"ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು"; ಸುದೀಪ್ ಹೇಳಿಕೆ ವೈರಲ್
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಸಣ್ಣ ಸಣ್ಣ ಟೀಸರ್ ಹಾಗೂ ಮೇಕಿಂಗ್ ವೀಡಿಯೋಗಳನ್ನು ಚಿತ್ರತಂಡ ರಿಲೀಸ್ ಮಾಡ್ತಿದೆ. ಡಿಸೆಂಬರ್ 25ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ಸರಿಯಾಗಿ ಪ್ರಮೋಷನ್ ಮಾಡ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಆರ್. ಚಂದ್ರು ನಿರ್ಮಾಣದ 'ಫಾದರ್' ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಂದ್ರು ನಿರ್ಮಿಸಿ ನಿರ್ದೇಶಿಸಿದ 'ಕಬ್ಜ' ಚಿತ್ರದಲ್ಲಿ ಸುದೀಪ್ ನಟಿಸಿದ್ದರು. ಉಪೇಂದ್ರ ಹೀರೊ ಆಗಿದ್ದ ಆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.

'ಫಾದರ್' ಚಿತ್ರದ ವೇದಿಕೆಯಲ್ಲಿ ಪರೋಕ್ಷವಾಗಿ ಆ ಬಗ್ಗೆ ಸುದೀಪ್ ಮಾತನಾಡಿದ್ದಾರೆ. "ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು" ಎಂದು ಚಂದ್ರು ಪರ ಮಾತನಾಡಿದ್ದಾರೆ. ಸುದೀಪ್ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ. 'ಫಾದರ್' ಚಿತ್ರದಲ್ಲಿ ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಂದೆ- ಮಗನಾಗಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರ್ತಿದೆ.
ಸುದೀಪ್ ಮಾತನಾಡಿ "ಆರ್. ಚಂದ್ರು ಆರು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಬಳಿಕ ಅವರನ್ನು ಐದು ಚಂದ್ರು ಎಂದು ಕರೆಯಲು ಆರಂಭಿಸಿದರು. ಎಲ್ಲಾ ಒಳ್ಳೆಯದ್ದಕ್ಕೆ ಚಂದ್ರು. ಯಾಕಂದ್ರೆ ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು, ಯಾಕಂದ್ರೆ 'ಕಬ್ಜ' ಸಿನಿಮಾ ಮಾಡಿದ್ರು. ಆದರೆ ಅದಕ್ಕೆ ಒಂದಷ್ಟು ಕಾಮೆಂಟ್ಸ್ ಬಂದಿರಬಹುದು. ಹಾಗಂತ ಬಂದಿರೋ ಎಲ್ಲಾ ಸಿನಿಮಾ ಅದ್ಭುತ ಎನ್ನುವುದಕ್ಕೆ ಆಗಲ್ಲ, ಎಲ್ಲವನ್ನು ಬೆಂಬಲಿಸಬೇಕು, ಕಾಮೆಂಟ್ ಮಾಡುವುದು ಬಿಟ್ಟು ಪ್ರೋತ್ಸಾಹಿಸಬೇಕು" ಎಂದು ಸುದೀಪ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಸುದೀಪ್ "ಚಂದ್ರು ನೀವು 5 ಸಿನಿಮಾ ಅಲ್ಲ, 500 ಸಿನಿಮಾ ಮಾಡಿ. ಕನ್ನಡಕ್ಕೆ ಮಾಡ್ತಿದ್ದೀರಾ ಅಲ್ವಾ ಮಾಡಿ, ಒಳ್ಳೆಯವರು ಜೊತೆಗಿರುವವರೆಗೆ ನಿಮಗೆ ಒಳ್ಳೆಯದೇ ಆಗುತ್ತದೆ. ಚಂದ್ರು ನನ್ನ ಒಳ್ಳೆಯ ಗೆಳೆಯ, ಸಹೋದರ, ಅವನು ಎಷ್ಟು ಕೆಟ್ಟ ಸಿನಿಮಾ ಮಾಡಿದರೂ ನನ್ನ ಸಹೋದರ, ಯಾವಾಗಲೂ ನನ್ನ ಬೆಂಬಲ ಇದ್ದೇ ಇರುತ್ತದೆ" ಎಂದು ಸುದೀಪ್ ವಿವರಿಸಿದ್ದಾರೆ.
ಎರಡು ವರ್ಷಗಳ ಹಿಂದೆ 'ಕಬ್ಜ' ಸಿನಿಮಾ ತೆರೆಗೆ ಬಂದಿತ್ತು. 'KGF' ಸಿನಿಮಾ ರೇಂಜ್‌ನಲ್ಲಿ ಸಿನಿಮಾ ಕಟ್ಟಿಕೊಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿಲ್ಲ. ಸಾಕಷ್ಟು ಟೀಕೆ, ಟ್ರೋಲ್ ಎದುರಿಸಬೇಕಾಯಿತು. ಚಂದ್ರು ಸೇಫ್ ಆದರೂ ವಿತರಕರು ನಷ್ಟ ಅನುಭವಿಸಿದ್ದರು ಎನ್ನಲಾಗಿತ್ತು. ಇದು ಸಹಜವಾಗಿಯೇ ಸುದೀಪ್ ಹಾಗೂ ಉಪೇಂದ್ರ ಅವರಿಗೂ ಬೇಸರ ತಂದಿತ್ತು ಎನ್ನುವ ಊಹಾಪೋಹ ಶುರುವಾಗಿತ್ತು.
ಇನ್ನು 'ಫಾದರ್' ಚಿತ್ರದ ಬಗ್ಗೆ ಹೇಳುವುದಾದರೆ ಮೋಹನ್ ರಾಜ್ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತಂದೆ ಹಾಗೂ ಮಗನ ಬಾಂಧವ್ಯದ ಕತೆ ಚಿತ್ರದಲ್ಲಿದೆ. ಗೌರಾ ಹರಿ ಸಂಗೀತ ನಿರ್ದೇಶನ, ಸುಜ್ಞಾನ್ ಛಾಯಾಗ್ರಹಣ, ರಘುನಾಥ್ ಸಂಕಲನ, ವಿನೋದ್ ಸಾಹಸ ಹಾಗೂ ಸಂತೋಷ್, ಮದನ್ ಹರಿಣಿ ಡ್ಯಾನ್ಸ್ ಕೊರಿಯೋಗ್ರಫಿ ಚಿತ್ರಕ್ಕಿದೆ. ಅಮೃತಾ ಅಯ್ಯಂಗಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಆರ್. ಚಂದ್ರು ತಮ್ಮ ಆರ್. ಸಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ 'ಫಾದರ್' ಚಿತ್ರದ ಜೊತೆ ಇನ್ನು 4 ಸಿನಿಮಾ ಘೋಷಣೆ ಮಾಡಿದ್ದಾರೆ. 'POK', 'ಕಬ್ಜ-2', ಶ್ರೀರಾಮಬಾಣ ಹಾಗೂ 'DOG' ಚಿತ್ರಗಳು ಈ ಲಿಸ್ಟ್‌ನಲ್ಲಿದೆ. ಒಂದು ಚಿತ್ರದಲ್ಲಿ ಸುದೀಪ್ ಕೂಡ ನಟಿಸುವ ಸಾಧ್ಯತೆಯಿದೆ.


Click it and Unblock the Notifications











