»   » ಕಲೆಗೆ ಜಾತಿ- ಧರ್ಮ, ಬಾಂಧ್ವದ ಲೇಪ ಸಲ್ಲ

ಕಲೆಗೆ ಜಾತಿ- ಧರ್ಮ, ಬಾಂಧ್ವದ ಲೇಪ ಸಲ್ಲ

Posted By: Staff
Subscribe to Filmibeat Kannada

ಬೆಂಗಳೂರು : ಕಲೆ ಮತ್ತು ಪ್ರತಿಭೆಗೆ ಜಾತಿ- ಧರ್ಮ, ಬಾಂಧವ್ಯದ ಲೇಪ ಹಚ್ಚುವುದು ತರವಲ್ಲ. ಟಿ.ಎನ್‌.ಸೀತಾರಾಂ ಉತ್ತಮ ಸಂಭಾಷಣೆಕಾರ, ಸೃಜನಶೀಲ ನಿರ್ದೇಶಕ ಎಂಬುದು ಸ್ಪಷ್ಟ. ಹೀಗಿರುವಾಗ ಅವರು ನಿರ್ದೇಶಿಸಿದ 'ಮಾಯಾಮೃಗ", ಕಿರುತೆರೆ ಧಾರಾವಾಹಿಗಳಿಗೆಂದು ಸರ್ಕಾರ ಕೊಡ ಮಾಡಿರುವ ಮೊದಲ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ನಾಗಾಭರಣ ಮೊದಲಾದ ನಿರ್ದೇಶಕರು ಎತ್ತಿರುವ ತಗಾದೆ ಸರಿಯಲ್ಲ ಎಂದು ಸಂಯುಕ್ತ ಜನತಾದಳದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಕಿರುತೆರೆ ಪ್ರಶಸ್ತಿಗೆ ಹತ್ತಿದ್ದ ರಾಜಕೀಯದ ಬಣ್ಣ ಮತ್ತಷ್ಟು ಉಜ್ವಲವಾಗಿದೆ.

ಮಾಯಾಮೃಗ ಸದಭಿರುಚಿಯುಳ್ಳ ಧಾರಾವಾಹಿ. ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಅವರ ಪತ್ನಿ ಲಕ್ಷ್ಮಿ ಚಂದ್ರಶೇಖರ್‌ ಇದರಲ್ಲಿ ಅಭಿನಯಿಸಿದ್ದರು ಎಂಬ ಕಾರಣಕ್ಕೆ ಪ್ರಶಸ್ತಿ ಸಿಕ್ಕಿದೆ ಎಂಬುದು ಮೂರ್ಖತನದ ಮಾತು. ಕಲಾವಿದರಲ್ಲಿ ಪರಸ್ಪರ ವಿಶ್ವಾಸವಿರಬೇಕೇ ಹೊರತು, ಅಸೂಯೆಯಲ್ಲ ಎಂದು ರಾಜ್ಯ ಯುವ ಸಂಯುಕ್ತ ಜನತಾದಳ ಉಪಾಧ್ಯಕ್ಷ ಕೆ.ಎಸ್‌.ನಾಗರಾಜು ಹಾಗೂ ಬಸವನಗುಡಿ ಯುವ ಸಂಯುಕ್ತ ಜನತಾದಳ ಅಧ್ಯಕ್ಷ ಬಿ.ಎಚ್‌.ವಿಜಯ್‌ ಟೀಕಿಸಿದ್ದಾರೆ.

ಈ ಮೊದಲು ಮಾಯಾಮೃಗ ಧಾರಾವಾಹಿ ವೀಕ್ಷಕರ ವೇದಿಕೆ ಕೂಡ ನಾಗಾಭರಣ ಮೊದಲಾದ ನಿರ್ದೇಶಕರ ವಿರೋಧವನ್ನು ಟೀಕಿಸಿ, ಪ್ರಶಸ್ತಿಯನ್ನು ಸೀತಾರಾಂ ಹಿಂದಿರುಗಿಸಕೂಡದೆಂದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada