»   » ‘ಮಾಯಾಮೃಗ’ವಾದ ಮಾನದಂಡ, ಲೆಕ್ಕಕ್ಕೇ ಬಾರದ ‘ಸಾಧನೆ’.

‘ಮಾಯಾಮೃಗ’ವಾದ ಮಾನದಂಡ, ಲೆಕ್ಕಕ್ಕೇ ಬಾರದ ‘ಸಾಧನೆ’.

Posted By: Staff
Subscribe to Filmibeat Kannada

ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರ ಕಿರುತೆರೆಯ ಧಾರಾವಾಹಿಗಳಿಗೆ ಪ್ರಶಸ್ತಿ ಘೋಷಿಸಿದೆ. 1998ರಲ್ಲಿ ಪ್ರಸಾರ ಆರಂಭಿಸಿ 2000ದಲ್ಲಿ ಕೊನೆಯಾದ 'ಮಾಯಾಮೃಗ" ಹಾಗೂ 1999ರಲ್ಲಿ ಆರಂಭವಾಗಿ ಇನ್ನೂ ಕೊನೆಕಾಣದೆ ಇರುವ 'ಸಾಧನೆ" ಮೆಗಾ ಧಾರಾವಾಹಿಗಳನ್ನು ಸರ್ಕಾರ ಅತ್ಯುತ್ತಮ ಮೆಗಾ ಸೀರಿಯಲ್‌ಗಳೆಂದು ಪರಿಗಣಿಸಿ ಪ್ರಶಸ್ತಿ ನೀಡಿದೆ. ಜೊತೆಗೆ ದೂರದರ್ಶನ ನಿರ್ಮಾಣದ 'ದೀಪಾವಳಿ" ಮತ್ತು 'ವಿಮೋಚನೆ" ಸಾಕ್ಷ್ಯ ಚಿತ್ರಗಳಿಗೆ ಪ್ರಶಸ್ತಿ ಬಂದಿದೆ.

ನಮ್ಮ ಸಹೋದ್ಯಾಗಿಗಳು ಪ್ರಶಸ್ತಿಗೆ ಪಾತ್ರರಾಗಿರುವ ಬಗ್ಗೆ ನಮಗೆ ಸಂತೋಷವಾಗಿದೆ ಮತ್ತು ಈ ಎಲ್ಲ ಪ್ರಶಸ್ತಿ ವಿಜೇತರನ್ನು ನಾವು ಆಭಿನಂದಿಸುತ್ತೇವೆ. ಕರ್ನಾಟಕದಲ್ಲಿ ದೂರದರ್ಶನ ಆರಂಭವಾಗಿ 15 ವರ್ಷಗಳ ನಂತರವಾದರೂ ಸರ್ಕಾರದ ಕಣ್ಣಿಗೆ ಬಿದ್ದಿರುವುದು ಮತ್ತು ಪ್ರಶಸ್ತಿ ನೀಡಲು ಅರ್ಹವಾದ ಸೀರಿಯಲ್ಲುಗಳು ಪ್ರಸಾರವಾಗುತ್ತಿವೆ ಎನ್ನುವುದು ಅರಿವಾದದ್ದು ಶ್ಲಾಘನೀಯ.

ಆದರೆ, ಈ ಪ್ರಶಸ್ತಿಗಳು ಇನ್ನಷ್ಟು ಗೌರವಾನ್ವಿತ ಆಗಬಹುದಾಗಿತ್ತು ಮತ್ತು ಅಪಮೌಲ್ಯಗೊಳ್ಳದೇ ಇರಬಹುದಾಗಿತ್ತು ಎಂದು ನಮಗೆ ಅನ್ನಿಸುತ್ತದೆ. ಅದರ ಹಿಂದಿನ ಉದ್ದೇಶಗಳು ಸ್ಪಷ್ಟವಾಗದೇ ಹೋದರೆ, ಆಯ್ಕೆ ಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ತಲೆಯೆತ್ತಿದರೆ, ಅಂಥ ಪ್ರಶಸ್ತಿ ತಂದುಕೊಡುವುದು ಗೌರವವನ್ನಲ್ಲ, ಅಪಮಾನವನ್ನು. ಈ ದೆಸೆಯಲ್ಲಿ ಸರ್ಕಾರ ನೀಡಿರುವ ಕಿರುತೆರೆ ಪ್ರಶಸ್ತಿಗಳನ್ನು ನಾವು ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಶಸ್ತಿ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವುಗಳು ಹೀಗಿವೆ:

ಪ್ರಶಸ್ತಿಯ ಹುಟ್ಟು : ಪ್ರಶಸ್ತಿಯು ಅಸ್ತಿತ್ವಕ್ಕೆ ಬಂದಿದ್ದು ಯಾವ ವರ್ಷದಿಂದ. ಎಲ್ಲರಿಗೂ ಗೊತ್ತಿರುವ ಪ್ರಕಾರ ಪ್ರಶಸ್ತಿ ಘೋಷಣೆಯಾಗಿದ್ದು 2001ರ ಏಪ್ರಿಲ್‌ ತಿಂಗಳಿನಲ್ಲಿ. ಅಂದ ಮೇಲೆ ಸರ್ಕಾರ ಕಳೆದ ವರ್ಷ ಪ್ರಸಾರವಾದ ಟೀವಿ ಸೀರಿಯಲ್‌ಗಳಿಗೆ ಪ್ರಶಸ್ತಿ ನೀಡಿದ್ದರೆ ಸಮಂಜಸ ಎನಿಸುತ್ತಿತ್ತು. ಅಥವಾ ಸರ್ಕಾರಕ್ಕೆ ಇನ್ನಷ್ಟು ಔದಾರ್ಯ ತೋರಬೇಕು ಅನ್ನಿಸಿದ್ದರೆ ಮೂರು, ನಾಲ್ಕು ಅಥವಾ ಐದು ವರ್ಷಗಳಲ್ಲಿ ಪ್ರಸಾರವಾದ ಸೀರಿಯಲ್ಲುಗಳಿಗೆ ಪ್ರಶಸ್ತಿ ನೀಡಬಹುದಾಗಿತ್ತು. ಆದರೆ, ಹಾಗೆ ಮಾಡದೆ ಸರ್ಕಾರ ಕೇವಲ ಮಾಯಾಮೃಗದಿಂದಲೇ ಆರಂಭಿಸಿದ್ದು ಏಕೆ? ಮಾನ್ಯ ವಾರ್ತಾ ಸಚಿವ ಬಿ.ಕೆ. ಚಂದ್ರಶೇಖರ್‌ ಅವರ ಧರ್ಮಪತ್ನಿ ಲಕ್ಷ್ಮೀ ಚಂದ್ರಶೇಖರ್‌ ಅವರು ಮಾಯಾಮೃಗದಲ್ಲಿ ನಟಿಸಿದ್ದರಿಂದ, ಆ ಧಾರಾವಾಹಿಯನ್ನು ಮಾನ್ಯ ಮಂತ್ರಿಗಳು ನೋಡಿದ್ದರು ಎಂಬ ಕಾರಣಕ್ಕಾಗಿ ಇರಲಿಕ್ಕಿಲ್ಲ ಅಲ್ಲವೇ?

ಪ್ರಶಸ್ತಿಯ ವಿಭಾಗಗಳು : ಸಾಮಾನ್ಯವಾಗಿ ಒಂದು ಪ್ರಶಸ್ತಿಯನ್ನು ಒಂದು ವಿಭಾಗಕ್ಕೆಂದು ನೀಡಲಾಗುತ್ತದೆ. ಸಿನಿಮಾದಲ್ಲಾದರೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಸಂಗೀತ ಮೊದಲಾದ ಹತ್ತು - ಹದಿನೆಂಟು ವಿಭಾಗಗಳಿವೆ. ಆದರೆ, ಕಿರುತೆರೆಯಲ್ಲಿ, ಅತ್ಯುತ್ತಮ ಮೆಗಾ ಧಾರಾವಾಹಿ ಎಂಬ ಒಂದೇ ಒಂದು ಪ್ರಶಸ್ತಿ ನೀಡಲಾಗಿದೆ. ಅಂದರೆ ಈ ಪ್ರಶಸ್ತಿ ಯಾರಿಗೆ ಸಲ್ಲಬೇಕು. ನಿರ್ಮಾಪಕರಿಗೇ, ಪ್ರಸಾರಕ್ಕೆ ಅವಕಾಶ ಕೊಟ್ಟ ದೂರದರ್ಶನಕ್ಕೇ, ನಿರ್ದೇಶಕರಿಗೇ, ಎಪಿಸೋಡ್‌ ನಿರ್ದೇಶಕರಿಗೇ, ಚಿತ್ರಕತೆ - ಸಂಭಾಷಣೆ ಬರೆದವರಿಗೇ ಅಥವಾ ಧಾರಾವಾಹಿ ಪೂರ್ತಿಯಾಗುವುದಕ್ಕೆ ಸಹಕರಿಸಿದ ಪ್ರಾಯೋಜಕರಿಗೇ! ಇದ್ಯಾವುದನ್ನೂ ಪ್ರಶಸ್ತಿ ಸ್ಪಷ್ಟಪಡಿಸಿಲ್ಲ. ಬಹುಶಃ ಸ್ಪಷ್ಟಪಡಿಸುವ ಸೂಚನೆಗಳೂ ಕಾಣಿಸುತ್ತಿಲ್ಲ.

English summary
First ever tele awards in kannada falls to controversy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada