'ಪಾರು', 'ಮ್ಯಾಕ್ಸ್' ಸಿನಿಮಾ ನಟನ ಆಸೆ ಈಡೇರಲಿಲ್ಲ; ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಇನ್ನಿಲ್ಲ
ಜೀ ಕನ್ನಡದ 'ಪಾರು' ಧಾರಾವಾಹಿ, ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಅಂತಹ ಸಿನಿಮಾದಲ್ಲಿ ನಟಿಸಿದ್ದ ಶ್ರೀಧರ್ ನಾಯಕ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ನಟಿಸಿದ್ದ ಶ್ರೀಧರ್ ನಾಯಕ್ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ನೆರವನ್ನು ಕೋರಿದ್ದರು. ಕಿರುತೆರೆ ತಾರೆಯರು ಹಾಗೂ ಜನರು ಇವರ ಪರಿಸ್ಥಿತಿಯನ್ನು ನೋಡಿ ನೆರವನ್ನು ನೀಡಿದ್ದರು.
ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಶ್ರೀಧರ್ ನಾಯಕ್ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ತೀರಾ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಸಹಾಯ ಕೋರಿದ್ದರು. ಗುರುತು ಸಿಗದಷ್ಟು ನಿತ್ರಾಣರಾಗಿದ್ದ ಶ್ರೀಧರ್ ಅವರು ಕಳೆದ ಹಲವು ದಿನಗಳಿಂದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ನಟ ಶ್ರೀಧರ್ ನಿನ್ನೆ (ಮೇ 26) ಕೊನೆಯುಸಿರೆಳೆದಿದ್ದಾರೆ.

ಸೋಮವಾರ (ಮೇ 26) ರಾತ್ರಿ 10 ಗಂಟೆ ಸುಮಾರಿಗೆ ಶ್ರೀಧರ್ ನಾಯಕ್ ಕೊನೆಯುಸಿರೆಳೆದಿದ್ದು ಇಂದು ಬೆಳಗ್ಗೆ 11 ಗಂಟೆಯವರೆ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಅಂತಿಮ ನಮನಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಕಿರುತೆರೆಯ ಖ್ಯಾತ ಮತ್ತು ಹಿರಿಯ ನಟ ನಾಗೇಂದ್ರ ಶಾ ನಮ್ಮ ನಡುವಿದ್ದ ಕಲಾವಿದ ಶ್ರೀಧರ ನಾಯಕ್ ಬಹಳ ದಿನಗಳ ಅನಾರೋಗ್ಯದಿಂದ ಮುಕ್ತರಾಗಿ ರಾತ್ರಿ ೧೦ ಗಂಟೆಗೆ ದೇವಸನ್ನಿಧಿ ಸೇರಿದ್ದಾರೆ. ಅವರ ಪಾರ್ಥೀವ ಶರೀರವು ಹೆಬ್ಬಾಳದಲ್ಲಿರುವ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಘಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿರುತ್ತಾರೆ. ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಶ್ರೀಧರ್ ನಾಯಕ್ ಅವರು ಕಳೆದ ಕೆಲವು ದಿನಗಳಿಂದ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರು. 'ಪಾರು' ಸೇರಿದಂತೆ 'ವಧು', 'ಮಂಗಳ ಗೌರಿ', 'ಮನೆಯೇ ಮಂತ್ರಾಲಯ' ಸೇರಿದಂತೆ ಬರೋಬ್ಬರಿ 40ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್' ಸಿನಿಮಾದಲ್ಲಿಯೂ ನಟಿಸಿದ್ದರು. ಇಷ್ಟೇ ಅಲ್ಲದೆ. 'ರಾಜಾಮಾರ್ತಾಂಡ', 'ಈಶ ಮಹೇಶ' ಸೇರಿದಂತೆ ತಮಿಳು ಸಿನಿಮಾಗಳಲ್ಲಿಯೂ ಶ್ರೀಧರ್ ನಾಯಕ್ ಅಭಿನಯಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಶ್ರೀಧರ್ ನಾಯಕ್ ಅವರಿಗೆ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇನ್ನೊಂದು ಕಡೆ ಕೌಟುಂಬಿಕ ಸಮಸ್ಯೆ ಕೂಡ ಇತ್ತು. ಆ ವೇಳೆ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಶ್ರೀಧರ್ ನಾಯಕ್ ಪರದಾಡಿದ್ದರು. ಚಿಕ್ಕ ಪುಟ್ಟ ಕೆಲಸ ಸಿಗುತ್ತಿತ್ತು. ಜೊತೆಗೆ ದೊಡ್ಡ ಪಾತ್ರಗಳೇನು ಸಿಗುತ್ತಿರಲಿಲ್ಲ. ಹೀಗಾಗಿ ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗುತ್ತಿತ್ತು ಎಂದು ಹೇಳಿಕೊಂಡಿದ್ದರು. ಊಟ ಸರಿಯಾಗಿ ಮಾಡದೆ ದೇಹದಲ್ಲಿ ವಿಟಮಿನ್ ಹಾಗೂ ಪ್ರೋಟಿನ್ ಕಡಿಮೆಯಾಗಿತ್ತು. ಇದರಿಂದ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಯ್ತು ಎಂದು ಸ್ವತ: ಶ್ರೀಧರ್ ನಾಯಕ್ ಹೇಳಿಕೊಂಡಿದ್ದರು.


Click it and Unblock the Notifications











