»   » ಕಿರುತೆರೆ ಪ್ರಶಸ್ತಿಯ ಬಗ್ಗೆ ದೂರದರ್ಶನ ನಿರ್ದೇಶಕ - ನಿರ್ಮಾಪಕರ ಅಸಮಾಧಾನ

ಕಿರುತೆರೆ ಪ್ರಶಸ್ತಿಯ ಬಗ್ಗೆ ದೂರದರ್ಶನ ನಿರ್ದೇಶಕ - ನಿರ್ಮಾಪಕರ ಅಸಮಾಧಾನ

Posted By: Staff
Subscribe to Filmibeat Kannada

ಪ್ರಶಸ್ತಿ ಅವಧಿ ಮತ್ತು ಸಲ್ಲಿಕೆ : ಪ್ರತಿಯಾಂದು ಪ್ರಶಸ್ತಿಗೂ ಒಂದು ಆಯ್ಕೆ ಸಮಿತಿ ಇರುತ್ತದೆ. ಆ ಸಮಿತಿಗೊಬ್ಬರು ಅಧ್ಯಕ್ಷರು ಇರುತ್ತಾರೆ. ಸದಸ್ಯರೂ ಅಧ್ಯಕ್ಷರೂ ಸೇರಿ ಯಾವುದಕ್ಕೆ ಪ್ರಶಸ್ತಿ ನೀಡುತ್ತಾರೋ ಆ ಸಿನಿಮಾವನ್ನೋ, ನಾಟಕವನ್ನೋ ನೋಡುತ್ತಾರೆ. ಪರಸ್ಪರ ಚರ್ಚೆ ನಡೆಸುತ್ತಾರೆ. (ಪ್ರಭಾವಗಳೂ, ಲಾಬಿಗಳೂ ಕೆಲಸ ಮಾಡುತ್ತವೆ!).

ಆದರೆ, ಇದಕ್ಕೂ ಮುಂಚೆ ಸರ್ಕಾರವಾಗಲೀ, ಖಾಸಗಿ ಸಂಸ್ಥೆಗಳಾಗಲೀ, ಪ್ರಶಸ್ತಿಗಾಗಿ ಕೃತಿಗಳನ್ನು, ಸಿನಿಮಾಗಳನ್ನು ಆಹ್ವಾನಿಸುತ್ತವೆ. ಅವುಗಳನ್ನು ಕಳುಹಿಸುವುದಕ್ಕೊಂದು ಕೊನೆಯ ದಿನಾಂಕ ಮತ್ತು ಅವಧಿ ಇರುತ್ತದೆ. ಉದಾಹರಣೆಗೆ ಸಿನಿಮಾದಲ್ಲಾದರೆ 1999 -2000 ಸಾಲಿನಲ್ಲಿ ಸೆನ್ಸಾರ್‌ ಆದ ಚಿತ್ರಗಳನ್ನು 2001ರ ಮಾರ್ಚ್‌ 31ರೊಳಗೋ ಅಕ್ಟೋಬರ್‌ ಒಳಗೋ ಸಲ್ಲಿಸದಕ್ಕದ್ದು ಎಂಬ ಸ್ಪಷ್ಟ ನಿಯಮವಿರುತ್ತದೆ. ಪುಸ್ತಕ ಪ್ರಶಸ್ತಿಯಾದರೆ 2000 ಇಸವಿಯಲ್ಲಿ ಪ್ರಕಟವಾದ ಪುಸ್ತಕ ಎಂದು ಸ್ಪಷ್ಟಪಡಿಸಿ, ಕೊನೆಯ ದಿನಾಂಕ ಸೂಚಿಸಿರುತ್ತಾರೆ.

ಈ ಕಿರುತೆರೆ ಪ್ರಶಸ್ತಿ ಇವ್ಯಾವುದರ ಹಂಗಿಲ್ಲದೆ ಹುಟ್ಟಿಕೊಂಡಿದ್ದು. ಇಲ್ಲಿ ಕೊನೆಯ ದಿನಾಂಕವನ್ನಾಗಲೀ, ಅವಧಿಯನ್ನಾಗಲೂ ಸರಕಾರ ಸ್ಪಷ್ಟಪಡಿಸಿಲ್ಲ. ತಮಾಷೆಯ ಸಂಗತಿಯೆಂದರೆ ಈ ಪ್ರಶಸ್ತಿಗಳಿಗೆ ಸೀರಿಯಲ್ಲುಗಳನ್ನು ಆಹ್ವಾನಿಸಿಯೇ ಇಲ್ಲ. ಇದ್ದಕ್ಕಿದ್ದ ಹಾಗೆ ವಿಧಾನಸೌಧದಿಂದ ಪ್ರಕಟಣೆಯಾಂದು ಹೊರಬಿದ್ದಿದೆ. ಅಬ್ಬೇಪಾರಿ ಎನ್ನಬಹುದಾದ ಪ್ರಶಸ್ತಿಗಳನ್ನು ಅವರವರ ಅನುಕೂಲಕ್ಕೆ ತಕ್ಕಂತೆ ನೀಡಲಾಗಿದೆ.

ಪ್ರಶಸ್ತಿಯ ಮಾನದಂಡ : ಪ್ರತಿಯಾಂದು ಪ್ರಶಸ್ತಿಗೂ ಒಂದು ಮಾನದಂಡ ಇರುತ್ತದೆ. ಸಿನಿಮಾಗಳಲ್ಲಿ ಸರ್ಕಾರಿ ಪ್ರಶಸ್ತಿಯಾದರೆ ಸಭಿರುಚಿ, ಖಾಸಗಿ ಪ್ರಶಸ್ತಿಯಾದರೆ ಜನಪ್ರಿಯತೆ, ಉದ್ಯಮ ನೀಡುವ ಪ್ರಶಸ್ತಿಯಾದರೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ - ಹೀಗೆ ನಿಗದಿತ ಮಾನದಂಡಗಳ ಆಧಾರದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಆದರೆ, ಆಯ್ಕೆ ಸಮಿತಿಯೇ ಇಲ್ಲದ ಕಿರುತೆರೆ ಪ್ರಶಸ್ತಿಗೆ ಮಾನದಂಡವೇ ಇಲ್ಲವಲ್ಲ. ಯಾವ ಸಾಧನೆಗೆ ಈ ಪ್ರಶಸ್ತಿ ಅನ್ನುವುದನ್ನು ಹೇಳುವ ಶಕ್ತಿ ಸರ್ಕಾರಕ್ಕೆ ಇದೇಯೇ? ನಮ್ಮಲ್ಲಿ ಶಿಕ್ಷೆಯಾದವನಿಗೂ, ತನಗೇಕೆ ಶಿಕ್ಷೆಯಾಗಿದೆ ಎಂದು ತಿಳಿಯುವ ಹಕ್ಕಿದೆ. ಹಾಗಿರುವಾಗ ಪ್ರಶಸ್ತಿ ಪಡೆದುಕೊಂಡವರಿಗೆ ತಮಗೆ ಯಾಕೆ ಪ್ರಶಸ್ತಿ ಬಂದಿದೆ ಎಂದು ತಿಳಿದಿಕೊಳ್ಳುವ ಹಕ್ಕಿಲ್ಲ ಎಂದರೆ ಹೇಗೆ?

ಕೆಲವು ಪ್ರಶ್ನೆಗಳು : 1. ಸಾಧನೆ ಮೆಗಾಸೀರಿಯಲ್ಲು ಇದೀಗ 200ಕ್ಕೂ ಹೆಚ್ಚು ಕಂತುಗಳನ್ನು ಪೂರೈಸಿದೆ. ಇನ್ನೂ ಅದು ಕೊನೆಗೊಂಡಿಲ್ಲ. ಕೊನೆಯಾಗದ ಸೀರಿಯಲ್‌ ಒಂದನ್ನು ಅತ್ಯುತ್ತಮ ಎಂದು ಪರಿಗಣಿಸಿದ್ದು ಹೇಗೆ?

2. ಒಂದು ಎಪಿಸೋಡ್‌ ಅಥವಾ ಎರಡು ಎಪಿಸೋಡ್‌ಗಳನ್ನು ನೋಡಿ ಸೀರಿಯಲ್‌ ಅತ್ಯುತ್ತಮ ಎಂದು ಹೇಳಿದ್ದಾರೆ ಅನುವುದಾದರೆ, ಆ ಎಪಿಸೋಡ್‌ಗಳ ಆಯ್ಕೆ ಮಾಡಿದ್ದು ಯಾರು? ನಿರ್ದೇಶಕರೇ ಕೊಟ್ಟಿದ್ದಾರೆಯೇ ಅಥವಾ ಸರ್ಕಾರವೇ ಆರಿಸಿಕೊಂಡಿದೆಯೇ? ಹಾಗೆ ಎಪಿಸೋಡ್‌ಗಳನ್ನು ನೋಡಿದ ಬಗ್ಗೆ ಏನಾದರೂ ಸಾಕ್ಷ್ಯ ಇದೆಯೇ? ಟಿಪ್ಪಣಿಗಳನ್ನು ಮಾಡಿಕೊಂಡಿದ್ದರೆ ಅವು ಎಲ್ಲಿವೆ?

3. ಸೀರಿಯಲ್‌ಗಳು ನಡೆಯುವುದು ಪ್ರಾಯೋಜಕರ ಬಲದಿಂದ ಒಂದು ಚಿತ್ರಕ್ಕೆ ಪ್ರಶಸ್ತಿ ಬರುವ ಹೊತ್ತಿಗೆ ಅದು ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿರುತ್ತದೆ. ಆದರೆ ಇನ್ನೂ ಮುಗಿಯದೇ ಇರುವ ಧಾರಾವಾಹಿಯಾಂದಕ್ಕೆ ಪ್ರಶಸ್ತಿ ನೀಡಿದಾಗ, ಸಹಜವಾಗಿಯೇ ಪ್ರಾಯೋಜಕರನ್ನು ಸರ್ಕಾರ ಪ್ರಭಾವಿಸಿದಂತಾಗಿದೆ. ಹೀಗಾಗಿ ಆ ಧಾರಾವಾಹಿಗೆ ಹೆಚ್ಚು ಜಾಹೀರಾತು ಹರಿದು ಬರುವುದು ಖಂಡಿತ. ಇದೂ ಒಂದು ಪೂರ್ವಯೋಜಿತ ಸಂಚು ಇರಬಹುದೇ? ಬರುವ ಹೆಚ್ಚವರಿ ಆದಾಯವನ್ನು ಹಂಚಿಕೊಳ್ಳುವ ಸಮಿತಿಯಲ್ಲಿ ಯಾರಿದ್ದಾರೆ ಎಂಬ ಅನುಮಾನಕ್ಕೆ ಉತ್ತರ ಸಿಗಬಹುದೇ?

4. ಜನಪ್ರಿಯತೆಯೇ ಪ್ರಶಸ್ತಿಗೆ ಆಧಾರ ಅನ್ನುವುದಾದರೆ ಜನಪ್ರಿಯತೆಯ ಮಾನದಂಡ ಯಾವುದು? ಟಿಆರ್‌ಪಿ - ವೀಕ್ಷಕ ಸಂಶೋಧನಾ ಸಮೀಕ್ಷೆಯ ಪ್ರಕಾರ ಮೊದಲ ಸ್ಥಾನದಲ್ಲಿದ್ದದ್ದು ಜನನಿ ಮತ್ತು ಮನೆತನ. ಮಾಯಾಮೃಗ ಜನಪ್ರಿಯತೆ ಗಳಿಸಿದ್ದು ತನ್ನ ಕೊನೆಯ ದಿನಗಳಲ್ಲಿ - ಮುನ್ನೂರು ಎಪಿಸೋಡ್‌ಗಳ ನಂತರ. ಅದಕ್ಕೆ ಕಾರಣ ಪತ್ರಿಕಾ ಪ್ರಚಾರವೆನ್ನುವುದು ಎಲ್ಲರಿಗೂ ಗೊತ್ತಿದೆ.

