ಅಮೆರಿಕಾದಲ್ಲಿ ಮೇ 12 ರಂದು 'ವಿಜಯ ಪ್ರಕಾಶ್ ಡೇ'ಯಾಗಿ ಘೋಷಣೆ
ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರಿಗೆ ಅಮೇರಿಕಾದಲ್ಲಿ ಒಂದು ಅತ್ಯುನ್ನತ ಗೌರವ ಸಿಕ್ಕಿದೆ. ಅವರ ಹಾಡುಗಳನ್ನು ಕೇಳಿದ ಅಲ್ಲಿನ ಕನ್ನಡಿಗರು ಮೇ 12 ರಂದು 'ವಿಜಯ ಪ್ರಕಾಶ್ ಡೇ'ಯನ್ನಾಗಿ ಆಚರಿಸಲು ನಿರ್ಧಾರ ಮಾಡಿದ್ದಾರೆ.
ಎರಡು ತಿಂಗಳ ಹಿಂದೆ ವಿಜಯ ಪ್ರಕಾಶ್ ಅಮೇರಿಕಾದ ಕಾನ್ಕಾರ್ಡ್ ನಲ್ಲಿ ಒಂದು ಕಾರ್ಯಕ್ರಮ ನೀಡಿದ್ದರು. ಅಮೇರಿಕಾದ ಶಾರ್ಲೆಟ್ ಕನ್ನಡ ಸಂಘ ದಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ ಪ್ರಕಾಶ್ ಹಾಡಿಗಳನ್ನು ಕೇಳಿದ ಅಲ್ಲಿನ ಮೇಯರ್ ವಿಲಿಯಂ ಸಿ ಸಿಕ್ಕಾಪಟ್ಟೆ ಖುಷಿಯಾದರು.
ಅದೇ ಕಾರ್ಯಕ್ರಮದಲ್ಲಿ ಮುಂದಿನ ವರ್ಷದಿಂದ ಮೇ 12 ರಂದು 'ವಿಜಯ ಪ್ರಕಾಶ್ ಡೇ' ಎಂದು ಪ್ರತಿ ವರ್ಷ ಆಚರಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು. ವಿಶೇಷ ಅಂದರೆ, ಒಬ್ಬ ಕನ್ನಡದ ಗಾಯಕನಿಗೆ ಅಮೇರಿಕಾದಲ್ಲಿ ಇಂತಹ ದೊಡ್ಡ ಗೌರವ ಸಿಕ್ಕಿದ್ದು, ಇದೇ ಮೊದಲಂತೆ.

ಅಂದಹಾಗೆ, ತಮ್ಮ ಈ ಸಂತೋಷ ಸಂಗತಿಯನ್ನು ವಿಜಯ ಪ್ರಕಾಶ್ ಕನ್ನಡದ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಅಲ್ಲಿನ ಕನ್ನಡಿಗರ ಮುಂದೆ ಹಾಡುವುದು ಬಹಳ ಖುಷಿ ನೀಡುವ ವಿಷಯ ಎಂದಿದ್ದಾರೆ.

ಮೈಸೂರಿನ ಈ ಹೆಮ್ಮೆಯ ಗಾಯಕ ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಹೀಗೆ ಸಾಕಷ್ಟು ಭಾಷೆಗಳಲ್ಲಿ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ.


Click it and Unblock the Notifications











