»   » 20 ರಿಂದ ಆರಂಭವಾಗಲಿದೆ ‘ಮತದಾನ’ !

20 ರಿಂದ ಆರಂಭವಾಗಲಿದೆ ‘ಮತದಾನ’ !

Posted By: Super
Subscribe to Filmibeat Kannada

ಕರ್ನಾಟಕದ ಕಾಶ್ಮೀರ ಎನ್ನಲಾಗುವ ತೀರ್ಥಹಳ್ಳಿಯಲ್ಲಿ ಈ ತಿಂಗಳ 20ರಿಂದ 'ಮತದಾನ" ಆರಂಭವಾಗಲಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯ್ತಿಗಳ ಚುನಾವಣೆ ಮುಗಿದು 4 ತಿಂಗಳಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವುದು ಜನವರಿಯಲ್ಲಿ ಹೀಗಿರುವಾಗ ಈಗ್ಯಾವ ಚುನಾವಣೆ ಬಂತು ಎಂದಿರಾ? ಇಲ್ಲಿ ನಡೆಯುವುದು 'ಮತದಾನ " ಚಿತ್ರದ ಚಿತ್ರೀಕರಣ.

ಮಲೆನಾಡಿನ ಮಡಿಲಲ್ಲಿ ಹಾಗೂ ಯಲ್ಲಾಪುರದ ಸುತ್ತಮುತ್ತ ನಾಲ್ಕಾರು ದಿನ ಚಿತ್ರೀಕರಣ ನಡೆಯಲಿದೆ. ಕಾನೂರು ಹೆಗ್ಗಡಿತಿಯನ್ನು ರಜತಪರದೆಗೆ ಅರ್ಪಿಸಿದ ಎಚ್‌.ಜಿ. ನಾರಾಯಣ್‌ ಹಾಗೂ ಐ.ಪಿ. ಮಲ್ಲೇಗೌಡರ ಜೋಡಿ ಮಾಯಾಮೃಗ ಖ್ಯಾತಿಯ ಟಿ.ಎನ್‌. ಸೀತಾರಾಮ್‌ ನಿರ್ದೇಶನದಲ್ಲಿ ಬೆಳ್ಳಿ ತೆರೆಗೆ ನೀಡುತ್ತಿರುವ ಮತ್ತೊಂದು ಚಿತ್ರ 'ಮತದಾನ".

ಎಸ್‌.ಎಲ್‌. ಭೈರಪ್ಪ ಅವರ ರಾಜಕೀಯ ಕಥಾವಸ್ತುವಿನ ಕಾದಂಬರಿ ಆಧಾರಿತ ಚಿತ್ರ 'ಮತದಾನ"ಕ್ಕೆ ಚಿತ್ರ ಸಂಭಾಷಣೆಯನ್ನು ಟಿ.ಎನ್‌. ಸೀತಾರಾಮ್‌ ಅವರು, ಎಸ್‌.ಎಲ್‌ ಭೈರಪ್ಪನವರ ಮಾರ್ಗದರ್ಶನದಲ್ಲೇ ಬರೆಯುತ್ತಿದ್ದಾರೆ. ರಾಜಕೀಯ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗೂ ಈಗ ರಾಜಕೀಯದಿಂದ ತಾತ್ಕಾಲಿಕವಾಗಿ ನಿವೃತ್ತರಾಗಿರುವ ಅನಂತನಾಗ್‌, ಹೊಡೆದಾಟದ ಪಾತ್ರಕ್ಕೆ ಹೆಸರಾದ ದೇವರಾಜ್‌, ಮುಖ್ಯಮಂತ್ರಿ ಚಂದ್ರು, ಕಾನೂರು ಹೆಗ್ಗಡಿತಿ ತಾರಾ, ಅವಿನಾಶ್‌, ಚಂದ್ರಶೇಖರ್‌, ಗಿರಿಜಾ ಲೋಕೇಶ್‌, ಸುಂದರ್‌ರಾಜ್‌, ನಾಗೇಂದ್ರ ಶಾ ತಾರಾಗಣವಿರುವ ಈ ಚಿತ್ರದ ಸಂಗೀತ ನಿರ್ದೇಶಕರು, ಅಶ್ವತ್‌ ಅಂಡ್‌ ವೈದಿ ಜೋಡಿಯ ಅಶ್ವತ್‌ ಹಾಗೂ ವಿ. ಮನೋಹರ್‌. ಗೋಪಾಲಕೃಷ್ಣ ಅಡಿಗ, ಸಿದ್ದಲಿಂಗಯ್ಯ, ಪುರಂದರ ದಾಸರ ರಚನೆಗಳು ಮತದಾನದ ಚಿತ್ರಗೀತೆಗಳು. ಮತದಾನ ನಡೆದು, ಚಿತ್ರ ಬಿಡುಗಡೆಯಾದ ಮೇಲಷ್ಟೇ ಫಲಿತಾಂಶ.

English summary
Mathadana will commence form 20th october

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada