ಮಗನಿಗೆ ರಾಯನ್ ಎಂದು ಹೆಸರಿಟ್ಟ ಮೇಘನಾ ರಾಜ್: ಹೆಸರಿನ ಅರ್ಥವೇನು?
ಇಷ್ಟು ದಿನ ಚಿಂಟು, ಮುದ್ದು, ಬಂಗಾರ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಮೇಘನಾ ರಾಜ್ ಮಗನಿಗೆ ಇಂದು ನಾಮಕರಣ. ಮಗನ ನಾಮಕರಣದಂದು ಅಮ್ಮನ ಖುಷಿಗೆ ಪಾರವೇ ಇಲ್ಲ. ಸಂಭ್ರಮದ ನಡುವೆ ಪತಿ ಚಿರುವನ್ನು ನೆನೆದು ಕಣ್ಣ ಹನಿ ಒರೆಸಿಕೊಂಡು ನಕ್ಕರು ಮೇಘನಾ ರಾಜ್.
ಮೇಘನಾ ರಾಜ್-ಚಿರಂಜೀವಿ ಸರ್ಜಾ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. ನಾಮಕರಣ ಮಹೋತ್ಸದ ನಂತರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಘನಾ ಚಿರುವನ್ನು ನೆನಪಿಸಿಕೊಂಡರು.
ಮಗು ಹುಟ್ಟಿ ಆಯಿತು ಆದರೆ ನಾಮಕರಣ ಮಾಡಲು ಆಗಲೇ ಇರಲಿಲ್ಲ. ಏನೆಲ್ಲ ಪ್ರಯತ್ನಗಳನ್ನು ಮಾಡಿದರೂ ತಡವಾಗುತ್ತಲೇ ಇತ್ತು. ಎಲ್ಲರೂ ಕೇಳುತ್ತಿದ್ದರು ನಾಮಕರಣ ಯಾವಾಗ? ಏನು ಹೆಸರಿಡುತ್ತಿದ್ದೀರಿ ಎಂದು? ಇಂದು ಕೊನೆಗೂ ನಾಮಕರಣ ಮಾಡಿಯಾಗಿದೆ ಎಂದರು ಮೇಘನಾ ರಾಜ್.
ಮಗನಿಗೆ ಇಡಲೆಂದು ಕೆಲವು ಹೆಸರು ಯೋಚಿಸಿಟ್ಟಿದ್ದೆ. ಅದರಲ್ಲೂ ರಾಯನ್ ಎಂಬ ಹೆಸರು ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ರಾಯನ್ ಎಂದರೆ ಯುವರಾಜ. ಚಿರು ಸರ್ಜಾ ರಾಜನಂತಿದ್ದವರು. ಅವರ ಮಗ ಯುವರಾಜ ಹಾಗಾಗಿ ಇದೇ ಹೆಸರಿಡಬೇಕು ಎಂಬುದು ನನ್ನ ಬಯಕೆಯಾಗಿತ್ತು. ಅದನ್ನು ಕುಟುಂಬದವರೆಲ್ಲರೂ ಒಪ್ಪಿಕೊಂಡರು'' ಎಂದರು ಮೇಘನಾ ರಾಜ್.

ರಾಯನ್ ಹೆಸರಿನ ಅರ್ಥವೇನು?
''ರಾಯನ್ ಹೆಸರಿನ ಅರ್ಥ ಸ್ವರ್ಗದ ಬಾಗಿಲು ತೆಗೆದ ಯುವರಾಜ ಎಂದು. ನಮ್ಮೆಲ್ಲರ ಬಾಳಿನಲ್ಲಿ ಕತ್ತಲೆ ತುಂಬಿದ ಸಂದರ್ಭದಲ್ಲಿ ರಾಯನ್ ಹುಟ್ಟಿದ ನಮಗೆ ಸ್ವರ್ಗದ ಬಾಗಿಲು ತೆರೆದ ಹಾಗಾಗಿ ಅವನಿಗೆ ಇದೇ ಹೆಸರು ಸೂಕ್ತ ಎಂದು ಕೊಂಡೆವು. ಕುಟುಂಬದವರಿಗೂ ಹೆಸರು ಬಹಳ ಇಷ್ಟವಾಯಿತು. ರಾಯನ್ ಮೇಲೆ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ'' ಎಂದು ಮಾಧ್ಯಮದವರ ಬಳಿಯೂ ಮನವಿ ಮಾಡಿದರು ಮೇಘನಾ ರಾಜ್.

