ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡುವ ಬಗ್ಗೆ ಕಿಚ್ಚ ಸುದೀಪ್ ಮಾತು
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ವಿಚಾರಧೀನ ಕೈದಿಯಾಗಿ ಸದ್ಯ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಈಗಾಗಲೇ ಈ ಪ್ರಕರಣದ ಬಗ್ಗೆ ಸುದೀಪ್ ಒಮ್ಮೆ ಮಾತನಾಡಿದ್ದರು. ಇದೀಗ ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಟ ಸುದೀಪ್ ದಿಢೀರ್ ಸುದ್ದಿಗೋಷ್ಠಿ ಕರೆಸಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಮುಖ್ಯವಾಗಿ ತಮ್ಮ ಹುಟ್ಟುಹಬ್ಬದ ವಿಚಾರ ಹೇಳಿದ್ದರು. ಈ ಬಾರಿ ಅಭಿಮಾನಿಗಳು ಮನೆ ಬಳಿ ಬರಬೇಡಿ ಎಂಜಿಎಸ್ ಗ್ರೌಂಡ್‌ಗೆ ಬನ್ನಿ ಅಲ್ಲೇ ಎಲ್ಲರಿಗೂ ಸಿಗ್ತೀನಿ ಅಂದ್ರು. ಇನ್ನು ಈ ಬಾರಿ ಬಿಗ್‌ಬಾಸ್ ಶೋ ನಿರೂಪಣೆ ಮಾಡುವ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

ಕೊನೆಗೆ ಮಾಧ್ಯಮಗಳಿಂದ ದರ್ಶನ್ ಜೈಲು ಪ್ರಕರಣದ ಬಗ್ಗೆ ಪ್ರಶ್ನೆಗಳು ಎದುರಾಯಿತು. ಅದಕ್ಕೂ ಸುದೀಪ್ ಪ್ರತಿಕ್ರಿಯಿಸಿದರು. ಪ್ರಶ್ನೆ ಎದುರಾಗುತ್ತಿದ್ದಂತೆ "ನಾನು ಅವರನ್ನು ಹೊರಗೆ ಕರೆಸಬೇಕು ಅಂತೀರಾ ನಾನು ಒಳಗೆ ಹೋಗಬೇಕು ಅಂತೀರಾ? ಎಂದು ಪ್ರತಿ ಪ್ರಶ್ನೆ ಹಾಕಿದರು.
"ನಾನು ಹೇಳಬೇಕಾಗಿರುವುದು ಈಗಾಗಲೇ ಹೇಳಿದ್ದೇನೆ. ಮತ್ತೆ ಹೇಳಲು, ಯಾರ ಮನಸ್ಸು ನೋಯಿಸಲು ಇಷ್ಟಪಡಲ್ಲ. ಅವರಿಗೆ ಒಂದಷ್ಟು ಫ್ಯಾನ್ಸ್, ಅವರಿಗೂ ಒಂದು ಕುಟುಂಬ ಇದೆ. ನಾವು ಮಾತನಾಡುವುದರಿಂದ ಅವರಿಗೆ ನೋವಾಗುವುದು ಬೇಡ, ಮತ್ತೊಂದು ಕಡೆ ಇನ್ನೊಂದು ಕುಟುಂಬ(ರೇಣುಕಾಸ್ವಾಮಿ) ಇದೆ ಅವರಿಗೂ ನೋವು ಬೇಡ. ಕಾನೂನು, ಸರ್ಕಾರ ಇದೆ. ನಂಬಿಕೆ ಇದೆ. ಮಾಧ್ಯಮ ನೋಡಿ ನಮಗೂ ಎಲ್ಲಾ ಗೊತ್ತಾಗುತ್ತಿದೆ" ಎಂದರು.

ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಬೇಕು ಅನ್ನಿಸಿತ್ತಾ? ಎನ್ನುವ ಪ್ರಶ್ನೆ ಸುದೀಪ್ ಉತ್ತರಿಸಿದ್ದಾರೆ. "ನಾವಿಬ್ಬರು ಒಟ್ಟಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೆ ಖಂಡಿತ ನಾನು ಹೋಗಿ ಭೇಟಿ ಮಾಡಿ ಮಾಡುತ್ತಿದ್ದೆ. ಆದರೆ ನಾವಿಬ್ಬರು ಮಾತನಾಡುತ್ತಿಲ್ಲವೇ? ಕೆಲವೊಮ್ಮೆ ಅಂತರ ಯಾಕೆ ಕಾಯ್ದುಕೊಳ್ತೀವಿ ಅಂದ್ರೆ ನಾವು ಸರಿಯಲ್ಲ, ಅವರು ಸರಿಯಿಲ್ಲ ಅಂತಲ್ಲ. ನಾವಿಬ್ಬರು ಒಟ್ಟಿಗೆ ಸರಿಯಿಲ್ಲ ಅಂತ. ಸೂರ್ಯ ಹಗಲು, ಚಂದ್ರ ರಾತ್ರಿ ಬರಬೇಕು. ಆಗಲೇ ಚೆಂದ, ಎರಡೂ ಒಟ್ಟಿಗೆ ಬಂದರೆ ಸಮಸ್ಯೆ ಆಗುತ್ತದೆ" ಎಂದು ಸುದೀಪ್ ಹೇಳಿದ್ದಾರೆ.
"ದರ್ಶನ್ ವ್ಯಕ್ತಿತ್ವದಲ್ಲಿ ತೊಂದರೆ ಇದೆ ಎಂದು ನಾನು ಹೇಳ್ತೀಲ್ಲ. ನಾನು ಬೇರೆ, ಅವರು ಬೇರೆ. ನಮ್ಮಿಬ್ಬರ ಟೇಸ್ಟ್ ಬೇರೆ ಬೇರೆ. ಹಾಗಂತ ನಾವಿಬ್ಬರು ಒಟ್ಟಿಗೆ ಇರಲಿಲ್ಲವೇ. ಆದರೆ ಯಾರೋ ಹೇಳ್ತಾರೆ ಅಂತ ಮಾಡೋಕೆ ಆಗೊಲ್ಲ. ಮನಸ್ಸಿಂದ ಬಂದರೆ ಯಾರು ಏನೆ ಅಂದರೂ ನಾನು ಹೋಗ್ತೀನಿ. ಯಾವುದೋ ಜಾಗದಲ್ಲಿ ಅವರಿಗೆ ಏನೋ ತೊಂದರೆ(ಹೊಸಪೇಟೆ ಘಟನೆ) ಆಯಿತು. ಎಲ್ಲರೂ ಟ್ವೀಟ್ ಮಾಡಿದರು. ನಾನು ಪತ್ರ ಬರೆದೆ"
"ಅವತ್ತು ನಾನು ಪತ್ರ ಬರೆದಿದ್ದು ಯಾರನ್ನೋ ಮೆಚ್ಚಿಸಲು ಅಲ್ಲ. ನನ್ನ ಮನಸ್ಸಿಗೆ ಬಂತು. ಯಾವುದೇ ಕಲಾವಿದರಿಗೂ ಅದು ಆಗಬಾರದು. ಯಾರ ಮೇಲೆ ಎಂತಹ ಕೋಪ ಇದ್ದರೂ ಸಾರ್ವಜನಿಕವಾಗಿ ಆರೀತಿ ಮಾಡಬಾರದಿತ್ತು. ಅದು ನಮ್ಮ ಸಂಸ್ಕೃತಿ ಅಲ್ಲ. ಯಾರು ಅಂತ ಮುಖ್ಯ ಅಲ್ಲ. ನಮ್ಮ ಕರ್ನಾಟಕದಲ್ಲಿ ಅದು ಬೇಡವಾಗಿತ್ತು. ಯಾರೊಬ್ಬರು ಸಾರ್ವಜನಿಕವಾಗಿ ಮುಂದೆ ನಿಲ್ಲಲು ಹೆದರುವಂತ ಪರಿಸ್ಥಿತಿ ಬರಬಾರದು. ಅದಕ್ಕೆ ಪತ್ರ ಬರೆದೆ"
"ಒಬ್ಬ ವ್ಯಕ್ತಿ ಸಮಾಜದಲ್ಲಿ ಅಷ್ಟು ದೊಡ್ಡಮಟ್ಟಿಗೆ ಬೆಳೆದಿದ್ದಾರೆ ಅಂದ್ರೆ ಅವರ ಸ್ವಂತಿಕೆ ಕೂಡ ಇರುತ್ತದೆ. ನಾವು ಯಾರನ್ನು ತಿದ್ದಲು ಸಾಧ್ಯವಿಲ್ಲ. ನನಗೆ ನನ್ನ ಮಗಳು ಜವಾಬ್ದಾರಿ. ಈ ಪ್ರಪಂಚಕ್ಕೆ ಅವಳನ್ನು ತಂದಿದ್ದು ನಾನು. ಅದು ನನ್ನ ಜವಾಬ್ದಾರಿ ಅಂದ್ರೆ ಒಪ್ಪಿಕೊಳ್ತೀನಿ. ಅದು ಬಿಟ್ಟು ಮತ್ತೊಬ್ಬರನ್ನು ತಿದ್ದುವ ಶಕ್ತಿ ನನಗಿಲ್ಲ. ಸ್ನೇಹಿತರಾಗಿದ್ದಾಗ ಕೂತು ಮಾತನಾಡುತ್ತಿದ್ದೆವು. ಅದು ಬೇಡ, ಇದು ಬೇಡ ಎಂದು ಚರ್ಚೆ ಆಗುತ್ತಿತ್ತು. ಆ ಬೌಂಡರಿ ದಾಟಿದ ಮೇಲೆ ಮುಗೀತು" ಎಂದು ಸುದೀಪ್ ವಿವರಿಸಿದ್ದಾರೆ.


Click it and Unblock the Notifications











