"ಬೇರೆ ನಟರ ಜೊತೆ ಪೈಪೋಟಿಗಾಗಿ ಅಪ್‌ಡೇಟ್ ಕೊಡೋಕ್ಕಾಗಲ್ಲ"; ಸುದೀಪ್ ಹೀಗಂದಿದ್ಯಾಕೆ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಸಿಸಿಎಲ್ ಸೀಸನ್ 10ಕ್ಕೆ ದಿನಗಣನೆ ಶುರುವಾಗಿದೆ. ಓಟಿಟಿಯಲ್ಲಿ ಬಿಗ್‌ಬಾಸ್ ಶೋ ಬರುತ್ತದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಇನ್ನು 'ಮ್ಯಾಕ್ಸ್' ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ.
'ವಿಕ್ರಾಂತ್ ರೋಣ' ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೀತು. ಆ ಬಳಿಕ ಕಿಚ್ಚನ ಯಾವುದೇ ಸಿನಿಮಾ ಬಂದಿಲ್ಲ. ಇನ್ನು ಬರೋಬ್ಬರಿ 1 ವರ್ಷದ ಬಿಡುವಿನ ಬಳಿಕ ಸುದೀಪ್ 'ಮ್ಯಾಕ್ಸ್' ಸಿನಿಮಾ ಘೋಷಣೆ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಭರದಿಂದ ಚಿತ್ರೀಕರಣ ನಡೀತಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು 'ಮ್ಯಾಕ್ಸ್' ಸಿನಿಮಾ ಅಪ್‌ಡೇಟ್ ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ಸುದೀಪ್‌ಗೆ ಉತ್ತರಿಸಿ ಸಾಕಾಗಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ಕಾತುರತೆಯನ್ನು ಅರ್ಥ ಮಾಡಿಕೊಂಡಿರುವ ಸುದೀಪ್ ಈ ಬಗ್ಗೆ ಮತ್ತೊಮ್ಮೆ ಕಿಚ್ಚ ಪ್ರತಿಕ್ರಿಯಿಸಿದ್ದಾರೆ. ಬೆಳ್ಳಂಬೆಳಗ್ಗೆ X ಖಾತೆ(ಟ್ವಿಟ್ಟರ್) ಯಲ್ಲಿ ಬರೆದಿದ್ದಾರೆ.
"ಎಲ್ಲಾ ಸ್ನೇಹಿತರಿಗೆ ಶುಭೋದಯ, ಪ್ರೀತಿ ತುಂಬಿದ ಅಪ್ಪುಗೆ. ಅಪ್‌ಡೇಟ್ಸ್ ಬಗ್ಗೆ ಹರಿದುಬರುತ್ತಿರುವ ಟ್ವೀಟ್‌ಗಳನ್ನು ನೋಡಿ ಖುಷಿಯಾಗುತ್ತದೆ. ಆದರೆ ಬೇರೆ ನಟರ ಸಿನಿಮಾಗಳು ಬಿಡುಗಡೆ ಆಗಿದೆ ಎಂದು ಅಥವಾ ಬೇರೆ ನಟರಿಗೆ ಪೈಪೋಟಿ ಕೊಡಬೇಕೆಂದು ಅಪ್‌ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಲು ಸಿದ್ಧವಿದ್ದಾಗ ಮಾತ್ರ ಅಪ್‌ಡೇಟ್ ಕೊಡಲು ಸಾಧ್ಯ" ಎಂದಿದ್ದಾರೆ.
"ನನ್ನ ಕೆಲಸದ ಮೇಲೆ ನೀವು ಅಭಿಮಾನಿಗಳು ತೋರುತ್ತಿರುವ ಪ್ರೀತಿಗೆ ಖುಷಿಯಾಗುತ್ತದೆ. ಆದರೆ ಬಿಗ್‌ಬಾಸ್ ಅಥವಾ ಸಿಸಿಎಲ್ ಮೇಲಿನ ವ್ಯಂಗ್ಯ ಸರಿಯಲ್ಲ. ಇದು ಚಿತ್ರದ ಕಡೆಗೆ ಒಬ್ಬರ ಆಸಕ್ತಿ, ಕುತೂಹಲವನ್ನು ಪ್ರದರ್ಶಿಸುವ ಮಾರ್ಗವಲ್ಲ. 'ಮ್ಯಾಕ್ಸ್' ಸಿನಿಮಾ ಚೆನ್ನಾಗಿ ರೂಪುಗೊಳುತ್ತಿದೆ. ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆ ನಮ್ಮ ಮೊದಲ ಆದ್ಯತೆ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಸುದೀಪ್ ಟ್ವೀಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸರಿ ಸರ್, ಇನ್ನು ಮುಂದೆ 'ಮ್ಯಾಕ್ಸ್' ಅಪ್‌ಡೇಟ್ ಕೇಳಿ ಕಾಟ ಕೊಡಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಮ್ಯಾಕ್ಸ್' ಸಿನಿಮಾ ವಿಚಾರಕ್ಕೆ ಬಂದರೆ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. 'ಮಹಾಬಲಿಪುರಂ' ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ.
ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ, ತಮಿಳು ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ.

'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದ ನಡುವೆಯೇ ಸುದೀಪ್ ಬಿಗ್‌ಬಾಸ್ ಸೀಸನ್ 10 ಶೋ ನಿರೂಪಣೆ ಮಾಡಿದ್ದರು. ಮಹಾಬಲೀಪುರಂನಲ್ಲಿ ಸಿನಿಮಾ ಚಿತ್ರೀಕರಣ ಇದ್ದರೂ ಪ್ರತಿ ವೀಕೆಂಡ್ ಬೆಂಗಳೂರಿಗೆ ಬಂದು ಬಿಗ್‌ಬಾಸ್ ಶೋ ವೇದಿಕೆ ಏರುತ್ತಿದ್ದರು. ಕಿಚ್ಚನ ನಿರೂಪಣೆಯಲ್ಲಿ 10 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸ್ಪರ್ಧಿಗಳು ಚೆನ್ನಾಗಿ ಆಡಿದಾ ಚಪ್ಪಾಳೆ ತಟ್ಟುತ್ತಾ ತಪ್ಪು ಮಾಡಿದಾಗ ಬುದ್ದಿ ಹೇಳುತ್ತಾ ಸುದೀಪ್ ಶೋ ನಿರೂಪಣೆ ವೀಕ್ಷಕರಿಗೂ ಅಚ್ಚುಮೆಚ್ಚು.
ಸುದೀಪ್ ಈಗಾಗಲೇ 3 ಕಥೆಗಳನ್ನು ಫೈನಲ್ ಮಾಡಿದ್ದಾರೆ. ಈ ವರ್ಷವೇ 2 ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ. ಇನ್ನು ಫೆಬ್ರವರಿ 23ರಿಂದ ಸಿಸಿಎಲ್ 10ನೇ ಸೀಸನ್ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಕಿಚ್ಚ 'ಕರ್ನಾಟಕ ಬುಲ್ಡೊಜರ್ಸ್' ತಂಡವನ್ನು ಮುನ್ನಡೆಸಲಿದ್ದಾರೆ.


Click it and Unblock the Notifications











