''ಪ್ರಚಾರಕ್ಕೆ ಬರುತ್ತಿಲ್ಲ.. ಏನಾಗಿದೆ ಗೊತ್ತಿಲ್ಲ..'' ವಿವಾದದ ಬಗ್ಗೆ ಆರ್ ಜೆ ಮಯೂರ್ ಹೇಳಿದ್ದೇನು?
''ಸಿನಿಮಾ 25 ಪೂರ್ಣ ಮಾಡುತ್ತಿದೆ. ಅದರ ಕ್ರೆಡಿಟ್ ಯಾರಿಗೆ ಸೇರಬೇಕೋ ಅವರಿಗೆನೇ ಸೇರಬೇಕು. ಹೀಗಾಗಿ ಈ ವಿಷಯ ಹೇಳುತ್ತಿದ್ದೇನೆ'' ಎಂದು ನಿರ್ದೇಶಕ ಆರ್ ಜೆ ಮಯೂರ್ ರಾಘವೇಂದ್ರ ತಮ್ಮ ಸಿನಿಮಾದ ಸದ್ಯದ ಸುದ್ದಿಯ ವಿವರವನ್ನು 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿದರು.
ಆರ್ ಜೆ ಮಯೂರ್ 'ಕನ್ನಡ್ ಗೊತ್ತಿಲ್ಲ' ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ. ಹರಿಪ್ರಿಯಾ ಈ ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾ ಇದೀಗ ವಿವಾದಕ್ಕೆ ಕಾರಣವಾಗಿದೆ. ನಟಿ ಹರಿಪ್ರಿಯಾ ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂದು ಮಯೂರ್ ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ''ಚಿತ್ರದ ಲೀಡ್ ಆಗಿರುವ ಹರಿಪ್ರಿಯಾ ಅವರು ಪ್ರಚಾರಕ್ಕೆ ಬಂದಿಲ್ಲ. ಕಾರಣ ತಿಳಿದಿಲ್ಲ. ಈ ಹಿಂದೆಯೇ ಈ ಬಗ್ಗೆ ಹೇಳಬಹುದಿತ್ತು. ಸಿನಿಮಾಗೆ ನೆಗೆಟಿವ್ ಆಗುವುದು ಬೇಡ ಎಂದು ಸುಮ್ಮನಿದೆ. ಆದರೆ, ಸಿನಿಮಾದ ಗೆಲುವಿನ ಕ್ರೆಡಿಟ್ ಯಾರಿಗೇ ಸೇರಬೇಕೋ ಅವರಿಗೆನೇ ಸೇರಬೇಕು ಅಂತ ಈ ವಿಷಯ ಹಂಚಿಕೊಳ್ಳುತ್ತಿದ್ದೇನೆ'' ಎಂದರು.
'ಕನ್ನಡ್ ಗೊತ್ತಿಲ್ಲ' ಸಿನಿಮಾದ ವಿವಾದದ ಬಗ್ಗೆ ನಿರ್ದೇಶಕರ ಆರ್ ಜೆ ಮಯೂರ್ ರಾಘವೇಂದ್ರ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹರಿಪ್ರಿಯಾ ಪ್ರಚಾರಕ್ಕೆ ಬರಲೇ ಇಲ್ಲ
''ಹರಿಪ್ರಿಯಾ ಅವರು ಸಿನಿಮಾ ಪ್ರಚಾರಕ್ಕೆ ಬರಲಿಲ್ಲ. ಬಿಡುಗಡೆ ಸಮಯದಲ್ಲಿ, ಬಿಡುಗಡೆ ದಿನ ಕಾಣಲಿಲ್ಲ. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಕೊನೆಯದಾಗಿ ಬಂದರು. ಅದು ಬಿಟ್ಟರೆ ಟಿವಿ, ರೇಡಿಯೋ ಎಲ್ಲಿಯೂ ಸಂದರ್ಶನ ನೀಡಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿಯೂ ಸಿನಿಮಾದ ಪೋಸ್ಟ್ ಗಳು ಹಾಕಲಿಲ್ಲ. ಏಕೆ ಎಂದು ವಿಚಾರಿಸೋಣ ಎಂದರೆ, ನಮ್ಮ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ.'' - ಆರ್ ಜೆ ಮಯೂರ್, ನಿರ್ದೇಶಕ

ಸಿನಿಮಾಗಿಂತ ಯಾರು ದೊಡ್ಡವರಲ್ಲ
''ಕಾರಣ ನನಗೆ ಗೊತ್ತಿಲ್ಲ. ವೈಯಕ್ತಿಕವಾಗಿ ಇಗೋ ಇತ್ತಾ ತಿಳಿದಿಲ್ಲ. ಆದರೆ, ಅದೇನೇ ಇದ್ದರೂ ಸಿನಿಮಾಗಿಂತ ದೊಡ್ಡದು ಮಾಡಿಕೊಳ್ಳಬಾರದು. ಅದು ಸಿನಿಮಾಗೆ ಪರಿಣಾಮ ಬೀರಬಾರದು. ಒಬ್ಬ ನಿರ್ಮಾಪಕರು ಸಿನಿಮಾಗಾಗಿ ಬಂಡವಾಳ ಹಾಕಿರುತ್ತಾರೆ. ಏನೇ ಸಮಸ್ಯೆ ಇದ್ದರೂ ಮಾತನಾಡಿ ಬಗೆ ಹರಿಸಿಕೊಳ್ಳಬೇಕು. ಸಿನಿಮಾಗಿಂತ ಯಾರು ದೊಡ್ಡವರಲ್ಲ ಎನ್ನುವುದು ನನ್ನ ಅಭಿಪ್ರಾಯ.'' - ಆರ್ ಜೆ ಮಯೂರ್, ನಿರ್ದೇಶಕ

ಪಾತ್ರದ ಬಗ್ಗೆ ಅವರು ಏನು ಹೇಳಿಲ್ಲ
''ನನ್ನ ಪಾತ್ರ ಚೆನ್ನಾಗಿ ಬಂದಿಲ್ಲ, ತೃಪ್ತಿ ನೀಡಿಲ್ಲ ಎನ್ನುವುದು ಏನಾದರೂ ಇದ್ದರೆ ಮಾತನಾಡಬಹುದು. ಆ ಕಾರಣ ಇದ್ಯಾ ಗೊತ್ತಿಲ್ಲ. ಅವರ ಪಾತ್ರಕ್ಕೆ ಮೋಸ ಆಗಿಲ್ಲ. ಎಲ್ಲರೂ ಅವರ ಪಾತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಬಗ್ಗೆ ಅವರು ಏನು ಹೇಳಿಲ್ಲ. ಸಿನಿಮಾಗೆ ನೆಗೆಟಿವ್ ಆಗಬಾರದು ಎನ್ನುವ ಕಾರಣಕ್ಕೆ ನಾನು ಸುಮ್ಮನೆ ಇದ್ದೆ. ಆದರೆ, ಈಗ 25 ಓಡುತ್ತಿದೆ. ಈ ವಿಷಯವನ್ನು ನಾನು ತಿಳಿಸಲೇಬೇಕಾಗಿದೆ.'' - ಆರ್ ಜೆ ಮಯೂರ್, ನಿರ್ದೇಶಕ

ಸಿನಿಮಾದ ಗೆಲುವಿನ ಕ್ರೆಡಿಟ್
''ಸಿನಿಮಾದ ಪ್ರಚಾರಕ್ಕೆ ಧರ್ಮಣ್ಣ, ಪವನ್, ಸುಧಾರಾಣಿ ಮೇಡಮ್, ತಂತ್ರಜ್ಞರು, ನಿರ್ಮಾಪಕರು ಮುಂದೆ ಬಂದು ನಿಂತು ಪ್ರಚಾರ ಮಾಡಿದರು. ಆದರೆ, ಒಂದು ಸಿನಿಮಾದ ಲೀಡ್ ಪಾತ್ರ ಮಾಡಿದವರು ಪ್ರಚಾರ ಮಾಡಲಿಲ್ಲ. ಹಾಗಾಗಿ ಸಿನಿಮಾದ ಗೆಲುವಿನ ಕ್ರೆಡಿಟ್ ಬೇರೆಯವರಿಗೆ ಸೇರಬಾರದು ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ನಾನು ಈ ಮಾತು ಹೇಳುತ್ತಿದ್ದೇನೆ.'' - ಆರ್ ಜೆ ಮಯೂರ್, ನಿರ್ದೇಶಕ

ಬದಲಾದ ಬಿಡುಗಡೆ ದಿನಾಂಕ ಹೇಳಲಿಲ್ಲ
''ನಮ್ಮ ಸಿನಿಮಾ ಮೊದಲು ನವೆಂಬರ್ 15 ಕ್ಕೆ ಬಿಡುಗಡೆ ಆಗಬೇಕಿತ್ತು. 'ಆಯುಷ್ಮಾನ್ ಭವ' ಸಿನಿಮಾದಿಂದ 22ಕ್ಕೆ ಬಂತು. ಬಿಡುಗಡೆ ದಿನಾಂಕ ಬದಲಾಗಿದ್ದು ಹೇಳಲಿಲ್ಲ ಎನ್ನುವ ಬೇಸರ ಅವರಿಗೆ ಇತಂತ್ತೆ. ಆದರೆ, ನಮಗೂ ಸಿನಿಮಾ ಬಿಡುಗಡೆ ಎರಡು ದಿನಗಳ ಹಿಂದೆ ತಿಳಿದಿತ್ತು. ಆಗ ಅವರಿಗೆ ಮೆಸೇಜ್ ಮಾಡಿ ಹೇಳಿದ್ದೆವು. ಏನೇ ಇದ್ದರೂ, ಸಿನಿಮಾ ಬಿಡುಗಡೆಗಿಂತ ದೊಡ್ಡದು ಒಬ್ಬ ನಟಿಗೆ ಏನಿರುತ್ತದೆ ನನಗೆ ಗೊತ್ತಿಲ್ಲ. ಇದೇ ಸಮಯದಲ್ಲಿ ಬೇರೊಂದು ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಮ್ಮ ಸಿನಿಮಾಗೆ ಬಂದಿಲ್ಲ.'' - ಆರ್ ಜೆ ಮಯೂರ್, ನಿರ್ದೇಶಕ


Click it and Unblock the Notifications











