"ಸುಪ್ರೀಂ ಕೋರ್ಟ್ ಲಿವಿಂಗ್ ಟುಗೆದರ್ ಮದ್ವೆಗೆ ಸಮ ಎಂದಿದೆ.. ಇರೋದು ಒಂದೇ ಜೀವ್ನ.. ನಾವು ಕೂಡ ಸಹಜೀವನ ನಡೆಸುತ್ತಿದ್ದೇವೆ"
ತೆಲುಗು ನಟ ನರೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ಲಿವ್ ಇನ್‌ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಇದೀಗ ಇಬ್ಬರು ಈ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. 'ಮಳ್ಳಿ ಪೆಳ್ಳಿ' ಕನ್ನಡ ವರ್ಷನ್ 'ಮತ್ತೆ ಮದುವೆ' ಚಿತ್ರಕ್ಕಾಗಿ ಜೋಡಿ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಇಬ್ಬರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ 'ಮತ್ತೆ ಮದುವೆ' ಸಿನಿಮಾ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸಿನಿಮಾ ಜೊತೆಗೆ ಸಾಕಷ್ಟು ವಿಚಾರಗಳ ನರೇಸ್- ಪವಿತ್ರಾ ಮಾತನಾಡಿದರು. ಮಾಧ್ಯಮಗಳ ಪ್ರಶ್ನೆಗಳಿಗೂ ಉತ್ತರಿಸಿದ್ದರು. ನರೇಶ್ ಈಗಾಗಲೇ 3 ಮದುವೆ ಆಗಿದ್ದಾರೆ. ಪವಿತ್ರಾ ಜೊತೆ 4ನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇಂತಹ ಸಮಯದಲ್ಲಿ ಬಹುಪತ್ನಿತ್ವ ಸರಿನಾ ತಪ್ಪಾ? ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ನರೇಶ್ ಬಹುಪತ್ನಿತ್ವ ತಪ್ಪು ಎಂದರು.

"ದೇವರಿಗೆ, ರಾಜರಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರು ಇರುತ್ತಿದ್ದರು. ಸ್ವಾತಂತ್ರ್ಯ ಬರುವರೆಗೂ ಸಾಕಷ್ಟು ಜನರಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರು ಇದ್ದರು. ಆದರೆ ಈಗ ನಾವು ಮದುವೆಯನ್ನು ಗೌರವಿಸುತ್ತೇವೆ. ಲಿವ್‌ಇನ್‌ಟುಗೆದರ್‌ನ ಒಪ್ಪಿಕೊಳ್ಳುತ್ತೇವೆ. ಕಾನೂನನ್ನು ಜೀವನಕ್ಕೆ ಫಿಕ್ಸ್ ಮಾಡೋಕೆ ಸಾಧ್ಯವಿಲ್ಲ. ಇದು ಬದಲಾಗುತ್ತಿರುತ್ತದೆ. ನಾವು ಬದಲಿಸಲೇಬೇಕು. ಬಹುಪತ್ನಿತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಜನರಿಗೆ ಹೇಗೆ ಬದುಕಬೇಕು ಎನ್ನುವ ಸ್ವಾತಂತ್ರ ಇದೆ."
"ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ತೀರ್ಪು ನೀಡಿದೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಯಾಕೆ ಅಂದುಕೊಳ್ಳುತ್ತೀರಾ. ನಾವಿಬ್ಬರು ಸಹಜೀವನ ನಡೆಸುತ್ತಿದ್ದೇವೆ. ಬಹಳ ಖುಷಿಯಾಗಿದ್ದೇವೆ ಎಂದು ಪವಿತ್ರಾ ಲೋಕೇಶ್ ಕೈ ಹಿಡಿದು ನರೇಶ್ ಹೇಳಿದ್ದಾರೆ. ಈ ಸಿನಿಮಾ ಪ್ರಪಂಚ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಕುರಿತಾಗಿ ಮಾಡಿದ್ದೇವೆ. ಶೇಕಡಾ 50ರಷ್ಟು ದಂಪತಿಗಳು ಸಮಾಜಕ್ಕೆ ಹೆದರಿ ಬಲವಂತವಾಗಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ."
"ಬಹಳ ಕಿರುಕುಳಗಳ ನಡುವೆಯೂ ಒಟ್ಟಿಗೆ ಜೀವಿಸುತ್ತಿದ್ದಾರೆ. ಕೆಲವರು ಧೈರ್ಯವಾಗಿ ಹೊರ ಬರುತ್ತಿದ್ದಾರೆ. ಕಾನೂನು ನಿಮ್ಮ ಜೀವನವನ್ನು ಸಾಗಿಸುವ ಹಕ್ಕು ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಹೇಳಿದೆ. ಇರುವುದು ಒಂದೇ ಜೀವನ, ಆ ಒಂದು ಜೀವನವನ್ನು ನೀನು ಖುಷಿಯಾಗಿ ಕಳೆಯಬೇಕು, ಸುತ್ತ ಇರುವವರಿಗೂ ಖುಷಿ ಹಂಚಬೇಕು. ನಮ್ಮನ್ನು ಮದುವೆ ಆಗಿದ್ದೀರಾ ಅಂತ ಹೇಳಿದ್ರು. ನಾನು ಹೇಳ್ದೆ ಮದುವೆ ಅಂದ್ರೆ ಏನು? ತಾಳಿ ಹಾಕಿಕೊಳ್ಳೋದು?ಉಂಗುರ ಹಾಕಿಕೊಳ್ಳೋದು ಮದುವೆನಾ? ನಮ್ಮ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಇದೆಲ್ಲಾ ಸಾಂಕೇತಿಕ ಅಷ್ಟೇ"
"ಮದುವೆ ಅಂದರೆ ಎರಡು ಹೃದಯಗಳು ಒಂದಾಗಬೇಕು. ನಮ್ಮ ಹೃಯಯಗಳಿಗೆ ಮದುವೆ ಆಗಿದೆ. ನಾವು ಖುಷಿಯಾಗಿದ್ದೇವೆ. ನಾವು ಮದುವೆ ಎನ್ನುವ ವ್ಯವಸ್ಥೆಯನ್ನು ಗೌರವಿಸುತ್ತೇವೆ. ಈ ಸಿನಿಮಾದಲ್ಲೂ ಅದನ್ನೇ ಹೇಳಿದ್ದೇವೆ. ಸುಪ್ರೀಂ ಕೋರ್ಟ್ ಕೂಡ ಲಿವಿಂಗ್‌ಟು ಗೆದರ್ ಮದುವೆಗೆ ಸಮಾನ ಎಂದು ಹೇಳಿದೆ. ಸಮಾಜ ಬದಲಾಗುತ್ತಿದೆ" ಎಂದು ನರೇಶ್ ಹೇಳಿದ್ದಾರೆ.
ಎಂ. ಎಸ್ ರಾಜು 'ಮತ್ತೆ ಮದುವೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನರೇಶ್ ತಮ್ಮದೇ ಜೀವನದಲ್ಲಾದ ಘಟನೆಗಳನ್ನು ಸೇರಿಸಿ ಸಿನಿಮಾ ಮಾಡ್ತಿದ್ದಾರೆ. ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಪಾತ್ರ ಕೂಡ ಚಿತ್ರದಲ್ಲಿದೆ. ವನಿತಾ ವಿಜಯ್ ಕುಮಾರ್ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶರತ್ ಬಾಬು, ಜಯಸುಧಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೇ 26ಕ್ಕೆ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