ಚಿರು ಗೆಳೆಯರ ಸಹಾಯ ನೆನದು ಕಣ್ಣೀರಾದ ಸುಂದರ್ ರಾಜ್
ನಂತರ ಮಾತನಾಡಿದ ನಟ ಸುಂದರ್ ರಾಜ್, ''ಚಿರು ಹೋದ ಬಳಿಕ ನಮಗೆ ಬೆನ್ನೆಲುಬಾಗಿ ನಿಂತವರು ಚಿರುವಿನ ಗೆಳೆಯರು ಅದರಲ್ಲೂ ಪನ್ನಗಾಭರಣನಿಗೆ ನಾವು ವಿಶೇಷ ಧನ್ಯವಾದ ಹೇಳಲೇ ಬೇಕು. ಪನ್ನಗಾಭರಣ ಹಾಗೂ ತಂಡ ನಮಗೆ ಸದಾ ಬೆಂಗಾವಲಾಗಿ ನಿಂತುಕೊಂಡಿತು. ನಮಗೆ ಆ ಕಷ್ಟದ ಸಮಯದಲ್ಲಿ ಏನು ಮಾಡಬೇಕೆಂದು ತೋಚಿರಲಿಲ್ಲ. ಆದರೆ ಪನ್ನಗಾಭರಣ ಹಾಗೂ ಗೆಳೆಯರು ನಮ್ಮ ಸಹಾಯಕ್ಕೆ ಬಂದರು'' ಎನ್ನುತ್ತಾ ಗದ್ಗದಿತರಾದರು ಸುಂದರ್ ರಾಜ್.

ಗದ್ಗದಿತರಾದ ಮೇಘನಾ ರಾಜ್
ಸುಂದರ್ ರಾಜ್ ಮಾತನ್ನು ಮುಂದುವರೆಸಿದ ಮೇಘನಾ ರಾಜ್, ''ಚಿರು ಸ್ನೇಹ ಜೀವಿ ಎಂಬುದು ಎಲ್ಲರಿಗೂ ಗೊತ್ತು. ಅವರ ಸ್ನೇಹಿತರನ್ನು ನಮಗೂ ಕೊಟ್ಟು ಹೋಗಿದ್ದಾರೆ. ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ'' ಎಂದು ಮೇಘನಾ ರಾಜ್ ಸಹ ಗದ್ಗದಿತರಾದರು. ಪನ್ನಗಾಭರಣ, ಚಿರು ಸರ್ಜಾ ಅತ್ಯಾಪ್ತ ಸ್ನೇಹಿತರಾಗಿದ್ದರು. ಚಿರು ಹೋದ ಬಳಿಕ ಮೇಘನಾರ ಕಷ್ಟ-ಸುಖಗಳಿಗೆ ಪನ್ನಗಾಭರಣ ಹಾಗೂ ಚಿರು ಸರ್ಜಾರ ಇನ್ನಿತರ ಗೆಳೆಯರು ಹೆಗಲಾಗಿದ್ದಾರೆ.

ಅಕ್ಟೋಬರ್ 22ಕ್ಕೆ ಮಗನ ಜನನ
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ 2018 ರ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಸುಂದರವಾಗಿ ಸಂಸಾರ ಸಾಗುತ್ತಿರಬೇಕಾದರೆ 2020 ರ ಜೂನ್ 7 ರಂದು ಚಿರಂಜೀವಿ ಸರ್ಜಾ ಅಚಾನಕ್ಕಾಗಿ ನಿಧನ ಹೊಂದಿದರು. ಚಿರು ಸರ್ಜಾ ನಿಧನ ಹೊಂದಿದಾಗ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಮೇಘನಾ ಅಕ್ಟೋಬರ್ 22ಕ್ಕೆ ಮಗುವಿಗೆ ಜನ್ಮ ನೀಡಿದರು. ಇದೀಗ ಮಗನಿಗೆ ರಾಯನ್ ಎಂದು ಹೆಸರಿಟ್ಟಿದ್ದಾರೆ.


Click it and Unblock the Notifications











