ಬಿಡುಗಡೆಗೂ ಮೊದ್ಲೆ 'ಮ್ಯಾಕ್ಸ್' ಹೊಸ ದಾಖಲೆ; ತಾಯಿ ನೆನೆದು ಕಿಚ್ಚ ಸುದೀಪ್ ಭಾವುಕ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ತೆರೆಗಪ್ಪಳಿಸಿದೆ. ಬೆಳ್ಳಂ ಬೆಳಗ್ಗೆ ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಕಿಚ್ಚನ ಆರ್ಭಟ ಜೋರಾಗಿದೆ. ಒಂದ್ಕಡೆ ಉಪೇಂದ್ರ 'ಯುಐ' ದರ್ಬಾರ್ ನಡುವೆಯೂ 'ಮ್ಯಾಕ್ಸ್' ಕಿಕ್ ಸಖತ್ತಾಗಿದೆ.
ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಿಂದಲೇ 'ಮ್ಯಾಕ್ಸ್' ಸಿನಿಮಾ ಹೊಸ ದಾಖಲೆ ಬರೆದಿದೆ. ಮತ್ತೊಂದು ಕಡೆ ತಾಯಿಯನ್ನು ನೆನೆದು ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ. ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ 'ಮ್ಯಾಕ್ಸ್' ಸೆಲೆಬ್ರೇಷನ್ ಶುರುವಾಗಿತ್ತು. ಅದನ್ನು ನೋಡಿ ಕಿಚ್ಚ ಟ್ವೀಟ್ ಮಾಡಿದ್ದಾರೆ.

"ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವುದು ಖುಷಿ ತಂದಿದೆ.
ಇದು ಬಹಳ ಸಂತೋಷದ ಕ್ಷಣ. ಅಷ್ಟೇ ಅಲ್ಲ ಈ ಸಂಭ್ರಮವನ್ನು ಆಚರಿಸಲು ಸಮಯವಾಗಿದ್ದರೂ, ನಾನು ನೋವು ಅನುಭವಿಸುತ್ತಿದ್ದೇನೆ. ನನ್ನ ಪ್ರೀತಿಯ ಅಮ್ಮ ನನ್ನ ಒಂದೇ ಒಂದು ಸಿನಿಮಾವನ್ನು ನೋಡದೇ ತಪ್ಪಿಸಿಲ್ಲ, ನನ್ನ ತಾಯಿ ನೋಡದೇ ಬಿಟ್ಟ ಸಿನಿಮಾಗಳಲ್ಲಿ 'ಮ್ಯಾಕ್ಸ್' ಮೊದಲನೆಯದ್ದು. ಇದು ನೋವುಂಟುಮಾಡುತ್ತದೆ" ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುದೀಪ್ ಅವರ ತಾಯಿ ಸರೋಜಮ್ಮ ಕೆಲವೇ ದಿನಗಳ ಹಿಂದೆ ನಿಧನರಾಗಿದ್ದರು.
ತಾಯಿಯ ನೆನೆಪಿನ ಕಾರ್ಡ್‌ನೊಂದಿಗೆ 'ಮ್ಯಾಕ್ಸ್' ಸಿನಿಮಾ ಆರಂಭವಾಗುತ್ತದೆ ಎಂದು ನನಗೆ ಮೊದಲು ತಿಳಿದಿರಲಿಲ್ಲ. ಅದೇ ಕಾರಣಕ್ಕೆ ನಾನು ಚಿತ್ರದ ಫಸ್ಟ್ ಕಾಪಿ ಇನ್ನು ನೋಡಿಲ್ಲ. ಆ ರೀತಿ ತಾಯಿಯ ಫೋಟೊ ನೋಡುವ ಧೈರ್ಯ ನನಗಿಲ್ಲ. ನನಗಿಂತ ಅಪ್ಪ ಹೇಗೆ ನೋಡುತ್ತಾರೆ. ಬೇರೆ ಯಾರು ನೋಡಲು ಸಾಧ್ಯ. ನಾನು ಹಿಂದಕ್ಕೆ ಹೋಗಿ ತಾಯಿಗೆ ಪೂರ್ಣವಾಗದ ಸಿನಿಮಾ ಕಾಪಿ ತೋರಿಸಿಬೇಕು ಎಂದುಕೊಳ್ಳುತ್ತೇನೆ. ಮಿಸ್ ಯೂ ಅಮ್ಮ' ಎಂದು ಸುದೀಪ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್' ಈ ವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಹೊರ ರಾಜ್ಯಗಳಲ್ಲಿ ಕೂಡ ರಿಲೀಸ್ ಆಗಿದೆ. ಆದರೆ ಎರಡು ದಿನ ತಡವಾಗಿ ಅಂದರೆ ಶುಕ್ರವಾರ ತೆಲುಗು, ತಮಿಳು ವರ್ಷನ್ ತೆರೆಗಪ್ಪಳಿಸಲಿದೆ. ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಹಾಗಾಗಿ ನಾಯಕಿ, ಡ್ಯುಯೆಟ್ ರೀತಿ ಅಂಶಗಳು ಚಿತ್ರದಲ್ಲಿಲ್ಲ.
ಅರ್ಜುನ್ ಮಹಾಕ್ಷಯ್ ಎಂಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಕಲೈಪುಲಿ ಎಸ್ ತನು ಚಿತ್ರಕ್ಕೆ ಹಣ ಹೂಡಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
ಇತ್ತೀಚೆಗೆ ಬುಕ್‌ಮೈ ಶೋನಲ್ಲಿ ಎಷ್ಟು ಟಿಕೆಟ್ ಬುಕ್ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಹಾಗಾಗಿ ಕಳೆದೊಂದು ವರ್ಷಗಳಲ್ಲಿ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಯಾವ ಸಿನಿಮಾ ಹೆಚ್ಚು ಎನ್ನುವ ಚರ್ಚೆ ಅಭಿಮಾನಿಗಳ ನಡುವೆ ಶುರುವಾಗಿದೆ. ಸದ್ಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೂ ಮುನ್ನ 1 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ.
ಈ ವರ್ಷ ಬಿಡುಗಡೆಗೂ ಮುನ್ನ ಬುಕ್‌ಮೈಶೋನಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎನ್ನುವ ಹೆಗ್ಗಳಿಕೆ 'ಮ್ಯಾಕ್ಸ್' ತನ್ನದಾಗಿಸಿಕೊಂಡಿದೆ. ಒಟ್ಟಾರೆ ಬೆಳಗ್ಗೆ 5 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗುವ ಮುನ್ನ 1 ಲಕ್ಷದ 10 ಸಾವಿರ ಟಿಕೆಟ್ ಬುಕ್ ಆಗಿದೆ. ಆ ಮೂಲಕ ಈ ವರ್ಷ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ 'ಮ್ಯಾಕ್ಸ್' ಮೊದಲ ಸ್ಥಾನಕ್ಕೇರಿದೆ.
ಕ್ರಿಸ್‌ಮಸ್ ರಜೆಯ ದಿನ 'ಮ್ಯಾಕ್ಸ್' ಚಿತ್ರ ತೆರೆಗೆ ಬಂದಿದೆ. ಇದು ಸಹಜವಾಗಿಯೇ ಪ್ಲಸ್ ಆಗಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಹಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಅಭಿಮಾನಿಗಳು ಸಿನಿಮಾ ನೋಡಿ ಖುಷಿಯಾಗಿದ್ದಾರೆ.


Click it and Unblock the Notifications











