ತಮಿಳು ಚಿತ್ರರಂಗಕ್ಕೆ ಹೋದ ಮೇಘಾ ಶೆಟ್ಟಿ, ಒಬ್ಬೊಬ್ಬರೇ ಹೀಗೆ ಜಾಗ ಖಾಲಿ ಮಾಡಿದರೆ ಕನ್ನಡ ಚಿತ್ರರಂಗದ ಕಥೆ ಏನು ?
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಾಯಕಿಯರ ಕೊರತೆ ಎದ್ದು ಕಾಣುತ್ತಿದೆ. ಅನೇಕ ನಾಯಕಿಯರು ನಿವೃತ್ತಿಯಾಗಿದ್ದಾರೆ. ಇನ್ನು ಕೆಲವರು ಗಂಡ ಮನೆ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನೂ ಕೆಲವರು ಕನ್ನಡ ಚಿತ್ರರಂಗಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿ ಪರಭಾಷೆಯ ಪಾಲಾಗಿದ್ದಾರೆ. ಅಂದ ಚೆಂದ ಇದ್ದರೆ ಪ್ರತಿಭೆ ಇರಲ್ಲ.ಪ್ರತಿಭೆ ಇದ್ದವರಲ್ಲಿ ಗ್ಲಾಮರ್ ಇಲ್ಲ ಎನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಮಯದಲ್ಲಿ ಕನ್ನಡ ಚಿತ್ರರಂಗದ ಗಮನ ಸೆಳೆಯುವದರ ಜೊತೆಯಲ್ಲಿ, ಕಿರುತೆರೆಯಲ್ಲಿ ತಮ್ಮದೇ ಚಾಪು ಮೂಡಿಸಿರುವ ಮೇಘಾ ಶೆಟ್ಟಿ ಕೂಡ ಪರಭಾಷೆಯತ್ತ ಮುಖ ಮಾಡಿದ್ದಾರೆ. ಹೌದು, ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದವರು ಮೇಘಾ ಶೆಟ್ಟಿ. ಕನ್ನಡ ಕಿರುತೆರೆಯ ಮೂಲಕ ಕನ್ನಡಿಗರ ಮನೆ ಮಗಳಾದ ಈ ಅನು ಸಿರಿಮನೆ ಆ ನಂತರ ಬೆಳ್ಳಿತೆರೆಗೆ ಬಂದರು. ತ್ರಿಬಲ್ ರೈಡಿಂಗ್.. ದಿಲ್ ಪಸಂದ್.. ಕೈವ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ಆದರೆ... ಕಿರುತೆರೆಯಲ್ಲಿ ಸಿಕ್ಕ ಪ್ರೇಕ್ಷಕರ ಪ್ರೀತಿ ಇವರಿಗೆ ಹಿರಿತೆರೆಯಲ್ಲಿ ಇನ್ನೂ ಸಿಕ್ಕಿಲ್ಲ. ದೊಡ್ಡದೊಂದು ಗೆಲುವು ಮೇಘಾ ಶೆಟ್ಟಿ ಅವರಿಗೆ ದಕ್ಕಿಲ್ಲ. ಹೀಗಿರುವಾಗ ಮೇಘಾ ಶೆಟ್ಟಿ ಈಗ ರಶ್ಮಿಕಾ ಮಂದಣ್ಣ .. ಶ್ರೀಲೀಲಾ .. ಆಶಿಕಾ ರಂಗನಾಥ್ .. ರುಕ್ಮಿಣಿ ವಸಂತ್ .. ಅವವರಂತೆ ಬೇರೆ ರಾಜ್ಯಕ್ಕೆ ಬೆಂಗಳೂರಿನಿಂದ ಫ್ಲೈಟ್ ಹತ್ತಿದ್ದಾರೆ.
