Max Boxoffice Day 3; ಸರ್ಕಾರಿ ರಜೆ ವರವಾಯ್ತಾ? 3ನೇ ದಿನ 'ಮ್ಯಾಕ್ಸ್' ಗಳಿಸಿದ್ದೆಷ್ಟು?
ಬಾಕ್ಸಾಫೀಸ್‌ನಲ್ಲಿ 'ಯುಐ' vs 'ಮ್ಯಾಕ್ಸ್' ಪೈಪೋಟಿ ಮುಂದುವರೆದಿದೆ. ವರ್ಷದ ಕೊನೆಗೆ ಬಂದ ಎರಡೂ ಚಿತ್ರಗಳಿಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾಗಳ ಗಳಿಕೆ ಚೆನ್ನಾಗಿದೆ. ವರ್ಷಾಂತ್ಯದ ರಜೆಗಳು ಚಿತ್ರಗಳ ಗಳಿಕೆಗೆ ವರವಾಗಿದೆ. ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿವೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಮಾಸ್ ಪ್ರೇಕ್ಷಕರ ಮನಗೆದ್ದಿದೆ. ಸುದೀಪ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬುಧವಾರ ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಗುರುವಾರ, ಶುಕ್ರವಾರವೂ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ಇನ್ನು ವೀಕೆಂಡ್‌ನಲ್ಲಿ ಕೂಡ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಚಿತ್ರತಂಡ ಕೂಡ ಪ್ರೇಕ್ಷಕರ ರೆಸ್ಪಾನ್ಸ್ ಕಂಡು ಖುಷಿಯಾಗಿದೆ.

ಮೊದಲ ದಿನವೇ 'ಮ್ಯಾಕ್ಸ್' ಸಿನಿಮಾ 14 ರಿಂದ 15 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಬುಕ್‌ಮೈ ಶೋನಲ್ಲಿ ಕೂಡ ಟಿಕೆಟ್ ಬುಕ್ಕಿಂಗ್ ಜೋರಾಗಿ ಇರುವುದು ಗೊತ್ತಾಗುತ್ತಿದೆ. ಸಂಜೆ ಹಾಗೂ ರಾತ್ರಿ ಶೋಗಳು ಹೌಸ್‌ಫುಲ್ ಆಗುತ್ತಿದೆ. ಬುಧವಾರ ಬೆಳ್ಳಂ ಬೆಳಗ್ಗೆ 'ಮ್ಯಾಕ್ಸ್' ಆರ್ಭಟ ಶುರುವಾಗಿತ್ತು. ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದು ರಿವ್ಯೂ ಬಂದಿತ್ತು. ಹಾಗಾಗಿ ಬಳಿಕ ಪ್ರೇಕ್ಷಕರು ಮುಗಿಬಿದ್ದರು.
ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್ ತನು 'ಮ್ಯಾಕ್ಸ್' ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಉಗ್ರಂ ಮಂಜು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಅರ್ಜುನ್ ಮಹಾಕ್ಷಯ್ ಆಗಿ ಸುದೀಪ್ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್ 'ಮ್ಯಾಕ್ಸ್' ಚಿತ್ರದ ಹೈಲೆಟ್. ವೇಗವಾಗಿ ಸಾಗುವ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ. ಭರ್ಜರಿ ಮನರಂಜನೆ ಉಣಬಡಿಸುತ್ತದೆ. ಮುಖ್ಯವಾಗಿ ಆಕ್ಷನ್ ಕಿಕ್ ಕೊಡುತ್ತದೆ. 3 ದಿನಗಳ ಕಲೆಕ್ಷನ್ ಬಗ್ಗೆ ಭರ್ಜರಿ ಚರ್ಚೆ ನಡೀತಿದೆ. ಮೊದಲ ದಿನದ ಗಳಿಕೆ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
'ಮ್ಯಾಕ್ಸ್' ಮೊದಲ ದಿನ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಅಂದಾಜು 14ರಿಂದ 15 ಕೋಟಿ ರೂ. ಗಳಿಕೆ ಕಂಡಿದೆ ಎಂದು ಅಲ್ಲಿನವರು ಹೇಳುತ್ತಿದ್ದಾರೆ. ಇದು ಬಹಳ ಖುಷಿ ಆಗುತ್ತಿದೆ ಎಂದು ನಿರ್ಮಾಪಕ ಕಲೈಪುಲಿ ಎಸ್. ತನು ತಮಿಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಟ್ರೇಡಿಂಗ್ ಪೋರ್ಟಲ್ sacnilk.com ವರದಿ ಪ್ರಕಾರ ಮೊದಲ ದಿನ 'ಮ್ಯಾಕ್ಸ್' ಸಿನಿಮಾ 8.7 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. 2ನೇ 3. 85 ಕೋಟಿ ರೂ. ಹಾಗೂ 3ನೇ ದಿನ 4.15 ಕೋಟಿ ನೆಟ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ. ಆ ಲೆಕ್ಕದಲ್ಲಿ ಮೊದಲ 3 ದಿನಕ್ಕೆ 'ಮ್ಯಾಕ್ಸ್' ಸಿನಿಮಾ 16.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಶುಕ್ರವಾರದ ಸರ್ಕಾರಿ ರಜೆ ಚಿತ್ರದ ಕಲೆಕ್ಷನ್‌ಗೆ ಬಲ ತಂದಿದೆ. 3ನೇ ದಿನ 3000 ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿದ್ದಾಗಿ ವಿತರಕರು ಮಾಹಿತಿ ನೀಡಿದ್ದಾರೆ. ಇನ್ನು ಒಟ್ಟು ಗ್ರಾಸ್ ಕಲೆಕ್ಷನ್ 25 ಕೋಟಿ ರೂ. ಗಡಿ ದಾಟಿರುವ ಅಂದಾಜಿದೆ.
ತೆಲುಗು ಹಾಗೂ ತಮಿಳಿನಲ್ಲಿ 2 ದಿನ ತಡವಾಗಿ 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಿದೆ. ಅಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಹಿಂದಿಯಲ್ಲಿ ದೊಡ್ಡದಾಗಿ ಸಿನಿಮಾ ರಿಲೀಸ್ ಮಾಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ. ಇಂತಹ ಮಾಸ್ ಕಮರ್ಷಿಯಲ್ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಒಳ್ಳೆ ಸ್ಕೋಪ್ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