5. ಇದೇ ಮಾನದಂಡ ಇಟ್ಟುಕೊಂಡಿದ್ದರೆ, ದೂರದರ್ಶನದಲ್ಲಿ ಪ್ರಸಾರವಾಗುವ ಮೆಗಾ ಧಾರಾವಾಹಿಗಳ ಪೈಕಿ ಭಾಗ್ಯಚಕ್ರ ಹಾಗೂ ಸಮಾಗಮ ಮುಂಚೂಣಿಯಲ್ಲಿದ್ದರೆ, ಸಾಧನೆ ನಂತರದ ಸ್ಥಾನದಲ್ಲಿದೆ. ಜನಪ್ರಿಯತೆಯೇ ಆಧಾರ ಅನ್ನುವುದಾದರೆ ಇದಕ್ಕೇನು ಉತ್ತರ ಇದೆ ಸರ್ಕಾರದ ಹತ್ತಿರ?

6. ಅವಸರವಸರವಾಗಿ ಪ್ರಶಸ್ತಿ ನೀಡಬೇಕಾಗಿ ಬಂದಿದ್ದರಿಂದ ಮಾನದಂಡಗಳನ್ನು ಗಮನಕ್ಕೆ ತೆಕೆದುಕೊಳ್ಳಲಾಗಿಲ್ಲ ಎನ್ನೋದು ಸರ್ಕಾರದ ನಿಲುವು ಆಗಿದ್ದರೆ, ಅಂಥ ಅವಸರ ಏನಿತ್ತು? ಯಾರಿಗಿತ್ತು? ಸರ್ಕಾರಕ್ಕೇ ಅಥವಾ...

ಈ ಎಲ್ಲ ಪ್ರಶ್ನೆ ಮತ್ತು ಅನುಮಾನಗಳಿಗೆ ನಾವು ಸರ್ಕಾರದಿಂದ ಉತ್ತರ ಬಯಸುತ್ತೇವೆ. ಪ್ರಶಸ್ತಿ ನೀಡಿದ್ದು ಸಂತೋಷದ ವಿಚಾರವಾದರೂ ಬೇಕಾಬಿಟ್ಟಿ ಹಂಚಿರುವುದು ಅನಗತ್ಯ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಯಾರು ಬೇಕಾದರೂ ಪ್ರಶಸ್ತಿ ಪಡೆಯಬಹುದು ಎಂಬ ಭಾವನೆ ಒಮ್ಮೆ ಜನತೆಯಲ್ಲಿ ಬೆಳೆದುಬಿಟ್ಟರೆ, ನಂತರ ಪ್ರಾಮಾಣಿಕವಾಗಿ ಪ್ರಶಸ್ತಿ ಪಡೆದವರೂ ಗೌರವಕ್ಕೆ ಪಾತ್ರರಾಗುವಲ್ಲಿ ವಿಫಲರಾಗುತ್ತಾರೆ.

ತತ್‌ಕ್ಷಣವೇ, ಈಗ ನೀಡಿರುವ ಪ್ರಶಸ್ತಿಗಳನ್ನು ವಾಪಸು ತೆಗೆದುಕೊಂಡು ಮತ್ತೆ ಎಲ್ಲಾ ಮಾನದಂಡಗಳನ್ನು ಬಳಸಿ, ಪರಿಶೀಲನೆ ನಡೆಸಿ ಪ್ರಶಸ್ತಿ ನೀಡುತ್ತೀರೆಂದು ನಂಬುತ್ತೇವೆ.

ನಿರ್ಮಾಪಕರು ಮತ್ತು ನಿರ್ದೇಶಕರು

ದೂರದರ್ಶನ

English summary
First ever tele awards in kannada falls to controversy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada