"ದೊಡ್ಮನೆಯವ್ರು ಕೊಟ್ಟ ಬೆಳ್ಳಿ ಲೋಟದಲ್ಲೇ ಕಾಫಿ ಕುಡಿತ್ತೀವಿ.. ಇನ್ನೊಬ್ಬರ ದುಡ್ಡಲ್ಲಿ ನಾನು ಬದುಕಲ್ಲ"
ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಚಿತ್ರಕ್ಕೆ 'ಮತ್ತೆ ಮದುವೆ' ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ. ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಸಿನಿಮಾ ಜೊತೆಗೆ ನರೇಶ್, ಪವಿತ್ರಾ ಲೋಕೇಶ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾತನಾಡಿದ್ದಾರೆ.
ಮತ್ತೊಬ್ಬರನ್ನು ದೋಚಿ, ಮತ್ತೊಬ್ಬರ ದುಡ್ಡಿನಲ್ಲಿ ಬದುಕುವುದನ್ನು ನಮ್ಮ ಪೋಷಕರು ನಮಗೆ ಹೇಳಿಕೊಟ್ಟಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ. ಕನ್ನಡ ಚಿತ್ರರಂಗ ನನಗೆ ಎಲ್ಲವನ್ನು ಕೊಟ್ಟಿಗೆ ಎಂದು ವಿವರಿಸಿದ್ದಾರೆ. ಆದರೆ ಇತ್ತೀಚೆಗೆ ನಮ್ಮ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕೆಲ ಘಟನೆಗಳು ಮನಸ್ಸಿಗೆ ನೋವುಂಟು ಮಾಡಿದವು ಎಂದು ವಿವರಿಸಿದ್ದಾರೆ. ಎಲ್ಲರೂ 'ಮತ್ತೆ ಮದುವೆ' ಸಿನಿಮಾ ನೋಡಿ ಹರಸಿ ಎಂದು ಮನವಿ ಮಾಡಿದ್ದಾರೆ.

"ನಾನು ಹುಟ್ಟಿದ್ದು ಇಲ್ಲೇ. ನಾನು ತಿಂದ ಊಟ, ಹಾಕಿಕೊಂಡ ಬಟ್ಟೆ ಎಲ್ಲವನ್ನು ಕನ್ನಡ ಚಿತ್ರರಂಗ ಕೊಟ್ಟಿದ್ದು. ನಮ್ಮ ತಂದೆ ಸಹಾಯಕ ನಿರ್ದೇಶಕರಾಗಿ, ನಟರಾಗಿ ಇಲ್ಲಿ ಕೆಲಸ ಮಾಡಿದವರು. ನಾನು ಹುಟ್ಟಿದಾಗ ಅವ್ರು ಚಿತ್ರರಂಗಕ್ಕೆ ಬಂದಿದ್ದರು. ಹಾಗಾಗಿ ನಾನು ಹುಟ್ಟಿದಾಗಿಂದ ನಾನು ಈ ದಿನ ಈ ರೀತಿ ಇದ್ದೀನಿ ಅಂದ್ರೆ, ಎಲ್ಲದಕ್ಕೂ ಕನ್ನಡ ಚಿತ್ರರಂಗ ಕಾರಣ. ನಾವು ಮನೆ ಕಟ್ಟಿರೋದು ಕನ್ನಡ ಚಿತ್ರರಂಗದಿಂದ ಬಂದ ಹಣದಲ್ಲಿ. ನಾವು ಸಿನಿಮಾ ವಾತಾವರಣದಲ್ಲೇ ಬೆಳೆದೆವು.
"ನಮ್ಮ ಮನೆ ತುಂಬಾ ಸಿನಿಮಾಗಳ ಶೀಲ್ಡ್‌ಗಳು ಇದ್ದವು. ರಾಜ್‌ಕುಮಾರ್ ಮನೆಯವರು ಎಲ್ಲಾ ಸಿನಿಮಾಗಳಿಗೂ ಒಂದೊಂದು ಬೆಳ್ಳಿ ಲೋಟ ಕೊಡುತ್ತಿದ್ದರು. ಅದೇ ಲೋಟದಲ್ಲಿ ನಮ್ಮ ಕುಟುಂಬದವರೆಲ್ಲಾ ಕಾಫಿ ಕುಡಿಯೋದು. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಎಲ್ಲರ ಸಿನಿಮಾಗಳ ಶೀಲ್ಡ್‌ಗಳು ಮನೆಯಲ್ಲಿದೆ. ಅವರನ್ನೆಲ್ಲಾ ನೋಡಿಕೊಂಡು ಬೆಳೆದವಳು ನಾನು. ಅವರೆಲ್ಲಾ ಮೈಸೂರಿನಲ್ಲಿ ಚಿತ್ರೀಕರಣ ಇದ್ದರೆ ನಮ್ಮ ಮನೆಗೆ ಬರುತ್ತಿದ್ದರು"
"ನಮ್ಮ ತಂದೆ ಹೋದಮೇಲೆ ನಾನು ಚಿತ್ರರಂಗಕ್ಕೆ ಬಂದೆ. ನಾನು ಪ್ಲ್ಯಾನ್ ಮಾಡಿರಲಿಲ್ಲ. ಅವರ ಆಸೆ ಅಂತ ಕಾಣುತ್ತದೆ. ಅನಿರೀಕ್ಷಿತವಾಗಿಯೋ ಅನಿವಾರ್ಯವಾಗಿಯೋ ನಾನು ಚಿತ್ರರಂಗಕ್ಕೆ ಬಂದೆ. ನಾನು ಕನ್ನಡ ಚಿತ್ರರಂಗದಿಂದ ಬಹಳ ಗಳಿಸಿದ್ದೇನೆ. ಎಲ್ಲಾ ನಾಯಕ ನಟರು, ನಟಿಯರ ಜೊತೆ ನಟಿಸಿದ್ದೇನೆ. ನಮ್ಮ ತಾಯಿ ಶಿಕ್ಷಕಿ. ಅವರು ತಮ್ಮ ಕೈಮೀರಿ ನಮ್ಮಿಬ್ಬರಿಗೆ ವಿದ್ಯಾಭ್ಯಾಸ ಕೊಡಿಸಿದರು. ಚಿತ್ರರಂಗದವರು ನನಗೆ ಎಲ್ಲಾ ಕೊಟ್ಟಿದ್ದಾರೆ."

"ಕೆಲವು ಕೆಟ್ಟ ಘಟನೆಗಳು, ಕೆಲ ಕೆಟ್ಟ ಉದ್ದೇಶದಿಂದ ನನ್ನ ಮೇಲೆ ಮಾಡಿದ ಆರೋಪಗಳು, ಅದನ್ನೆಲ್ಲಾ ಜೀರ್ಣಿಸಿಕೊಳ್ಳಲು, ಹೊರಬರಲು ಬಹಳ ಸಮಯ ಬೇಕಾಯಿತು. ನೀವೆಲ್ಲಾ ನನ್ನನ್ನು ನೋಡಿದ್ದೀರಾ. ನನಗೆ ಹಣದ ಆಸೆ ಆಗಲಿ, ಇನ್ನೊಬ್ಬರನ್ನು ದೋಚಬೇಕು, ಇನ್ನೊಬ್ಬರ ದುಡ್ಡಿನಿಂದ ನಾನು ಬದುಕಬೇಕು ಎನ್ನುವ ಆಲೋಚನೆ ನನಗೆ ಇಲ್ಲ. ಅಂತಹ ವೃತ್ತಿಯನ್ನು ನನ್ನ ತಂದೆ ತಾಯಿ ಹೇಳಿಕೊಟ್ಟಿಲ್ಲ. ನನಗೆ ಸ್ವಂತ ಬುದ್ದಿ ಇದೆ. ನನಗೆ ಏನು ಮಾಡಬೇಕು ಎನ್ನುವ ಅರಿವಿದೆ. ಇದನ್ನೆಲ್ಲಾ ಹೇಳಬೇಕು ಎನಿಸಿತು ಹೇಳಿದೆ"
"ಕನ್ನಡ ಚಿತ್ರರಂಗದಲ್ಲಿ ನನ್ನ ಅಭಿನಯ ನೋಡಿ ತೆಲುಗು ಚಿತ್ರರಂಗದವರು ಅವಕಾಶ ಕೊಟ್ಟರು. ಕನ್ನಡದವಳು ಎಂದು ಬೇಧಭಾವ ಮಾಡಲಿಲ್ಲ. ತಿಂಗಳ 30 ದಿನವೂ ಕೆಲಸ ಮಾಡಿದ್ದೇನೆ. ಒಳ್ಳೆ ಸಂಪಾದನೆ ಮಾಡಿದ್ದೇನೆ. ಒಬ್ಬ ಹೆಣ್ಣು ಮಗಳಾಗಿ ಅಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ. ಜೀವನದಲ್ಲಿ ಬಹಳ ನೋವಾಗಿದೆ, ಬೇಸರ ಆಗಿದೆ ಎನ್ನುವ ಸಮಯದಲ್ಲಿ ಜೀವನದಲ್ಲಿ ಒಳ್ಳೆಯ ವಿಷಯಗಳು ನಡೆಯುತ್ತೆ ಎನ್ನುವುದಕ್ಕೆ ಮತ್ತೆ ಮದುವೆ ಸಿನಿಮಾ ಉದಾಹರಣೆ" ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.
ಎಂ. ಎಸ್ ರಾಜು 'ಮಳ್ಳಿ ಪೆಳ್ಳಿ' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಶರತ್ ಬಾಬು, ಜಯಸುಧಾರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನರೇಶ್ ತಮ್ಮದೇ ಜೀವನದ ಘಟನೆಗಳನ್ನು ಸೇರಿಸಿ ಈ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಪಾತ್ರವೂ ಇದೆ. ಮೇ 26ಕ್ಕೆ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











