ಚಿರಂಜೀವಿ ನೆನಪಲ್ಲಿ ಹೆಸರು ಬದಲಿಸಿಕೊಂಡ ಮೇಘನಾ ರಾಜ್
ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವಲ್ಲಿ ಅತ್ಯಂತ ಭಾವುಕ ಮತ್ತು ಹೃದಯಸ್ಪರ್ಶಿ ಬರಹವನ್ನು ಇತ್ತೀಚೆಗೆ ಹಂಚಿಕೊಂಡಿದ್ದ ನಟಿ ಮೇಘನಾ ರಾಜ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
Recommended Video
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಮೇಘನಾ ರಾಜ್ ಎಂದಷ್ಟೇ ಹೆಸರನ್ನು ಇದುವರೆಗೆ ಹೊಂದಿದ್ದರು. ಈಗ ಅವರು ತಮ್ಮ ಹೆಸರನ್ನು ಎಡಿಟ್ ಮಾಡಿದ್ದು, ಅದರಲ್ಲಿ ಸರ್ಜಾ ಕುಟುಂಬದ ಸರ್ ನೇಮ್‌ಅನ್ನು ಸೇರಿಸಿಕೊಂಡಿದ್ದಾರೆ. ಹೀಗಾಗಿ ಅವರ ಹೆಸರು 'ಮೇಘನಾ ರಾಜ್ ಸರ್ಜಾ' ಎಂದಾಗಿದೆ. ಈ ಮೂಲಕ ಚಿರಂಜೀವಿ ಸರ್ಜಾ ಹೆಸರನ್ನು ತಮ್ಮ ಹೆಸರಿನ ಜತೆ ಶಾಶ್ವತವಾಗಿ ನೆನಪಾಗಿಸುವಂತೆ ಅವರು ಮಾಡಿದ್ದಾರೆ.
ಇತ್ತೀಚೆಗೆ ಅವರು ಪ್ರೊಫೈಲ್ ಚಿತ್ರವನ್ನೂ ಬದಲಿಸಿಕೊಂಡಿದ್ದರು. ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಯಿಂದ ನಗುತ್ತಾ ಅಪ್ಪಿಕೊಂಡಿರುವ ಕಪ್ಪು-ಬಿಳುಪು ಚಿತ್ರ ಹಾಕಿಕೊಂಡಿದ್ದಾರೆ. ಮುಂದೆ ಓದಿ...

ಬೆಳಕಂತೆ ಕಂಡವರು...
ಕೆಲವು ದಿನಗಳ ಹಿಂದಷ್ಟೇ ಮೇಘನಾ, ಚಿರಂಜೀವಿ ಸರ್ಜಾ ಹಾಗೂ ಅಭಿಮಾನಿಗಳನ್ನು ಉಲ್ಲೇಖಿಸಿ ಎರಡು ಪತ್ರಗಳನ್ನು ಬರೆದಿದ್ದರು. ಈ ಎರಡೂ ಪಾತ್ರಗಳು ಕಣ್ಣೀರು ತರಿಸುವಂತಿದ್ದವು. 'ಕಳೆದ ಕೆಲವು ದಿನಗಳು ನನ್ನ ಜೀವನದ ಅತ್ಯಂತ ಕಠಿಣ ದಿನಗಳು, ಅದ್ಭುತವಾಗಿದ್ದ ನನ್ನ ಸುಂದರ ಲೋಕ ಅಲ್ಲೋಲಕಲ್ಲೋಲವಾಗಿ ನನಗೆ ಏನೂ ಇಲ್ಲ ಎಲ್ಲವೂ ಕತ್ತಲೆ ಎಂದುಕೊಂಡಾಗ ಎಂದುಕೊಂಡಾಗ ಬೆಳಕಂತೆ ಕಂಡದ್ದು ನನ್ನ ಕುಟುಂಬ, ಸ್ನೇಹಿತರು, ಚಿತ್ರರಂಗದ ಸಹೋದ್ಯೋಗಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ತೋರಿದ ಪ್ರೀತಿ, ವಾತ್ಸಲ್ಯ, ಮಮತೆ' ಎಂದು ಹೃದಯಾಂತರಾಳದಿಂದ ಬರೆದಿದ್ದರು ಮೇಘನಾ ರಾಜ್.

ಸಿರಿವಂತ ಬೇರಿಲ್ಲ
'ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ, ನಿಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಜನುಮ ಸಾಲದು. ಆ ನಿಮ್ಮ ಪ್ರೀತಿಯೆ ನನಗೆ ಆಸರೆ ಮತ್ತು ರಕ್ಷಾ ಕವಚ. ನಾನು ಅತ್ತಾಗ ನೀವು ಕಣ್ಣೀರು ಸುರಿಸಿದ್ದೀರಿ, ನನ್ನ ನೋವನ್ನೂ ನೀವೂ ಹಂಚಿಕೊಂಡಿದ್ದೀರಿ, ನನ್ನಷ್ಟೆ ಚಿರುವನ್ನು ನೀವು ಪ್ರೀತಿಸಿದ್ದೀರಿ, ಆ ಪ್ರೀತಿಗೆ ನಾನು ಚಿರಋಣಿ. ಇಂತಹ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ್ದ ಪ್ರೀತಿಯ ರಾಶಿಯ ಗುರುತು. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರೂ ಇಲ್ಲ' ಎಂದು ಹೇಳಿದ್ದರು.

ಪದಗಳು ವರ್ಣಿಸಲಾರದು
ಅದಕ್ಕೂ ಮುನ್ನ ಚಿರಂಜೀವಿ ಅಗಲಿಕೆಯ ಕುರಿತಾದ ತಮ್ಮ ನೋವನ್ನು ವಿಸ್ತೃತ ಬರಹದಲ್ಲಿ ಹೊರಹಾಕಿದ್ದರು. 'ಚಿರು, ನಾನು ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ ನಿನಗೆ ಏನನ್ನು ಹೇಳಲು ಬಯಸಿದ್ದೆನೋ ಅದನ್ನು ಪದಗಳಲ್ಲಿ ಹೇಳಲು ಆಗುತ್ತಿಲ್ಲ. ನೀನು ನನಗೆ ಏನಾಗಿದ್ದೆ ಎಂಬುದನ್ನು ಜಗತ್ತಿನ ಎಲ್ಲ ಪದಗಳೂ ವರ್ಣಿಸಲು ಸಾಧ್ಯವಿಲ್ಲ. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಸಂಗಾತಿ, ನನ್ನ ಮಗು, ನನ್ನ ಆತ್ಮವಿಶ್ವಾಸ, ನನ್ನ ಪತಿ- ನೀನು ಈ ಎಲ್ಲದಕ್ಕಿಂತಲೂ ಹೆಚ್ಚು. ನೀನು ನನ್ನ ಆತ್ಮದ ತುಣಕು ಚಿರು' ಎಂದು ಬರಹ ಆರಂಭಿಸಿದ್ದರು.

ನನ್ನ ಸುತ್ತಲೂ ಇದ್ದೀಯ...
'ಪ್ರತಿ ಬಾರಿಯೂ ನಾನು ಬಾಗಿಲಿನತ್ತ ಕಣ್ಣು ಹಾಯಿಸುವಾಗಲೆಲ್ಲಾ ಮತ್ತು ನೀನು 'ನಾನು ಮನೆಗೆ ಬಂದೆ' ಎಂದು ಕೂಗುತ್ತಾ ಒಳಗೆ ನಡೆದು ಬಾರದೆ ಇರುವುದನ್ನು ನೋಡಿದಾಗ ನನ್ನ ಆತ್ಮದೊಳಗೆ ಅಗಾಧ ನೋವು ಸ್ಫೋಟಿಸುತ್ತದೆ. ಪ್ರತಿ ದಿನವೂ ಪ್ರತಿ ನಿಮಿಷವೂ ನಿನ್ನನ್ನು ಸ್ಪರ್ಶಿಸಲು ಸಾಧ್ಯವಾಗದೆ ಇದ್ದಾಗ ನನ್ನ ಹೃದಯದೊಳಗೆ ಭಾವನೆಗಳು ಮುಳುಗುವಂತೆ ಅನಿಸುತ್ತದೆ. ಸಾವಿರಾರು ಸಾವುಗಳಂತೆ, ನಿಧಾನ ಮತ್ತು ಯಾತನಾಮಯ. ಆದರೆ ಮಾಂತ್ರಿಕತೆಯಂತೆ ನೀನು ನನ್ನ ಸುತ್ತಲೂ ಇದ್ದೀಯ' ಎಂದು ತಿಳಿಸಿದ್ದರು.

ಮಗುವಿನ ರೂಪದಲ್ಲಿ ನಿನ್ನ ನಗು...
'ಪ್ರತಿ ಬಾರಿ ನಾನು ದುರ್ಬಳಲು ಎನಿಸಿದಾಗ ರಕ್ಷಕ ದೇವತೆಯಂತೆ ನೀನು ನನ್ನ ಸುತ್ತಲೂ ಇರುತ್ತೀಯ. ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದಿ ಎಂದರೆ ನನ್ನನ್ನು ನಿನ್ನ ಹಿಂದೆ ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವಿಲ್ಲ. ಸಾಧ್ಯವೇ ನಿನಗೆ? ನಮ್ಮ ಪ್ರೀತಿಯ ಸಂಕೇತವಾದ ನಮ್ಮ ಪುಟಾಣಿ ನನಗೆ ನಿನ್ನ ಅಮೂಲ್ಯ ಕಾಣಿಕೆ. ಈ ಸಿಹಿಯಾದ ಪವಾಡಕ್ಕಾಗಿ ನಾನು ಎಂದೆಂದಿಗೂ ನಿನಗೆ ಋಣಿ. ನಿನ್ನನ್ನು ನಮ್ಮ ಮಗುವಿನ ರೂಪದಲ್ಲಿ ಮತ್ತೆ ಭೂಮಿಗೆ ಮರಳಿ ತರುವ ಗಳಿಗೆಗಾಗಿ ಕಾಯಲು ಸಾಧ್ಯವಾಗುತ್ತಿಲ್ಲ. ನಿನ್ನನ್ನು ಮತ್ತೆ ಹಿಡಿದುಕೊಳ್ಳುವುದನ್ನು ಕಾಯಲಾಗುತ್ತಿಲ್ಲ. ನಿನ್ನ ನಗುವನ್ನು ಮತ್ತೆ ನೋಡಲು ಕಾಯಲಾಗುತ್ತಿಲ್ಲ' ಎಂದು ಮಗುವಿನ ಆಗಮನದ ನಿರೀಕ್ಷೆಯನ್ನು ಹಂಚಿಕೊಂಡಿದ್ದರು.


Click it and Unblock the Notifications