ಹೌದು, ಮೇಘಾ ಶೆಟ್ಟಿ ಸದ್ಯ ತಮಿಳು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ತಮಿಳು ಚಿತ್ರರಂಗದ ನಾಯಕ ಕಂ ನಿರ್ದೇಶಕ ಶಶಿಕುಮಾರ್ ಈ ಚಿತ್ರದಲ್ಲ ಹೀರೋ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು, ಬಾಯ್ಸ್.. ಕಾದಲ್.. ಚಿತ್ರಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ಭರತ್ ಕೂಡ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇವರಿಬ್ಬರಲ್ಲಿ ಮೇಘಾ ಶೆಟ್ಟಿ ಯಾರಿಗೆ ನಾಯಕಿ ಎನ್ನುವ ವಿಚಾರ ಸದ್ಯ ಗೊತ್ತಿರದೇ ಇದ್ದರೂ ಕನ್ನಡದ ನಾಯಕಿಯರು ಒಬ್ಬೊಬ್ಬರಾಗಿ ಹೀಗೆ ಪರಭಾಷೆಗೆ ವಲಸೆ ಹೋಗುತ್ತಿರುವ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ತಮ್ಮ ಬೇಸರವನ್ನು ಹೊರ ಹಾಕುತ್ತಿದ್ದಾರೆ. ಎಲ್ಲರೂ ಹೀಗೆ ಕನ್ನಡ ಚಿತ್ರರಂಗದಿಂದ ಕಾಣೆಯಾದರೆ ನಮ್ಮ ವ್ಯಥೆ ಕೇಳೋರು ಯಾರು ? ಎನ್ನುತ್ತಿದ್ದಾರೆ.
ಇನ್ನು ಚಿತ್ರಕ್ಕೆ ಕಾಳೈಯಾನ್ ಎಂದು ಹೆಸರಿಡಲಾಗಿದ್ದು ಈ ಚಿತ್ರದ ಚಿತ್ರೀಕರಣ ಮುನ್ನರ್ ಗುಡಿ, ತಂಜಾವೂರು, ವೇದರಾಣ್ಯಂ, ಮುತ್ತುಪೇಟ್ಟೈ, ಪೆಟ್ಟುಕೊಟ್ಟೈ ಯಲ್ಲಿ ನಡೆಯಲಿದೆ.ಅಂದ್ಹಾಗೇ ಕನ್ನಡದಿಂದ ತಮಿಳಿಗೆ ಮೇಘಾ ಶೆಟ್ಟಿ ವಲಸೆ ಹೋಗಿದ್ದಾರೆ ಎಂದ ಮಾತ್ರಕ್ಕೆ ಅವರಿಗೆ ಇಲ್ಲಿ ಅವಕಾಶಗಳಿರಲಿಲ್ಲ ಎಂದಲ್ಲ. ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸೇರಿ ಹಲವು ಚಿತ್ರಗಳು ಮೇಘಾ ಶೆಟ್ಟಿ ಕೈಯಲ್ಲಿವೆ. ಅದರಲ್ಲಿಯೂ ನಕ್ಸಲಿಸಂ ಹಿನ್ನೆಲೆಯ ಆಪರೇಷನ್ ಲಂಡನ್ ಕೆಫೆ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆಯಾಗಲಿದೆ. ಆದರೂ ಕೂಡ ಮೇಘಾ ಶೆಟ್ಟಿ ಕಾಲಿವುಡ್‌ಗೆ ಕಾಲಿಟ್ಟಿದ್ಧಾರೆ. ಹೀಗಾಗಿ ಕನ್ನಡದಲ್ಲಿಯೇ ಇಷ್ಟೊಂದು ಅವಕಾಶಗಳಿರುವಾಗ ಬೇರೆ ಭಾಷೆಗೆ ಹೋಗುವ ಅವಶ್ಯಕತೆಯಾದರೂ ಏನಿತ್ತು ಎನ್ನುವ ಪ್ರಶ್ನೆ ಇವರ ಅನೇಕ ಅಭಿಮಾನಿಗಳನ್ನು ಕಾಡುತ್ತಿದೆ.
