10 Years for Ugramm: ಕಲ್ಟ್ ಕ್ಲಾಸಿಕ್ 'ಉಗ್ರಂ'ಗೆ ದಶಕದ ಸಂಭ್ರಮ; ಕಾಯ್ತಿದೆ ಬಿಗ್ ಸರ್‌ಪ್ರೈಸ್
ಉಗ್ರಂ. ಕನ್ನಡದಲ್ಲಿ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟಾಕ್ಕಿದ ಸಿನಿಮಾ. ಪ್ರಶಾಂತ್ ನೀಲ್ ಚೊಚ್ಚಲ ಸಿನಿಮಾ. ಇಷ್ಟದ ಸಿನಿಮಾ. ಶ್ರೀಮುರಳಿಗೆ ಚಿತ್ರರಂಗದಲ್ಲಿ ಮರುಹುಟ್ಟು ಕೊಟ್ಟ ಸಿನಿಮಾ. ಬಾಕ್ಸಾಫೀಸ್‌ನಲ್ಲಿ ಸೋತರೂ ಜನರ ಮನಗೆದ್ದ ಸಿನಿಮಾ. ಅದ್ಭುತ ಪ್ರತಿಭೆಗಳನ್ನು ಗುರುತಿಸುವಂತೆ ಮಾಡಿದ ಸಿನಿಮಾ.
ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಚಿತ್ರವನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. ಇತ್ತೀಚೆಗೆ ಇದೇ ಕಥೆಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ನೀಲ್ ತೆರೆಗೆ ತಂದಿದ್ದರು. ಆದರೂ ಅಗಸ್ತ್ಯನ ಮುಂದೆ 'ಸಲಾರ್' ದೇವ ಮಂಕಾಗಿಬಿಟ್ಟಿದ್ದ. ಕನ್ನಡ ಸಿನಿರಸಿಕರಿಗೆ 'ಸಲಾರ್' ಸಿನಿಮಾ ಇಷ್ಟವಾಗಲೇ ಇಲ್ಲ. ಅದಕ್ಕೆ ಕಾರಣ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿರುವ 'ಉಗ್ರಂ'.

2014ರಲ್ಲಿ ಬಿಡುಗಡೆಯಾಗಿದ್ದ 'ಉಗ್ರಂ' ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಬಿಡುಗಡೆಗೆ ಮುನ್ನ ವಿತರಕರು ಸಿನಿಮಾ ಕೊಳ್ಳಲು ಮೀನಾಮೇಷ ಎಣಿಸಿದ್ದರು. ಕೊನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ತೂಗುದೀಪ ಬ್ಯಾನರ್ ಅಡಿಯಲ್ಲಿ ಸಿನಿಮಾ ರಿಲೀಸ್ ಮಾಡಿದ್ದರು. ಅಂತೂ ಇಂತೂ ಸಿನಿಮಾ ತೆರೆಗೆ ಬಂದರೂ ಕೆಲವೇ ದಿನಗಳಲ್ಲಿ ಪೈರಸಿ ಆಗಿಬಿಟ್ಟಿತ್ತು. 'ಉಗ್ರಂ' ಚಿತ್ರವನ್ನು ಜನ ಥಿಯೇಟರ್‌ನಲ್ಲಿ ನೋಡಿದ್ದಕ್ಕಿಂತ ಮೊಬೈಲ್, ಟಿವಿಯಲ್ಲಿ ನೋಡಿದ್ದೇ ಹೆಚ್ಚು ಎಂದು ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಬೇಸರ ವ್ಯಕ್ತಪಡಿಸಿದ್ದರು.
'ಉಗ್ರಂ' ಸಿನಿಮಾ ಮಾಡಲು ಪಟ್ಟ ಶ್ರಮ ಎಂಥದ್ದು ಎನ್ನುವುದನ್ನು ಪ್ರಶಾಂತ್ ನೀಲ್ ಸಾಕಷ್ಟು ಸಂದರ್ಭಗಳಲ್ಲಿ ಹಂಚಿಕೊಂಡಿದ್ದರು. ಅಷ್ಟು ಕಷ್ಟಬಿದ್ದು ಮಾಡಿದ್ದ ಚಿತ್ರವನ್ನು ಚಿತ್ರರಂಗದಲ್ಲಿ ಯಾರೂ ಗುರ್ತಿಸದೇ ಇದ್ದಾಗ, ವಿತರಣೆಗೆ ಮುಂದೆ ಬರದಿದ್ದಾಗ ಪಟ್ಟ ಪಾಡು ಎಂಥದ್ದು ಎಂದು ವಿವರಿಸಿದ್ದರು. ಕೊನೆಗೆ ಸಿನಿಮಾ ಬಿಡುಗಡೆ ನಂತರ ಏನೆಲ್ಲಾ ಆಯಿತು ಎನ್ನುವುದನ್ನು ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಅಂದಹಾಗೆ 'ಉಗ್ರಂ' ಸಿನಿಮಾ ದಶಕದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಗ್ ಸರ್‌ಪ್ರೈಸ್ ನೀಡಲು ತಂಡ ಮುಂದಾಗಿದೆ.
'ಉಗ್ರಂ ದಶಕದ ಸಂಭ್ರಮ'ದಲ್ಲಿ ಇಡೀ ತಂಡ ಭಾಗವಹಿಸುತ್ತಿದೆ. ಆಂಕರ್ ಅನುಶ್ರೀ ಯೂಟ್ಯೂಬ್ ಚಾನಲ್‌ನಲ್ಲಿ ವಿಶೇಷ ಸಂದರ್ಶನ ಕಾರ್ಯಕ್ರಮ ಚಿತ್ರೀಕರಣವಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್, ನಟ ಶ್ರೀಮುರಳಿ ಸೇರಿದಂತೆ ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ಶೀಘ್ರದಲ್ಲೇ ಸಂದರ್ಶನ ಸಂಪೂರ್ಣವಾಗಿ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಲಿದೆ. ಚಿತ್ರತಂಡದ ಜೊತೆ ಆಂಕರ್ ಅನುಶ್ರೀ 'ಉಗ್ರಂ' ದಶಕದ ಸಂಭ್ರಮದಲ್ಲಿ ಜೊತೆಯಾಗಿದ್ದಾರೆ. ಸಂದರ್ಶನದ ನಡೆದ ವೇದಿಕೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಫೆಬ್ರವರಿ 21, 2014ರಂದು 'ಉಗ್ರಂ' ಸಿನಿಮಾ ತೆರೆಗೆ ಬಂದಿತ್ತು. ಪ್ರಶಾಂತ್ ನೀಲ್ ಸ್ವತಃ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ್ದರು. ರಾಮ್ ಶ್ರೀಲಕ್ಷ್ಮಣ ಜೊತೆ ಸೇರಿ ಕಥೆ ಚಿತ್ರಕಥೆ ಬರೆದಿದ್ದರು. ಸೋದರಿ ಸಂಬಂಧಿ ಶ್ರೀಮುರಳಿನ ಹೀರೋ ಮಾಡಿ ಸಿನಿಮಾ ಕಟ್ಟಿಕೊಟ್ಟಿದ್ದರು. ಅಗಸ್ತ್ಯನಾಗಿ ಶ್ರೀಮುರಳಿ ಅಬ್ಬರಿಸಿ ಗೆದ್ದಿದ್ದರು. ಚಿತ್ರದ ಡೈಲಾಗ್ಸ್, ಬಿಜಿಎಂ, ಹಾಡುಗಳು ಇನ್ನು ಕನ್ನಡ ಸಿನಿರಸಿಕರ ಮನದಲ್ಲಿ ಗುಂಯ್‍ಗುಡುತ್ತಿದೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಮುರಳಿ ಅಗಸ್ತ್ಯನಾಗಿ ಭರ್ಜರಿ ಗೆಲುವು ಕಂಡಿದ್ದರು. ಬಳಿಕ ರೋರಿಂಗ್ ಸ್ಟಾರ್ ಆಗಿ ಮೆರೆಯಲು ಆರಂಭಿಸಿದರು. ಹರಿಪ್ರಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆಕೆಗೂ ಸಿನಿಮಾ ಬ್ರೇಕ್ ಕೊಟ್ಟಿದ್ದು ಸುಳ್ಳಲ್ಲ. ರವಿವರ್ಮನ್, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿತ್ತು. ಕಮರ್ಷಿಯಲ್ ಆಗಿ 'ಉಗ್ರಂ' ಸಿನಿಮಾ ಗೆಲ್ಲದಿದ್ದರೂ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು.

ಇದೇ ತಂಡ ಮುಂದೆ 'KGF' ಎನ್ನುವ ಅದ್ಭುತ ಸಿನಿಮಾ ಕಟ್ಟಿತು. ಈ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗ ಮತ್ತೆ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತಾಯಿತು. ಆದರೂ ಪ್ರಶಾಂತ್ ನೀಲ್‌ಗೆ ತಮ್ಮ ಮೊದಲ ಸಿನಿಮಾ 'ಉಗ್ರಂ' ಬಹಳ ಆಪ್ತ. ಈ ಸಿನಿಮಾ ಮೇಕಿಂಗ್ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು 'ಉಗ್ರಂ ದಶಕದ ಸಂಭ್ರಮ' ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.


Click it and Unblock the Notifications











