟ್ಸ್ ಬಿಕರಿಯಾಗಿದೆ. ಹಾಗಾಗಿ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಬೇಕಿದೆ. ಒಟ್ಟಾರೆ 700 ರಿಂದ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ರೆ ವಿತರಕರು ದಡ ಸೇರಿಲಿದ್ದಾರೆ. ಅದಕ್ಕೆ ಹೆಚ್ಚು ಬಂದರೆ ಲಾಭ ಎನ್ನುವ ಲೆಕ್ಕಾಚಾರ ಶುರುವಾಗಿದೆ.
'ಕಾಂತಾರ-1' ಚಿತ್ರಕ್ಕೆ ಅಂದಾಜು 100 ಕೋಟಿ ರೂ. ಬಂಡವಾಳ ಹೂಡಿದ್ದಾರೆ ಎನ್ನಲಾಗ್ತಿದೆ. ಬಹಳ ಹಿಂದೆಯೇ ಪ್ರೈಂ ವೀಡಿಯೋಗೆ ಓಟಿಟಿ ರೈಟ್ಸ್ 125 ಕೋಟಿ ರೂ.ಗೆ ಮಾರಾಟವಾಗಿದೆ. ಹಾಗಾಗಿ ಹೊಂಬಾಳೆ ಸಂಸ್ಥೆ ಹಾಕಿರುವ ಬಂಡವಾಳ ಅದರಲ್ಲೇ ವಾಪಸ್ ಬಂದಿದೆ. ಇನ್ನು ಥ್ರಿಯೇಟ್ರಿಕಲ್ ಕಲೆಕ್ಷನ್ ಬರುವುದೆಲ್ಲಾ ಲಾಭ ಎನ್ನುವ ಲೆಕ್ಕಚಾರ ಕೆಲವರದ್ದು. ಅಕ್ಟೋಬರ್ 2ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.


Click it and Unblock the Notifications