ಮೇಘಾ ಶೆಟ್ಟಿ ಅಭಿನಯದ ಈ ತಮಿಳು ಚಿತ್ರಕ್ಕೆ ಎಂ ಗುರು ನಿರ್ದೇಶನ ಇದೆ. ನಿರ್ದೇಶಕರಾಗಿ ಇದು ಇವರ ಮೊದಲ ಪ್ರಯತ್ನ. ಧರ್ಮರಾಜ್ ವೇಲುಚಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ಧಾರೆ. ಇನ್ನು ತಮ್ಮ ಮೊದಲ ತಮಿಳು ಚಿತ್ರದ ಮುಹೂರ್ತ ಸಮಾರಂಭದ ಖುಷಿಯಲ್ಲಿ ಮಾತನಾಡಿರುವ ಮೇಘಾ ಶೆಟ್ಟಿ, ನನ್ನ ಬದುಕಿನ ಬಹು ದೊಡ್ಡ ತಿರುವು ಇದು, ಸತ್ಯರಾಜ್, ಶಶಿಕುಮಾರ್ ಮತ್ತು ಭರತ್ ಅವರಂತಹ ಪ್ರತಿಭಾವಂತರ ಜೊತೆಯಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಸಿಕ್ಕಿದೆ, ಚಿತ್ರದ ಕಥೆ ತುಂಬಾ ಚೆನ್ನಾಗಿದ್ದು ನನ್ನ ಪಾತ್ರಕ್ಕೆ ತುಂಬಾನೇ ಮಹತ್ವವನ್ನು ನೀಡಲಾಗಿದೆ ಎಂದು ಹೇಳಿದ್ಧಾರೆ. ಇಡೀ ತಂಡವನ್ನು ಕೊಂಡಾಡಿದ್ಧಾರೆ.
ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಈ ಕಥೆ ತುಂಬಾನೇ ವಿಶೇಷ ಮತ್ತು ವಿಶಿಷ್ಟವವಾದದ್ದು ಎಂದು ಹೇಳಿರುವ ಮೇಘಾ ಶೆಟ್ಟಿ ಕನ್ನಡದಲ್ಲಿ ನಾನು ಉತ್ತಮ ಸಿನಿಮಾಗಳನ್ನು ಮಾಡಿದ ನಂತರ ಕಥೆಯಾಧಾರಿತ ಚಿತ್ರಗಳನ್ನು ಹುಡುಕುತ್ತಿದ್ದೆ ಈ ಸಮಯದಲ್ಲಿ ನನಗೆ ಸಿಕ್ಕ ಸಿನಿಮಾ ಈ ಕಾಳೈಯಾನ್ ಎಂದು ಹೇಳಿದ್ದಾರೆ.
ಕೇವಲ ತಮಿಳು ಚಿತ್ರರಂಗ ಮಾತ್ರವಲ್ಲ ಮೇಘಾ ಶೆಟ್ಟಿ ಮುಂಬರುವ ದಿನಗಳಲ್ಲಿ ತೆಲುಗು ಚಿತ್ರರಂಗಕ್ಕೆ ಕೂಡ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈ ಕುರಿತು ಕೂಡ ಮಾತನಾಡಿರುವ ಮೇಘಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಕೂಡ ಒಂದೆರಡು ಪ್ರೊಜೆಕ್ಟ್‌ಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ನನ್ನ ಬದುಕಿನ ಈ ಹೊಸ ಪ್ರಯಾಣ ನನ್ನ ಎಲ್ಲಿಗೆ ಕರೆದೊಯ್ಯುತ್ತೆ ಎಂಬುದನ್ನು ನೋಡೋಣ ನಾನು ಆ ದಿನಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಬೇರೆ ನಾಯಕಿಯರಂತೆ ಮೇಘಾ ಶೆಟ್ಟಿ ಪರಭಾಷೆಯಲ್ಲಿಯೇ ಬಿಡಾರ ಹೂಡಿದರೆ ಅಚ್ಚರಿ ಇಲ್ಲ ಎನ್ನುವ ಮಾತು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











